ವೀರಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ಸಭೆ

0

ಪುತ್ತೂರು: ವೀರಮಂಗಲ ಹಾಲು ಉತ್ಪಾದಕರ ಸಹಕಾರ ಸಂಘವು 2022-23ನೇ ಸಾಲಿನಲ್ಲಿ ರೂ.1,15,254.64 ನಿವ್ವಳ ಲಾಭಗಳಿಸಿದ್ದು ಸದಸ್ಯರಿಗೆ ಶೇ.10 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 36 ಪೈಸೆ ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಹರ್ಷ ಜಿ.ಗುತ್ತುರವರು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಣೆ ಮಾಡಿದರು.

ಸಭೆಯು ಆ.29ರಂದು ಸಂಘದ ಆವರಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದಲ್ಲಿ ವರ್ಷಾಂತ್ಯಕ್ಕೆ 208 ಸದಸ್ಯರಿಂದ ರೂ.42,350 ಷೇರು ಬಂಡವಾಳ ಹೊಂದಿದೆ. ವರದಿ ಸಾಲಿನಲ್ಲಿ ಸಂಘವು 1,15,349.89 ಲೀಟರ್ ಹಾಲು ಖರೀದಿಸಿದೆ. ಇದರಲ್ಲಿ 6770ಲೀಟರ್ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಲಾಗಿದ್ದು ಅದರಿಂದ ರೂ.2,88,734.40 ಆದಾಯ ಬಂದಿರುತ್ತದೆ. 600 ಚೀಲ ಪಶು ಆಹಾರ ಹಾಗೂ 965 ಕೆಜಿ ಲವಣ ಮಿಶ್ರಣ ಮಾರಾಟವಾಗಿದೆ. ಇವುಗಳಿಂದ ಒಟ್ಟು 4,51,277.08 ಆದಾಯ ಬಂದಿರುತ್ತದೆ. ಸಂಘದ ಎಲ್ಲಾ ಖರ್ಚು ವೆಚ್ಚಗಳನ್ನು ಕಳೆದು ಸಂಘವು 1,15,254.64 ಲಾಭಗಳಿಸಿದ್ದು ಲಾಭಾಂಶವನ್ನು ಉಪ ನಿಬಂಧನೆಯಂತೆ ವಿಂಗಡಿಸಲಾಗಿದೆ.

ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ನಾಗೇಶ್ ಮಾತನಾಡಿ, ದನಗಳ ವಿಮಾ ಸೌಲಭ್ಯ, ಮಿನಿ ಡೈರಿ ಯೋಜನೆ, ಒಕ್ಕೂಟದಿಂದ ದೊರೆಯುವ ವಿವಿಧ ಸೌಲಭ್ಯಗಳ ಮಾಹಿತಿ , ವಿವಿಧ ತಳಿಗಳ ನಿರ್ವಹಣೆ, ತಳಿಗಳ ಅಭಿವೃದ್ಧಿಗಳ ಬಗ್ಗೆ ಮಾಹಿತಿ ನೀಡಿದರು.

ಸನ್ಮಾನ:
ಸಂಘದ ಹಿರಿಯ ಸದಸ್ಯ, ಮಾಜಿ ನಿರ್ದೇಶಕರಗಿರುವ ಮಾರಪ್ಪ ಗೌಡರವರನ್ನು ಸನ್ಮಾನಿಸಿ, ಗೌರವಿಸಲಾಯಿತು. ವರದಿ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಭವಾನಿ ಆನಂದ ಗೌಡ ಗುತ್ತು(ಪ್ರ), ನಾಗವೇಣಿ ಗುತ್ತು(ದ್ವಿ) ಹಾಗೂ ನಾಗರಾಜ ನಾಯ್ಕ(ತೃ) ಬಹುಮಾನ ವಿತರಿಸಲಾಯಿತು. ನಿವೃತ್ತ ಹಾಲು ಪರೀಕ್ಷ ಈಶ್ವರ ಮೂಲ್ಯರವರ ದತ್ತಿ ನಿಧಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುವ ಪುರಸ್ಕಾರವನ್ನು ಆತ್ಮಿಕಾ, ಗ್ರೀಷ್ಮಾರವರಿಗೆ ನೀಡಿ ಗೌರವಿಸಲಾಯಿತು.

ಉಪಾಧ್ಯಕ್ಷ ವಿಶ್ವನಾಥ ನಾಯ್ಕ, ನಿರ್ದೇಶಕರಾದ ಲಲಿತಾ, ಮೋನಪ್ಪ ಗೌಡ, ವೆಂಕಪ್ಪ ಗೌಡ, ಜಾನಕಿ, ಶಾರದ, ಭವಾನಿ, ಹೇಮಾವತಿ, ಉದಯ ಕುಮಾರ್ ಹಾಗೂ ಜಯರಾಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಾರತಿ ಕಾಡಮನೆ ಪ್ರಾರ್ಥಿಸಿದರು. ನಿರ್ದೇಶಕ ಸುಂದರ ಗೌಡ ಕಾಡಮನೆ ಸ್ವಾಗತಿಸಿದರು. ಕಾರ್ಯದರ್ಶಿ ಸವಿತಾ ವರದಿ, ಲೆಕ್ಕಪತ್ರ ಮಂಡಿಸಿದರು. ಹಾಲು ಪರೀಕ್ಷಕ ಹೇಮಂತ್ ಕೆ. ಸಹಕರಿಸಿದರು.

LEAVE A REPLY

Please enter your comment!
Please enter your name here