ಜನರು ರಾಜರು, ಗುಲಾಮರಲ್ಲ. ಜನಪ್ರತಿನಿಧಿ, ಅಧಿಕಾರಿಗಳು ಜನಸೇವಕರು, ರಾಜರಲ್ಲ.
ಆಡಳಿತ ಇರುವುದು ನಮಗಾಗಿ. ಲಂಚ, ಭ್ರಷ್ಟಾಚಾರ ರಹಿತ ಉತ್ತಮ ಸೇವೆಯ ಆಡಳಿತ ದೊರಕಲಿ
ಸ್ವಾತಂತ್ರ್ಯ ದೊರಕಿ 75 ವರ್ಷ ಕಳೆಯಿತು. ಮುಂದಿನ ತಿಂಗಳು 76ನೇ ಸ್ವಾತಂತ್ರ್ಯೋತ್ಸವ ಆಚರಿಸಲಿದ್ದೇವೆ. ನಾವು ನಿಜವಾಗಲೂ ಸ್ವತಂತ್ರರಾಗಿದ್ದೇವೆಯೇ? ಎಂಬ ಪ್ರಶ್ನೆಗೆ ಬೇರೆ ಬೇರೆ ಪ್ರತಿಕ್ರಿಯೆ ಬರಬಹುದು. ಒಂದೇ ಮಾತಿನಲ್ಲಿ ಹೇಳುವುದಾದರೆ ಈ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ರಾಜರುಗಳಾಗಿರಬೇಕಾದ ಜನರು ಗುಲಾಮರಾಗಿಯೇ ಬದುಕುತ್ತಿದ್ದೇವೆ. ಜನಪ್ರತಿನಿಧಿಗಳು, ಅಧಿಕಾರಿಗಳು ರಾಜರುಗಳಾಗಿ ಕಾಣುತ್ತಿದ್ದಾರೆ. ಜನರು ತಮ್ಮ ಹಕ್ಕುಗಳನ್ನು ತಿಳಿಯದೇ ಇರುವುದು, ತಿಳಿದವರು ಅದನ್ನು ಆಚರಣೆಗೆ ತಾರದೇ ಇರುವುದು ಅದಕ್ಕೆ ಕಾರಣವಾಗಿದೆ. ಹಾಗಾಗಿ ಸುದ್ದಿ ಜನಾಂದೋಲನ ವೇದಿಕೆಯ ವತಿಯಿಂದ ಜನರ ಹಕ್ಕಿನ, ಸ್ವಾತಂತ್ರ್ಯದ ಘೋಷಣೆಯ ಫಲಕವನ್ನು ಬಿಡುಗಡೆಗೊಳಿಸಿದ್ದೇವೆ. ಈ ಸಲದ ಸ್ವಾತಂತ್ರ್ಯ ದಿನಾಚರಣೆಯಂದು ಪ್ರತಿಯೊಂದು ಗ್ರಾಮದ ಮನೆ ಮನೆಗಳಲ್ಲಿ ನಾವು ರಾಜರು, ಗುಲಾಮರಲ್ಲ. ಜನಪ್ರತಿನಿಧಿ, ಅಧಿಕಾರಿಗಳು ಜನಸೇವಕರು, ರಾಜರಲ್ಲ. ಆಡಳಿತ ಇರುವುದು ನಮಗಾಗಿ. ಲಂಚ, ಭ್ರಷ್ಟಾಚಾರ ರಹಿತ ಉತ್ತಮ ಸೇವೆಯ ಆಡಳಿತ ದೊರಕಲಿ ಎಂಬ ಸ್ವಾತಂತ್ರ್ಯದ ಘೋಷಣೆಯನ್ನು ಮೊಳಗಿಸಬೇಕು. ತಮ್ಮ ತಮ್ಮ ಊರಿನಲ್ಲಿ ಉತ್ತಮ ಸೇವೆ ಮಾಡಿರುವವರನ್ನು ಗುರುತಿಸಿ ಗೌರವಿಸಬೇಕು. ತಾಲೂಕಿನಲ್ಲಿ ಉತ್ತಮ ಸೇವೆ ಮಾಡುವ ಅಧಿಕಾರಿಗಳನ್ನು ಗುರುತಿಸಬೇಕು. ಆ ಮೂಲಕ ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಎಂಬ ಘೋಷಣೆ ಎಲ್ಲೆಡೆ ಧ್ವನಿಸಬೇಕು ಎಂಬ ಕರೆಯನ್ನು ನೀಡುತ್ತಿದ್ದೇವೆ.
ಈ ಸಲದ ಚುನಾವಣೆಯಲ್ಲಿ ಸ್ವಲ್ಪ ಮಟ್ಟಿಗೆ ಜನರು ಜಾಗೃತರಾಗಿದ್ದಾರೆ. ಅದರ ಪರಿಣಾಮವಾಗಿ ಎಲ್ಲಾ ಪಕ್ಷಗಳು ಲಂಚ, ಭ್ರಷ್ಟಾಚಾರದ ವಿಷಯವನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿವೆ. ಜನಪರ ಘೋಷಣೆ, ಸ್ಥಳೀಯ ಜನರ ಸಮಸ್ಯೆಗಳ ಬಗ್ಗೆ ಭರವಸೆ ನೀಡಿದವರು ಗೆದ್ದಿದ್ದಾರೆ. ಲಂಚ, ಭ್ರಷ್ಟಾಚಾರದ ಕಾರಣಕ್ಕಾಗಿಯೇ ಘಟಾನುಘಟಿಗಳು ಸೋತಿದ್ದಾರೆ. ಅದರ ಪರಿಣಾಮವಾಗಿ ಲಂಚ, ಭ್ರಷ್ಟಾಚಾರ ನಿರ್ಮೂಲನೆ ಸರಕಾರದ ಆದ್ಯತೆ ಎಂದು ರಾಜ್ಯಪಾಲರು ವಿಧಾನಸಭೆಯಲ್ಲಿ ಭಾಷಣದಲ್ಲಿ ಹೇಳಿದ್ದಾರೆ. ಅದು ಎಲ್ಲಾ ಕಡೆಗೂ ಹರಡುತ್ತಿದೆ.
ಈಗ ಎಲ್ಲಾ ಪಕ್ಷಗಳಲ್ಲಿಯೂ ಜನರನ್ನು ಆಕರ್ಷಿಸುವ ನಾಯಕರುಗಳಿಗೆ ಆದ್ಯತೆ ದೊರಕುತ್ತಿದೆ. ಪ್ರಧಾನಿ ಮೋದಿಯವರ ಮತ್ತು ಬಿಜೆಪಿ ಪಕ್ಷದ ಚಿಹ್ನೆಯಿಂದಲೇ ಗೆಲುವು ಎಂದು ನಂಬಿದ್ದ ಬಿಜೆಪಿ ಪಕ್ಷದ ನಾಯಕರು ರಾಜ್ಯದ ಪ್ರತಿಪಕ್ಷ ನಾಯಕನ ಆಯ್ಕೆ, ಬಿಜೆಪಿ ಅಧ್ಯಕ್ಷನ ಆಯ್ಕೆಗೆ ಹೆಣಗಾಡುತ್ತಿರುವುದು, ಜನರನ್ನು ಗೆಲ್ಲಬಲ್ಲ ಅಭ್ಯರ್ಥಿಗಳಿಗೆ ಹುಡುಕಾಟ ನಡೆಸುತ್ತಿರುವುದು ಅದಕ್ಕೆ ಉತ್ತಮ ಉದಾಹರಣೆ. ಈ ಹಿಂದೆ ಕಾಂಗ್ರೆಸ್, ಬಿಜೆಪಿ ಎಲ್ಲಾ ಪಕ್ಷದವರು ತಮ್ಮ ಮನಸೋ ಇಚ್ಚೆಯಂತೆ ತಮ್ಮ ಕೈಗೊಂಬೆಯಾಗಿರುವ ಅಭ್ಯರ್ಥಿಗಳನ್ನು ಆರಿಸಿ, ಗೆಲ್ಲಿಸುತ್ತಿದ್ದರು. ಅವರುಗಳು ಸ್ಥಳೀಯ ಸಮಸ್ಯೆಗಳು ಮತ್ತು ಸ್ಥಳೀಯ ಜನರ ಬೇಡಿಕೆಗಳಿಗೆ ಕಿವಿಗೊಡದೆ ಕೇಂದ್ರ ನಾಯಕರ ಇಚ್ಛೆಯಂತೆ ಅವರ ಗುಲಾಮರುಗಳಂತೆ ಕೆಲಸ ಮಾಡುತ್ತಿದ್ದರು. ಆದುದರಿಂದಲೇ ಸ್ಥಳೀಯ ಜನರು ರಾಜರುಗಳಾಗದೆ ಗುಲಾಮರ ಜೀವನ ನಡೆಸಬೇಕಾಗಿ ಬರುತ್ತಿತ್ತು. ಪಕ್ಷ ಯಾವುದೇ ಇರಲಿ, ವ್ಯಕ್ತಿ ಯಾರೇ ಇರಲಿ ಸ್ಥಳೀಯ ಜನರ ಆಶೋತ್ತರಗಳು ಮುಖ್ಯವಾಗಬೇಕು. ಜನರನ್ನು ರಾಜರುಗಳಂತೆ ನೋಡುವ, ಹಳ್ಳಿಯಿಂದ ಡೆಲ್ಲಿಯ ಆಡಳಿತ ಬರಬೇಕು. ಲಂಚ, ಭ್ರಷ್ಟಾಚಾರ ರಹಿತದ ಉತ್ತಮ ಸೇವೆಯ ಊರು ನಮ್ಮದಾಗಬೇಕು ಎಂಬುವುದೇ ಎಲ್ಲರ ಆಶಯವಾಗಲಿ. ಈ ಸಲದ ಸ್ವಾತಂತ್ರ್ಯ ದಿನ ಅದರ ಘೋಷಣೆ ಮೊಳಗಲಿ.