ಪುತ್ತೂರು(ಮರಿಲ್): ಇ.ಎಸ್. ಆರ್. ಪ್ರೆಸಿಡೆನ್ಸಿ ವಿದ್ಯಾಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಸಭೆಯು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಝಾಕಿರ್ ಹುಸೇನ್ ನೇತೃತ್ವದಲ್ಲಿ ಆ.8 ರಂದು ನಡೆಯಿತು. ಶಾಲಾ ಪ್ರಾರ್ಥನೆಯ ಮೂಲಕ ಸಭೆಯನ್ನು ಪ್ರಾರಂಭಿಸಲಾಯಿತು.
ಮುಖ್ಯ ಅತಿಥಿಯಾಗಿ ರಫೀಕ್ ಮಾಸ್ಟರ್ ರವರು ಮಾತನಾಡಿ ಸಮಯ ಪ್ರಜ್ಞೆ ಅತ್ಯಗತ್ಯ, ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ರೂಪಿಸುವಂತೆ ಮಕ್ಕಳ ಹೆತ್ತವರಿಗೆ ಕರೆ ನೀಡಿದರು. ಮಕ್ಕಳ ನಾಯಕತ್ವ ಗುಣ, ಅವರ ಮುಂದಿನ ಗುರಿ ಮುಂತಾದ ವಿಷಯಗಳ ಬಗ್ಗೆ ತಿಳಿದು, ಪ್ರಾಯೋಗಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ಮಕ್ಕಳನ್ನು ಹುರಿದುಂಬಿಸಿದರು. ಸಭೆಯ ಅಧ್ಯಕ್ಷ ಹಾಗೂ ಶಾಲಾ ಸಂಚಾಲಕ ಝಾಕಿರ್ ಹುಸೇನ್ ಮಾತನಾಡಿ “ಸಂಸ್ಕಾರದ ಜೊತೆಗೆ ಜ್ಞಾನವು ದೊರೆತರೆ ಉತ್ತಮ ವಿದ್ಯಾರ್ಥಿಗಳಾಗಲು ಸಾಧ್ಯ, ಪೋಷಕರು ಮಕ್ಕಳಿಗೆ ಅರಿವು ಮೂಡಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು” ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ , ಶಾಲಾ ಆಡಳಿತ ಮಂಡಳಿಯ ಸದಸ್ಯ ಮಖ್ಸೂದ್ ಮತ್ತು ಶಾಲಾ ಮದರಸದ ಅಧ್ಯಾಪಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ತಾಜುನ್ನಿಸಾ ಶಾಲೆಯ ನಿಯಮ ನಿಬಂಧನೆಗಳ ಬಗ್ಗೆ ಸವಿಸ್ತಾರವಾಗಿ ಪೋಷಕರಿಗೆ ಮನವರಿಕೆ ಮಾಡಿದರು. ಇದೇ ವೇಳೆ 2023-24ರ ಸಾಲಿನ ಶಿಕ್ಷಕ -ರಕ್ಷಕ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಸಿರಾಜುದ್ದೀನ್ ಮತ್ತು ಉಪಾಧ್ಯಕ್ಷರಾಗಿ ಶಾಹಿದ ಬಾನು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಶಿಕ್ಷಕರಕ್ಷಕ ಸಂಘದ ಕಾರ್ಯದರ್ಶಿ ಶಿಕ್ಷಕಿ ಸುಶಾಂತಿ ವರದಿ ಮಂಡಿಸಿದರು. ಶಿಕ್ಷಕಿ ಸಯೀದ ಸ್ವಾಗತಿಸಿ, ಶಿಕ್ಷಕಿ ರಾಧಾ ವಂದಿಸಿದರು. ಶಿಕ್ಷಕಿ ರಾಯಿಲ ಕಾರ್ಯಕ್ರಮವನ್ನು ನಿರೂಪಿಸಿದರು.