ಹೊಸಗದ್ದೆ: ಶಾಲಾ ಮಕ್ಕಳಿಂದ ಬಿತ್ತೋತ್ಸವ ಕಾರ್ಯಕ್ರಮ

0

ಉಪ್ಪಿನಂಗಡಿ; ಮಕ್ಕಳಲ್ಲಿ ಕಾಡಿನ ಬಗ್ಗೆ ಪ್ರೀತಿ ಹುಟ್ಟಿಸುವ ಹಾಗೂ ಪರಿಸರ ರಕ್ಷಣೆಯ ಪಾಠ ಮಾಡುವ ಅರಣ್ಯ ಇಲಾಖೆಯ ವಿನೂತನ ಯೋಜನೆ ಬಿತ್ತೋತ್ಸವ-2023 ಬಜತ್ತೂರು ಗ್ರಾಮ ಹೊಸಗದ್ದೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ.15ರಂದು ನಡೆಯಿತು.

ಶಾಲಾ ಆವರಣದ ಮುಂಭಾಗದಲ್ಲಿರುವ ಸಾಮಾಜಿಕ ಅರಣ್ಯದಲ್ಲಿ ಮಕ್ಕಳು ಮನೆಗಳಿಂದ ಸಂಗ್ರಹಿಸಿಕೊಂಡು ಬಂದ ಹಾಗೂ ಅರಣ್ಯ ಇಲಾಖೆ ನೀಡಿದ ನೂರಾರು ಬಗೆಯ ಹಣ್ಣು-ಹಂಪಲುಗಳ ಬೀಜಗಳನ್ನು ಬಿತ್ತುವ ಕಾರ್ಯ ಮಕ್ಕಳಿಂದ ನಡೆಯಿತು. ಹಲಸು, ಹೆಬ್ಬಲಸು, ಲಿಂಬೆ, ಕಸಿ ಮಾವು, ಕಾಟುಮಾವು, ಸೀತಾಫಲ, ಗೇರುಬೀಜ ಮತ್ತಿತರ ಹಲವಾರು ಬಗೆಯ ಬೀಜಗಳನ್ನು ಮಕ್ಕಳು ಸಂಗ್ರಹಿಸಿಕೊಂಡು ಬಂದು ಬಿತ್ತೋತ್ಸವ ಕಾರ್ಯಕ್ರಮದ ಮೂಲಕ ಸಾಮಾಜಿಕ ಅರಣ್ಯದಲ್ಲಿ ಪುಟ್ಟ ಪುಟ್ಟ ಹೊಂಡ ತೆಗೆದು ಬೀಜ ಹಾಕಿದರು.
ಬಜತ್ತೂರು ಗ್ರಾಮದ ಹೊಸಗದ್ದೆ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಗುರು ಫೆಲ್ಸಿ ಡಯಾಸ್, ಅರಣ್ಯ ಇಲಾಖೆಯ ವಲಯಾಧಿಕಾರಿ ಕಿರಣ್, ಉಪ ವಲಯಾರಣ್ಯಾಧಿಕಾರಿ ಸಂಜೀವ, ಅರಣ್ಯಾಧಿಕಾರಿಗಳಾದ ಗಿರೀಶ್ ಎಸ್.ಪಿ, ಮಹಮ್ಮದ್ ಹನೀಫ್, ಸುಧೀರ್ ಹೆಗ್ಡೆ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಶಾಲಾ ಮುಂಭಾಗದಲ್ಲಿರುವ ಸಾಮಾಜಿಕ ಅರಣ್ಯದಲ್ಲಿ ನೂರಾರು ಬಗೆಯ ಬೀಜಗಳನ್ನು ಬಿತ್ತುವ ಮೂಲಕ ಮಕ್ಕಳು ಪರಿಸರ ರಕ್ಷಣೆಯ ಕಾರ್ಯದಲ್ಲಿ ಉತ್ಸಾಹದಿಂದ ಭಾಗಿಯಾದರು. ಬೀಜ ಬಿತ್ತನೆಗಾಗಿ ಅತ್ಯಂತ ಹೆಚ್ಚು ಬೀಜಗಳನ್ನು ಸಂಗ್ರಹಿಸಿದ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯ ವತಿಯಿಂದ 7ನೇ ತರಗತಿಯ ಪ್ರತೀಕ್‌ರಾಜ್ ಮೊದಲ ಬಹುಮಾನ ಪಡೆದರೆ, 7ನೇ ತರಗತಿಯ ಜನನಿ ಬಿಎಸ್ ದ್ವಿತೀಯ ಬಹುಮಾನ ಪಡೆದರು. ಶಾಲಾ ಶಿಕ್ಷಕರಾದ ವಿದ್ಯಾ ಕೆ, ಮಾಲತಿ, ಮೇಬಲ್ ಗ್ರೇಸಿ ಲಸ್ರಾದೊ, ಪವಿತ್ರ ಭಾಗವಹಿಸಿದರು.

LEAVE A REPLY

Please enter your comment!
Please enter your name here