ಅಭ್ಯರ್ಥಿಗಳನ್ನು ರಾಜರನ್ನಾಗಿ ಮಾಡಲು ಮತದಾನವಲ್ಲ; ನಮ್ಮ ಜನ ಸೇವಕರನ್ನು ಆಯ್ಕೆ ಮಾಡುವುದೇ ಚುನಾವಣೆ ; ಚುನಾವಣೆ ಯುದ್ಧವಲ್ಲ, ಅಭ್ಯರ್ಥಿಗಳು, ಪಕ್ಷಗಳು ನಮ್ಮ ಸೇವೆಗಾಗಿ ನಡೆಸುವ ಸ್ಪರ್ಧೆಯದು.

0

ನಮ್ಮ ಕಡೆ ಇದ್ದರೆ ಸುಭಗ, ದೇಶಪ್ರೇಮಿ-ಬೇರೆ ಕಡೆ ನಿಂತರೆ ಪಟಿಂಗ, ದೇಶ ದ್ರೋಹಿ ಎಂದರೆ ಹೇಗೆ?!

ಪುತ್ತೂರಿನ ಒಂದು ಅಭ್ಯರ್ಥಿಯನ್ನು ಗೆಲ್ಲಿಸಲು, ಮತದಾರರನ್ನು ಸೆಳೆಯಲು ರಾಷ್ಟ್ರ ನಾಯಕರು ಬರುತ್ತಾರೆ ಎಂದಾದರೆ ನಮ್ಮ ಓಟಿನ ಬೆಲೆಯನ್ನು ಅರ್ಥ ಮಾಡಿಕೊಳ್ಳಬೇಕಲ್ಲವೇ?

ಚುನಾವಣೆಯಿಂದ ಚುನಾವಣೆಗೆ ಜನರನ್ನು ರಾಜರನ್ನಾಗಿ ಮಾಡುವ ಮೂಲ ಉದ್ಧೇಶವನ್ನು ನಾಶ ಮಾಡುತ್ತಲೇ ಬಂದಿದ್ದೇವೆ. ಜನರನ್ನು ಗುಲಾಮರನ್ನಾಗಿಸುವ, ಗೆದ್ದವರನ್ನು ರಾಜರನ್ನಾಗಿ ಮಾಡುವ ಸ್ಪರ್ಧೆಯೇ ಚುನಾವಣೆಯಾಗಿ ಪರಿವರ್ತನೆಗೊಂಡಿದೆ. ಪ್ರಜಾಪ್ರಭುತ್ವದಲ್ಲಿ ರಾಷ್ಟ್ರಪತಿಗೂ, ಪ್ರಧಾನಿ ಮೋದಿಜಿಗೂ ಜಗತ್ತಿನ ಶ್ರೀಮಂತರಾದ ಅಧಾನಿ, ಅಂಬಾನಿಗೂ, ಅತೀ ಬಡವನಿಗೂ, ಅನಕ್ಷರಸ್ಥನಿಗೂ ಇರುವ ಓಟಿನ ಹಕ್ಕು ಒಂದೇ ಆಗಿದೆ. ಅವರೆಲ್ಲರಿಗೂ ಅವರವರ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮತದಾನದ ಹಕ್ಕು ಇದೆಯೇ ಹೊರತು, ತಾವು ಬಯಸಿದ್ದಲ್ಲೆಲ್ಲಾ ಅಭ್ಯರ್ಥಿಯನ್ನು ಆಯ್ಕೆ ಮಾಡುವ, ಮತದಾನದ ಹಕ್ಕು ಇರುವುದಿಲ್ಲ. ನಮ್ಮ ಊರಿನಲ್ಲಿ ನಮ್ಮ ಹಿತವನ್ನು ಕಾಯುವ, ನಮ್ಮ ಸೇವೆಗಾಗಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಹಕ್ಕು ನಮ್ಮ ಊರಿನವರಿಗೆ ಮಾತ್ರವಿದೆ. ಇಲ್ಲಿ ಮೋದೀಜಿಯವರಿಗೆ, ರಾಹುಲ್ ಗಾಂಧಿಯವರಿಗೆ, ದೇವೆಗೌಡರಿಗೆ ಓಟು ಹಾಕುವ ಹಕ್ಕು ಇರುವುದಿಲ್ಲ. ಆದರೂ ಅವರಿಗಾಗಿ ನಮ್ಮ, ಓಟು ಎಂದು ಅಭ್ಯರ್ಥಿಯನ್ನು ನೋಡದೆ ಓಟು ಹಾಕಿದರೆ ಏನಾಗಬಹುದು?. ನಾವು ಆರಿಸುವ ಅಭ್ಯರ್ಥಿ ನಮ್ಮ ಸೇವೆ ಮಾಡುವುದನ್ನು ಬಿಟ್ಟು ಅವರ ಸೇವೆಯನ್ನು ಮಾಡಲು ಹೊರಡುತ್ತಾನೆ. ಉದಾ: ನೇತ್ರಾವತಿ ತಿರುವು ಯೋಜನೆ, ತುಳುವಿನ ಬಗ್ಗೆ ಮಾನ್ಯತೆ, ಯಾವುದೇ ಕಾಯ್ದೆ ಇರಬಹುದು ಬೆಲೆಯೇರಿಕೆ ಇನ್ನಿತರ ಯಾವುದೇ ಸಮಸ್ಯೆ ಇರಬಹುದು ಆತ ತನ್ನ ಊರಿನ ಹಿತಾಸಕ್ತಿಯನ್ನು ಕಾಪಾಡಲಿಕ್ಕಾಗಿ ತನ್ನ ನಾಯಕರನ್ನು ಎಂದೂ ಎದುರು ಹಾಕಿಕೊಳ್ಳುವುದಿಲ್ಲ. ತನ್ನನ್ನು ಗೆಲ್ಲಿಸಲು ಕಾರಣರಾದ ಮತದಾರರನ್ನು ಕಡೆಗಣಿಸುತ್ತಾನೆ. ತನಗೆ ಸೀಟು ನೀಡಿದ ಮತ್ತು ಗೆಲ್ಲಿಸಲು ಕಾರಣರಾದ ರಾಷ್ಟ್ರ, ರಾಜ್ಯ ನಾಯಕರ ಕಾಲು ಹಿಡಿಯಲು ತಯಾರಾಗುತ್ತಾನೆ, ಬಾಗಿಲು ಕಾಯುತ್ತಿರುತ್ತಾನೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಅವರ ಗುಲಾಮನಾಗಿ ಕೆಲಸ ಮಾಡುವ ಮೂಲಕ ನಮ್ಮನ್ನು ಮತದಾರರನ್ನು ಅವರ ಗುಲಾಮರನ್ನಾಗಿ ಮಾಡಿ ಬಿಡುತ್ತಾನೆ. ಇಂದಿರಾ ಗಾಂಧಿಯ ಕಾಲದಲ್ಲಿ ಲೈಟ್ ಕಂಬ ನಿಲ್ಲಿಸಿದರೂ ಕಾಂಗ್ರೆಸ್‌ನಲ್ಲಿ ಗೆಲ್ಲುತ್ತದೆ ಎಂದು ಇದ್ದದ್ದು ಈಗ ಬಿಜೆಪಿಯಲ್ಲೂ ಯಾರನ್ನೇ ನಿಲ್ಲಿಸಿದರೂ ಗೆಲ್ಲುತ್ತಾರೆ ಎಂಬಲ್ಲಿಗೆ ಬಂದು ಮುಟ್ಟಿದೆ.

ಜನರಿಂದ ಹಣ ವಸೂಲಿ ಮಾಡಲು ಅತೀ ಹೆಚ್ಚು ಬಿಡ್ ಮಾಡಿದವರಿಗೆ ಸೀಟು: ಈ ಸಲ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಅವರ ಸಾಮರ್ಥ್ಯದೊಂದಿಗೆ ಅವರೆಷ್ಟು ಖರ್ಚು ಮಾಡಲು ಸಾಧ್ಯವಿದೆ ಎಂಬ ಆಧಾರದಲ್ಲಿ ಸೀಟುಗಳನ್ನು ನೀಡಲಾಗುತ್ತಿರುವುದು, ಅತೀ ಹೆಚ್ಚು ಬಿಡ್ಡ್ ಮಾಡಿ ವಸ್ತುಗಳನ್ನು ಖರೀದಿ ಮಾಡಿದಂತೆ ಶಾಸಕ ಸ್ಥಾನವೂ ಅತೀ ಹೆಚ್ಚು ಬಿಡ್ಡ್ ಮಾಡಿದವರಿಗೆ ದೊರಕುತ್ತಿರುವುದು ಭ್ರಷ್ಟಾಚಾರಕ್ಕೆ ಮತ್ತು ಪ್ರಜಾಪ್ರಭುತ್ವದ ದುರಂತಕ್ಕೆ ಕಾರಣವಾಗಿದೆ. ಅಂದರೆ ಹಿಂದಿನ ಕಾಲದಲ್ಲಿ ರಾಜರುಗಳು ತಮ್ಮ ಅಧೀನದಲ್ಲಿರುವ ಊರುಗಳನ್ನು ಜನರಿಂದ ಕಪ್ಪ ಪಡೆದು ಅವರನ್ನು ಆಳಲು ಸಾಮಂತರನ್ನು ಆಯ್ಕೆ ಮಾಡಿ ಕಳುಹಿಸುತ್ತಿದ್ದಂತೆ ಈಗ ಪಕ್ಷಗಳು ತಮ್ಮ ಪ್ರತಿನಿಧಿಗಳನ್ನು ಜನರಿಂದ ಸುಲಿಗೆ ಮಾಡಿ ಆಳಲು ಕಳುಹಿಸಿ ಕೊಡುತ್ತಿದ್ದಾರೆ ಎಂದೇ ಹೇಳಬಹುದು.

ತಮ್ಮ ಪಕ್ಷದಲ್ಲಿದ್ದರೆ ಪ್ರಾಮಾಣಿಕ, ವಿರೋಧ ಪಕ್ಷದಲ್ಲಿದ್ದರೆ ಭ್ರಷ್ಟಾಚಾರಿ: ರಾಷ್ಟ್ರ ಮತ್ತು ರಾಜ್ಯದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಆಯ್ಕೆಯ ಸಂದರ್ಭಗಳಲ್ಲಿ ಪಕ್ಷಾಂತರಗಳನ್ನು ನೋಡುತ್ತಿದ್ದೇವೆ. ಇನ್ನೊಂದು ಪಕ್ಷದಲ್ಲಿದ್ದಾಗ ಆತ ಭ್ರಷ್ಟಾಚಾರಿಯೂ, ಜನದ್ರೋಹಿ, ದೇಶದ್ರೋಹಿಯೂ ಆಗಿರುತ್ತಾನೆ. ತನ್ನ ಪಕ್ಷಕ್ಕೆ ಬಂದ ಕೂಡಲೇ ಪ್ರಾಮಾಣಿಕ, ಜನಸೇವಕ, ದೇಶ ರಕ್ಷಕನಾಗಿಬಿಡುತ್ತಾನೆ. ಹಾಗೆಯೇ ತನ್ನ ಪಕ್ಷದಲ್ಲಿದ್ದಾಗ ಪ್ರಾಮಾಣಿಕ, ಉತ್ತಮ ಸೇವೆ ನೀಡುವವನಾಗಿದ್ದವನು ಬೇರೆ ಪಕ್ಷಕ್ಕೆ ಹೋದರೆ ಆತನ ಚರಿತ್ರೆಯೇ ಬದಲಾಗಿ ಆತ ದುಷ್ಟನಾಗಿ ಬಿಡುತ್ತಾನೆ. ಅಂದರೆ ಹಿಂದೆ ಆತನನ್ನು ಹೊಗಳಿಕೊಂಡು ಇದ್ದವರು ಇಂದು ಅದೇ ಕಾರಣಕ್ಕೆ ನಿಂದಿಸಲು ಪ್ರಾರಂಭಿಸುತ್ತಾರೆ, ಹಿಂದೆ ಗೆಲ್ಲಿಸಲು ಪ್ರಯತ್ನಿಸಿದವರು ಇಂದು ಸೋಲಿಸಲು ಪ್ರಯತ್ನಿಸುತ್ತಾರೆ. ಉದಾ: ಬಿಜೆಪಿಯ ಶಾಸಕರಾಗಿದ್ದು ಮುಖ್ಯ ಮಂತ್ರಿಯೂ ಆಗಿದ್ದ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾದಾಗ ಅವರ ಒಟ್ಟಿಗೆ ಇದ್ದವರೇ ಅವರನ್ನು ದೂಷಿಸಿ ಸೋಲಿಸಲು ಪ್ರಯತ್ನಿಸಿದ್ದಾರೆ. ಅವರನ್ನು ದೂಷಿಸಿ ಸೋಲಿಸಲು ಪ್ರಯತ್ನಿಸುತ್ತಿದ್ದ ಕಾಂಗ್ರೆಸ್‌ನವರು ಇಂದು ಸ್ವಾಗತಿಸಿ, ಗೆಲ್ಲಿಸಲು ಪ್ರಯತ್ನಿಸಿದ್ದಾರೆ. ಇದು ಎಲ್ಲಾ ಪಕ್ಷಗಳಲ್ಲಿಯೂ ನಡೆಯುತ್ತಿದೆ.

ಅಶೋಕ್ ರೈ ಮತ್ತು ಪುತ್ತಿಲ ಸ್ಪರ್ಧೆಯಿಂದ ರಾಜ್ಯದಲ್ಲಿ ಸದ್ದು: ಇಲ್ಲಿ ಪುತ್ತೂರಿನಲ್ಲಿ ಅಶೋಕ್ ರೈ ಬಿಜೆಪಿಯಲ್ಲಿದ್ದಾಗ ಉತ್ತಮ ವ್ಯಕ್ತಿ, ಜನಸೇವಕ, ದೇಶಪ್ರೇಮಿ. ಆದರೆ ಬಿಜೆಪಿಯಲ್ಲಿ ಶಾಸಕನಾಗಲು ಅವಕಾಶ ಸಿಗಲಿಲ್ಲ ಎಂಬ ಕಾರಣಕ್ಕೆ ಶಾಸಕನಾಗಬೇಕು ಎಂಬ ಹಂಬಲದಿಂದ ಕಾಂಗ್ರೆಸ್ ಸೇರ್ಪಡೆಗೊಂಡಾಗ ಅವರ ಹಿಂದಿನ ಗುಣಗಳೆಲ್ಲಾ ಉಲ್ಟಾ ಆಗಿ ಬಿಡುತ್ತದೆ. ಅವರ ಗುಣಗಳೆಲ್ಲಾ ಏಕಾಏಕಿಯಾಗಿ ಬದಲಾಗಿ ಬಿಡುತ್ತದೆಯೇ?. ಒಟ್ಟಿಗೇ ಇದ್ದವರು ವೈರಿಗಳಾಗುತ್ತಾರೆ. ಅದು ಯಾಕೆ?. ಅರುಣ್ ಕುಮಾರ್ ಪುತ್ತಿಲರ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ರಾಜ್ಯದಲ್ಲೇ ವಿಶೇಷ ಸದ್ದು ಮಾಡಿದೆ. ಬಿಜೆಪಿಯ ಕಟ್ಟಾಭಿಮಾನಿಯಾಗಿ ಹಿಂದುತ್ವದ ಪ್ರತೀಕವಾಗಿದ್ದವರು, ರಕ್ಷಕನಾಗಿದ್ದವರು ಎಂಬ ಕಾರಣಕ್ಕೆ ಹಿಂದೂ ನಾಯಕರ ಪ್ರೀತಿಗೆ ಪಾತ್ರರಾಗಿದ್ದವರು ಈಗ ಏನಾಗಿದ್ದಾರೆ?. ಯಾವುದೇ ಪಕ್ಷಕ್ಕೆ ಪಕ್ಷಾಂತರ ಮಾಡದೇ ಇದ್ದರೂ ತಾನು ಜನಸೇವೆಗೆ, ಹಿಂದುತ್ವದ ರಕ್ಷಣೆಗೆ ಶಾಸಕನಾಗಲು ಇಚ್ಛಿಸುತ್ತೇನೆ ಎಂದು ಸ್ಪರ್ಧೆಗೆ ಪಕ್ಷೇತರನಾಗಿ ನಿಂತ ಕೂಡಲೇ ಹಿಂದೆ ಅವರನ್ನು ಹೊಗಳಿ ಅಟ್ಟಕ್ಕೇರಿಸುತ್ತಿದ್ದವರಿಗೆ, ಒಟ್ಟಿಗೆ ಇದ್ದವರಿಗೆ ಈಗ ಅವರು ಅಸ್ಪೃಶ್ಯರಾಗಿರುವುದು ಮಾತ್ರವಲ್ಲ ದ್ರೋಹಿಯೇ ಆಗಿಬಿಟ್ಟಿದ್ದಾರೆ. ತಾನು ಗೆದ್ದರೂ ಬಿಜೆಪಿಗೆ ಮತ್ತು ಮೋದಿಜಿಯವರಿಗೆ ಬೆಂಬಲ ಎಂದು ಸಾರಿದ್ದರೂ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು, ಅವರಿಗೆ ಹೋಗುವ ಓಟುಗಳನ್ನು ಸೆಳೆಯಲು ರಾಜ್ಯ, ರಾಜ್ಯ ನಾಯಕರುಗಳ ದಂಡೇ ಪುತ್ತೂರಿಗೆ ಬಂದಿದೆ. ಸೀಟು ಸಿಗದಿದ್ದಾಗ ಪಕ್ಷದ ಅಭ್ಯರ್ಥಿಯಂತೆ ಜನಸೇವೆಗಾಗಿ ಶಾಸಕ ಸ್ಥಾನಕ್ಕೆ ಸ್ಪಽಸಲು ನಿಂತರೆ ಅದು ತಪ್ಪೇ?. ಒಟ್ಟಿನಲ್ಲಿ ಅಶೋಕ್ ರೈ ಮತ್ತು ಪುತ್ತಿಲ ಸ್ಪರ್ಧೆಯಿಂದ ಪುತ್ತೂರು ಚುನಾವಣೆ ರಾಜ್ಯದಲ್ಲಿ ಸದ್ದು ಮಾಡಿದೆ.

ಚುನಾವಣಾ ಸ್ಪರ್ಧೆಗೆ ನಿಂತವರನ್ನು ಗೌರವಿಸಬಾರದೇಕೆ ?: ಚುನಾವಣೆ ಎಂದರೆ ಯುದ್ದವಲ್ಲ. ತಾನು ಉತ್ತಮ ಸೇವೆ ನೀಡುತ್ತೇನೆ ಎಂದು ಅಭ್ಯರ್ಥಿಗಳು, ತಾವು ಉತ್ತಮ ಸೇವೆ ನೀಡುವವರನ್ನು ಆಯ್ಕೆಗೆ ನಿಲ್ಲಿಸಿದ್ದೇವೆ ಎಂದು ಪಕ್ಷಗಳು ಸ್ಪರ್ಧೆಗೆ ನಿಂತರೆ ಅವರನ್ನು ಜನಸೇವೆಗಾಗಿ ನಿಂತಿದ್ದಾರೆ ಎಂದು ಗೌರವಿಸಬಾರದೇಕೆ?, ಸ್ಪರ್ಧೆಗೆ ನಿಂತವರ ಒಳ್ಳೆಯ ಗುಣಗಳನ್ನು ಹೇಳದಿದ್ದರೂ ಅಪಪ್ರಚಾರ ಮಾಡುವುದು ಯಾಕೆ?. ತಾವು ಅವರಿಗಿಂತ ಉತ್ತಮ ಕೆಲಸ ಮಾಡುತ್ತೇವೆ, ಸೇವೆ ನೀಡುತ್ತೇವೆ ಎಂಬುವುದನ್ನು ತೋರಿಸಿ ಗೆಲ್ಲುವ ಸ್ಪರ್ಧೆ ಇದು ಯಾಕೆ ಆಗಬಾರದು? ಇನ್ನೊಬ್ಬರನ್ನು ಧೂಷಿಸಿ ಅವರ ಗುಣಗಳನ್ನು ಕೆಟ್ಟದಾಗಿ ಬಿಂಬಿಸಿ ವೈರಿಗಳಂತೆ ಪರಿಗಣಿಸಿ ಗೆಲ್ಲುವ ಸ್ಪರ್ಧೆ ಆಗುವುದು ಸರಿಯೇ?. ಪರಸ್ಪರ ವೈರಿಗಳಂತೆ ಸ್ಪರ್ಧಿಸಿದವರು ಚುನಾವಣೆಯ ನಂತರ ಪಕ್ಷಾಂತರ ಮಾಡಿ ಅಥವಾ ಅಂದು ವಿರೋಧಿಸಿದ ಪಕ್ಷಕ್ಕೆ ಬೆಂಬಲ ನೀಡಿ ಮಂತ್ರಿಗಳಾಗಿದ್ದಾರೆ, ಮುಖ್ಯಮಂತ್ರಿಯೂ ಆಗಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆಯ ಏಕನಾಥ ಶಿಂದೆ ಬಿಜೆಪಿಯೊಂದಿಗೆ ಸೇರಿ ಅಲ್ಲಿಯ ಮುಖ್ಯಮಂತ್ರಿಯಾದದ್ದು ಅದಕ್ಕೆ ಉತ್ತಮ ಉದಾಹರಣೆಯಲ್ಲವೇ?.

ಇಲ್ಲಿಯ ಮತದಾರರನ್ನು ಸೆಳೆದು ಅಭ್ಯರ್ಥಿಯನ್ನು ಗೆಲ್ಲಿಸಲು ರಾಷ್ಟ್ರನಾಯಕರ ಆಗಮನ: ಪುತ್ತೂರಿನಂತಹ ಊರಿನಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯಾದ ಆಶಾ ತಿಮ್ಮಪ್ಪರನ್ನು ಗೆಲ್ಲಿಸಲು ಪಕ್ಷೇತರನಾಗಿ ನಿಂತವರ ಓಟುಗಳನ್ನು ಸೆಳೆಯಲು ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಅಣ್ಣಾಮಲೈ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪಕ್ಕದ ಜಿಲ್ಲೆಗೆ ಪ್ರಧಾನಿ ಮೋದೀಜಿಯವರು ಬಂದು ಕರೆ ಕೊಡುತ್ತಾರೆ ಎಂದಾದರೆ, ಅವರು ಯಾರಿಗೂ ಇಲ್ಲಿ ಓಟೇ ಇಲ್ಲ ಎಂದು ತಿಳಿದರೆ ನಮ್ಮ ಊರಿನ ಪ್ರತಿನಿಧಿಯ ಆಯ್ಕೆಯಲ್ಲಿ ನಮ್ಮ ಊರಿನ ಜನರ ಒಂದೊಂದು ಓಟಿಗೂ ಬೆಲೆ ಎಷ್ಟಿದೆ ಎಂದು ಅರ್ಥವಾಗುವುದಿಲ್ಲವೇ? ಅದನ್ನು ಪ್ರಜಾಪ್ರಭುತ್ವದ ವಿಜಯ ಎಂದೇ ಪರಿಗಣಿಸಬೇಕು. ಇಲ್ಲಿ ಯಾರೇ ಗೆದ್ದರೂ,ಯಾರೇ ಸೋತರು ಅವರೆಲ್ಲಾ ಪುತ್ತೂರಿನ ಅಭಿವೃದ್ಧಿಗಾಗಿ, ಜನಸೇವೆಗಾಗಿ ಸ್ಪರ್ಧೆಗೆ ನಿಂತವರು ಎಂದೇ ಪರಿಗಣಿಸುವಂತಾಗಬೇಕು. ಮತದಾರರು ತಮ್ಮ ಕ್ಷೇತ್ರದಲ್ಲಿ ಸ್ಪರ್ಧೆಗೆ ನಿಂತರವರನ್ನು ತಮ್ಮ ಸೇವೆಗಾಗಿ ಸ್ಪರ್ಧೆಗೆ ನಿಂತವರು ಎಂದು ಪರಿಗಣಿಸಿ ಅವರಿಗೆಲ್ಲಾ ಅಭಿನಂದನೆ ಸಲ್ಲಿಸಿ, ಅವರಲ್ಲಿ ಉತ್ತಮರನ್ನು ಆಯ್ಕೆ ಮಾಡುವ ನಿರ್ಣಯವನ್ನು ಕೈಗೊಂಡರೆ ನಮ್ಮದು ಎಂತಹ ದೊಡ್ಡ ಪ್ರಜಾಪ್ರಭುತ್ವದ ದೇಶವಾದೀತು. ಊರು ರಾಮರಾಜ್ಯವಾಗಿ ಸ್ವರ್ಗವೇ ಆಗಲಿಕ್ಕಿಲ್ಲವೇ?.

ಯಾರೇ ಗೆದ್ದರೂ ಉತ್ತಮ ಸೇವೆ ದೊರಕಲಿ, ಲಂಚ, ಭ್ರಷ್ಟಾಚಾರ ನಿಲ್ಲಲಿ: ಅದೇನೇ ಇರಲಿ, ಮತದಾರರು ರಾಜರುಗಳಾಗಬೇಕು. ತಮ್ಮ ಕ್ಷೇತ್ರದ ಅಭ್ಯರ್ಥಿ ತಮ್ಮ ಸೇವೆಗಾಗಿ ಇರುವವ ಎಂದು ಪರಿಗಣಿಸಿ ಉತ್ತಮನನ್ನು ಆಯ್ಕೆ ಮಾಡುವಂತಾಗಬೇಕು. ಆತನನ್ನು ರಾಜನಾಗಿ ಮಾಡದೆ ಜನಸೇವಕನೆಂದು ಗುರುತಿಸಿ ಗೌರವಿಸಿ, ತನ್ನ ಕ್ಷೇತ್ರದಲ್ಲಿರುವ ಎಲ್ಲಾ ಅಧಿಕಾರಿಗಳು ಜನಸೇವೆ ಮಾಡುವಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಆತನ ಮೇಲೆ ಇರಿಸಬೇಕು. ಊರನ್ನು ಲಂಚ, ಭ್ರಷ್ಟಾಚಾರ ಮುಕ್ತ ಊರನ್ನಾಗಿ ಮಾಡುವ ಜವಾಬ್ದಾರಿ ಆತನದ್ದೆಂದು ತಿಳಿಸಿ, ಅಧಿಕಾರಿಗಳು ಜನರಿಂದ ಲಂಚವಾಗಿ ಹಣವನ್ನು ಪಡೆದರೆ, ಭ್ರಷ್ಟಾಚಾರ ಮಾಡಿದರೆ ಅದನ್ನು ಜನತೆಗೆ ಜನಪ್ರತಿನಿಧಿ ಹಿಂತಿರುಗಿಸುವಂತೆ ಮಾಡಿಸಬೇಕು. ಮತದಾರರು ಆ ನಿರ್ಣಯ ಕೈಗೊಂಡರೆ ನಾವು ರಾಜರುಗಳಾಗುತ್ತೇವೆ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಯಾವ ಪಕ್ಷದವರೇ ಆಗಿದ್ದರೂ, ಪಕ್ಷೇತರರೇ ಆಗಿದ್ದರೂ ಜನ ಸೇವಕರಾಗುತ್ತಾರೆ. ಅಧಿಕಾರಿಗಳು ಉತ್ತಮ ಸೇವೆ ನೀಡುವವರೇ ಆಗುತ್ತಾರೆ ನಮ್ಮ ಊರು ಲಂಚ, ಭ್ರಷ್ಟಾಚಾರ ಮುಕ್ತವಾಗಿಯೇ ಆಗುತ್ತದೆ ಎಂಬ ಸುದ್ದಿ ಜನಾಂದೋಲನದ ಆಶಯವನ್ನು ನಿಮ್ಮ ಮುಂದೆ ಇಡಲು ಇಚ್ಛಿಸುತ್ತೇನೆ.

ವಿ.ಸೂ: ಜನರು ಚುನಾವಣೆಯಲ್ಲಿ ಆಯ್ಕೆ ಮಾಡುವ ಸಂದರ್ಭದಲ್ಲಿ ಈ ಲೇಖನ ಪ್ರಭಾವ ಬೀರದಂತೆ ಮತದಾನದ ನಂತರ ಲೇಖನವನ್ನು ಪ್ರಕಟಿಸಲಾಗಿದೆ.

LEAVE A REPLY

Please enter your comment!
Please enter your name here