ಮನೆಯಂಗಳದಿ ಔಷಧಿ ಸಸ್ಯ – 4(ಅಕ್ಕ ತಂಗಿಯರ ಗಿಡ)

0

ಮೂಲಿಕಾ ಪರಿಚಯ:

ಮಳೆಗಾಲದಲ್ಲಿ ನೆಲದೊಳಗಿನ ಮೂಲಗಡ್ಡೆಯಿಂದ ಚಿಗಿತು, ಒಂದೆರಡು ಅಡಿಗಳೆತ್ತರಕ್ಕೆ ಬೆಳೆದು ಬರುವ ಮೃದುವಾದ ಚೌಕ ಕಾಂಡದ ಗಿಡ. ಗಿಣ್ಣನ್ನು ಆವರಿಸಿದಂತಿರುವ ಎಲೆಗಳು ದೂರ ದೂರ. ಮೇಲೆ ಬಂದಂತೆ ಸಣ್ಣವಾಗುತ್ತವೆ. ಕೊನೆಯ ಕವಲು ರೆಂಬೆಗಳಲ್ಲಿ ಸಂಪಿಗೆ ಗಾತ್ರದ ಬಿಳಿದಳಗಳ ಸುಂದರ ಹೂಗಳ ಗೊಂಚಲು. ದಳಗಳ ಹೊರಚಾಚಿದ ಭಾಗ ನೇರಳೆ ಕರೆಗಟ್ಟಿದ ನಸು ನೀಲಿ. ದೀಪಾವಳಿಯ ಕಾಲದಲ್ಲಿ ಹೂಗಳು ಹೆಚ್ಚಾಗಿದ್ದು, ಕಾಯಿಗಳಾಗಿ ಚಳಿಯ ಆರಂಭದೊಂದಿಗೆ ಗಿಡಗಳು ಒಣಗುತ್ತವೆ. ಕರಾವಳಿ ಬೆಟ್ಟದ ಇಳಿಜಾರು ಹಾಗೂ ಮೈದಾನುಗಳಲ್ಲಿ ದಖ್ಖದ ಹುಲ್ಲುಗಾವಲುಗಳಲ್ಲಿ ಕರಡ (ಮುಳಿ)ದ ಹುಲ್ಲಿನ ಹರವಿನಲ್ಲಿ ಅಲ್ಲಲ್ಲಿ ತಲೆಯೆತ್ತುವ ಹೂ ಗೊಂಚಲುಗಳು 3-4 ವಾರ ಸೌಂದರ್ಯ ಬೀರುತ್ತವೆ. ಮಹಾರಾಷ್ಟ್ರ ಮೂಲದ ಕೆ ಜನಾಂಗಗಳ ʼಗೋಂದೋಳುʼ ಹಾಗೂ ಕರಾವಳಿಯ ʼಬಲೀಂದ್ರ ಪೂಜೆʼ ಗಳಲ್ಲಿ ಅಕ್ಕ ತಾಂಗಿ ಹೂ ಇರಲೇಬೇಕು. ಕೃಷಿ ಸಮೃಧ್ದ ನೆಲದಲ್ಲಿ ಹುಟ್ಟಿ, ಅಕ್ಕರೆಯಲ್ಲಿ ಬೆಳೆದು, ಬುಧ್ದಮತ್ತೆಯೊಂದಿಗೆ ಚೆಲುವನ್ನೂ ಪಡೆದು, ಅವಿವಾಹಿತೆಯರಾಗಿ ಬದುಕನ್ನು ತ್ಯಜಿಸಿ ʼಸಮಾಜದ ಜ್ವರʼ ನಿವಾರಣೆಗೆ ಕಾರಣವಾಗಿ ಜನಮನದಲ್ಲಿ ಉಳಿದ, ಅಂತಃಕರಣ ದ್ರವಿಸುವ ಮಳೆನಾಡ ಸಹೋದರಿಯರ ಜಾನಪದ ಕತೆಯೊಂದು ಈ ಹೂಗಳ ಹಿನ್ನೆಲೆಯಲ್ಲಿ ಹುದುಗಿದೆ. ಸ್ತ್ರೀಯರು ದಾರಿ ನಡೆಯುವಾಗ ಹೂಗಳು ಕಂಡು ಬಂದರೆ ಒಂದನ್ನಾದರೂ ಕೊಯಿದು ಮುಡಿಯುವುದು ಹಿಂದಿನ ಕಟ್ಟಳೆ.

ʼಕಿರಾತʼ ವರ್ಗದಲ್ಲಿ ಸೇರುವ ಸರ್ವಾಂಗ ಕಹಿಗಿಡ. ʼಜ್ವರದ ಮದ್ದುʼ ಎಂದೇ ಮೂಲಿಕಾ ವೈದ್ಯದಲ್ಲಿ ಪರಿವಿತ ಅಜೀರ್ಣ ನಿವಾರಣೆ, ರಕ್ತ ಶುಧ್ದಿ, ಶೋಧನೆ ಸುಗಮಗೊಳಿಸುವೆಕೆ, ಹೆಚ್ಚಾದರೆ ವಿರೇಚನ ಇವು ಇದರ ಔಷಧೀಯ ಗುಣಗಳು. ಶರೀರಾರೋಗ್ಯ ವೃಧ್ದಿಗೊಳಿಸಬಲ್ಲ ʼಏಮೂಲಿಕʼ ಹಲವು ರೋಗಗಳಲ್ಲಿ ಇದೊಂದು ಉತ್ತಮ antibiotics. ಈ ಸಸಿಯ ಒಣ ರೆಂಬೆಕಡ್ಡಿಗಳು, ಗಡ್ಡೆಗಳು, ʼಕಿರಾತʼ, ʼತ್ರಾಯಮಾಣʼ, ಮುಂತಾದ ಔಷಧಗಳ ಅಭಾವದಲ್ಲಿ ಜೊತೆ ಬೆರಕೆಯಾಗುವುದೂ ಇದೆ. ಆದರೆ ಗುಣದಲ್ಲೇನೂ ಕಡಿಮೆಯಲ್ಲ.

ಉಪಯೋಗಗಳು:

ಯಾವುದೇ ಜ್ವರಕ್ಕೆ ಈ ಸಸ್ಯದ ಗಡ್ಡೆ 15 ಗ್ರಾಂ (ಸಸ್ಯದ ಇತರ ಭಾಗಗಳಾದಲ್ಲಿ 25 ಗ್ರಾಂ) ಜಜ್ಜಿ ಹಾಕಿ 1 ಲೋಟ ಕಷಾಯ ಬತ್ತಿಸಿ ದಿನಕ್ಕೆ 3 ಬಾರಿ ಸೇವನೆ 2-3 ದಿನ.

ಯಾವುದೇ ನಂಜು ನಿವಾರಕವಾಗಿ ಮೇಲಿನಂತೆಯೇ 6 ಚಿಟಿಕೆ ಅರಸಿನ ಪುಡಿಯನ್ನು ಸೇರಿಸಿ ಕಷಾಯ ತಯಾರಿಸಿ ಸೇವನೆ. 3-6 ದಿನ.

ಸೂಚನೆ: ನೀರು ಸುರಿಯುವ ವ್ರಣ ಇತ್ಯಾದಿಗಳಿದ್ದಲ್ಲಿ ಜೀರಿಗೆ ಹಾಕಿ ಕುದಿಸಿದ ನೀರಲ್ಲಿ ಸಮೂಲ ಸಸ್ಯ ಅರೆದು ಲೇಪನವೂ ಅಗತ್ಯ.

ಅಕ್ಕ ತಂಗಿಯರ ಗಿಡ ಯಾವುದೇ ನಂಜುನಿವಾರಕವಾಗಿ ಹೆಸರುಗಳು:
ಕನ್ನಡ: ಅಕ್ಕ ತಂಗಿಯರ ಗಿಡ, ದೊಡ್ಡ ಕಿರ್ಯಾತು
ತುಳು: ದೊಂದಿ ಪೂತ ದೈ
ಹಿಂದಿ: ಬಡಾ ಚಿರಾಯತ್
ಸಸ್ಯಶಾಸ್ತ್ರೀಯ: Exacum tetragonum Roxb
ಕುಟುಂಬ: Gentianaceae
ಉಪಯೋಗ: ಸರ್ವಾಂಗ, ಮುಖ್ಯವಾಗಿ ಗಡ್ಡೆಗಳು

ಮೂಲ ಬರಹ: ಪಿ ಎಸ್‌ ವೆಂಕಟರಾಮ ದೈತೋಟ

LEAVE A REPLY

Please enter your comment!
Please enter your name here