ಜು.14:ಉಪ್ಪಿನಂಗಡಿ- ರೋಟರಿ ಪದಾಧಿಕಾರಿಗಳ ಪದಗ್ರಹಣ

0

ಉಪ್ಪಿನಂಗಡಿ: ರೋಟರಿ ಕ್ಲಬ್ ಉಪ್ಪಿನಂಗಡಿ ಸಂಸ್ಥೆಯ 2023-24ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು. 14ರಂದು ಉಪ್ಪಿನಂಗಡಿ ಗಾಣಿಗರ ಸಭಾ ಭವನದಲ್ಲಿ ಸಂಜೆ 7ಗಂಟೆಗೆ ಜರಗಲಿದೆ ಎಂದು ನಿಯೋಜಿತ ಅಧ್ಯಕ್ಷೆ ಅನುರಾಧಾ ಆರ್. ಶೆಟ್ಟಿ ತಿಳಿಸಿದರು.


ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 33 ವರ್ಷಗಳಲ್ಲಿ ಪುರುಷ ಪ್ರಧಾನವಾಗಿ ಅಧ್ಯಕ್ಷ ಹುದ್ದೆಯನ್ನು ಕಂಡ ಈ ಸಂಸ್ಥೆ ಈ ವರ್ಷ ಮಹಿಳಾ ಪ್ರತಿನಿಧಿಗಳ ಮುಂದಾಳತ್ವದಲ್ಲಿ ತನ್ನ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಮಹಿಳಾ ಸಬಲೀಕರಣದ ಹೊಸ ಅಧ್ಯಾಯಕ್ಕೆ ಬಾಷ್ಯ ಬರೆಯಲಿದೆ ಎಂದರು.


ರೋಟರಿ ಜಿಲ್ಲೆ 3181ರ ಜಿಲ್ಲಾಧ್ಯಕ್ಷ ಕೇಶವ ಎಚ್.ಆರ್.ರವರ “ಅಂಗನವಾಡಿ ಪುನಶ್ಚೇತನ” ಜಿಲ್ಲಾ ಯೋಜನೆ ಜಾರಿಗೊಂಡಿದೆ. ಈ ಯೋಜನೆ ಅಡಿಯಲ್ಲಿ ಅಡೆಕ್ಕಲ್ ಅಂಗನವಾಡಿಗೆ ಚಂದಪ್ಪ ಮೂಲ್ಯ ಪ್ರಯೋಜಕತ್ವದಲ್ಲಿ ವಾಟರ್ ಟ್ಯಾಂಕ್ ವ್ಯವಸ್ಥೆಯನ್ನು ಮಾಡಲಾಗಿದೆ. ವಲಯ ಸೇನಾನಿ ರವೀಂದ್ರ ದರ್ಬೆ ನೇತೃತ್ವದಲ್ಲಿ ಹಿರೇಬಂಡಾಡಿ ಶಾಲೆಗೆ ವಾಚನಾಲಯ ಒದಗಿಸುವ ಯೋಜನೆಯನ್ನು ಹಮ್ಮಿಕೊಳಲಾಗಿದೆ. ಇದೇ ಸಂದರ್ಭದಲ್ಲಿ ಉಪ್ಪಿನಂಗಡಿ ಆಸುಪಾಸಿನ ವಿದ್ಯಾ ಸಂಸ್ಥೆಯಲ್ಲಿ ಗಣನೀಯ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಲಾಗುವುದು ಹಾಗೂ ಅಂತರ ರಾಷ್ಟ್ರೀಯ ಮಟ್ಟದ ಡಾಡ್ಜ್‌ಬಾಲ್ ತೀರ್ಪುಗಾರರಾಗಿ ಆಯ್ಕೆಯಾಗಿರುವ ವಿಜಿತ್ ಕುಮಾರ್‌ರನ್ನು ಸನ್ಮಾನಿಸಲಾಗುವುದು ಎಂದರು.


ರೋಟರಿ ಅಧ್ಯಕ್ಷೆಯಾಗಿ ಅನುರಾಧ ಆರ್. ಶೆಟ್ಟಿ, ಕಾರ್ಯದರ್ಶಿಯಾಗಿ ಆಶಾಲತಾ ನಾಯಕ್, ಖಜಾಂಚಿಯಾಗಿ ಸ್ವರ್ಣ ಪೊಸವಳಿಕೆ ಅವರು ಆಯ್ಕೆಯಾಗಿದ್ದು, ಸಮಾರಂಭದಲ್ಲಿ 2024-25ರ ಸಾಲಿನ ರೋಟರಿ ಜಿಲ್ಲಾ ಗವರ್ನರ್ ವಿಕ್ರಮದತ್ತ ನೂತನ ಅಧ್ಯಕ್ಷರಿಗೆ ಹಾಗೂ ಆಡಳಿತ ಮಂಡಳಿಗೆ ಪದ ಪ್ರಧಾನ ಮಾಡಲಿದ್ದಾರೆ. ಸಹಾಯಕ ಗವರ್ನರ್ ಲಾರೆನ್ಸ್ ಗೊನ್ಸಾಲ್ವಿಸ್, ವಲಯ ಸೇನಾನಿ ರವೀಂದ್ರ ದರ್ಬೆ, ಪುತ್ತೂರು ಘಟಕದ ಅಧ್ಯಕ್ಷ ಜೈರಾಜ್ ಭಂಡಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪ್ಪಿನಂಗಡಿ ರೋಟರಿ ಕ್ಲಬ್ ನಿಯೋಜಿತ ಕಾರ್ಯದರ್ಶಿ ಆಶಾಲತಾ ನಾಯಕ್, ಖಜಾಂಚಿ ಸ್ವರ್ಣ ಪೊಸವಳಿಕೆ, ನಿಕಟಪೂರ್ವ ಅಧ್ಯಕ್ಷ ಜಗದೀಶ ನಾಯಕ್, ಮಾಜಿ ಅಧ್ಯಕ್ಷರಾದ ಚಂದಪ್ಪ ಮೂಲ್ಯ, ವಿಜಯಕುಮಾರ್ ಕಲ್ಲಳಿಕೆ ಇದ್ದರು.

LEAVE A REPLY

Please enter your comment!
Please enter your name here