ಕಡಬ: ಸಾಕು ಪ್ರಾಣಿಗಳನ್ನು ಬೀದಿಗೆ ಬಿಡಬಾರದು ಎನ್ನುವ ಕಾನೂನಿದ್ದರೂ ಕಡಬ ಪೇಟೆಯಲ್ಲಿ ಕುದುರೆ, ದನ, ಆಡು, ನಾಯಿ ಮುಂತಾದ ಸಾಕುಪ್ರಾಣಿಗಳು ರಸ್ತೆಯುದ್ದಕ್ಕೂ ಓಡಾಡುತ್ತಾ ವಾಹನ ಅಪಘಾತಗಳಿಗೂ ಕಾರಣವಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ದೂರು ವ್ಯಕ್ತವಾಗುತ್ತಿದೆ.
ಕೆಲವು ವರ್ಷಗಳ ಹಿಂದೆ ಕಡಬವು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರುವ ಮುನ್ನ ಗ್ರಾಮ ಪಂಚಾಯತ್ ಆಡಳಿತ ವ್ಯವಸ್ಥೆ ಇದ್ದಾಗ ಬೀದಿಯಲ್ಲಿ ಅಲೆಯುವ ಆಡು, ದನ ಇತ್ಯಾದಿಗಳನ್ನು ಹಿಡಿದು ಅದರ ಮಾಲಕರಿಗೆ ದಂಡ ವಿಧಿಸುವ ಮೂಲಕ ಸಾಕುಪ್ರಾಣಿಗಳನ್ನು ಬೇಕಾಬಿಟ್ಟಿ ಬೀದಿಗೆ ಬಿಡುವವರಿಗೆ ಚುರುಕುಮುಟ್ಟಿಸಲಾಗಿತ್ತು. ಆದರೆ ಇತ್ತೀಚಿನ ಕೆಲವು ಸಮಯದಿಂದ ಅಲೆಮಾರಿ ಸಾಕುಪ್ರಾಣಿಗಳ ಉಪಟಳ ಹೆಚ್ಚಾಗಿದೆ. ಜನರಿಗೆ ತೊಂದರೆ ನೀಡುತ್ತಿರುವ ಅಲೆಮಾರಿ ಸಾಕುಪ್ರಾಣಿಗಳ ಮಾಲಕರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಕೃಷಿ ನಾಶಮಾಡಿದ ಕುದುರೆಯ ಮಾಲಕನ ವಿರುದ್ಧ ದೂರು:
ಕೋಡಿಂಬಾಳ ಗ್ರಾಮದ ಮಾಲೇಶ್ವರ ಬಳಿಯ ವ್ಯಕ್ತಿಯೊಬ್ಬರಿಗೆ ಸೇರಿದ ಕುದುರೆಯೊಂದು ಕಡಬದ ಅಲಾರ್ಮೆ ಎಂಬಲ್ಲಿ ರಾಘವ ಕಳಾರ ಅವರಿಗೆ ಸೇರಿದ ಕೃಷಿ ತೋಟಕ್ಕೆ ನುಗ್ಗಿ ಹೈನುಗಾರಿಕೆಗಾಗಿ ನೆಡಲಾಗಿದ್ದ ಹುಲ್ಲು ಹಾಗೂ ಅಡಿಕೆ ಸಸಿಗಳನ್ನು ತಿಂದು ನಾಶಪಡಿಸಿತ್ತು. ಕುದುರೆ ಕೃಷಿ ನಾಶ ಮಾಡಿರುವ ವಿಚಾರವನ್ನು ತಿಳಿಸಿದರೂ ಕುದುರೆಯ ಮಾಲಕ ಉಡಾಫೆ ಉತ್ತರ ನೀಡಿದ್ದರೆಂದು ಕೃಷಿಕ ರಾಘವ ಅವರು ಕುದುರೆಯನ್ನು ಕಟ್ಟಿಹಾಕಿ ಅದರ ಮಾಲಕನ ವಿರುದ್ಧ ಕಡಬ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಕುದುರೆಯ ಮಾಲಕನನ್ನು ಠಾಣೆಗೆ ಕರೆಸಿದ ಪೊಲೀಸರು ಮುಂದಕ್ಕೆ ಕುದುರೆಯನ್ನು ಬೀದಿಗೆ ಬಿಡದಂತೆ ಎಚ್ಚರಿಸಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದಾರೆ ಎಂದು ವರದಿಯಾಗಿದೆ.