ಪಂಚಾಯತ್ ಸಮೀಪದಲ್ಲೇ ಅಂಡರ್‌ಪಾಸ್ ನಿರ್ಮಾಣಕ್ಕೆ ರಾ. ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ
ಪುತ್ತೂರು: ರಾ ಹೆದ್ದಾರಿ 75 ರ ನೆಕ್ಕಿಲಾಡಿ ಗ್ರಾಪಂ ಕಚೇರಿ ಸಮೀಪದಲ್ಲೇ ಅಂಡರ್‌ಪಾಸ್ ನಿರ್ಮಾಣ ಮಾಡುವಂತೆ ಆಗ್ರಹಿಸಿ ರಾ.ಹೆದ್ದಾರಿ ಪ್ರಾಧಿಕಾರಕ್ಕೆ 34 ನೇ ನೆಕ್ಕಿಲಾಡಿ ಗ್ರಾಪಂನಿಂದ ಮನವಿ ಮಾಡಲಾಗಿದೆ. ಅಂಡರ್‌ಪಾಸ್ ನಿರ್ಮಾಣ ಕುರಿತಂತೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
34 ನೇ ನೆಕ್ಕಿಲಾಡಿ ಗ್ರಾಪಂ ಸಾಮಾನ್ಯ ಸಭೆಯು ಅಧ್ಯಕ್ಷರಾದ ಪ್ರಶಾಂತ್ ಎನ್ ರವರ ಅಧ್ಯಕ್ಷತೆಯಲ್ಲಿ ಗ್ರಾಪಂ ಸಭಾಂಗಣದಲ್ಲಿ ನಡೆಯಿತು.
ಹೈವೇ ಪ್ರಾಧಿಕಾರದವರು ಗ್ರಾಪಂ ಕಚೇರಿಯಿಂದ ಸುಮಾರು 600 ಮೀಟರ್ ದೂರದಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡಲು ಈಗಾಗಲೇ ಪ್ಲ್ಯಾನ್ ಮಾಡಿದ್ದಾರೆ. ಹೈವೇ ಪ್ರಾಧಿಕಾರದವರು ಉದ್ದೇಶಿತ ಸ್ಥಳದಲ್ಲಿ ಅಂಡರ್ ಪಾಸ್ ಮಾಡಿದರೆ ಜನರಿಗೆ ಹೆಚ್ಚು ಪ್ರಯೋಜನ ದೊರೆಯುವುದಿಲ್ಲ. ಹೈವೇ ಆಗಿರುವ ಕಾರಣ ಗ್ರಾಪಂ ಕಚೇರಿಗೆ ಬರುವ ಸಾರ್ವಜನಿಕರಿಗೆ ಪಂಚಾಯತ್ ಬಳಿಯೇ ಅಂಡರ್ ಪಾಸ್ ನಿರ್ಮಾಣ ಮಾಡಿದರೆ ಪ್ರಯೋಜನವಾಗಲಿದೆ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು. ಪಂಚಾಯತ್ ಸಮೀಪವೇ ಅಂಡರ್‌ಪಾಸ್ ನಿರ್ಮಾಣ ಮಾಡುವಂತೆ ಒತ್ತಾಯಮಾಡುವುದಾಗಿ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು. ಇತರ ಸದಸ್ಯರು ಒಕ್ಕೊರಲಿನಿಂದ ನಿರ್ಣಯಕ್ಕೆ ಅನುಮೋದನೆಯನ್ನು ನೀಡಿ ಸಾರ್ವಜನಿಕ ಹಿತದೃಷ್ಟಿಯಿಂದ ಅಂಡರ್ ಪಾಸ್ ಗ್ರಾಪಂ ಉದ್ದೇಶಿತ ಸ್ಥಳದಲ್ಲೇ ನಿರ್ಮಾಣವಾಗಬೇಕು ಎಂದು ಎಲ್ಲಾ ಸದಸ್ಯರು ಆಗ್ರಹಿಸಿದರು.
ಕಾಮಗಾರಿಯಿಂದ ಅಪಾಯ ಸೃಷ್ಟಿ
ಪುತ್ತೂರು ನಗರ ಸಭೆ ವತಿಯಿಂದ ಜಲಸಿರಿ ಯೋಜನೆಯಡಿ ಬೊಳಂತಿಲದಿಂದ ಸ್ಥಾವರಕ್ಕೆ ತೆರಳುವ ರಸ್ತೆಯನ್ನು ಡಾಮರೀಕರಣ ಮಾಡಲಾಗಿದೆ. ಡಾಮರೀಕರಣ ಮಾಡುವ ವೇಳೆ ರಸ್ತೆ ಮಧ್ಯೆ ಇದ್ದ ಚೇಂಬರ್‌ಗಳ ಮೇಲೆ ಡಾಮರು ಹಾಕದೇ ಇರುವ ಕಾರಣ ಚೇಂಬರ್ ಗುಂಡಿಯಲ್ಲಿದ್ದು ರಸ್ತೆ ಎತ್ತರದಲ್ಲಿದೆ. ಇದರಿಂದಾಗಿ ರಸ್ತೆಯಲ್ಲಿ ತೆರಳುವ ವಾಹನಗಳಿಗೆ ತೊಂದರೆಯಾಗುತ್ತಿದೆ. ರಸ್ತೆ ಮಧ್ಯೆ ಛೇಂಬರ್ ಇರುವಲ್ಲಿ ಗುಂಡಿಗಳಿದ್ದು ದ್ವಿಚಕ್ರ ವಾಹನ ಸವಾರರಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು. ನಗರಸಭೆಯವರು ಮಾಡಿರುವ ಕಾಮಗಾರಿಯಿಂದ ಅಪಾಯ ಸೃಷ್ಟಿಯಾಗಿದ್ದು ಮಾತ್ರವಲ್ಲದೆ ಇದೊಂದು ಅವೈಜ್ಞಾನಿಕ ಕಾಮಗಾರಿಯಾದಂತೆ ತೋರುತ್ತಿದೆ. ಸಂಬಂಧಪಟ್ಟವರು ಇಲ್ಲಿರುವ ಅಪಾಯವನ್ನು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಭೆಗೆ ವಿವರಿಸಿದರು. ಈ ಬಗ್ಗೆ ನಿರ್ಣಯವನ್ನು ಕೈಗೊಳ್ಳಲಾಯಿತು. ಬೊಳಂತಿಲದಿಂದ ಸ್ಥಾವರಕ್ಕೆ ತೆರಳುವ ಸುಮಾರು 500 ಮೀಟರ್ ರಸ್ತೆಯನ್ನು ಅಪಾಯ ಮುಕ್ತಗೊಳಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.ಉಳಿದಂತೆ ಸಭೆಯಲ್ಲಿ ಸಾರ್ವಜನಿಕರಿಂದ ಬಂದಿರುವ ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಸ್ವಪ್ನಾ ಜೀವನ್ ಗಾಣಿಗ, ಸದಸ್ಯರುಗಳಾದ ಗೀತಾ, ತುಳಸಿ, ರತ್ನಾವತಿ, ಹರೀಶ್‌ಕುಲಾಲ್, ವೇದಾವತಿ, ಸುಜಾತ, ವಿಜಯಕುಮಾರ್ ಉಪಸ್ಥಿತರಿದ್ದರು. ಪಿಡಿಒ ಸತೀಶ್ ಬಂಗೇರ ವರದಿ ವಾಚಿಸಿದರು.