ಭಕ್ತಿಯಿದ್ದಲ್ಲಿ ಶಕ್ತಿಯಿದೆಯೆಂದು ಮಹಾಲಿಂಗೇಶ್ವರ ತೋರಿಸಿಕೊಟ್ಟಿದ್ದಾರೆ – ಮಾಜಿ ಶಾಸಕಿ ಶಕುಂತಳಾ ಶೆಟ್ಟಿ
*ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ವಿಜೃಂಭಣೆಯಿದೆ – ಬಿ.ಐತ್ತಪ್ಪ ನಾಯ್ಕ್
*ಅಷ್ಟಲಕ್ಷ್ಮೀಯರು ಜೀವನ ಪರ್ಯಾಂತ ಬದುಕಿನಲ್ಲೂ ಬರುತ್ತಾರೆ – ಕೃಷ್ಣವೇಣಿ ಮುಳಿಯ
*ಶ್ರದ್ಧೆ, ಭಕ್ತಿ, ನಂಬಿಕೆ, ವಿಶ್ವಾಸದಿಂದ ವರಮಹಾಲಕ್ಷ್ಮೀ ಫಲ -ಸುಮಾ ಅಶೋಕ್ ರೈ
ಪುತ್ತೂರು: ಎಲ್ಲಿ ಭಕ್ತಿಯುಂಟೋ ಅಲ್ಲಿ ಶಕ್ತಿ ಇದೆ ಅನ್ನುವುದನ್ನು ಮಹಾಲಿಂಗೇಶ್ವರ ದೇವರು ತೋರಿಸಿಕೊಟ್ಟಿದ್ದಾರೆ ಎಂದು ಸಮರ್ಪಣ ಮಹಿಳಾ ಸೇವಾ ಸಂಸ್ಥೆಯ ಗೌರವಾಧ್ಯಕ್ಷೆಯಾಗಿರುವ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಸಮರ್ಪಣ ಮಹಿಳಾ ಸೇವಾ ಸಂಸ್ಥೆ, ವರಮಹಾಲಕ್ಷ್ಮೀ ಪೂಜಾ ಸಮಿತಿ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಪುತ್ತೂರು ಘಟಕ ಮತ್ತು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಆ.25ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆದ 16ನೇ ವರ್ಷದ ವರಮಹಾಲಕ್ಷ್ಮೀ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಣ್ಣು ಮಕ್ಕಳಿಗಾಗಿ ಸೇವಾ ಕಾರ್ಯಕ್ಕಾಗಿ ಮಾಡಿದ ಸಮರ್ಪಣಾ ಮಹಿಳಾ ಸೇವಾ ಸಂಸ್ಥೆ ಸ್ಥಾಪನೆ ಆಗಿದೆ. ಇದು ರಾಜಕೀಯವಾಗಿ ಮಾಡಿದಲ್ಲ. ಇಲ್ಲಿ ಜಾತ್ಯಾತೀತವಾಗಿ ಎಲ್ಲಾ ಮಹಿಳೆಯರು ಭಾಗವಹಿಸುವ ಎಲ್ಲಾ ಧರ್ಮದವರಿಂದಲೂ ಆಚರಿಸಲ್ಪಡುವಂತಹ ಮಹಿಳಾ ಸಂಘಟನೆಯ ಜೊತೆಗೆ ಒಳ್ಳೆಯ ಉದ್ದೇಶವಿಟ್ಟುಕೊಂಡು ಮಾಡಿರುವುದಾಗಿದೆ. ವರಮಹಾಲಕ್ಷ್ಮೀ ಎಲ್ಲರಿಗೂ ಒಳ್ಳೆಯದು ಮಾಡಬೇಕೆಂದು ಒಂದೇ ಮನಸ್ಸಿನಿಂದ ಬಹಳ ವಿಜೃಂಭಣೆಯಿಂದ ಮಾಡಿದ್ದೇವೆ. ಹಾಗಾಗಿ ಇಲ್ಲಿ ಯಾವುದೇ ಪ್ರಚಾರ ನೀಡದಿದ್ದರೂ ಭಕ್ತರು ಸಾವಿರಾರು ಮಂದಿ ಸೇರುವುದು ವಿಶೇಷ. ಭಕ್ತಿ ಇದ್ದಲ್ಲಿ ಶಕ್ತಿ ಇದೆ ಅನ್ನುವುದನ್ನು ಮಹಾಲಿಂಗೇಶ್ವರ ತೋರಿಸಿಕೊಟ್ಟಿದ್ದಾರೆ ಎಂದರು.
ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ವಿಜೃಂಭಣೆಯಿದೆ:
ಶ್ರೀ ವರಮಹಾಲಕ್ಷ್ಮೀ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಿ.ಐತ್ತಪ್ಪ ನಾಯ್ಕ್ ಅವರು ಮಾತನಾಡಿ ಶ್ರೀ ಮಹಾಲಿಂಗೇಶ್ವರ ಸನ್ನಿಧಿಯ ನಟರಾಜ ವೇದಿಕೆಯಲ್ಲಿ ನಡೆದ ಎಲ್ಲಾ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನಡೆದಿದೆ. ಜಾತಿ ಮತ ಬೇಧವಿಲ್ಲದೆ ಮಾಡುವ ಈ ಕಾರ್ಯಕ್ರಮ ಬಹಳ ಅದ್ಭುತ ಕಾರ್ಯಕ್ರಮ ಎಂದು ಹೇಳಿದರು.
ಅಷ್ಟಲಕ್ಷ್ಮೀಯರು ಜೀವನ ಪರ್ಯಾಂತ ಬದುಕಿನಲ್ಲೂ ಬರುತ್ತಾರೆ:
ಶ್ರೀ ಮಹಾಲಿಂಗೇಶ್ವರ ದೇವಸ್ಥನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಅವರು ಪತ್ನಿ ಕೃಷ್ಣವೇಣಿ ಪ್ರಸಾದ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಧಾರ್ಮಿಕ ಉಪನ್ಯಾಸ ನೀಡಿದರು. ಧನ, ಧಾನ್ಯ, ಗಜ, ವಿದ್ಯಾ, ಸಂತಾನ, ವೀರ ಹೀಗೆ ಅಷ್ಟಲಕ್ಷ್ಮೀಯರಲ್ಲಿ ಬರುವ ಎಲ್ಲ ವಿಚಾರಗಳು ಧಾರ್ಮಿಕ ಭಾವನೆಗಳು ನಮ್ಮ ಬದುಕಿನಲ್ಲೂ ಇದೆ. ಅದನ್ನು ಆಳವಾಗಿ ನೋಡಿದಾಗ ನಮ್ಮೆಲ್ಲಾ ಕೆಲಸ ಕಾರ್ಯಗಳಿಗೂ ಸ್ಪೂರ್ತಿ ಸಿಗುತ್ತದೆ. ಇವೆಲ್ಲದರ ನಡುವೆ ನಮಗೆ ಮನುಷ್ಯನಿಗೆ ಪ್ರೀತಿ, ಸಹನೆ, ವಿಶ್ವಾಸ, ಆಸೆ ಹೀಗೆ ಅಷ್ಟಲಕ್ಷ್ಮೀಯರಲ್ಲಿ ವೈವಿಧ್ಯಮಯವಾದ ಶಕ್ತಿ ಇದೆ. ಹಿಂದಿನದನ್ನು ಮರೆಯದೆ ನಾವು ಶುದ್ದ ಮನಸ್ಸಿನಿಂದ ನಮ್ಮ ಚಿತ್ತ ದೇವರ ಕಡೆ ಹೋಗಬೇಕು ಎಂದರು.
ಶ್ರದ್ಧೆ, ಭಕ್ತಿ, ನಂಬಿಕೆ, ವಿಶ್ವಾಸದಿಂದ ವರಮಹಾಲಕ್ಷ್ಮೀ ಫಲ:
21ನೇ ವರ್ಷದ ವರಮಹಾಲಕ್ಷ್ಮೀ ಪೂಜೆ ವ್ರತ ಮಾಡುತ್ತಿರುವ ಶಾಸಕ ಅಶೋಕ್ ಕುಮಾರ್ ರೈ ಅವರ ಪತ್ನಿ ಸುಮಾ ಅಶೋಕ್ ರೈ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿವಾಹ ಆಗಿದಂದಿನಿಂದ ಇವತ್ತಿನ ತನಕ ನಾನು ಕೂಡಾ ವರಮಹಾಲಕ್ಷ್ಮೀ ವ್ರತ ಹಿಡಿಯುತ್ತಿದ್ದೇನೆ ಎಂದ ಅವರು ಶ್ರದ್ಧೆ, ಭಕ್ತಿ, ನಂಬಿಕೆ, ವಿಶ್ವಾಸದಿಂದ ವರಮಹಾಕ್ಷ್ಮೀ ಪೂಜೆ ಮಾಡಿದಾಗ ಪೂರ್ಣ ಫಲ ಸಿಗುತ್ತದೆ. ಈ ನಿಟ್ಟಿನಲ್ಲಿ ಇಲ್ಲಿ ನಡೆಯುವ ಪೂಜೆಯಿಂದ ಎಲ್ಲರಿಗೂ ಒಳ್ಳೆಯದಾಗಲಿ ಎಂದರು.
ಮಹಿಳೆಯರ ಕಣ್ಣೀರು ಒರೆಸುವ ಸಂಘಟನೆ:
ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಾಂತಿ ಟಿ ಹೆಗಡೆಯವರು ಮಾತನಾಡಿ ಸಮರ್ಪಣಾ ಮಹಿಳಾ ಸೇವಾ ಸಂಸ್ಥೆ ಮಹಿಳೆಯರ ಕಣ್ಣೀರು ಒರೆಸುವ ಸಂಘಟನೆಯಾಗಿದೆ. ಇದನ್ನು ನಾನು ಸ್ವತಃ ಅನುಭವಿಸಿದ್ದೇನೆ. ನಾನು ಅಧಿಕಾರಿಯಾಗಿದ್ದ ಸಂದರ್ಭ ನಮ್ಮ ಕಚೇರಿಗೆ ಶಕುಂತಳಾ ಶೆಟ್ಟಿಯವರು ಆಗಾಗ ಬಂದ ಮಹಿಳೆಯರಿಗೆ ಧೈರ್ಯ ಹೇಳುವ ಕಾರ್ಯ ಮಾಡುತ್ತಿದ್ದರು. ಇವತ್ತು ವರಮಹಾಲಕ್ಷ್ಮೀ ಪೂಜೆಯ ಮೂಲಕ ಮಹಿಳೆಯರಿಗೆ ಇನ್ನಷ್ಟು ದೇವರು ಶಕ್ತಿ ನೀಡುವಂತಾಗಲಿ ಎಂದರು. ವೇದಿಕೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ್ ಗೌಡ, ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ನಿವೃತ್ತ ನರ್ಸಿಂಗ್ ಸೂಪರಿಡೆಂಟ್ ರತ್ನ ಕೃಷ್ಣಪ್ಪ ಬಂಗೇರ ಉಪಸ್ಥಿತರಿದ್ದರು. ಸುಜಯಾ ಸುಭಾಷ್ ರೈ ಬೆಳ್ಳಿಪ್ಪಾಡಿ, ಜಯಂತಿ ಬಲ್ನಾಡು, ಮನಮೋಹನ್ ರೈ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಪುತ್ತೂರು ಘಟಕದ ಅಧ್ಯಕ್ಷೆ ನಯನಾ ರೈ, ಶಾರದಾ ಕೇಶವ್, ಸೀತಾ ಭಟ್, ಶಾರದಾ ಅರಸ್, ವೀಣಾ ಬನ್ನೂರು ಅತಿಥಿಗಳನ್ನು ಗೌರವಿಸಿದರು. ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಶುಭಮಾಲಿನಿ ಮಲ್ಲಿ ಸ್ವಾಗತಿಸಿದರು. ಸಮರ್ಪಣಾ ಮಹಿಳಾ ಸೇವಾ ಸಂಸ್ಥೆಯ ಅಧ್ಯಕ್ಷೆ ಗಂಗಾರತ್ನ ವಿ ರೈ, ಹರಿಣಾಕ್ಷಿ ಜೆ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವೇ ಮೂ ಶ್ರೀ ಹರಿಪ್ರಸಾದ್ ವೈಲಾಯ ಅವರ ಪೌರೋಹಿತ್ವದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ ನಡೆಯಿತು. ಬೆಳಿಗ್ಗೆ ಒಡಿಯೂರು ಶ್ರೀ ವಜ್ರಮಾತಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಹಿರಿಯರಾದ ಸಂಜೀವ ನಾಯಕ್ ಕಲ್ಲೇಗ, ಬಾಲಕೃಷ್ಣ ಬೋರ್ಕರ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ನಾರಾವಿ, ಕೇಶವ್ ನಾಯ್ಕ್, ನಿವೃತ್ತ ಉಪವಲಯ ಅರಣ್ಯಾಧಿಕಾರಿ ಕೃಷ್ಣಪ್ಪ ಕೆ ಸಹಿತ ಸಾವಿರಾರು ಮಂದಿ ಮಹಿಳೆಯರು ಪೂಜೆಯಲ್ಲಿ ಭಾಗವಹಿಸಿದ್ದರು. ಪೂಜೆಯ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಇಲ್ಲಿ ನಿಜವಾಗಿಯೂ 18ನೇ ವರ್ಷದ ಪೂಜೆ..
ನಿಜವಾಗಿಯೂ ಇಲ್ಲಿ 18ನೇ ವರ್ಷ. ಸಮರ್ಪಣಾ ಮಹಿಳಾ ಸೇವಾ ಸಂಸ್ಥೆಯಿಂದ ಮಾಡಿರುವುದು 16ನೇ ವರ್ಷ. ನಾವು ಮಾಡುವ ಎರಡು ವರ್ಷ ಮೊದಲು ಅಲ್ಲಿಂದ ಜಾರಿದ ಅರುಣ್ ಪುತ್ತಿಲ ಇಲ್ಲಿ ಆರಂಭಿಸಿದ್ದರು. ಬಳಿಕ ನಾನು ಅಲ್ಲಿಂದ ಹೊರ ಬರುವಾಗ ’ಅಕ್ಕ ರಡ್ ವರ್ಷ ಯಾನ್ ಮಾಲ್ತೆ ನಾನು ಈರ್ ಮುಂದುವರಿಸಲೇ’ ಎಂದು ನನಗೆ ಹೇಳಿದರು. ಆಗ ನಾವು ಸ್ವಾಭಿಮಾನಿ ವೇದಿಕೆಯಿಂದ ಸಾರ್ವಜನಿಕವಾಗಿ ಪಕ್ಷತೀತವಾಗಿ ಆರಂಭಿಸಿದ್ದೇವು. ಅದಕ್ಕೆ ಸಂಘಟನೆಗಾಗಿ ಸಮರ್ಪಣಾ ಮಹಿಳಾ ಸೇವಾ ಸಂಸ್ಥೆ ಕಟ್ಟಿಕೊಂಡಿವೆ. ಆ ಸಂಘಟನೆಯಿಂದ ವರಮಹಾಲಕ್ಷ್ಮಿ ಸೇವಾ ಸಮಿತಿ ಮಾಡಿದೆವು. ಆಗ ಸುಭಾಷ್ ರೈ, ಮಂಜುನಾಥ್, ಬನಾರಿ ಗೋಪಾಲಕೃಷ್ಣ ಭಟ್, ಕಲ್ಲೇಗ ಸಂಜೀವ ನಾಯಕ್ ಇವೆರಲ್ಲ ಪೂರ್ಣ ಪ್ರೋತ್ಸಾಹ ನೀಡಿದರು. ಹಾಗೆ ಒಂದು ವರ್ಷ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರು ಧಾರ್ಮಿಕ ಉಪನ್ಯಾಸ ನೀಡಿ ಇಲ್ಲಿ ನಡೆಯುವ ಜಾತ್ಯಾತೀತ ಕಾರ್ಯಕ್ರಮದ ವಿಶೇಷತೆಯನ್ನು ಎಲ್ಲೂ ನೋಡಿಲ್ಲ ಎಂದರು.
ಶಕುಂತಳಾ ಟಿ ಶೆಟ್ಟಿ,
ಮಾಜಿ ಶಾಸಕರು ಪುತ್ತೂರು