ಗೃಹ ರಕ್ಷಕದಳಕ್ಕೆ ಕೊಠಡಿ ವ್ಯವಸ್ಥೆಗೆ ಶಾಸಕರಲ್ಲಿ ಮನವಿ

0

ಉಪ್ಪಿನಂಗಡಿ: ಪ್ರವಾಹ ರಕ್ಷಣಾ ತಂಡವನ್ನು ಹೊಂದಿರುವ ಉಪ್ಪಿನಂಗಡಿ ಗೃಹ ರಕ್ಷಕ ದಳಕ್ಕೆ ಸ್ವಂತ ಕಟ್ಟಡದ ಕೊರತೆಯನ್ನು ಎದುರಿಸುತ್ತಿದ್ದು, ಸರಕಾರಿ ನಿವೇಶನದಲ್ಲಿ ಸೂಕ್ತ ಕೊಠಡಿಯನ್ನು ನಿರ್ಮಿಸಿಕೊಡಬೇಕೆಂದು ಉಪ್ಪಿನಂಗಡಿ ಗೃಹ ರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ದಿನೇಶ್ ಬಿ.ಯವರು ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮನವಿ ಸಲ್ಲಿಸಿದರು.


ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯಕ್ಕೆ ಭೇಟಿ ನೀಡಿದ ಶಾಸಕರಿಗೆ ಮನವಿ ಸಲ್ಲಿಸಿದ ಗೃಹ ರಕ್ಷಕ ದಳದ ತಂಡ, ಈಗಾಗಲೇ ಉಪ್ಪಿನಂಗಡಿ ಸರಕಾರಿ ಮಾದರಿ ಶಾಲಾ ಕಟ್ಟಡದ ಕೊಠಡಿಯಲ್ಲಿ ಗೃಹ ರಕ್ಷಕ ದಳದ ಪರಿಕರಗಳನ್ನು ಇರಿಸಲಾಗುತ್ತಿದ್ದು, ಪ್ರಸಕ್ತ ಶಾಲೆಯಲ್ಲಿ ಕೊಠಡಿಯ ಕೊರತೆ ಎದುರಾಗಿರುವುದರಿಂದ ಗೃಹ ರಕ್ಷಕ ದಳಕ್ಕೆ ಪ್ರತ್ಯೇಕ ಕೊಠಡಿಯನ್ನು ಸರಕಾರಿ ನಿವೇಶನದಲ್ಲಿ ನಿರ್ಮಿಸಿಕೊಡಬೇಕೆಂದು ವಿನಂತಿಸಿತು. ಮನವಿಯನ್ನು ಸ್ವೀಕರಿಸಿದ ಶಾಸಕ ಅಶೋಕ್ ಕುಮಾರ್ ರೈಯವರು, ಗೃಹ ರಕ್ಷಕ ದಳದ ಕಾರ್ಯಚಟುವಟಿಕೆಗಳ ಬಗ್ಗೆ ವಿಚಾರ ವಿಮರ್ಷೆ ನಡೆಸಿ ಮನವಿಗೆ ಸೂಕ್ತ ಸ್ಪಂದನೆ ನೀಡುವುದಾಗಿ ಭರವಸೆ ನೀಡಿದರು.


ಇದೇ ವೇಳೆ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ವಿದ್ಯಾಲಕ್ಷ್ಮಿ ಪ್ರಭು ಅವರಿಂದ ಕೊಡುಗೆಯಾಗಿ ಒದಗಿಸಲ್ಪಟ್ಟ ರೈನ್ ಕೋಟು ಗಳನ್ನು ಗೃಹ ರಕ್ಷಕ ಸಿಬ್ಬಂದಿಗೆ ಶಾಸಕರು ವಿತರಿಸಿದರು.


ಈ ಸಂದರ್ಭದಲ್ಲಿ ಪ್ರಮುಖರಾದ ಕರುಣಾಕರ ಸುವರ್ಣ, ಹರಿರಾಮಚಂದ್ರ, ಜಯಂತ ಪೊರೋಳಿ, ನಾಗೇಶ್ ಪ್ರಭು, ಕೃಷ್ಣ ರಾವ್ ಅರ್ತಿಲ, ಸುನಿಲ್ ಅನಾವು, ಜಯಪ್ರಕಾಶ್ ಬದಿನಾರು, ಯೊಗೀಶ್ ಸಾಮಾನಿ ಸಂಪಿಗೆದಡಿ, ಕೃಷ್ಣಪ್ರಸಾದ್ ಬೊಳ್ಳಾವು, ದಾಮೋದರ್ ಭಂಡಾರ್ಕರ್, ಪ್ರಸನ್ನ ಶೆಟ್ಟಿ, ರಾಕೇಶ್ ರೈ, ಗೃಹ ರಕ್ಷಕ ದಳದ ಮಂಜುನಾಥ್, ಜನಾರ್ದನ ಆಚಾರ್ಯ, ಸಮದ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here