ಕೆದಂಬಾಡಿ: ಸಾರೆಪುಣಿ ಕಾಲೋನಿಗೆ 5 ದಿನಗಳಿಂದ ನೀರಿಲ್ಲ..! – ನೀರಿನ ಸಮಸ್ಯೆ ಬಗೆಹರಿಸುವಂತೆ ಸ್ಥಳೀಯರ ಆಗ್ರಹ

0

ಪುತ್ತೂರು: ಕೆದಂಬಾಡಿ ಗ್ರಾ.ಪಂ ವ್ಯಾಪ್ತಿಯ ಸಾರೆಪುಣಿ ಕಾಲೋನಿಯಲ್ಲಿ ಕಳೆದ 5 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಸ್ಥಳೀಯರು ಸಂಕಷ್ಟ ಎದುರಿಸುವಂತಾಗಿದೆ. ಪರಿಸರದಲ್ಲಿರುವ ಸುಮಾರು 15ರಷ್ಟು ಮನೆಯವರು ನೀರಿಲ್ಲದೇ ಬೇರೆ ಕಡೆಯಿಂದ ತಮ್ಮ ಮನೆಗೆ ನೀರು ತರುತ್ತಿದ್ದು, ನೀರಿನ ಸಮಸ್ಯೆಯಿಂದ ಕಂಗಾಲಾಗಿದ್ದಾರೆ. ಕೊಳವೆ ಬಾವಿಯಲ್ಲಿ ನೀರು ಬತ್ತಿದ ಕಾರಣ ನೀರಿನ ಸಮಸ್ಯೆಯಾಗಿದೆ ಎಂದು ತಿಳಿದು ಬಂದಿದೆ. ಗ್ರಾ.ಪಂ ನೀರನ್ನೇ ನಂಬಿಕೊಂಡಿರುವ ಮನೆಯವರು ಇದೀಗ ನೀರು ಪೂರೈಕೆ ಇಲ್ಲದ ಕಾರಣ ಸಮಸ್ಯೆಗೆ ಸಿಲುಕಿದ್ದು ನಮ್ಮ ಸಮಸ್ಯೆ ಬಗೆಹರಿಸಿಕೊಡಿ ಎಂದು ಮನವಿ ಮಾಡುತ್ತಿದ್ದಾರೆ.

ತುರ್ತಾಗಿ ಸಮಸ್ಯೆ ಬಗೆಹರಿಸಿ-ಅಶ್ರಫ್ ಸಾರೆಪುಣಿ
ಗ್ರಾ.ಪಂಗೆ ನೀರಿನ ಸಮಸ್ಯೆ ಬಗ್ಗೆ ಗೊತ್ತಿದೆ. ಸದಸ್ಯರಿಗೂ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದೇವೆ. ಆದರೆ ಸ್ಪಂದನೆ ಸಿಕ್ಕಿಲ್ಲ. ನೀರಿನ ಸಮಸ್ಯೆ ತುರ್ತಾಗಿ ಪರಿಹಾರ ಆಗಬೇಕಿದ್ದು ಕಾಲೊನಿಯ ಜನರು ಬಹಳ ತೊಂದರೆ ಅನುಭವಿಸುವಂತಾಗಿದೆ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಅಶ್ರಫ್ ಸಾರೆಪುಣಿ ತಿಳಿಸಿದ್ದಾರೆ.

ಸಮಸ್ಯೆ ಬಗೆಹರಿಸುತ್ತೇವೆ-ರತನ್ ರೈ
ಪ್ರಸ್ತುತ ನೀರು ಪೂರೈಕೆಯಾಗುತ್ತಿರುವ ಬೋರ್‌ವೆಲ್‌ನಲ್ಲಿ ನೀರು ಬತ್ತಿ ಹೋಗಿರುವುದರಿಂದ ಸಮಸ್ಯೆ ಆಗಿದೆ. ಬೇರೆ ಬೋರ್‌ವೆಲ್‌ಗೆ ಪೈಪ್ ಲೈನ್ ಕನೆಕ್ಷನ್ ಕೊಟ್ಟು ಎರಡು ದಿನದೊಳಗೆ ಅಲ್ಲಿಗೆ ನೀರು ಪೂರೈಕೆ ವ್ಯವಸ್ಥೆಯನ್ನು ಮಾಡುತ್ತೇವೆ ಎಂದು ಕೆದಂಬಾಡಿ ಗ್ರಾ.ಪಂ ಅಧ್ಯಕ್ಷ ರತನ್ ರೈ ಕುಂಬ್ರ ತಿಳಿಸಿದ್ದಾರೆ.

ಸಮಸ್ಯೆ ಪರಿಹಾರಕ್ಕೆ ಪ್ರಯತ್ನ-ಅಸ್ಮಾ
ಬೋರ್‌ವೆಲ್‌ನಲ್ಲಿ ನೀರು ಖಾಲಿಯಾಗಿರುವ ಕಾರಣ ಸಾರೆಪುಣಿ ಕಾಲೋನಿಯಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಶೀಘ್ರದಲ್ಲೇ ಗ್ರಾ.ಪಂನಿಂದ ಪರ್ಯಾಯ ವ್ಯವಸ್ಥೆ ಆಗಲಿದೆ ಎಂದು ಸ್ಥಳೀಯ ಗ್ರಾ.ಪಂ ಸದಸ್ಯೆ ಅಸ್ಮಾ ಗಟ್ಟಮನೆ ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here