ಜೆಜೆಎಂ ಕಾಮಗಾರಿ, ನಿರ್ವಹಣಾ ವಿಧಾನಗಳ ಬಗ್ಗೆ ಸದಸ್ಯರ ಅಪಸ್ವರ
ಸ್ಮಶಾನ ಕಟ್ಟಡದ ಕಾಮಗಾರಿ ವಿಳಂಬಕ್ಕೆ ಅಸಮಾಧಾನ
ಪುತ್ತೂರು: ಮುಂಡೂರು ಗ್ರಾ.ಪಂ ಸಾಮಾನ್ಯ ಸಭೆ ಗ್ರಾ.ಪಂ ನೂತನ ಅಧ್ಯಕ್ಷ ಚಂದ್ರಶೇಖರ್ ಎನ್.ಎಸ್.ಡಿ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ಆ.29ರಂದು ನಡೆಯಿತು.
ಗ್ರಾಮ ಪಂಚಾಯತ್‌ನಲ್ಲಿ ನಡೆಯುವ ಸಭೆಗಳ ನಿರ್ಣಯಗಳನ್ನು ಸರಿಯಾಗಿ ಬರೆಯುತ್ತಿಲ್ಲ ಮತ್ತು ಅನುಪಾಲನಾ ವರದಿಯನ್ನೂ ಕೊಡುತ್ತಿಲ್ಲ ಎಂದು ಸದಸ್ಯ ಕಮಲೇಶ್ ಸರ್ವೆದೋಳಗುತ್ತು ಆಕ್ರೊಶ ವ್ಯಕ್ತಪಡಿಸಿದರು. ಗ್ರಾ.ಪಂ ಸಭೆ ನಿಯಮಾನುಸಾರ ಅರ್ಥಪೂರ್ಣವಾಗಿ ನಡೆಯಬೇಕು, ನಿರ್ಣಯಗಳು ಆಯಾ ಸಂದರ್ಭಗಳಲ್ಲಿ ಯಥಾವತ್ ದಾಖಲಾಗಬೇಕು, ಗ್ರಾಮ ಸಭೆಯ ನಿರ್ಣಯವನ್ನೇ ಇನ್ನೂ ಬರೆದಿಲ್ಲ ಎಂದರೆ ಇದಕ್ಕೇನು ಅರ್ಥ? ಮುಂದಿನ ದಿನಗಳಲ್ಲಿ ಹೀಗಾದರೆ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಕಮಲೇಶ್ ಹೇಳಿದರು.
ಕೊರುಂಗುವಿನಲ್ಲಿ 2 ಎಕ್ರೆ ಜಾಗ ಅಳತೆ ಮಾಡಿ:
ಕೆಮ್ಮಿಂಜೆ ಗ್ರಾಮದ ಕೊರುಂಗು ಎಂಬಲ್ಲಿ 2 ಎಕ್ರೆ ಜಾಗ ಎಸ್.ಸಿ, ಎಸ್.ಟಿಯವರಿಗೆ ಕಾಯ್ದಿರಿಸಿದ್ದು ನಕ್ಷೆ ಕೂಡಾ ಇದೆ. ಅದನ್ನು ಅಳತೆ ಮಾಡಿ ಬೇಲಿ ಹಾಕಬೇಕು ಎಂದು ಸದಸ್ಯ ಬಾಬು ಕಲ್ಲಗುಡ್ಡೆ ಹೇಳಿದರು. ಪಿಡಿಓ ಅಜಿತ್ ಜಿ.ಕೆ ಉತ್ತರಿಸಿ ಅದರ ಬಗ್ಗೆ ತಿಳಿದುಕೊಂಡು ಮುಂದಿನ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಸ್ಮಶಾನ ಕಟ್ಟಡದ ಕಾಮಗಾರಿ ವಿಳಂಬಕ್ಕೆ ಅಸಮಾಧಾನ:
ಗ್ರಾ.ಪಂ ವ್ಯಾಪ್ತಿಯಲ್ಲಿ ನಿರ್ಮಿಸುತ್ತಿರುವ ಸ್ಮಶಾನ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳದೇ ಹಲವು ಸಮಯಗಳಾಗಿದ್ದು ವಿಳಂಬ ನೀತಿ ಅನುಸರಿಸುತ್ತಿರುವುದು ಯಾಕೆ ಎಂದು ಕಮಲೇಶ್ ಸರ್ವೆದೋಳಗುತ್ತು ಕೇಳಿದರು. ಸದಸ್ಯ ಅಶೋಕ್ ಕುಮಾರ್ ಪುತ್ತಿಲ ಮಾತನಾಡಿ ಸ್ಮಶಾನ ಕಟ್ಟಡದ ಸ್ವಲ್ಪ ಕಾಮಗಾರಿ ಬಾಕಿಯಿದೆ. ಮುಂದಕ್ಕೆ ಅದರ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು. ಆದಷ್ಟು ಬೇಗ ಅದರ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಕಮಲೇಶ್ ಒತ್ತಾಯಿಸಿದರು.
ನೀರಿನ ಸಮಿತಿಯ ಸಭೆ ಕರೆಯಿರಿ:
ನೀರು ಪೂರೈಕೆ ಮಾಡುವವರನ್ನು ಸೇರಿಸಿಕೊಂಡು ಸಭೆ ಕರೆದು ನೀರಿನ ವಿಚಾರದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಉತ್ತಮ, ಅದಕ್ಕಾಗಿ ಆದಷ್ಟು ಬೇಗ ಸಭೆ ಕರೆಯಬೇಕು ಎಂದು ಸದಸ್ಯ ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ ಹೇಳಿದರು.
ಸರ್ವೆ ಸಮೀಪ ಜಾಗ ಅತಿಕ್ರಮಣ ಮಾಡಿದ್ದು ಏನಾಗಿದೆ..?
ಸರ್ವೆ ಗ್ರಾಮದ ನೆಕ್ಕಿತ್ತಡ್ಕ ಎಂಬಲ್ಲಿ ಸೈನಿಕರೋರ್ವರು ಸರಕಾರಿ ಜಾಗಕ್ಕೆ ಬೇಲಿ ಹಾಕಲು ಯತ್ನಿಸಿದ್ದು ಬಳಿಕದ ಬೆಳವಣಿಗೆಯಲ್ಲಿ ಅದನ್ನು ತೆರವು ಮಾಡಲಾಗಿತ್ತು. ಅದರ ವಿಚಾರ ಏನಾಗಿದೆ ಎಂಬ ವಿಚಾರ ಪ್ರಸ್ತಾಪಗೊಂಡಿತು. ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ ಮಾತನಾಡಿ ಸರಕಾರಿ ಜಾಗ ಸಂರಕ್ಷಣೆ ಆಗಬೇಕು, ಅತಿಕ್ರಮಣಕ್ಕೆ ಯಾರಿಗೂ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ಸದಸ್ಯ ಮಹಮ್ಮದ್ ಆಲಿ ಮಾತನಾಡಿ ಜಾಗ ಅತಿಕ್ರಮಣ ಮಾಡಿದವರ ಮೇಲೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಗ್ರಾಮ ಆಡಳಿತಾಧಿಕಾರಿಯವರಲ್ಲಿ ಕೇಳಿದರು. ಗ್ರಾಮ ಆಡಳಿತಾಧಿಕಾರಿ ಉಮೇಶ್ ಕಾವಡಿ ಉತ್ತರಿಸಿ ನಾವು ಕ್ರಮ ಕೈಗೊಳ್ಳಲು ಆಗುವುದಿಲ್ಲ, ಅದು ಕೆಸಿಡಿಸಿ ಜಾಗ ಆದ ಕಾರಣ ಅವರೇ ಅದರ ವಿಚಾರ ನೋಡಿಕೊಳ್ಳಬೇಕು ಎಂದು ಹೇಳಿದರು.
ಕಮಲೇಶ್ ಸರ್ವೆದೋಳಗುತ್ತು ಮಾತನಾಡಿ ಜಾಗ ಅತಿಕ್ರಮಣ ವಿಚಾರ ಗೊತ್ತಾದಾಗ ಅಧ್ಯಕ್ಷರು ಮತ್ತು ಪಿಡಿಓ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಿತ್ತು, ಕೆಡಿಪಿ ಸಭೆ ಮಾಡಿದ್ರೆ ಅಲ್ಲಿಗೆ ಕೆಸಿಡಿಸಿಯವರು ಬಂದಾಗ ಅಲ್ಲಿ ವಿಚಾರಿಸಬಹುದಿತ್ತು, ಅದ್ಯಾವುದೂ ಮಾಡದೇ ಈಗ ಗ್ರಾಮ ಆಡಳಿತಾಧಿಕಾರಿಯವರು ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.
ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ ಮಾತನಾಡಿ ಸೈನಿಕರೋರ್ವರು ಜಾಗಕ್ಕೆ ಬೇಲಿ ಹಾಕಲು ಮುಂದಾದಾಗ ಸರಿಯಾದ ಕ್ರಮ ತೆಗೆದುಕೊಳ್ಳದ ಕಾರಣ ವಾರದ ಬಳಿಕ ಇನ್ನೊಬ್ಬರು ಜಾಗ ಅತಿಕ್ರಮಣಕ್ಕೆ ಯತ್ನಿಸುವಂತಾಯಿತು ಎಂದು ಹೇಳಿದರು.
ಖಾಯಂ ಪಿಡಿಓ ನೇಮಕಕ್ಕೆ ಆಗ್ರಹ:
ಮುಂಡೂರು ಗ್ರಾ.ಪಂಗೆ ಖಾಯಂ ಪಿಡಿಓ ನೇಮಕ ಮಾಡುವಂತೆ ಸದಸ್ಯ ಕರುಣಾಕರ ಗೌಡ ಎಲಿಯ ಆಗ್ರಹಿಸಿದರು. ಖಾಯಂ ಪಿಡಿಓ ಇಲ್ಲದಿದ್ದರೆ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಅವರು ಹೇಳಿದರು.
ನೀರಿನ ಬಿಲ್ ಹೆಚ್ಚಳಕ್ಕೆ ಆಕ್ಷೇಪ:
ನೂರು ರೂಪಾಯಿ ಇದ್ದ ನೀರಿನ ಬಿಲ್ಲನ್ನು ಏಕಾಏಕಿ 200 ಮಾಡಲಾಗಿದೆ, ಇದು ಸರಿಯಲ್ಲ, ಈ ರೀತಿ ಹೆಚ್ಚಳದಿಂದ ಜನರಿಗೆ ಕಷ್ಟವಾಗುತ್ತದೆ ಎಂದು ಬಾಬು ಕಲ್ಲಗುಡ್ಡೆ ಹೇಳಿದರು. ಪಿಡಿಓ ಅಜಿತ್ ಜಿ.ಕೆ ಉತ್ತರಿಸಿ ಮೀಟರ್ ರೀಡಿಂಗ್ ಸರಿಯಾಗಿದ್ದರೆ ಸಮಸ್ಯೆಯಿಲ್ಲ ಎಂದು ಹೇಳಿದರು.
ಅಧ್ಯಕ್ಷ ಹುದ್ದೆ ಕನಿಷ್ಠ ಮಟ್ಟಕ್ಕೆ ಇಳಿಸಬಾರದು:
ನಮ್ಮ ಪಂಚಾಯತ್‌ನಲ್ಲಿ ಅಧ್ಯಕ್ಷರ ಹುದ್ದೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸಲಾಗಿದೆ. ಇದು ಸರಿಯಲ್ಲ, ಅಧ್ಯಕ್ಷರ ಕೊಠಡಿ ಎಂದು ಗೊತ್ತಾಗಲು ಒಂದು ಬೋರ್ಡ್ ಇಲ್ಲ, ಮುಂದಕ್ಕೆ ಕೊಠಡಿ ಮುಂಭಾಗದಲ್ಲಿ ಬೋರ್ಡ್ ಅಳವಡಿಕೆ ಆಗಬೇಕು, ಗ್ರಾ.ಪಂ ಫೋನ್ ಸರಿಯಾಗಿ ಕಾರ್ಯನಿರ್ವಹಿಸಬೇಕು, ಅಧ್ಯಕ್ಷರು ಸಿಬ್ಬಂದಿಗಳನ್ನು ಸುಲಭದಲ್ಲಿ ಸಂಪರ್ಕ ಸಾಧಿಸುವಂತಾಗಬೇಕು ಎಂದು ಕಮಲೇಶ್ ಸರ್ವೆದೋಳಗುತ್ತು ಹೇಳಿದರು.
ಒಮ್ಮತದಿಂದ ಮಾತ್ರ ಅಭಿವೃದ್ಧಿ ಸಾಧ್ಯ:
ಗ್ರಾ.ಪಂನ ಯಾವುದೇ ಅಭಿವೃದ್ಧಿ ಕೆಲಸಗಳು ಆಗಬೇಕಾದರೆ ಒಮ್ಮತ ಅಗತ್ಯ. ಅಧ್ಯಕ್ಷರು ಅಥವಾ ಪಿಡಿಓ ಮೇಲೆ ಗೂಬೆ ಕೂರಿಸಿ ಏನೂ ಪ್ರಯೋಜನವಿಲ್ಲ, ವೈಯಕ್ತಿಕ ವಿಚಾರಗಳಿದ್ದರೆ ಅದನ್ನು ಇಲ್ಲಿಗೆ ತರಬಾರದು, ಅಧ್ಯಕ್ಷರು ಮತ್ತು ಅಧಿಕಾರಿಗಳಿಗೆ ನಾವು ಸಹಕಾರ ನೀಡಿದಾಗ ಅಭಿವೃದ್ಧಿ ಸುಲಭವಾಗುತ್ತದೆ ಎಂದು ಕರುಣಾಕರ ಗೌಡ ಎಲಿಯ ಹೇಳಿದರು. ಕಮಲೇಶ್ ಸರ್ವೆದೋಳಗುತ್ತು ಮಾತನಾಡಿ ನಾನು ಗ್ರಾಮದ ಜನರ ಪರವಾಗಿ ಇಲ್ಲಿ ಮಾತನಾಡುತ್ತಿದ್ದೇನೆ, ವೈಯಕ್ತಿಕ ಹಿತಾಸಕ್ತಿಗಲ್ಲ ಎಂದು ಹೇಳಿದರು. ಚರ್ಚೆಯ ನಡುವೆ ಕಮಲೇಶ್ ಹಾಗೂ ಕರುಣಾಕರ ಗೌಡ ಎಲಿಯ ಮಧ್ಯೆ ತುಸು ಮಾತಿನ ಚಕಮಕಿ ನಡೆಯಿತು.
ವಿ.ಎ ಬಂದಿಲ್ಲ…ಬಂದಿದ್ದಾರೆ…ಚರ್ಚೆ:
ಗ್ರಾ.ಪಂ ಸಭೆಗೆ ಕಳೆದ ಎರಡೂವರೆ ವರ್ಷದಲ್ಲಿ ವಿ.ಎ ಅವರು ಬಂದಿಲ್ಲ ಎಂದು ಕಮಲೇಶ್ ಸರ್ವೆದೋಳಗುತ್ತು ಹೇಳಿದರು. ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷೆ ಪುಷ್ಪಾ ಎನ್ ಮಾತನಾಡಿ ಸಭೆಗೆ ಮೂರು ಬಾರಿ ವಿ.ಎ ಬಂದಿದ್ದಾರೆ ಎಂದರು. ಅಧ್ಯಕ್ಷ ಚಂದ್ರಶೇಖರ್ ಎನ್‌ಎಸ್‌ಡಿ ಮಾತನಾಡಿ ಕೆಲವು ಬಾರಿ ವಿ.ಎ ಬಂದಿದ್ದಾರೆ, ಮುಂದಿನ ದಿನಗಳಲ್ಲಿ ಅಗತ್ಯ ಇರುವಾಗ ವಿ.ಎ ಅವರನ್ನು ಸಭೆಗೆ ಬರುವಂತೆ ಮಾಡುವ ಎಂದು ಹೇಳಿದರು.
ಜೆ.ಜೆ.ಎಂ ಕಾಮಗಾರಿ ಬಗ್ಗೆ ಆಕ್ಷೇಪ:
ಗ್ರಾ.ಪಂ ವ್ಯಾಪ್ತಿಕ ಅನೇಕ ಕಡೆಗಳಲ್ಲಿ ಆಗಿರುವ ಜೆಜೆಎಂ ಕಾಮಗಾರಿ ಬಗ್ಗೆ ಸದಸ್ಯರು ಅಪಸ್ವರ ಎತ್ತಿದರು.
ಬಾಬು ಕಲ್ಲಗುಡ್ಡೆ ಮಾತನಾಡಿ ಕಲ್ಲಗುಡ್ಡೆಯಲ್ಲಿ 80 ಮನೆಗಳಿಗೆ 25 ಸಾವಿರ ಲೀಟರಿನ ಟ್ಯಾಂಕ್ ಇದೆ, ಅಲ್ಲಿ ಹೇಗೆ ನಿಭಾಯಿಸುತ್ತೀರಿ ಎಂದು ಪ್ರಶ್ನೆ ಮಾಡಿದರು.
ಕಮಲೇಶ್ ಸರ್ವೆದೋಳಗುತ್ತು ಮಾತನಾಡಿ ಜೆಜೆಎಂ ನೀರಿನ ಸಂಪರ್ಕದ ಲೋಪಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಕನೆಕ್ಷನ್ ಮೂಲಕ ನೀರು ತುಂಬಿಸಿಡಬೇಕಾದರೆ ಇಡೀ ದಿನ ಮನೆಯಲ್ಲಿರಬೇಕಾದೀತು, ಅಲ್ಲದೇ 50 ಸಾವಿರ ರೂ. ಖರ್ಚು ಮಾಡಿ ನೀರಿನ ಪಂಪ್ ಮಾಡಬೇಕಾದೀತು ಎಂದು ಹೇಳಿದರು. 10 ದಿನಗಳೊಳಗೆ ಜೆಜೆಎಂ ಇಂಜಿನಿಯರ್‌ಗಫ ಸಭೆ ಕರೆಯಬೇಕು ಎಂದು ಅವರು ಆಗ್ರಹಿಸಿದರು. ಇದಕ್ಕೆ ಅಶೊಕ್ ಕುಮಾರ್ ಪುತ್ತಿಲ ಧ್ವನಿಗೂಡಿಸಿದರು ಸದಸ್ಯೆ ದೀಪಿಕಾ ಕಲ್ಲಗುಡ್ಡೆ ಮಾತನಾಡಿ ಕಲ್ಲಗುಡ್ಡೆಯಲ್ಲಿ ಜೆಜೆಎಂನ 2 ಪಂಪ್ ಇದೆ, 1 ಚಾಲೂ ಇದ್ದರೆ ಇನ್ನೊಂದು ಹ್ಯಾಂಡೋವರ್ ಆಗಿಲ್ಲ ಯಾಕೆ ಎಂದು ಕೇಳಿದರು. ಮಹಮ್ಮದ್ ಆಲಿ ಮಾತನಾಡಿ ನೇರೋಳ್ತಡ್ಕದಲ್ಲಿ ಒಂದು ಮನೆಯವರು ಜೆಜೆಎಂ ಕನೆಕ್ಷನ್ ಬೇಡ ಎಂದಿದ್ದಾರೆ, ಆದರೂ ಕನೆಕ್ಷನ್ ಹಾಗೆಯೇ ಇದೆ ಎಂದರು, ಜೆಜೆಎಂಗೆ ಅನೇಕ ಕಡೆ ಚರಂಡಿಯಲ್ಲೇ ಪೈಪ್ ಲೈನ್ ಹಾಕಿದ್ದಾರೆ ಎಂದು ಅವರು ಆರೋಪಿಸಿದರು.
ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಯಶೋಧ ಉಪಸ್ಥಿತರಿದ್ದರು. ಕಾರ್ಯದರ್ಶಿ ಸೂರಪ್ಪ ವರದಿ, ಅರ್ಜಿಗಳನ್ನು ವಾಚಿಸಿದರು.
ಸಭೆಯಲ್ಲಿ ಸದಸ್ಯರಾದ ಬಾಲಕೃಷ್ಣ ಪೂಜಾರಿ, ಅರುಣಾ ಎ.ಕೆ, ದುಗ್ಗಪ್ಪ ಕಡ್ಯ, ಕಾವ್ಯ ಕಡ್ಯ, ರಸಿಕಾ ರೈ ಮೇಗಿನಗುತ್ತು, ಕಮಲ, ವಿಜಯ ಕರ್ಮಿನಡ್ಕ, ಸುನಂದ ಬೊಳ್ಳಗುಡ್ಡೆ ಉಪಸ್ಥಿತರಿದ್ದರು.ಸಿಬ್ಬಂದಿಗಳಾದ ಕೊರಗಪ್ಪ ನಾಯ್ಕ, ಶಶಿಧರ ಕೆ ಮಾವಿನಕಟ್ಟೆ, ಸತೀಶ, ಮೋಕ್ಷಾ, ಕವಿತಾ ಸಹಕರಿಸಿದರು.