ಕಂಬಳ ಪರ ಸುಪ್ರಿಂ ತೀರ್ಪು-ಪೇಟಾಗೆ ಭಾರೀ ಹಿನ್ನೆಡೆ – ಅಶೋಕ್ ರೈಗಳ 12 ವರ್ಷಗಳ ಸುದೀರ್ಘ ಹೋರಾಟಕ್ಕೆ ಜಯ

0

ಪುತ್ತೂರು:ಕಂಬಳ ಪರ ಸುಪ್ರಿಂಕೋರ್ಟು ತೀರ್ಪು ನೀಡಿದ್ದು ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷರಾದ ಪ್ರಸ್ತುತ ಶಾಸಕರಾಗಿರುವ ಅಶೋಕ್ ಕುಮಾರ್ ರೈಯವರ ಸುದೀರ್ಘ 12 ವರ್ಷಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ. ಕಂಬಳ ತುಳುನಾಡಿನ ಜಾನಪದ ಕ್ರೀಡೆಯಾಗಿದ್ದು , ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ಈ ಕ್ರೀಡೆ ನಡೆಯುತ್ತಿದ್ದು, ಕರಾವಳಿಯ ರೈತಾಪಿ ಜನರು ಭತ್ತದ ಕೊಯ್ಲಿನ ಜನರು ತಮ್ಮ ಮನರಂಜನೆಗೋಸ್ಕರ ಏರ್ಪಡಿಸುತ್ತಿದ್ದ ಈ ಕಂಬಳ ಕ್ರೀಡೆಯು ಕ್ರಮೇಣ ಸಾಂಪ್ರದಾಯಿಕ ಕ್ರೀಡೆಯಾಗಿ ಬೆಳೆದು ಬಂತು.


ಕಂಬಳಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹಿಂದಿನ ಕಾಲದಲ್ಲಿ ರಾಜರುಗಳ ಬೆಂಬಲ ಮತ್ತು ಪ್ರೋತ್ಸಾಹದಿಂದ ಈ ಕ್ರೀಡೆ ನಡೆಯುತ್ತಿತ್ತು. ಹೆಚ್ಚಾಗಿ ನವೆಂಬರ್ ಬಳಿಕ ಮಾರ್ಚ್ ತನಕ ಕರಾವಳಿ ಜಿಲ್ಲೆಗಳಲ್ಲಿ ಈ ಕ್ರೀಡೆ ನಡೆಯುತ್ತದೆ. ಕಂಬಳದಲ್ಲಿ ಎರಡು ಬಲಿಷ್ಟ ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳನ್ನು ಓಡಿಸಲಾಗುತ್ತದೆ. ಈ ಸಮಯದಲ್ಲಿ ಕೋಣಗಳು ಅತೀ ವೇಗವಾಗಿ ಓಡಲಿಕ್ಕಾಗಿ ಓಡಿಸುವ ವ್ಯಕ್ತಿ ಕೋಣಗಳಿಗೆ ಹಿಂಸಾತ್ಮ ರೀತಿಯಲ್ಲಿ ಪೆಟ್ಟು ಕೊಡುತ್ತಾನೆ ಎಂಂದು ಪ್ರಾಣಿದಯಾಸಂಘ (ಪೇಟಾ) ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿ ಕಂಬಳವನ್ನು ನಿಷೇಧಿಸುವಂತೆ ಆಗ್ರಹಿಸಿತ್ತು. ಪೇಟಾ ನ್ಯಾಯಾಲಯದಲ್ಲಿ ಮಾಡಿರುವ ಆರೋಪಗಳಲ್ಲಿ ಕೋಣಗಳನ್ನು ಹಿಂಸಾತ್ಮಕ ರೀತಿಯಲ್ಲಿ ಎಳೆಯುವಿಕೆ, ಕುಣಿಯುವಿಕೆ ಮತ್ತು ಮೂಗಿನ ಹಗ್ಗಗಳ ಒರಟು ನಿರ್ವಹಣೆ ಮೂಲಕ ಪ್ರಾಣಿಗಳಿಗೆ ಹಿಂಸಾತ್ಮಕ ರೀತಿಯಲ್ಲಿ ಕೌರ್ಯವನ್ನು ಮೆರೆಯಲಾಗಿತ್ತು ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ದಾವೆಯಲ್ಲಿ ತಿಳಿಸಿತ್ತು. ಕಂಬಳದ ಜೊತೆ ತಮಿಳುನಾಡಿನಲ್ಲಿ ಸುಗ್ಗಿಯ ಹಬ್ಬ ಪೊಂಗಲ್ ಬಳಿಕ ಗೂಳಿಯನ್ನು ಪಳಗಿಸುವ ಜಲ್ಲಿಕಟ್ಟು ವಿರುದ್ದವೂ ಪೇಟಾ ದಾವೆಯನ್ನು ಹೂಡಿತ್ತು. ಎರಡೂ ಪ್ರಕರಣಗಳು ಸುಪ್ರಿಂ ಅಂಗಳದಲ್ಲಿತ್ತು.

12 ವರ್ಷಗಳ ಬಳಿಕ ನ್ಯಾಯ
ಪೇಟಾ ಹೂಡಿರುವ ದಾವೆಯ ವಿರುದ್ದ ಕಂಬಳದ ಪರವಾಗಿ ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಲ ಸಮಿತಿ ಅಧ್ಯಕ್ಷರಾದ , ಪ್ರಸ್ತುತ ಪುತ್ತೂರು ಶಾಸಕರಾಗಿರುವ ಅಶೋಕ್‌ಕುಮಾರ್ ರೈಯವರು ಪೇಟಾ ವಿರುದ್ದ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿ ಕಂಬಳ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾಗಿದ್ದು ಇದರಲ್ಲಿ ಯಾವುದೇ ರೀತಿಯ ಪ್ರಾಣಿ ಹಿಂಸೆಯಾಗುತ್ತಿಲ್ಲ. ಕಂಬಳದ ಬಗ್ಗೆ ಪೇಟಾ ಮಾಡಿರುವ ಆರೋಪಗಳು ನ್ಯಾಯಬದ್ದತೆಯಿಂದ ಕೂಡಿಲ್ಲ ಎಂದು ಕಂಬಳ ಪರ ವಕೀಲರು ನ್ಯಾಯಾಲಯದಲ್ಲಿ ವಾದಮಂಡಿಸುವ ಮೂಲಕ ಕಂಬಳದಲ್ಲಿ ಪ್ರಾಣಿ ಹಿಂಸೆಯಿಲ್ಲ ಎಂಬುದನ್ನು ಸಾಭೀತುಪಡಿಸುವಲ್ಲಿ ಯಸಶ್ವಿಯಾಗಿದ್ದರು. ಇದೀಗ ಕಂಬಳ ಸಮಿತಿ ಅಧ್ಯಕ್ಷರಾದ ಅಶೋಕ್ ರೈಯವರ ಏಕಾಂಗಿ ಹೋರಾಟಕ್ಕೆ ಜಯ ದೊರಕಿದ್ದು ಕಂಬಳ ಪರವಾಗಿ ದೇಶದ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ. ಮುಂದಿನ ದಿನಗಳಲ್ಲಿ ಕಂಬಳ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಡೆಸಬಹುದಾಗಿದೆ.

ಹೋರಾಟಕ್ಕೆ ಸಂದ ಜಯ: ಅಶೋಕ್ ರೈ
ಕಂಬಳದ ವಿರುದ್ದ ಪೇಟಾ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದಾಗ ಅದರ ವಿರುದ್ದ ನಾನು ಸುಪ್ರಿಂ ಕೋರ್ಟಿನಲ್ಲಿ ಕಾನೂನು ಹೋರಾಟವನ್ನು ನಡೆಸಿದ್ದೆ. ಕಂಬಳ ಸಮಿತಿಗಳ ಪರವಾಗಿ ತಾನು ಸುಪ್ರಿಂ ಕೋರ್ಟಿಗೆ ಸುಪ್ರಿಂ ಕೋರ್ಟಿಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದು ಕಂಬಳ ಕೂಟಕ್ಕೆ ಪ್ರಾಚೀನ ಇತಿಹಾಸವಿದೆ. ಧಾರ್ಮಿಕ ಪರಂಪರೆ ಇದೆ, ಕಂಬಳದಲ್ಲಿ ಕೋಣಗಳಿಗೆ ಹಿಂಸೆಯಾಗುವುದಿಲ್ಲ, ಮಕ್ಕಳಂತೆ ಕೋಣಗಳನ್ನು ಸಾಕಿ ಸಲಹಲಾಗುತ್ತಿದೆ ಆದ್ದರಿಂದ ಕಂಬಳ ಕೂಟಕ್ಕೆ ನಿಷೇಧ ಹೇರಬಾರದು ಎಂದಿನಂತೆ ಕಂಬಳ ಕೂಟ ಆಯೋಜನೆಗೆ ಅವಕಾಶ ಮಾಡಿಕೊಡಬೇಕು ಎಂದು ನ್ಯಾಯಾಲಯದ ಮೂಲಕ ಮನವಿಯನ್ನು ಮಾಡಿದ್ದೆ. ನನ್ನ ಸತತ 12 ವರ್ಷಗಳ ಹೋರಾಟಕ್ಕೆ ಜಯಗಳಿಸಿದ್ದು ತೀರ್ಪು ನಮ್ಮ ಪರ ಬಂದಿದೆ. ಇದು ತನಗೆ ಅತೀವ ಸಂತಸವನ್ನು ತಂದಿದೆ ಎಂದು ಉಪ್ಪಿನಂಗಡಿ ವಿಜಯವಿಕ್ರಮ ಕಂಬಳ ಸಮಿತಿ ಅಧ್ಯಕ್ಷರೂ , ಶಾಸಕರೂ ಆಗಿರುವ ಅಶೋಕ್ ಕುಮಾರ್ ರೈ ಕೋಡಿಂಬಾಡಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here