ಪಶು ಸಂಜೀವಿನಿ ಆಂಬುಲೆನ್ಸ್‌ಗಳಿಗೆ ಚಾಲಕರೇ ಇಲ್ಲ-ಚಾಲಕರ ನೇಮಿಸದ ಏಜೆನ್ಸಿ ವಿರುದ್ಧ ಕ್ರಮ: ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚನೆ

0

ಗ್ಯಾರಂಟಿ ಸ್ಕೀಮ್ ಅರ್ಜಿ ಸಲ್ಲಿಕೆಗೆ ಹಣ ಪಡೆದರೆ ಏಜೆನ್ಸಿ ಬ್ಲ್ಯಾಕ್‌ಲಿಸ್ಟ್‌ಗೆ
ಶಿಶಿಲದಿಂದ ಶಿಬಾಜೆವರೆಗೆ ಸಸ್ಯನಾಟಿಗೆ ಸೂಚನೆ
ಜನತೆಗೆ ಆರೋಗ್ಯ ಸೇವೆಗೆ ತೊಂದರೆಯಾಗಬಾರದು

ಮಂಗಳೂರು:ದ.ಕ.ಜಿಲ್ಲೆಗೆ ಮಂಜೂರಾದ ೯ ಪಶು ಆಂಬುಲೆನ್ಸ್‌ಗಳಿಗೆ ಇನ್ನೂ ಚಾಲಕರ ನೇಮಕವಾಗದೇ ಇರುವ ವಿಚಾರ ಪ್ರಸ್ತಾಪವಾಗಿ, ಚಾಲಕರ ನೇಮಿಸದ ಏಜೆನ್ಸಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಪಶುಸಂಗೋಪನಾ ಇಲಾಖಾಧಿಕಾರಿಗೆ ಸೂಚನೆ ನೀಡಿದ ಘಟನೆ ಜಿಲ್ಲಾ ಕೆಡಿಪಿ ಸಭೆಯಲ್ಲಿ ನಡೆದಿದೆ.ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಡೆದ ಪ್ರಥಮ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ದ.ಕ.ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಜೂ.೨೩ರಂದು ಸಭೆ ನಡೆಯಿತು.


ಸಭೆಯಲ್ಲಿ ಪಾಲನಾ ವರದಿ ವೇಳೆ ಸ್ಪೀಕರ್ ಯು.ಟಿ.ಖಾದರ್ ವಿಷಯ ಪ್ರಸ್ತಾಪಿಸಿದರು.ಪಶು ಸಂಜೀವಿನಿ ಆಂಬುಲೆನ್ಸ್ ಯೋಜನೆಯಲ್ಲಿ ಪ್ರತಿ ಗೋವಿಗೆ ಸರ್ಕಾರದಿಂದ ಎಷ್ಟು ಹಣ ಬರುತ್ತದೆ?, ಎಷ್ಟು ಅನುದಾನ ಬರಲು ಬಾಕಿ ಇದೆ ಎಂದು ಸ್ಪೀಕರ್ ಕೇಳಿದರು.ಆಗ ಮಾಹಿತಿ ನೀಡಲು ಅಧಿಕಾರಿ ತಡವರಿಸಿದಾಗ ಸ್ಪೀಕರ್ ತರಾಟೆಗೆ ತೆಗೆದುಕೊಂಡರು.ಜಿಲ್ಲಾ ಮಟ್ಟದ ಅಧಿಕಾರಿ ಬಳಿ ಲೆಕ್ಕ ಇಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದ ಖಾದರ್, ಈ ಬಗ್ಗೆ ಉಸ್ತುವಾರಿ ಸಚಿವರಿಗೆ ಸಮಗ್ರ ವರದಿ ಕೊಡಿ,ವರದಿ ಬಗ್ಗೆ ಸದನದಲ್ಲಿ ಚರ್ಚಿಸಲಾಗುವುದು ಎಂದರಲ್ಲದೆ, ಮನುಷ್ಯರಷ್ಟೇ ಪ್ರಾಣಿಗಳಿಗೂ ಬದುಕಲು ಹಕ್ಕು ಇದೆ ಎಂದು ಹೇಳಿದರು.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೨೦ ಗೋಶಾಲೆಗಳಿದ್ದು, ಇದರಲ್ಲಿ ೧೭ ಖಾಸಗಿ, ೨ ಧಾರ್ಮಿಕ ದತ್ತಿ ಇಲಾಖೆ ಹಾಗೂ ೧ ಪಶು ಇಲಾಖೆಗೆ ಸಂಬಂಧ ಪಟ್ಟದ್ದಾಗಿದೆ.ಜಿಲ್ಲೆಯಲ್ಲಿ ೧೦೭ ಕ್ಲಿನಿಕ್‌ಗಳಿದ್ದು ೭೪ ಮಂದಿ ವೈದ್ಯರಲ್ಲಿ ೨೮ ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.ಕಳೆದ ೫ ವರ್ಷದಲ್ಲಿ ಹೊಸ ಪಶು ವೈದ್ಯರ ನೇಮಕವಾಗಿಲ್ಲ ಎಂದರು.ಗೋವುಗಳ ತುರ್ತು ಚಿಕಿತ್ಸೆಗೆ ಸ್ಪಂದಿಸುವ ನಿಟ್ಟಿನಲ್ಲಿ ಪಶು ಸಂಜೀವಿನಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಗೆ ೯ ಆಂಬುಲೆನ್ಸ್‌ಗಳು ಮಂಜೂರಾಗಿದ್ದು, ಇದರ ನಿರ್ವಹಣೆಯನ್ನು ಏಜೆನ್ಸಿಯೊಂದಕ್ಕೆ ಟೆಂಡರ್ ನೀಡಲಾಗಿದೆ.ಆದರೆ ಈವರೆಗೆ ಚಾಲಕರ ನೇಮಕವಾಗಿಲ್ಲ ಎಂದು ಅಧಿಕಾರಿ ಉತ್ತರಿಸಿದರು.ಇದರಿಂದ ಅಸಮಾಧಾನಗೊಂಡ ಯು.ಟಿ.ಖಾದರ್, ಮನುಷ್ಯರ ಹಾಗೆ ಪ್ರಾಣಿಗಳಿಗೂ ಬದುಕುವ ಹಕ್ಕಿದೆ.ಅವುಗಳ ಹೆಸರಿನಲ್ಲಿ ಯೋಜನೆ ತಯಾರಿಸಿ ಅದಕ್ಕೆ ಸೂಕ್ತ ವ್ಯವಸ್ಥೆ ಮಾಡದಿದ್ದರೆ ಏನು ಪ್ರಯೋಜನ ಎಂದರಲ್ಲದೆ, ಈ ಬಗ್ಗೆ ವಿಸ್ತತ ವರದಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಒದಗಿಸುವಂತೆ ಅಧಿಕಾರಿಗೆ ಸೂಚಿಸಿದರು.ಹೊಸ ಆಂಬುಲೆನ್ಸ್ ಖರೀದಿಸಿ ೬ ತಿಂಗಳು ಕಳೆದರೂ ಚಾಲಕರ ನೇಮಕವಾಗಿಲ್ಲ.ಪಶುಗಳ ಬಳಿಗೆ ತೆರಳಬೇಕಾದ ಆಂಬುಲೆನ್ಸ್‌ಗಳು ಪಾಳುಬಿದ್ದ ಸ್ಥಿತಿಯಲ್ಲಿವೆ.ಚಾಲಕರ ನೇಮಿಸದ ಏಜೆನ್ಸಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಪಶು ಸಂಗೋಪನಾ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.


ಗ್ಯಾರಂಟಿ ಸ್ಕೀಮ್‌ಗೆ ಅರ್ಜಿ ಸಲ್ಲಿಕೆಗೆ ಹಣ ಪಡೆದರೆ ಏಜೆನ್ಸಿ ಬ್ಲ್ಯಾಕ್ ಲಿಸ್ಟ್‌ಗೆ:
ರಾಜ್ಯ ಸರಕಾರದ ಗ್ಯಾರಂಟಿ ಸ್ಕೀಮ್‌ಗೆ ಅರ್ಜಿ ಸಲ್ಲಿಕೆ ಉಚಿತವಾಗಿದ್ದು, ಅರ್ಜಿದಾರರಿಂದ ಹಣ ಪಡೆದರೆ ಅಂತಹ ಏಜೆನ್ಸಿಗಳನ್ನು ಬ್ಲ್ಯಾಕ್ ಲಿಸ್ಟ್‌ಗೊಳಪಡಿಸಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ನೂತನ ಸರಕಾರದ ಗ್ಯಾರಂಟಿ ಯೋಜನೆಗಳಿಗೆ ಗ್ರಾಮೀಣವಾಗಿ ಗ್ರಾಮ ವನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ.ಇದಕ್ಕಾಗಿ ಅರ್ಜಿಯೊಂದಕ್ಕೆ ೨೦ ರೂ.ಗಳನ್ನು ಗ್ರಾಮ ವನ್‌ಗೆ ಸರಕಾರವೇ ಪಾವತಿಸುತ್ತದೆ.ಆದರೆ ಅರ್ಜಿದಾರರಿಂದಲೇ ೫೦ ರೂ.ಗಳನ್ನು ಪಡೆಯಲಾಗುತ್ತಿದೆ ಎಂದು ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಸಭೆಯಲ್ಲಿ ಪ್ರಸ್ತಾಪಿಸಿದರು.ಈ ವೇಳೆ ಪ್ರತಿಕ್ರಿಯೆ ನೀಡಿದ ಸಚಿವರು, ಒಂದು ವೇಳೆ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರಿಂದ ಹಣ ಪಡೆದುಕೊಂಡದ್ದು ಗಮನಕ್ಕೆ ಬಂದಲ್ಲಿ ಅಂತಹ ಏಜೆನ್ಸಿಗಳನ್ನು ಬ್ಲ್ಯಾಕ್‌ಲಿಸ್ಟ್‌ಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.


ಸಸ್ಯ ನಾಟಿಗೆ ಸೂಚನೆ:
ಬೇಸಗೆಯಲ್ಲಿ ಶಿಶಿಲದಿಂದ ಶಿಬಾಜೆವರೆಗೆ ಸುಮಾರು ೭೦೦ ಎಕರೆ ಪಶ್ಚಿಮ ಘಟ್ಟ ಅರಣ್ಯ ಬೆಂಕಿಗೆ ಭಸ್ಮವಾಗಿದೆ.ಈ ಪ್ರದೇಶಗಳಲ್ಲಿ ಮತ್ತೆ ಸಸ್ಯಗಳ ನಾಟಿ ಮಾಡಬೇಕು.ಅಲ್ಲದೆ ಅರಣ್ಯದಲ್ಲಿ ಬೆಂಕಿ ಅವಘಡ ಸಂಭವಿಸಿದಾಗ ಹತೋಟಿಗೆ ಕ್ರಮ ಕೈಗೊಳ್ಳಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆಗ್ರಹಿಸಿದರು.ಇದಕ್ಕೆ ಉತ್ತರಿಸಿದ ಅರಣ್ಯಾಧಿಕಾರಿಗಳು, ೭೦ ಕಡೆಗಳಲ್ಲಿ ೨೦೪ ಹೆಕ್ಟೇರ್ ಪ್ರದೇಶಗಳು ಬೆಂಕಿಗೆ ಹಾನಿಗೀಡಾಗಿದೆ.ಇಲ್ಲಿ ಸಸಿ ನೆಡಲು ಕಾರ್ಯಕ್ರಮ ರೂಪಿಸಲಾಗುತ್ತಿದೆ.ಬಿದಿರಿಗೆ ಬೆಂಕಿ ಬಿದ್ದು ಅಲ್ಲದೆ ಮಾನವ ನಿರ್ಮಿತವಾಗಿಯೂ ಹಾನಿಯಾಗಿದೆ.ಈ ಬಗ್ಗೆ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.


ಜನತೆಗೆ ಆರೋಗ್ಯ ಸೇವೆಗೆ ತೊಂದರೆಯಾಗಬಾರದು:
ದ.ಕ.ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ೭೩ ಮಂಜೂರಾದ ಹುದ್ದೆ ಪೈಕಿ ೫೭ ಕಡೆ ನೇಮಕಾತಿ ಆಗಿದೆ. ೧೬ ಹುದ್ದೆ ಖಾಲಿ ಇರುವಲ್ಲಿ ೧೩ ಮಂದಿಯನ್ನು ನೇಮಕ ಮಾಡಲಾಗಿದೆ.ಮೂರು ಕಡೆ ಖಾಲಿ ಇದೆ. ಮೂರು ಪ್ರಾಥಮಿಕ ಆರೋಗ್ಯ ಕೇಂದ್ರ ಹೊರತುಪಡಿಸಿ ಬೇರೆ ಕಡೆಗಳಲ್ಲಿ ವೈದ್ಯರು ಇದ್ದಾರೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕಿಶೋರ್ ಮಾಹಿತಿ ನೀಡಿದರು.ಖಾಲಿ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಬೇಕು.ಜನತೆಗೆ ಆರೋಗ್ಯ ಸೇವೆಗೆ ತೊಂದರೆಯಾಗಬಾರದು.ಡಯಾಲಿಸಿಸ್ ಘಟಕ ಸ್ಥಾಪಿಸಲು ಹೊಸ ಟೆಂಡರ್ ಕರೆದು ಏಜೆನ್ಸಿ ನಿಗದಿಪಡಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ಜಿಲ್ಲಾ ಆಯುಷ್ ಇಲಾಖೆಯಲ್ಲಿ ಖಾಲಿ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಬೇಕು.ಇಲ್ಲಿನ ಆಗುಹೋಗುಗಳ ಬಗ್ಗೆ ಪ್ರತ್ಯೇಕ ಸಭೆ ಕರೆಯುವುದಾಗಿ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.

ತಡೆ ಹಿಡಿದ ಅನುದಾನ ಆದ್ಯತೆ ಮೇರೆಗೆ ಬಿಡುಗಡೆ
ಹಿಂದಿನ ಸರ್ಕಾರ ಮಂಜೂರು ಮಾಡಿದ ಕಾಮಗಾರಿಗಳಿಗೆ ನೀಡಿದ ತಡೆಯನ್ನು ಕೂಡಲೇ ತೆರವುಗೊಳಿಸಿ ಕಾಮಗಾರಿಗೆ ಅವಕಾಶ ಕಲ್ಪಿಸುವಂತೆ ಶಾಸಕ ವೇದವ್ಯಾಸ್ ಕಾಮತ್ ಅವರು ಸಚಿವರನ್ನು ಒತ್ತಾಯಿಸಿದರು.ಶಾಸಕರಾದ ಹರೀಶ್ ಪೂಂಜಾ, ಉಮಾನಾಥ ಕೋಟ್ಯಾನ್ ಇದಕ್ಕೆ ದನಿಗೂಡಿಸಿದರು. ಇದಕ್ಕೆ ಉತ್ತರಿಸಿದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ರಾಜ್ಯದ ಎಲ್ಲ ಶಾಸಕರ ಅನುದಾನವನ್ನು ತಡೆಯಲಾಗಿದೆ.ಕ್ರಿಯಾಯೋಜನೆಗಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ತಡೆ ಹಾಕಲಾಗಿದೆ.ಇದರಲ್ಲಿ ನನ್ನ ಕ್ಷೇತ್ರದ ಅನುದಾನವನ್ನೂ ತಡೆದಿದ್ದಾರೆ.ಅನಗತ್ಯ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂಬ ಆರೋಪದ ಕಾರಣ ಸರ್ಕಾರ ಈ ಕ್ರಮ ಕೈಗೊಂಡಿದೆ.ಇದನ್ನು ಸರ್ಕಾರದ ಗಮನಕ್ಕೆ ತರಲಾಗುವುದು.ಈ ಬಗ್ಗೆ ಪರಿಶೀಲನೆ ನಡೆಸಿ ಆದ್ಯತೆ ಮೇರೆಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಮಜಾಯಿಷಿ ನೀಡಿದರು.


ಶಿಷ್ಟಾಚಾರ ಪಾಲನೆಗೆ ಶಾಸಕರ ಆಗ್ರಹ:
ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಪಾಲನೆಯಾಗುತ್ತಿಲ್ಲ. ಮಾಜಿ ಶಾಸಕರು ಮತ್ತಿತರರು ಪಾಲ್ಗೊಳ್ಳುತ್ತಿದ್ದು, ಇದರಿಂದ ಅಧಿಕಾರಿಗಳು ಮುಜುಗರ ಹಾಗೂ ಇಕ್ಕಟ್ಟಿನ ಸನ್ನಿವೇಶ ಎದುರಿಸುವಂತಾಗುತ್ತಿದೆ.ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕುವಂತೆ ಶಾಸಕ ಹರೀಶ್ ಪೂಂಜಾ ಅವರು ಉಸ್ತುವಾರಿ ಸಚಿವರನ್ನು ಆಗ್ರಹಿಸಿದರು.ಸರ್ಕಾರಿ ಸಭೆ, ಸಮಾರಂಭಗಳಿಗೆ ಶಿಷ್ಟಾಚಾರ ಪ್ರಕಾರ ಜನಪ್ರತಿನಿಧಿಗಳು ಹಾಜರಾಗಬೇಕು, ಅವರನ್ನು ಆಹ್ವಾನಿಸಬೇಕು. ಆದರೆ ಕೆಲವು ಕಡೆಗಳಲ್ಲಿ ಮಾಜಿ ಪ್ರತಿನಿಧಿಗಳು ಹಾಜರಾಗುತ್ತಿದ್ದಾರೆ,ಇದು ಸರಿಯಾದ ಕ್ರಮವಲ್ಲ ಎಂದು ಶಾಸಕ ವೇದವ್ಯಾಸ್ ಕಾಮತ್ ಸಚಿವರ ಗಮನ ಸೆಳೆದರು.ಬೆಳ್ತಂಗಡಿಯಲ್ಲಿ ಮಾಜಿ ಶಾಸಕ ವಸಂತ ಬಂಗೇರ ಅವರು ಅಧಿಕಾರಿಗಳನ್ನು ನಿಂದಿಸಿದ ವಿದ್ಯಮಾನವನ್ನೂ ಶಾಸಕ ಹರೀಶ್ ಪೂಂಜ ಅವರು ಉಸ್ತುವಾರಿ ಸಚಿವರ ಗಮನಕ್ಕೆ ತಂದರು.ಮಾಜಿ ಜನಪ್ರತಿನಿಧಿಗಳನ್ನು ಆಹ್ವಾನಿಸುವುದು ತಪ್ಪಲ್ಲ ಎಂದು ಉಸ್ತುವಾರಿ ಸಚಿವರು ಹೇಳಿದರಾದರೂ ಬಿಜೆಪಿ ಶಾಸಕರು ಪಟ್ಟುಬಿಡದ ಕಾರಣ, ಶಿಷ್ಟಾಚಾರ ಪಾಲಿಸುವುದು ಸರಿಯಾದ ಕ್ರಮ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.


ಶಾಸಕರಾದ ಅಶೋಕ್ ಕುಮಾರ್ ರೈ, ಭಾಗೀರಥಿ ಮುರುಳ್ಯ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಆರ್.ಜೈನ್, ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್, ನಗರ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಂಶುಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here