ನಕಲಿ ದಾಖಲೆ, ಸೀಲ್, ದಾಖಲೆ ಪತ್ರಗಳ ತಯಾರಿ ಪ್ರಕರಣ ಆರೋಪಿ ವಿಶ್ವನಾಥ್ ಮತ್ತೆರಡು ದಿನ ಪೊಲೀಸ್ ಕಸ್ಟಡಿಗೆ

0

ಪುತ್ತೂರು:ಸ್ಥಳೀಯ ಗ್ರಾ.ಪಂ.ಗಳು ಮತ್ತು ನಗರಸಭೆಯ ನಕಲಿ ಸೀಲುಗಳು, ರಬ್ಬರ್ ಸ್ಟಾಂಪ್, ದಾಖಲೆ ಪತ್ರಗಳನ್ನು ತಯಾರಿಸಿ ಸಾರ್ವಜನಿಕರಿಗೆ ನೀಡುತ್ತಿದ್ದ ಪ್ರಕರಣದ ಆರೋಪಿಯಾಗಿ ಬಂಧಿತನಾಗಿ ಪೊಲೀಸ್ ಕಸ್ಟಡಿಯಲ್ಲಿರುವ ವಿಶ್ವನಾಥ್ ಬಿ.ವಿ.ಅವರನ್ನು ಮತ್ತೆರಡು ದಿನ ಪೊಲೀಸರ ಕಸ್ಟಡಿಗೆ ನೀಡಲಾಗಿದೆ.
ತಾ.ಪಂ ಕಾರ್ಯನಿರ್ವಾಹಕಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್.ಅವರು ನೀಡಿದ ದೂರಿನಂತೆ, ಅವರ ನೇತೃತ್ವದಲ್ಲಿ ಜು.11ರಂದು ಪುತ್ತೂರು ನಗರ ಪೊಲೀಸ್ ಠಾಣಾ ಪೊಲೀಸರು ಪಡೀಲ್‌ನ ಎಂ.ಎಸ್ ಕಾಂಪ್ಲೆಕ್ಸ್‌ನಲ್ಲಿರುವ ಬಿ.ಬಿ.ಇಲೆಕ್ಟ್ರಿಕಲ್ಸ್ ಆಂಡ್ ಪ್ಲಂಬರ‍್ಸ್ ಕಚೇರಿಗೆ ದಾಳಿ ನಡೆಸಿದ್ದರು.ಆವೇಳೆ ಅಲ್ಲಿ, ವಿವಿಧ ಗ್ರಾ.ಪಂಗಳು ಮತ್ತು ನಗರಸಭೆಗೆ ಸಂಬಂಧಿಸಿದ ನಕಲಿ ಸೀಲುಗಳು, ರಬ್ಬರ್ ಸ್ಟಾಂಪ್ ಹಾಗು ನಕಲಿ ದಾಖಲೆ ಪತ್ರಗಳು ಇರುವುದು ಬೆಳಕಿಗೆ ಬಂದಿತ್ತು.ವಿಶ್ವನಾಥ ಅವರು ನಕಲಿ ದಾಖಲೆ ಸೃಷ್ಟಿಸಿ ಸಾರ್ವಜನಿಕರಿಗೆ ನೀಡುತ್ತಿರುವ ಆರೋಪದಲ್ಲಿ ಪೊಲೀಸರು ಬಂಧಿಸಿ, ಕಚೇರಿಯಲ್ಲಿದ್ದ ನಕಲಿ ಸೀಲು, ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು, ಕಚೇರಿಗೆ ಬೀಗ ಜಡಿದಿದ್ದರು.ಜು.೧೨ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ಹೆಚ್ಚಿನ ವಿಚಾರಣೆಗೆ ಮೂರು ದಿನಗಳವಧಿಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದರು.ಪೊಲೀಸ್ ಕಸ್ಟಡಿ ಅವಧಿ ಪೂರ್ಣಗೊಂಡ ಬಳಿಕ ಜು.೧೫ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ಪ್ರಕರಣದ ತನಿಖೆ ಇನ್ನೂ ಪೂರ್ಣಗೊಳ್ಳದೇ ಇರುವುದರಿಂದ ಆರೋಪಿಯನ್ನು ಇನ್ನೂ ಎರಡು ದಿನಗಳ ಮಟ್ಟಿಗೆ ತಮ್ಮ ಕಸ್ಟಡಿಗೆ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದರು.ಇದನ್ನು ಪುರಸ್ಕರಿಸಿದ ನ್ಯಾಯಾಲಯ ಆರೋಪಿ ವಿಶ್ವನಾಥ್ ಬಿ.ಬಿ.ಯನ್ನು ಮತ್ತೆರಡು ದಿನಗಳ ಅವಧಿಗೆ ಪೊಲೀಸರ ಕಸ್ಟಡಿಗೆ ನೀಡಿ ಆದೇಶಿಸಿದೆ.

LEAVE A REPLY

Please enter your comment!
Please enter your name here