ನಾಳೆ (ಮೇ 31) ಶಾಲಾರಂಭ; ಮಕ್ಕಳ ಸ್ವಾಗತಕ್ಕೆ ಸಿದ್ಧವಾಗಿವೆ ಶಾಲೆಗಳು

0

ಪುತ್ತೂರು: ಮಕ್ಕಳಿಗೆ ಬೇಸಿಗೆ ರಜಾವಧಿ ಪೂರ್ಣಗೊಂಡು 2023-24ನೇ ಶೈಕ್ಷಣಿಕ ವರ್ಷದ ಪ್ರಾಥಮಿಕ ಹಾಗೂ ಪ್ರೌಢ ಶಾಲಾರಂಭ ಮೇ 31ರಂದು ನಡೆಯಲಿದೆ. ಮೇ 29ರಂದು ಶಾಲೆಗಳಲ್ಲಿ ಪೂರ್ವ ಸಿದ್ಧತಾ ಕಾರ್ಯಕ್ರಮ ನಡೆದಿದೆ.

ಮಕ್ಕಳ ಮನಸ್ಸಿಗೆ ಖುಷಿ ನೀಡುವ ನಿಟ್ಟಿನಲ್ಲಿ ಶಾಲೆಗಳನ್ನು ಅಲಂಕಾರ ಮಾಡುವುದು ಮತ್ತು ಎಲ್ಲಾ ಶಾಲೆಗಳಲ್ಲಿ ಆರಂಭೋತ್ಸವವನ್ನು ವಿವಿಧ ಚಟುವಟಿಕೆಗಳ ಮೂಲಕ ವಿಶೇಷವಾಗಿ ಆಚರಿಸಲು ಶಿಕ್ಷಣ ಇಲಾಖೆ ಸೂಚಿಸಿದೆ. ಇದಕ್ಕೆ ಗ್ರಾ.ಪಂ.ಗಳೂ ಕೈಜೋಡಿಸಲಿವೆ. ಮಕ್ಕಳಿಗೆ ಸಿಹಿಯೊಂದಿಗೆ ಶಾಲೆಗಳನ್ನು ಆರಂಭಿಸಲಾಗುತ್ತದೆ. ತಾಲೂಕು ಮಟ್ಟದ ಕಾರ್ಯಕ್ರಮವು ಯಾವ ಸರಕಾರಿ ಶಾಲೆಯಲ್ಲಿ ಮಾಡುವುದೆಂಬ ನಿರ್ಧಾರ ಇನ್ನೂ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ. ಬಹುತೇಕ ತಾಲೂಕಿನ ಅತ್ಯಧಿಕ ಮಕ್ಕಳನ್ನು ಹೊಂದಿರುವ ಹಾರಾಡಿ ಶಾಲೆಯ ಆಯ್ಕೆ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ಆರಂಭಕ್ಕೆ ನೋ ಬ್ಯಾಗ್ ಡೇ: ಶಾಲೆಗಳ ಆರಂಭದ ದಿನ ಯಾವುದೇ ಪಠ್ಯ ಚಟುವಟಿಕೆಗಳನ್ನು ಆರಂಭಿಸದೆ ನೋ ಬ್ಯಾಗ್ ಡೇ ಆಗಿ ಆಚರಿಸಲು ತಿಳಿಸಲಾಗಿದೆ. ಮಕ್ಕಳಿಗೆ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಮೊದಲ ದಿನ ವಿವಿಧ ಚಟುವಟಿಕೆಗಳನ್ನು ಕಡ್ಡಾಯವಾಗಿ ನಡೆಸುವಂತೆ ಸೂಚನೆ ನೀಡಲಾಗಿದೆ.

ಪಠ್ಯ ಪುಸ್ತಕ ವಿತರಣೆ: ತಾಲೂಕಿನ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ಶಿಕ್ಷಣ ಇಲಾಖೆಯ ಮೂಲಕ ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ ಇನ್ನೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ತರಗತಿವಾರು ಮತ್ತು ವಿಷಯವಾರು ಪಠ್ಯಪುಸ್ತಕಗಳ ವಿತರಣೆ ಮಾಡಲಾಗುತ್ತದೆ. ಅನುದಾನ ರಹಿತ ಶಾಲೆಗಳಿಗೆ ಮಾರಾಟ ಪ್ರತಿ ಪಠ್ಯಪುಸ್ತಕ ನೀಡಲಾಗುತ್ತದೆ. ಈ ಶಾಲೆಗಳ ಮುಖ್ಯಸ್ಥರು ಆನ್‌ಲೈನ್ ಇಂಡೆಂಟ್ ಮೂಲಕ ಪುಸ್ತಕದ ಪ್ರಮಾಣವನ್ನು ನಿಗದಿಪಡಿಸಿ ಹಣ ಪಾವತಿಸಿ ಚಲನ್ ಅನ್ನು ಬಿಇಒ ಕಚೇರಿಗೆ ತೋರಿಸುವ ಮೂಲಕ ಪಠ್ಯ ಪುಸ್ತಕಗಳನ್ನು ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಅನುದಾನಿತ ಹಾಗೂ ಸರಕಾರಿ ಶಾಲೆಗಳಿಗೆ ಉಚಿತ ಪ್ರತಿ ಪಠ್ಯ ಪುಸ್ತಕವನ್ನು ಪೂರೈಕೆ ಮಾಡಲಾಗುತ್ತದೆ. ಹೆಚ್ಚು ಅಥವಾ ಕಡಿಮೆಯಾದಲ್ಲಿ ಮರಳಿ ಬಿಇಒ ಕಚೇರಿಯನ್ನು ಸಂಪರ್ಕಿಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಇಲಾಖೆಯ ಅಽಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here