ಸಿಬಿಎಸ್‌ಇ, ಸಿಐಎಸ್‌ಸಿಇ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ ವಿರುದ್ಧದ ಅರ್ಜಿ – ಕೇಂದ್ರ, ರಾಜ್ಯಕ್ಕೆ ಹೈಕೋರ್ಟ್ ನೋಟೀಸ್

0

ಬೆಂಗಳೂರು:ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಿ ಕಾನೂನು ರೂಪಿಸಿರುವ ರಾಜ್ಯ ಸರಕಾರದ ಕ್ರಮ ಪ್ರಶ್ನಿಸಿ ಹಲವು ಮಕ್ಕಳ ಪೋಷಕರು ಸಲ್ಲಿಸಿದ್ದ ಅರ್ಜಿ ಸಂಬಂಧ ಕೇಂದ್ರ, ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ.
ಸಿ.ಸೋಮಶೇಖರ್ ಸೇರಿದಂತೆ 19 ಮಂದಿ ಪೋಷಕರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗುರುವಾರ ವಿಚಾರಣೆಗೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ, ಸರಕಾರಕ್ಕೆ ನೊಟೀಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.ಕನ್ನಡ ಭಾಷೆ ಕಲಿಕೆ(ಕೆಎಲ್‌ಎಲ್) ಕಾಯಿದೆ ಮತ್ತು ನಿಯಮಗಳು ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಡ್ಡಾಯಗೊಳಿಸುತ್ತವೆ. ಆದರೆ, ಕರ್ನಾಟಕ ಶಿಕ್ಷಣ ಸಂಸ್ಥೆಗಳು(ನಿರಾಕ್ಷೇಪಣಾ ಪ್ರಮಾಣ ಪತ್ರ ಮತ್ತು ನಿಯಂತ್ರಣ)ನಿಯಮ 2022ರ ಪ್ರಕಾರ ಎರಡನೇ ಅಥವಾ ಮೂರನೇ ಭಾಷೆಯಾಗಿ ಕಡ್ಡಾಯ ಎಂಬುದಾಗಿ ತಿಳಿಸುತ್ತವೆ.ಈ ಅಂಶಗಳು ಕರ್ನಾಟಕ ಶಿಕ್ಷಣ ಕಾಯಿದೆ 1983ಕ್ಕೆ ತದ್ವಿರುದ್ಧವಾಗಿವೆ.ಅಲ್ಲದೆ, ಈ ಕಾಯಿದೆಗಳು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್(ಸಿಬಿಎಸ್‌ಎ) ಮತ್ತು ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಆಫ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್‌ಸಿಇ)ವ್ಯಾಪ್ತಿಯಿಂದ ಹೊರಗಡೆ ಇವೆ.ಅಷ್ಟೇ ಅಲ್ಲದೆ, ಕರ್ನಾಟಕ ಶಿಕ್ಷಣ ಕಾಯಿದೆ 1998ರ ತಿದ್ದುಪಡಿ ಮಾಡುವ ಮೂಲಕ ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಶಾಲೆಗಳು ಮತ್ತು ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶುಲ್ಕ ನಿಗದಿ ಮಾಡುವುದಕ್ಕೆ ಅವಕಾಶ ಕಲ್ಪಿಸಿದ್ದ ನಿಯಮಗಳನ್ನು ಅಸಾಂವಿಧಾನಿಕ ಎಂದು ಹೈಕೋರ್ಟ್‌ನ ವಿಭಾಗೀಯ ಪೀಠ ಇತ್ತೀಚೆಗೆ ಆದೇಶಿಸಿದೆ.

ರಾಜ್ಯ ಸರಕಾರ ಕೆಎಲ್‌ಎಲ್ ಕಾಯಿದೆ 2015ರ ನಿಯಮ 2017 ಮತ್ತು ಕರ್ನಾಟಕ ಶಿಕ್ಷಣ ಸಂಸ್ಥೆಗಳು(ನಿರಾಕ್ಷೇಪಣಾ ಪ್ರಮಾಣ ಪತ್ರ ಮತ್ತು ನಿಯಂತ್ರಣ) ನಿಯಮ2022ರ ಪ್ರಕಾರ ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಶಾಲೆಗಳು ಸೇರಿದಂತೆ ಎಲ್ಲಾ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯವರೆಗೂ ಕನ್ನಡ ಕಡ್ಡಾಯ ಮಾಡಿದೆ.ಹೀಗಾಗಿ, ಎರಡೂ ಕಾಯಿದೆಗಳನ್ನು ರದ್ದು ಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಪೀಠ ಇದೀಗ ಕೇಂದ್ರ, ರಾಜ್ಯ ಸರಕಾರಕ್ಕೆ ನೊಟೀಸ್ ಜಾರಿ ಮಾಡಲು ಆದೇಶಿಸಿ ವಿಚಾರಣೆಯನ್ನು 2 ವಾರ ಮುಂದೂಡಿದೆ.

LEAVE A REPLY

Please enter your comment!
Please enter your name here