ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಲಾವತ್ತಡ್ಕ ಎಂಬಲ್ಲಿ ನಿರ್ಮಾಣಗೊಂಡಿರುವ ಕಟ್ಟಡಕ್ಕೆ ಪರವಾನಿಗೆ ನೀಡಿರುವುದರ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ಹೋಗಿರುವ ಹಿನ್ನೆಲೆಯಲ್ಲಿ ಕಡಬ ತಹಶೀಲ್ದಾರ್ ರಮೇಶ್ ಬಾಬು ಅವರ ನೇತೃತ್ವದಲ್ಲಿ ಜೂ.6ರಂದು ಸಂಜೆ ಕಟ್ಟಡವನ್ನು ಭಾಗಶ: ತೆರವುಗೊಳಿಸಲಾಗಿದೆ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಲಾವತ್ತಡ್ಕ ಎಂಬಲ್ಲಿ ಗುಂಡ್ಯ ಹೊಳೆ ಬದಿಯಲ್ಲಿ ಇಚ್ಲಂಪಾಡಿ ನಿವಾಸಿ ಸತೀಶ್ ಎಂಬವರು ಕಟ್ಟಡ ನಿರ್ಮಿಸಿ ಜನನಿ ಎಂಬ ಹೆಸರಿನಲ್ಲಿ ಹೋಟೆಲ್ ನಡೆಸುತ್ತಿದ್ದರು. ಇಲ್ಲಿ ತಿಂಡಿ, ತಿನಸುಗಳನ್ನಿಟ್ಟು ವ್ಯಾಪಾರವೂ ಮಾಡುತ್ತಿದ್ದರು. ಅಲ್ಲದೇ ಸತೀಶ್ ಅವರು ಇದೇ ಹೋಟೆಲ್ ಕಟ್ಟಡವನ್ನು ನದಿ ದಡದ ತನಕವೂ ವಿಸ್ತರಣೆ ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದರು. ಈ ಕಟ್ಟಡಕ್ಕೆ ನೂಜಿಬಾಳ್ತಿಲ ಗ್ರಾ.ಪಂ.ನಿಂದ ಪರವಾನಿಗೆ ಹಾಗೂ ವಿದ್ಯುತ್ ಸಂಪರ್ಕಕ್ಕೆ ಎನ್‌ಒಸಿ ಸಹ ನೀಡಲಾಗಿದೆ.
ಲೋಕಾಯುಕ್ತಕ್ಕೆ ದೂರು: ರಾಷ್ಟ್ರೀಯ ಹೆದ್ದಾರಿ ಜಾಗ ಹಾಗೂ ನದಿ ಪರಂಬೊಕು ಅತಿಕ್ರಮಿಸಿಕೊಂಡು ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ಕಟ್ಟಡಕ್ಕೆ ನೂಜಿಬಾಳ್ತಿಲ ಗ್ರಾ.ಪಂ.ನಿಂದ ಪರವಾನಿಗೆ ಮತ್ತು ವಿದ್ಯುತ್ ಸಂಪರ್ಕಕ್ಕೆ ಎನ್‌ಒಸಿ ಸಹ ನೀಡಲಾಗಿದೆ ಎಂದು ಆರೋಪಿಸಿ ಸ್ಥಳೀಯರು ನೂಜಿಬಾಳ್ತಿಲ ಗ್ರಾ.ಪಂ.ನ ಆಗಿನ ಪಿಡಿಒ, ಕಡಬ ತಹಶೀಲ್ದಾರ್, ನೆಲ್ಯಾಡಿ ಮೆಸ್ಕಾಂ, ಗಣಿ ಮತ್ತು ಭೂವಿಜ್ಞಾನ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಿದ್ದರು. ಅಕ್ರಮ ಕಟ್ಟಡದ ವಿರುದ್ಧ ಲೋಕಾಯುಕ್ತರಿಗೆ ದೂರು ಹೋಗಿರುವ ಹಿನ್ನೆಲೆಯಲ್ಲಿ ಜೂ.6ರಂದು ಸಂಜೆ ಕಡಬ ತಹಶೀಲ್ದಾರ್ ರಮೇಶ್ ಬಾಬು ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್‌ನಲ್ಲಿ ಜೆಸಿಬಿ ಬಳಸಿ ಕಟ್ಟಡ ಮುಂಭಾಗಕ್ಕೆ ಹಾಕಲಾಗಿದ್ದ ಸಿಮೆಂಟ್ ಶೀಟ್, ಬಾಗಿಲು ತೆರವುಗೊಳಿಸಲಾಗಿದೆ ಎಂದು ವರದಿಯಾಗಿದೆ.
ಕಾಟಾಚಾರದ ತೆರವು: ಅಕ್ರಮ ಕಟ್ಟಡ ತೆರವುಗೊಳಿಸಲು ಅಧಿಕಾರಿಗಳು ಜೆಸಿಬಿ ಸಮೇತ ಬಂದಿದ್ದರೂ ಕಟ್ಟಡದ ಎದುರಿನ ಬಾಗಿಲು ಮತ್ತು ಕೆಲವು ಸಿಮೆಂಟ್ ಶೀಟ್‌ಗಳನ್ನಷ್ಟೇ ತೆಗೆದಿದ್ದಾರೆ. ಅಕ್ರಮವಾಗಿ ನಿರ್ಮಿಸಿರುವ ಈ ಕಟ್ಟಡವನ್ನು ಪೂರ್ಣವಾಗಿ ನೆಲಸಮ ಮಾಡುವ ಬದಲು ಕಾಟಾಚಾರಕ್ಕೆ ಎಂಬಂತೆ ತೆರವು ಕಾರ್ಯಾಚರಣೆ ಮಾಡಿದ್ದಾರೆ ಎಂದು ಸಾರ್ವಜನಿಕರಿಂದ ಆರೋಪವೂ ವ್ಯಕ್ತವಾಗಿದೆ. ಕೆಲ ವರ್ಷದ ಹಿಂದೆ ಈ ಹೋಟೆಲ್‌ಗೆ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಮಾರಾಟಕ್ಕೆ ಇರಿಸಿದ್ದ ಸ್ಪೋಟಕ ಸಾಮಗ್ರಿ, ಡೀಸೆಲ್, ಮದ್ಯದ ಬಾಟಲಿಗಳನ್ನು ಪತ್ತೆ ಹಚ್ಚಿ ಆರೋಪಿ ಸತೀಶ್‌ರನ್ನು ಬಂಧಿಸಿದ್ದರು.
ಪೂರ್ಣ ಕಟ್ಟಡ ತೆರವಿಗೆ ಕ್ರಮ: ತಹಶೀಲ್ದಾರ್
ಸದ್ರಿ ಕಟ್ಟಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜಾಗದಲ್ಲಿದೆ. ಅಲ್ಲದೇ ನದಿ ಪರಂಬೋಕು ಸೇರಿದೆ. ಹೋಟೆಲ್ ತೆರವುಗೊಳಿಸಲು ಆದೇಶ ಮಾಡಲಾಗಿತ್ತು. ಸತೀಶ್ ಅವರು ಅಲ್ಲಿಯೇ ವಾಸವಾಗಿದ್ದರು. ಅವರಿಗೆ ಬೇರೆ ಕಡೆ ವಾಸದ ಮನೆ ಇಲ್ಲ ಎಂಬ ಮಾಹಿತಿಯಂತೆ ಪೂರ್ಣ ಕಟ್ಟಡ ತೆರವುಗೊಳಿಸಲಾಗಿಲ್ಲ. ಸತೀಶ್ ಅವರಿಗೆ ಇಚ್ಲಂಪಾಡಿಯಲ್ಲಿ ಮನೆ ಇದೆ ಎಂಬ ಮಾಹಿತಿ ಸಿಕ್ಕಿದೆ. ಆದ್ದರಿಂದ ಈ ಕಟ್ಟಡ ಪೂರ್ಣ ತೆರವಿಗೆ ಆದೇಶ ಮಾಡಲಾಗುವುದು ಎಂದು ಕಡಬ ತಹಶೀಲ್ದಾರ್ ರಮೇಶ್ ಬಾಬು ಅವರು ’ಸುದ್ದಿ’ಗೆ ತಿಳಿಸಿದ್ದಾರೆ.