ಪುತ್ತೂರು: ನಿವೃತ್ತ ಅರಣ್ಯ ಅಧಿಕಾರಿ ಪನಡ್ಕ ಮಂಜುನಾಥ ಶೆಟ್ಟಿ ಒಡ್ಯಮೆ ಎಸ್ಟೇಟ್ ರವರ ಸ್ಮರಣಾರ್ಥ ಅವರ ಪತ್ನಿ ದೇರ್ಲ ವಿಜಯ ಮಂಜುನಾಥ ಶೆಟ್ಟಿ ಪ್ರಾಯೋಜಿತ ಪ್ರಪ್ರಥಮವಾಗಿ ಕೊಡಲ್ಪಡುವ ‘ಅರಣ್ಯ ವಿಜಯಶ್ರೀ’ ಪ್ರಶಸ್ತಿಗೆ ಪ್ರಗತಿಪರ ಕೃಷಿಕ, ಚಿನ್ನದ ಪದಕ ವಿಜೇತ ಕಡಮಜಲು ಸುಭಾಸ್ ರೈಯವರು ಆಯ್ಕೆಯಾಗಿದ್ದಾರೆ. ಆ. 13 ರಂದು ಬಂಟರ ಸಂಘದಲ್ಲಿ ನಡೆಯಲಿರುವ ಆಟಿಡೊಂಜಿ ದಿನ, ಚಿನ್ನದ ಪದಕ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ.
ಅರಣ್ಯ ಇಲಾಖೆಯಲ್ಲಿ ಪ್ರಾಮಾಣಿಕ ಮತ್ತು ದಕ್ಷ ಸೇವೆ ನಿರ್ವಹಿಸಿದ ದಿ. ಮಂಜುನಾಥ ಶೆಟ್ಟಿಯವರ ಹೆಸರು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಅವರ ಪತ್ನಿ ವಿಜಯ ಮಂಜುನಾಥ್ ರವರು ಈ ಪ್ರಶಸ್ತಿಯನ್ನು ಪ್ರಾಯೋಜಿಸಿ ಬಂಟ ಸಮುದಾಯದ ಸಾಧಕರಿಗೆ ನೀಡುತ್ತಿದ್ದು, ಮೊದಲ ಪ್ರಶಸ್ತಿ ಇದಾಗಿದೆ.
ಅರಣ್ಯೀಕರಣದ ಭಾಗವಾಗಿರುವ ಗೇರು ಮತ್ತು ರಬ್ಬರ್ ಕೃಷಿಯಲ್ಲಿ ಆಧುನಿಕ ಮತ್ತು ವೈಜ್ಞಾನಿಕ ಪದ್ದತಿಗಳನ್ನು ಅಳವಡಿಸಿಕೊಂಡು ಸಮಗ್ರ ಕೃಷಿಯಲ್ಲಿ ಸಾಧನೆ ಮತ್ತು ಕರ್ನಾಟಕ ಸರಕಾರದಿಂದ ವಿಶೇಷವಾಗಿ ‘ಅರಣ್ಯ ಮಿತ್ರ’ ಪ್ರಶಸ್ತಿಗೆ ಭಾಜನರಾಗಿರುವ ಕಡಮಜಲುರವರ ಸಾಧನೆಯನ್ನು ಗುರುತಿಸಿ ಪ್ರಪ್ರಥಮ ಪ್ರಶಸ್ತಿಗಾಗಿ ಅವರನ್ನು ಆಯ್ಕೆ ಮಾಡಲಾಗಿದೆ.
ಆ. 11 ರಂದು ಕಡಮಜಲು ಸುಭಾಸ್ ರೈಯವರ ಮನೆಗೆ ಭೇಟಿ ನೀಡಿರುವ ಪ್ರಶಸ್ತಿ ಪ್ರಾಯೋಜಕರಾದ ದೇರ್ಲ ವಿಜಯ ಮಂಜುನಾಥ್ ಶೆಟ್ಟಿ ಸುಭಾಸ್ ರೈಯವರಿಗೆ ಪ್ರಶಸ್ತಿಗೆ ಆಯ್ಕೆ ಮಾಡಿರುವ ಕುರಿತಾದ ಪತ್ರ ನೀಡಿ ಸನ್ಮಾನ ಸ್ವೀಕರಿಸಲು ಅಧಿಕೃತ ಆಹ್ವಾನಿಸಿದರು.
ಈ ವೇಳೆ ಪುತ್ತೂರು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಕಾರ್ಯದರ್ಶಿ ರಮೇಶ್ ರೈ ಡಿಂಬ್ರಿ, ವಿಡಿಸಿ ಅರಿಯಡ್ಕ ಗ್ರಾಮ ಸಮಿತಿ ಅಧ್ಯಕ್ಷ ಅಮ್ಮಣ್ಣ ರೈ ಪಾಪೆಮಜಲು , ಕೆಯ್ಯೂರು ಕೆದಂಬಾಡಿ ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ಎ.ಕೆ. ಜಯರಾಮ ರೈ, ಪುತ್ತೂರು ಅಶ್ವಿನಿ ಹೊಟೇಲ್ ಮಾಲಕ ದೇರ್ಲ ಕರುಣಾಕರ ರೈ, ಕೃಷ್ಣವೇಣಿ ಕರುಣಾಕರ ರೈ ಉಪಸ್ಥಿತರಿದ್ದರು.