ಪುತ್ತೂರು: ಹಾಡಹಗಲು ಯುವತಿಯ ಕೊಲೆ ಪ್ರಕರಣ- ವಿಮೆನ್ ಇಂಡಿಯಾ ಮೂವ್ಮೆಂಟ್ ದಿಗ್ಬ್ರಮೆ

0

ಪುತ್ತೂರು: ನಗರದ ಮಹಿಳಾ ಪೋಲಿಸ್ ಠಾಣಾ ಬಳಿಯಲ್ಲಿ ಪದ್ಮರಾಜ್ ಎಂಬ ಯುವಕನೋರ್ವ ಹಾಡಹಗಲೇ ಗೌರಿ ಎಂಬ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ನಡೆಸಿದ ಕೃತ್ಯಕ್ಕೆ ವಿಮೆನ್ ಇಂಡಿಯಾ ಮೂವ್ಮೆಂಟ್ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಝಾಹಿದಾ ಸಾಗರ್ ತೀವ್ರ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ ಅವರು, ಈ ಕೊಲೆಗಾರ 4 ವರ್ಷಗಳಿಂದ ಯುವತಿಗೆ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಪೋಲಿಸರು ಯಾವುದೇ ಕ್ರಮ ಜರುಗಿಸದೇ ಇದ್ದ ಕಾರಣದಿಂದ ಆತನ ಕಿರುಕುಳ ಮುಂದುವರಿದು ಯುವತಿಯ ದುರಂತ ಅಂತ್ಯಕ್ಕೆ ಕಾರಣವಾಗಿದೆ.

ಕೃತ್ಯ ನಡೆದು ಕೆಲವೇ ಗಂಟೆಗಳ ಅವಧಿಯಲ್ಲಿ ಆರೋಪಿಯ ಬಂಧನ ನಡೆದಿರುವುದು ಸಮಾಧಾನಕರ ವಿಚಾರವಾದರೂ ಪೋಲಿಸ್‌ರು ಈ ಹಿಂದೆ ಪ್ರಕರಣ ದಾಖಲಾಗಿದ್ದಾಗಲೇ ಎಚ್ಚೆತ್ತುಕೊಂಡಿರುತ್ತಿದ್ದರೆ ಈ ದುರಂತ ನಡೆಯುತ್ತಿರಲಿಲ್ಲ. 2018 ಫೆಬ್ರವರಿ ತಿಂಗಳಲ್ಲಿ ಸುಳ್ಯದಲ್ಲೂ ಇದೇ ರೀತಿಯ ಕೃತ್ಯ ನಡೆದು ಅಕ್ಷತಾ ಎಂಬ ಕಾಲೇಜ್ ವಿದ್ಯಾರ್ಥಿನಿಯನ್ನು ಕಾರ್ತಿಕ್ ಎಂಬಾತ ಹತ್ಯೆ ಮಾಡಿದ್ದನು. ಹಾಗಾಗಿ ಪೋಲಿಸ್ ಇಲಾಖೆ ಇಂತಹ ಪ್ರಕರಣಗಳು ಬಂದಾಗ ಕ್ಷುಲ್ಲಕ ವಿಚಾರ ಎಂದು ಭಾವಿಸದೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸ್ ಇಲಾಖೆ ಕಾನೂನು ರೀತಿಯ ಕ್ರಮ ಕೈಗೊಂಡು ತನಿಖೆಯಲ್ಲಿ ಯಾವುದೇ ವೈಫಲ್ಯವಾಗದಂತೆ ನೋಡಿಕೊಂಡು ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಮತ್ತು ಯುವತಿಯ ಕುಟುಂಬಕ್ಕೆ ಸರ್ಕಾರ ಪರಿಹಾರ ಒದಗಿಸಬೇಕೆಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here