ಪುತ್ತೂರು: ವಿದ್ಯಾರ್ಥಿಗಳು ಜೀವನದಲ್ಲಿ ಚೆನ್ನಾಗಿ ಓದಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ಇನ್ನೊಬ್ಬರಿಗೆ ಸಹಾಯ ಮಾಡುವ ಗುಣವನ್ನು ಮೈಗೂಡಿಸಿಕೊಂಡಾಗ ಸಿಗುವಂತ ಸಂತೋಷ ಬೇರೆ ಎಲ್ಲಿಯೂ ಸಿಗಲು ಸಾಧ್ಯವಿಲ್ಲ ಎಂದು ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ರೆ.ಫಾ.ಲಾರೆಸ್ಸ್ ಮಸ್ಕರೇನಸ್ ಹೇಳಿದರು.
ಜೂನ್ 2ರಂದು ಪುತ್ತೂರಿನ ಫಿಲೋಮಿನ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ದೇವರ ಪ್ರಾರ್ಥನೆಯಿಂದ ಮನುಷ್ಯನ ಜೀವನದಲ್ಲಿ ಬೆಳಕು ಮೂಡಲು ಸಾಧ್ಯ ದೇವರಲ್ಲಿ ನಂಬಿಕೆ ಮುಖ್ಯ ಪ್ರತಿಯೊಂದು ವ್ಯಕ್ತಿಗೂ ವಸ್ತುವಿಗೂ ಗೌರವವನ್ನು ಕೊಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಯಾಂಪಸ್ ನಿರ್ದೇಶಕರಾದ ರೆ.ಫಾ.ಸ್ಟ್ಯಾನಿ ಪಿಂಟೋ ಅವರು ಮಾತಾನಾಡಿ ದೃಢವಾದ ನಂಬಿಕೆ ತಾಳ್ಮೆ ಏಕಾಗ್ರತೆ ಇದ್ದಾಗ ಬದುಕನ್ನು ಸುಲಭವಾಗಿಸಬಹುದು. ವಿದ್ಯಾರ್ಥಿಗಳಲ್ಲಿರುವ ಗುರಿ ಕನಸುಗಳನ್ನು ನಿಜವಾಗಿಸಲು ಸೂಕ್ತ ವೇದಿಕೆ ಇದಾಗಿದೆ ಎಂದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಮಾಮಚ್ಚನ್ ಮಾತಾನಾಡಿ ಪ್ರಾಥಮಿಕ ಪ್ರೌಢಶಾಲಾ ಹಂತದವರೆಗೆ ವಿದ್ಯಾರ್ಥಿಗಳಿಗೆ ಗುರಿಯಿಲ್ಲದಿದ್ದರೂ ಮುಂದಿನ ಪಿಯುಸಿ ಹಂತದಲ್ಲಿ ಉತ್ತಮವಾದ ಗುರಿಯನ್ನು ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ, ವಿದ್ಯಾರ್ಥಿಗಳು ಬದುಕಿನಲ್ಲಿ ಯಶಸ್ವಿಯಾಗಲು ಉತ್ತಮ ಆಯ್ಕೆ ಮುಖ್ಯವಾಗಿರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷರಾದ ಜೆರಾಲ್ಡ್ ಡಿ. ಕೊಸ್ತಾ ಮಾತಾನಾಡಿ ವಿದ್ಯಾರ್ಥಿಗಳು ಕಷ್ಟಪಟ್ಟು ಇಷ್ಟಪಟ್ಟು ಓದಿ ಮುಂದಕ್ಕೆ ಬರಬೇಕು ಒಳ್ಳೆಯ ಸಾಧನೆ, ಛಲ ಇದ್ದಾಗ ಉತ್ತಮ ಭವಿಷ್ಯ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕಾಸ್ತಾ ಪ್ರಾಸ್ತಾವಿಕ ನುಡಿಗಳ ನುಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 2023ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂಖ್ಯಾ ಶಾಸ್ತ್ರ ವಿಭಾಗದ ಉಪನ್ಯಾಸಕರದ ಭರತ್ ಜಿ.ಪೈ ಸ್ವಾಗತಿಸಿ ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ಸುಮಾ ಪಿ.ಆರ್ ವಂದಿಸಿದರು. ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಸುಮಾ ಡಿ ಕಾರ್ಯಕ್ರಮ ನಿರೂಪಿಸಿದರು.