ಕೆದಂಬಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸಾಮಾನ್ಯ ಸಭೆ

0

ನಿವ್ವಳ ಲಾಭ ರೂ.88,300, ಶೇ.10 ಡಿವಿಡೆಂಟ್, ಬೋನಸ್ 0.36 ಪೈಸೆ

ಪುತ್ತೂರು: ಕೆದಂಬಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಆ.10 ರಂದು ತಿಂಗಳಾಡಿಯಲ್ಲಿರುವ ಸಂಘದ ಕಛೇರಿಯ ಕ್ಷೀರಧಾಮ ಸಭಾಂಗಣದಲ್ಲಿ ನಡೆಯಿತು.

ಸಂಘದ ಅಧ್ಯಕ್ಷೆ ಮೀರಾ ಎಸ್.ರೈಯವರು ಸಭಾಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರೇಖಾ ಎ.ರೈಯವರು 2022-23 ನೇ ಸಾಲಿನ ವರದಿ ಮಂಡಿಸುತ್ತಾ, ಸಂಘದಲ್ಲಿ ಒಟ್ಟು 144 ಸದಸ್ಯರಿದ್ದು ರೂ.31500 ಪಾಲು ಬಂಡವಾಳ ಇರುತ್ತದೆ. ಒಟ್ಟು ಸದಸ್ಯರಲ್ಲಿ 90 ಮಂದಿ ಹಾಲು ಹಾಕುತ್ತಿದ್ದು ವರದಿ ಸಾಲಿನಲ್ಲಿ 1,14,628 ಲೀಟರ್ ಸಂಗ್ರಹವಾಗಿದ್ದು ಒಟ್ಟು 1,75,00439 ವ್ಯವಹಾರ ನಡೆಸಿ `ಎ ‘ಗ್ರೇಡ್‌ನಲ್ಲಿದೆ ಎಂದು ತಿಳಿಸಿದರು. ವರದಿ ಸಾಲಿನಲ್ಲಿ ಸಂಘವು ರೂ.88,300 ನಿವ್ವಳ ಲಾಭ ನಡೆಸಿದ್ದು ಸದಸ್ಯರಿಗೆ ಶೇ.10 ಡಿವಿಡೆಂಟ್ ಹಾಗೂ ಲೀಟರ್‌ಗೆ ರೂ.0.36 ಪೈಸೆ ಬೋನಸ್ ನೀಡುವುದಾಗಿ ಅಧ್ಯಕ್ಷೆ ಮೀರಾ ಎಸ್.ರೈ ಘೋಷಿಸಿದರು.


ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಒಕ್ಕೂಟದ ಪಶು ವೈದ್ಯಾಧಿಕಾರಿ ಡಾ.ಅನುದೀಪ್‌ರವರು, ಪಶುಗಳ ಆರೈಕೆ, ಗುಣಮಟ್ಟದ ಹಾಲು ಪಡೆಯುವಿಕೆ, ಚರ್ಮಗಂಟು ರೋಗ ಸಹಿತ ದನಗಳಿಗೆ ಬಾಧಿಸುವ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಮತ್ತು ಸೂಕ್ತ ಲಸಿಕೆ ನೀಡುವ ಬಗ್ಗೆ ಮಾಹಿತಿ ನೀಡಿದರು. ಹೆಣ್ಣು ಕರು ಯೋಜನೆ ಎಂಬ ವಿಶೇಷ ಯೋಜನೆ ಇದ್ದು ಯಾರ ಮನೆಯಲ್ಲಿ ದನ ಹೆಣ್ಣು ಕರು ಹಾಕಿದ್ದರೆ ಆ ಕರುವಿನ ಲಾಲನೆ ಪಾಲನೆಯ ಮಾಹಿತಿ ನೀಡಿದರು. ನರೇಗಾ ಯೋಜನೆಯ ತಾಲೂಕು ಸಂಯೋಜಕರಾದ ಭರತ್‌ರಾಜ್‌ರವರು, ನರೇಗಾ ಯೋಜನೆಯ ಮೂಲಕ ಮಾಡಬಹುದಾದ ಕಾಮಗಾರಿಗಳ ಬಗ್ಗೆ ಅಲ್ಲದೆ ಬಯೋಗ್ಯಾಸ್, ದನದ ಹಟ್ಟಿ ರಚನೆಯ ಬಗ್ಗೆ ಮಾಹಿತಿ ನೀಡುತ್ತಾ, ನರೇಗಾ ಯೋಜನೆಯ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳುವಂತೆ ತಿಳಿಸಿದರು.


ಸಂಘದ ಅಧ್ಯಕ್ಷೆ ಮೀರಾ ಎಸ್.ರೈಯವರು ಮಾತನಾಡಿ, ಸಂಘದ ಸದಸ್ಯರು ಅತೀ ಹೆಚ್ಚು ಹಾಲನ್ನು ಸಂಘಕ್ಕೆ ಹಾಕುವ ಮೂಲಕ ಸಂಘದ ಬೆಳವಣಿಗೆಗೆ ಸಹಕರಿಸುವಂತೆ ತಿಳಿಸಿ, ಹೆಚ್ಚು ಹಾಲು ಹಾಕುವ ಮೂಲಕ ಪ್ರಶಸ್ತಿ ಪಡೆದುಕೊಂಡವರಿಗೆ ಅಭಿನಂದನೆ ಸಲ್ಲಿಸಿದರು. ಸಂಘದ ಅತೀ ಹೆಚ್ಚು ಹಾಲು ಹಾಕಿದವರನ್ನು ಈ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಸಂಘದ ನಿರ್ದೇಶಕಿ ಖತೀಜಮ್ಮ ಪ್ರಥಮ ಪ್ರಶಸ್ತಿ ಪಡೆದುಕೊಂಡರೆ, ನಿರ್ದೇಶಕಿ ವೀಣಾ ಬಿ.ಬಲ್ಲಾಳ್ ದ್ವಿತೀಯ ಹಾಗೂ ಸದಸ್ಯೆ ನಳಿನಿ ತೃತೀಯ ಪ್ರಶಸ್ತಿ ಪಡೆದುಕೊಂಡರು. ಉಳಿದಂತೆ ಹೆಚ್ಚು ಹಾಲು ಹಾಕಿದ ಎಲ್ಲರಿಗೂ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಯಿತು.


ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಸರಸ್ವತಿ ಎ.ರಾವ್, ನಿರ್ದೇಶಕರುಗಳಾದ ಲಕ್ಷ್ಮೀ ಎಂ ರೈ, ಮೀರಾ ಬಿ.ರೈ, ಖತೀಜಮ್ಮ, ಲೀಲಾವತಿ, ಸವಿತಾ ಎ, ವೀಣಾ ಬಿ.ಬಲ್ಲಾಳ್, ವಸಂತಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷೆ ಮೀರಾ ಎಸ್.ರೈ ಸ್ವಾಗತಿಸಿದರು.ಸಂಘದ ಸಿಬ್ಬಂದಿ ಲಲಿತಾ ಪ್ರಾರ್ಥಿಸಿದರು. ನಿರ್ದೇಶಕಿ ಸವಿತಾ ಎ ವಂದಿಸಿದರು. ಸಂಘದ ಎಐ ಕಾರ್ಯಕರ್ತ ಸೂರ್ಯಪ್ರಸನ್ನ ರೈ ಎಂಡೆಸಾಗು ಸಹಕರಿಸಿದ್ದರು.


ವರದಿ ಸಾಲಿನಲ್ಲಿ ಮೂರು ಸದಸ್ಯರ 4 ದನಗಳು ಮರಣ ಹೊಂದಿದ್ದು ರೂ.1,20,000 ವಿಮೆ ಪಾವತಿಯಾಗಿರುತ್ತದೆ. ವರದಿ ಸಾಲಿನಲ್ಲಿ ಸಂಘದ ಸದಸ್ಯರಾಗಿದ್ದ ಯಶೋಧಾ ಗೌಡ ಮತ್ತು ನಳಿನಿ ಎ.ರಾವ್‌ರವರು ತೀರಿಕೊಂಡಿದ್ದು ಇವರ ಕುಟುಂಬಕ್ಕೆ ಒಕ್ಕೂಟದ ರೈತ ಕಲ್ಯಾಣ ಟ್ರಸ್ಟ್ನಿಂದ ಕ್ರಮವಾಗಿ ರೂ.50 ಸಾವಿರದಂತೆ 1 ಲಕ್ಷ ರೂ.ಸಿಕ್ಕಿರುತ್ತದೆ ಎಂದು ಕಾರ್ಯದರ್ಶಿ ರೇಖಾ ಎ.ರೈಯವರು ತಿಳಿಸಿದರು.

LEAVE A REPLY

Please enter your comment!
Please enter your name here