ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ 24ರಂದು ರಾತ್ರಿ ಪತ್ತನಾಜೆ ಉತ್ಸವ ನಡೆಯಿತು. ಉತ್ಸವದ ಬಳಿಕ ಭಕ್ತರಿಗೆ ಪ್ರಸಾದ ರೂಪದಲ್ಲಿ ಫಲವಸ್ತುಗಳನ್ನು ವಿತರಣೆ ಮಾಡಲಾಯಿತು. ಇದು ಪತ್ತನಾಜೆ ವಿಶೇಷ.
ಪತ್ತನಾಜೆ ದಿನ ಬೆಳಿಗ್ಗೆ, ಮಧ್ಯಾಹ್ನ ವಿಶೇಷ ಪೂಜೆ ನಡೆಯಿತು. ಸಂಜೆ ಶ್ರೀ ದೇವರ ನಿತ್ಯ ಬಲಿ ಉತ್ಸವದಲ್ಲಿ ಉಡಿಕೆ, ಚೆಂಡೆ, ವಾದ್ಯ ಸುತ್ತು, ಪಲ್ಲಕಿ ಉತ್ಸವ ಮತ್ತು ಸೇವೆ ನಡೆಯಿತು. ಪಲ್ಲಕಿ ಉತ್ಸವ ಸೇವಾರ್ಥಿಗಳಿಗೆ ಪ್ರಸಾದ ವಿತರಣೆ ಬಳಿಕ ವಸಂತ ಪೂಜೆ ನಡೆಯಿತು. ವಸಂತ ಪೂಜೆ ಸೇವಾರ್ಥಿಗಳಿಗೆ ಪ್ರಸಾದ ವಿತರಣೆ ನಡೆಯಿತು. ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ವೈದಿಕ ಕಾರ್ಯಕ್ರಮ ನೆರವೇರಿಸಿದರು. ದೇವರು ಗರ್ಭಗುಡಿ ಪ್ರವೇಶಿಸಿದ ಬಳಿಕ ಪತ್ತನಾಜೆ ಉತ್ಸವದ ಪ್ರಸಾದ ರೂಪವಾಗಿ ಫಲವಸ್ತುಗಳನ್ನು ದೇವಳದ ಹೊರಾಂಗಣದಲ್ಲಿ ಭಕ್ತಾದಿಗಳಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್, ಸದಸ್ಯರಾದ ಶೇಖರ್ ನಾರಾವಿ, ರವೀಂದ್ರನಾಥ ರೈ ಬಳ್ಳಮಜಲು, ರಾಮಚಂದ್ರ ಕಾಮತ್, ರಾಮದಾಸ್ ಗೌಡ, ಬಿ.ಐತ್ತಪ್ಪ ನಾಯ್ಕ್, ವೀಣಾ ಬಿ.ಕೆ. ಡಾ. ಸುದಾ ಎಸ್ ರಾವ್, ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್, ವ್ಯವಸ್ಥಾಪನಾ ಸಮಿತಿ ಮಾಜಿ ಆಡಳಿತ ಮೊಕ್ತೇಸರ ಎನ್.ಕೆ.ಜಗನ್ನಿವಾಸ ರಾವ್, ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿ, ಅರುಣ್ ಕುಮಾರ್ ಪುತ್ತಿಲ, ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಚಂದ್ರಶೇಖರ್ ಪಿ.ಜಿ, ರತ್ನಾಕರ ನಾಯಕ್, ಹಿರಿಯರಾದ ಕಿಟ್ಟಣ್ಣ ಗೌಡ ಸೇರಿದಂತೆ ಸಾವಿರಾರು ಮಂದಿ ಭಕ್ತರು ಉಪಸ್ಥಿತರಿದ್ದರು.
ತಡವಾಗಿ ಗರ್ಭಗುಡಿ ಪ್ರವೇಶಿಸುವ ದೇವರು:
ಪತ್ತನಾಜೆಯಂದು ದೇವರ ಉತ್ಸವ ಮೂರ್ತಿಯನ್ನು ಗರ್ಭ ಗುಡಿಯೊಳಗೆ ಕೊಂಡೊಯ್ಯುವ ಮೊದಲು ಬ್ರಹ್ಮ ವಾಹಕರು ಉತ್ಸವ ಮೂರ್ತಿಯನ್ನು ಆನೆ ಮೆಟ್ಟಿಲಿನ ಮೂಲಕ ಒಳಗೆ ಕೊಂಡೊಯ್ದು ಮತ್ತೆ ಹಿಂದಕ್ಕೆ ತರುತ್ತಾರೆ. ಹೀಗೆ ಮೂರು ಬಾರಿ ಹೋಗಿ ಬರುವ ಕ್ರಮದ ಬಳಿಕ ಕೊನೆಗೆ ಉತ್ಸವ ಮೂರ್ತಿಯನ್ನು ಒಳಗೆ ಸೇರಿಸುವುದು ವಿಶೇಷವಾಗಿತ್ತು.