ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ, ರೋಟರಿ ಕ್ಲಬ್ ಪುತ್ತೂರು ಎಲೈಟ್, ಅಮೇರಿಕಾ ಫ್ಲೋರಿಡಾದ ರೋಟರಿ ಕ್ಲಬ್ ನ್ಯೂ ಟಂಪಾ ನೂನ್ ವತಿಯಿಂದ ಆಯೋಜಿಸಲಾದ ವಿಸ್ತ್ರತ ಡಯಾಲಿಸಿಸ್ ಕೇಂದ್ರವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ರೋಟರಿ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕಾರಿಸಿ ಮಾತನಾಡಿದ ಶಾಸಕರು, ರೋಟರಿ ಸಂಸ್ಥೆಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಸಮಾಜದ ಅಭಿವೃದ್ದಿಯಲ್ಲಿ ರೋಟರಿ ಪಾತ್ರ ಮಹತ್ವದ್ದು, ಜನರು ಮತ್ತು ಸರಕಾರ ಜೊತೆಯಾಗಿ ಕೆಲಸ ಮಾಡಿದ್ದಲ್ಲಿ ನಾಡಿನ ಅಭಿವೃದ್ದಿ ಖಂಡಿತ ಎಂದು ಹೇಳಿದರು. ಆಸ್ಪತ್ರೆಯ ಸಿಬ್ಬಂದಿಗಳ ಕೊರತೆ ನೀಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ದೇವಸ್ಥಾನಕ್ಕೆ ಬರುವಂತೆ ರೋಗಿಗಳು ನಂಬಿಕೆಯಿಂದ ಆಸ್ಪತ್ರೆಗೆ ಬರುತ್ತಾರೆ. ಚಿಕಿತ್ಸೆ ಬಯಸಿ ಬರುವವರಿಗೆ ಉತ್ತಮ ಸೇವೆ ನೀಡಿ ಎಂದು ಆಸ್ಪತ್ರೆ ಸಿಬ್ಬಂದಿಗಳಲ್ಲಿ ಮನವಿ ಮಾಡಿದ ಶಾಸಕರು ಬಡವರಿಗೆ ನೀಡುವ ಸೇವೆ ಅದು ದೇವರ ಸೇವೆ ಎಂದು ಹೇಳಿದರು.
ಪುತ್ತೂರಿಗೆ ಮೆಡಿಕಲ್ ಕಾಲೇಜ್ ಬೇಕೆಂಬುವುದು ಬಹು ಕಾಲದ ಬೇಡಿಕೆ ಅದಕ್ಕಾಗಿ ಪ್ರಯತ್ನಿಸುವುದಾಗಿ ಶಾಸಕರು ಹೇಳಿದರು. ಕಾರ್ಯಕ್ರಮಕ್ಕೂ ಮುನ್ನ ಡಯಾಲಿಸಿಸ್ ಕೇಂದ್ರದಲ್ಲಿ ರೋಗಿಗಳನ್ನು ಬೇಟಿಯಾದ ಶಾಸಕರು ಯೋಗ ಕ್ಷೇಮ ವಿಚಾರಿಸಿದರು.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ