ಶ್ರದ್ಧಾಭಕ್ತಿಯಿಂದ ದೈವದೇವರ ಕಾರ್ಯ ಮಾಡಿದಾಗ ಪ್ರತಿಫಲ ನಿಶ್ಚಿತ -ಕಣಿಯೂರುಶ್ರೀ
ವಿಟ್ಲ: ಪಾಣೆಮಂಗಳೂರು ಬೊಂಡಾಲ ಬೊಳ್ಳೆಮಾರ್ ಕಿರೋಡಿಯಾನ್ ಕುಟುಂಬಸ್ಥರ ದೈವಗಳ ತರವಾಡು ಮನೆ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.
ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಶಿಲಾನ್ಯಾಸದ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ತುಳುನಾಡಿನ ಕುಟುಂಬ ಮೂಲದ ನಾಗದೇವರು, ದೈವಗಳು ನಿಶ್ಚಿತ ಕಾಲಘಟ್ಟದಲ್ಲಿ ಕುಟುಂಬಸ್ಥರ ಮೂಲಕ ಆರಾಧನೆಗೊಳಪಡುವುದು ಈ ಮಣ್ಣಿನ ವಿಶೇಷತೆ ಎನಿಸಿದೆ. ಸಂಘಟಿತರಾಗಿ ಶ್ರದ್ಧೆ ಭಕ್ತಿಯಿಂದ ದೈವದೇವರ ಕಾರ್ಯ ಮಾಡಿದಾಗ ಪ್ರತಿಫಲ ಶತಸಿದ್ಧ. ಅನಾದಿಕಾಲದಿಂದಲೂ ಆರಾಧಿಸಿಕೊಂಡು ಬಂದ ದೈವಸಾನ್ನಿಧ್ಯ ಪುನರ್ ನಿರ್ಮಾಣವಾಗುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಕ್ಷಣ. ಸಂಪಾದನೆಯ ಒಂದಂಶವನ್ನು ದೇವರ ಕಾರ್ಯಗಳಿಗೆ ಸದ್ವಿನಿಯೋಗಿಸಿ ಎಂದು ತಿಳಿಸಿದರು. ತರವಾಡು ಸಮಿತಿ ಗೌರವಾಧ್ಯಕ್ಷ ದರ್ಣಪ್ಪ ಪೂಜಾರಿ ಕಡೇಶಿವಾಲಯರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಿತಿ ಅಧ್ಯಕ್ಷ ನರೇಂದ್ರ ಪೂಜಾರಿ ಚಂದಳಿಕೆ, ಕಾರ್ಯದರ್ಶಿ ಹರೀಶ್ ಪೂಜಾರಿ ಬಾಕಿಲ, ಕುಟುಂಬದ ಹಿರಿಯರಾದ ದೇವಪ್ಪ ಪೂಜಾರಿ ಉಪಸ್ಥಿತರಿದ್ದರು.
ಕ್ಷೇತ್ರದ ದೈವಜ್ಞ ಮೋಹನ್ ಸೀತಂಗೋಳಿ ಮಾರ್ಗದರ್ಶನದಲ್ಲಿ ಮಹೇಶ್ ತಂತ್ರಿಗಳ ನೇತೃತ್ವದಲ್ಲಿ ಸುರೇಶ್ ಶಾಂತಿ ಶಿಲಾನ್ಯಾಸ ನಡೆಯಿತು. ರಾಜೇಶ್, ಲೋಕೇಶ್ ಸಹಕರಿಸಿದರು.