ನಿಡ್ಪಳ್ಳಿ, ಆರ್ಯಾಪು ಗ್ರಾ.ಪಂ ಉಪಚುನಾವಣೆ-6 ಮಂದಿ ಅಂತಿಮ ಕಣದಲ್ಲಿ

0

ಎರಡೂ ಗ್ರಾ.ಪಂಗಳಲ್ಲಿಯೂ ತ್ರಿಕೋನ ಸ್ಪರ್ಧೆ-ಅಭ್ಯರ್ಥಿಗಳಿಗೆ ಚಿಹ್ನೆ ವಿತರಣೆ

ಪುತ್ತೂರು: ಆರ್ಯಾಪು ಹಾಗೂ ನಿಡ್ಪಳ್ಳಿ ಗ್ರಾ.ಪಂಗಳಲ್ಲಿ ಸದಸ್ಯರಿಬ್ಬರ ನಿಧನದಿಂದ ತೆರವಾದ ತಲಾ ಒಂದು ಸ್ಥಾನಕ್ಕೆ ಜು.23ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳು ಸೇರಿದಂತೆ ಒಟ್ಟು ಆರು ಮಂದಿ ಅಂತಿಮ ಕಣದಲ್ಲಿದ್ದಾರೆ. ಹೀಗಾಗಿ ಎರಡೂ ಪಂಚಾಯತ್‌ಗಳಲ್ಲಿಯೂ ತಲಾ ಒಂದು ಸ್ಥಾನಕ್ಕೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.


ನಿಡ್ಪಳ್ಳಿ ಗ್ರಾ.ಪಂನ ನಿಡ್ಪಳ್ಳಿ ವಾರ್ಡ್ 2ರ ಸಾಮಾನ್ಯ ಮೀಸಲಾತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಎಂ. ಚಂದ್ರಶೇಖರ ಪ್ರಭು ಗೋಳಿತ್ತಡಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಎನ್. ಸತೀಶ್ ಶೆಟ್ಟಿ ಬಾಕಿತ್ತಿಮಾರ್ ಹಾಗೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಯಾಗಿ ಜಗನ್ನಾಥ ರೈ ಕೊಳಂಬೆತ್ತಿಮಾರ್ ಅಂತಿಮ ಕಣದಲ್ಲಿದ್ದಾರೆ.
ಆರ್ಯಾಪು ಗ್ರಾ.ಪಂನ ಆರ್ಯಾಪು ವಾರ್ಡ್-2ರ ಹಿಂದುಳಿದ ವರ್ಗ ಎ ಮೀಸಲಾತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಜಗದೀಶ ಭಂಡಾರಿ ಗೆನಸಿನಕುಮೇರು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಜಿ.ಪುರುಷೋತ್ತಮ ಪ್ರಭು ಅಬ್ಬುಗದ್ದೆ ಹಾಗೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ ಅಂತಿಮ ಕಣದಲ್ಲಿದ್ದಾರೆ.


5 ಮಂದಿ ಕಣದಿಂದ ಹಿಂದಕ್ಕೆ:
ನಾಮಪತ್ರ ಹಿಂತೆಗೆದುಕೊಳ್ಳಲು ಅಂತಿಮ ದಿನವಾಗಿರುವ ಜು.15ರಂದು ಆರ್ಯಾಪು ಗ್ರಾ.ಪಂನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದ ಸದಸ್ಯ ವಸಂತ ಶ್ರೀದುರ್ಗಾ, ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ನವೀನ ತಮ್ಮ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ನಿಡ್ಪಳ್ಳಿ ಗ್ರಾ.ಪಂನಲ್ಲಿ ನಾಮಪತ್ರ ಸಲ್ಲಿಸಿದ್ದ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳಾದ ಕುಮಾರ ನರಸಿಂಹ ಭಟ್, ಕೆ.ನಾರಾಯಣ ಪಾಟಾಳಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹರೀಶ್ ಕುಮಾರ್ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡು ಕಣದಿಂದ ಹಿಂದೆ ಸರಿದಿದ್ದಾರೆ.


ಚಿಹ್ನೆ ವಿತರಣೆ:
ನಾಮಪತ್ರ ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಅಂತಿಮಗೊಂಡ ಬಳಿಕ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿಗಳು ಚಿಹ್ನೆ ವಿತರಿಸಿದರು. ಆರ್ಯಾಪು ಗ್ರಾ.ಪಂನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಗದೀಶ ಭಂಡಾರಿಗೆ ವಜ್ರ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಿ.ಪುರುಷೋತ್ತಮ ಪ್ರಭುರವರಿಗೆ ಮೇಜು ಹಾಗೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ ಬ್ಯಾಟ್ ಚಿಹ್ನೆಯನ್ನು ವಿತರಿಸಿದರು.


ನಿಡ್ಪಳ್ಳಿ ಗ್ರಾ.ಪಂನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂ. ಚಂದ್ರಶೇಖರ ಪ್ರಭುರವರಿಗೆ ತೆಂಗಿನತೋಟ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಎನ್. ಸತೀಶ್ ಶೆಟ್ಟಿಯವರಿಗೆ ಮೇಜು ಹಾಗೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಜಗನ್ನಾಥ ರೈಯವರಿಗೆ ಬ್ಯಾಟ್ ಚಿಹ್ನೆ ವಿತರಿಸಲಾಗಿದೆ.


ಎರಡೂ ಕಡೆ ಪುತ್ತಿಲ ಪರಿವಾರಕ್ಕೆ ಬ್ಯಾಟ್ ಚಿಹ್ನೆ, ಕಾಂಗ್ರೆಸ್‌ಗೆ ಮೇಜು
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬ್ಯಾಟ್ ಚಿಹ್ನೆ ಪಡೆದುಕೊಂಡಿರುವ ಪುತ್ತಿಲ ಪರಿವಾರ ಇದೀಗ ಗ್ರಾ.ಪಂ ಉಪ ಚುನಾವಣೆಯಲ್ಲೂ ಬ್ಯಾಟ್ ಚಿಹ್ನೆಯನ್ನೇ ಗಿಟ್ಟಿಸಿಕೊಂಡಿದೆ. ಆರ್ಯಾಪು ಹಾಗೂ ನಿಡ್ಪಳ್ಳಿ ಎರಡೂ ಗ್ರಾ.ಪಂಗಳಲ್ಲಿಯೂ ಪುತ್ತಿಲ ಪರಿವಾರದ ಬೆಂಬಲಿತ ಅಭ್ಯರ್ಥಿಗಳಿಗೆ ಬ್ಯಾಟ್ ಚಿಹ್ನೆಯನ್ನು ಪಡೆದುಕೊಂಡಿದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೂ ನಿಡ್ಪಳ್ಳಿ ಹಾಗೂ ಆರ್ಯಾಪು ಗ್ರಾ.ಪಂಗಳಲ್ಲಿ ಮೇಜು ಚಿಹ್ನೆಯನ್ನು ಪಡೆದುಕೊಂಡಿದೆ.

LEAVE A REPLY

Please enter your comment!
Please enter your name here