ಕೈ ಕೊಟ್ಟ ಮಳೆ, ಮುಂದೇನು ಎಂಬ ಆತಂಕದಲ್ಲಿ ರೈತರು…!

0

122 ವರ್ಷಗಳ ಬಳಿಕ ಆಗಸ್ಟ್’ ಅತೀ ಕಡಿಮೆ ಮಳೆ ಸುರಿದ ತಿಂಗಳು

ಬರಹ: ಸಿಶೇ ಕಜೆಮಾರ್

ಪುತ್ತೂರು: ಎಡೆಬಿಡದೆ ಮಳೆ ಸುರಿಯುತ್ತಿರಬೇಕಾದ ಈ ಕಾಲಘಟ್ಟದಲ್ಲಿ ಮುಂಗಾರು ನಾಪತ್ತೆಯಾಗಿಬಿಟ್ಟಿದೆ. ಕಳೆದ ಮೂರು ವಾರಗಳಿಂದ ಮಳೆ ಇಲ್ಲದೆ ಭೂಮಿ ಒಣಗುತ್ತಿದೆ. ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರುತ್ತಿದ್ದು ಕೆರೆ,ಬಾವಿ,ಹಳ್ಳಕೊಳ್ಳಗಳಲ್ಲಿ ತುಂಬಿಕೊಂಡಿದ್ದ ನೀರು ಪಾತಾಳಕ್ಕೆ ಇಳಿಯುತ್ತಿದೆ. ಮೋಡ ಕವಿದ ವಾತಾವರಣವಿದ್ದರೂ ಮಳೆ ಬೀಳುತ್ತಿಲ್ಲ, ಬಿಸಿಲಿನ ತಾಪವನ್ನು ಗಮನಿಸಿದರೆ ಮುಂಗಾರು ಪೂರ್ವದ ಮೇ ತಿಂಗಳ ನೆನಪಾಗುತ್ತಿದೆ. ಜುಲೈ ತಿಂಗಳ ಕೊನೆಯಲ್ಲಿ ಸುರಿದ ಮಳೆಯನ್ನು ಗಮನಿಸಿದರೆ ಈ ವರ್ಷ ಭರಪೂರ ಮಳೆಯಾಗುತ್ತದೆ ಎಂಬ ಖುಷಿಯಲ್ಲಿದ್ದ ರೈತರಿಗೆ ನಿರಾಸೆಯ ಕಾರ್ಮೋಡ ಅಡ್ಡ ಬಂದಿದೆ. ತಜ್ಞರ ಪ್ರಕಾರ 1901 ರಿಂದ ದಾಖಲಾದ ಮಾಹಿತಿ ಪ್ರಕಾರ ಅಂದರೆ ಬರೋಬ್ಬರಿ 122 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಆಗಸ್ಟ್ ತಿಂಗಳಲ್ಲಿ ಮಳೆ ಪ್ರಮಾಣ ಇಷ್ಟೊಂದು ಕಡಿಮೆಯಾಗಿದೆ ಎನ್ನಲಾಗಿದೆ. ಹೀಗಾದರೆ ಮುಂದಿನ ದಿನಗಳು ಹೇಗಿರಬಹುದು ಎಂಬ ಚಿಂತೆ ರೈತರನ್ನು ಕಾಡತೊಡಗಿದೆ.

ಮುಂದೇನು ಎಂಬ ಆತಂಕ ಹೆಚ್ಚಾಗಿದೆ…!
ಈ ವರ್ಷ ಮುಂಗಾರು ರಾಜ್ಯಕ್ಕೆ ಸರಿಯಾದ ಸಮಯದಲ್ಲಿ ಕಾಲಿಟ್ಟಿದ್ದರೂ ಎಲ್‌ನಿನೋ ಚಂಡಮಾರುತದ ಪ್ರಭಾವದಿಂದಾಗಿ ಎಲ್ಲವೂ ಅಲ್ಲೋಲ ಕಲ್ಲೋಲವಾಯಿತು. ಜೂನ್ ಎರಡನೇ ವಾರಕ್ಕೆ ಇನ್ನೇನು ಮಳೆ ಆರಂಭವಾಯಿತು ಎಂದಾಗಲೇ ಚಂಡಮಾರುತ ಮಳೆಯ ಮಾರುತದ ದಿಕ್ಕು ತಪ್ಪಿಸಿತ್ತು. ಇದರಿಂದಾಗಿ ಜೂನ್ ತಿಂಗಳು ಪೂರ್ತಿ ಸರಿಯಾಗಿ ಮಳೆ ಬರಲೇ ಇಲ್ಲ. ಮಳೆ ಇಲ್ಲ ಎಂಬ ಆತಂಕದಲ್ಲಿರುವಾಗಲೇ ಆಟಿ ತಿಂಗಳ ಆರಂಭ ಅಂದರೆ ಜುಲೈ ತಿಂಗಳ ಕೊನೆಯಲ್ಲಿ ಸುರಿದ ಮಳೆ ಪ್ರವಾಹವನ್ನೇ ಸೃಷ್ಟಿ ಮಾಡಿತ್ತು. ಆದರೆ ಈ ಮಳೆಯೂ ಹೆಚ್ಚು ದಿನ ಬೀಳಲಿಲ್ಲ. ಒಂದು ವಾರ ಅಬ್ಬರಿಸಿದ ಮಳೆರಾಯ ಬಳಿಕ ನಾಪತ್ತೆಯಾಗಿಬಿಟ್ಟ. ಈಗ ಬೇಸಿಗೆಯನ್ನು ಮೀರಿಸುವ ಬಿಸಿಲಿಗೆ ಜನರಲ್ಲಿ ಆತಂಕ ಉಂಟಾಗಿದೆ. ಮಳೆಗಾಲದಲ್ಲಿ ಹೀಗಾದರೆ ಮುಂದೆ ಬೇಸಿಗೆಯಲ್ಲಿ ಯಾವ ರೀತಿ ಇರಬಹುದು ಎಂಬ ಚಿಂತೆ ಮಡುಗಟ್ಟಿದೆ.

ಭತ್ತಕ್ಕೆ ಹೊಡೆತ, ದಿಕ್ಕು ತೋಚದಾದ ರೈತ:
ಈ ವರ್ಷ ಮಳೆ ವಿಳಂಬದಿಂದಾಗಿ ಭತ್ತ ಬೇಸಾಯವು ವಿಳಂಬಗೊಂಡಿತ್ತು. ಜುಲೈ ಕೊನೆಯಲ್ಲಿ ಸಾಕಷ್ಟು ಮಳೆಯಾಗಿದ್ದರಿಂದ ರೈತರು ಭತ್ತ ಬೇಸಾಯಕ್ಕೆ ಮುಂದಾಗಿದ್ದರು. ಇನ್ನೇನು ನೇಜಿ ಬೆಳೆದು ಹದಗೊಳ್ಳುತ್ತಿರುವ ಸಮಯದಲ್ಲಿ ಮತ್ತೆ ಮಳೆ ಕೈಕೊಟ್ಟಿದೆ. ಗದ್ದೆಯಲ್ಲಿರುವ ನೀರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಇದೆ. ಸಾಕಷ್ಟು ನೀರಿನ ವ್ಯವಸ್ಥೆ ಇರುವ ರೈತರು ಪಂಪು ಮೂಲಕ ಗದ್ದೆಗೆ ನೀರುಣಿಸುವ ಕೆಲಸ ಮಾಡುತ್ತಿದ್ದಾರೆ. ಮಳೆ ನೀರನ್ನೇ ನಂಬಿ ಬೇಸಾಯ ಮಾಡಿದ ರೈತರ ಪಾಡನ್ನು ಕೇಳುವವರೇ ಇಲ್ಲದಾಗಿದೆ. ಅನಿರೀಕ್ಷಿತವಾಗಿ ಮಳೆ ಕೈಕೊಟ್ಟಿದ್ದರಿಂದ ಭತ್ತ ಬೇಸಾಯದ ಮೇಲೆ ಮಾರಕ ಪರಿಣಾಮ ಎದುರಾಗಲಿದೆ. ಇದಲ್ಲದೆ ಒಂದು ವೇಳೆ ಅಕ್ಟೋಬರ್, ನವೆಂಬರ್ ತಿಂಗಳಿನಲ್ಲಿ ವ್ಯಾಪಕ ಮಳೆಯಾದರೆ ಭತ್ತದ ಕೊಯಿಲಿನ ಮೇಲೆ ಹೊಡೆತ ಬೀಳಲಿದೆ ಎನ್ನುತ್ತಾರೆ ರೈತರು.

ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ತಾಪಮಾನ:
ರಾಜ್ಯದಲ್ಲಿ ಆಗಸ್ಟ್ ತಿಂಗಳಲ್ಲಿ ತಾಪಮಾನ ಏರಿಕೆಯಾಗಿದ್ದು ಮಳೆಯ ಪ್ರಮಾಣ ಕಡಿಮೆಯಾಗತೊಡಗಿದೆ. ಶೇ.73 ರಷ್ಟು ಮಳೆ ಕೊರತೆಯಾಗಿದೆ. ವಾಡಿಕೆಗಿಂತಲೂ ಈ ಬಾರಿ ಮಳೆ ಪ್ರಮಾಣ ತೀರಾ ಕಡಿಮೆ ಇದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಪರಿಸ್ಥಿತಿ ಬದಲಾಗಿ ಉತ್ತಮ ಮಳೆಯಾಗುವ ನೀರಿಕ್ಷೆಯಲ್ಲಿದ್ದೇವೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 1901ರ ಬಳಿಕ ಇದೇ ವರ್ಷ ಕಡಿಮೆ ಮಳೆ 1901 ರಿಂದ ದಾಖಲಾದ ಮಾಹಿತಿ ಪ್ರಕಾರ ಇದೇ ವರ್ಷ ಅದರಲ್ಲೂ ಆಗಸ್ಟ್ ತಿಂಗಳಿನಲ್ಲಿ ಇಡೀ ದೇಶಕ್ಕೆ ಅತ್ಯಂತ ಕಡಿಮೆ ಮಳೆ ಬಿದ್ದಿದೆ. ಕಳೆದ 122 ವರ್ಷಗಳನ್ನು ಗಮನಿಸಿದರೆ ಅತ್ಯಂತ ಕಡಿಮೆ ಮಳೆಯಾದ ತಿಂಗಳು ಈ ಆಗಸ್ಟ್ ಎಂಬ ಕುಖ್ಯಾತಿಗೆ ಕಾರಣವಾಗಿದೆ. ಇತಿಹಾಸದಲ್ಲಿ ಮಾನ್ಸೂನ್ ಕೊರತೆಯ ಅತ್ಯಂತ ಕೆಟ್ಟ ತಿಂಗಳುಗಳಲ್ಲಿ ಇದು ಒಂದಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ವಾತಾವರಣದಲ್ಲಿ ವ್ಯತ್ಯಾಸ ಕಂಡುಬರಬಹುದಾಗಿದೆ ಎನ್ನುತ್ತಾರೆ ಹವಾಮಾನ ತಜ್ಞರು.

ಬೆಳೆಗೆ ಮಳೆಯೇ ಕಾರಣ, ಕೃಷಿ ಸಂಪತ್ತು ಹೆಚ್ಚಾಗಬೇಕಾದರೆ ಮಳೆ ಅನಿವಾರ್ಯ ಆದರೆ ಇಂದಿನ ದಿನಗಳಲ್ಲಿ ಮಾನವನ ವಿರುದ್ಧ ಪ್ರಕೃತಿ ಕೋಪಗೊಂಡಿದೆ. ಇದಕ್ಕೆ ಕಾರಣ ಮಾನವನೇ ಹೊರತು ಬೇರೆ ಯಾವುದೂ ಅಲ್ಲ ಇದರಿಂದಾಗಿ ಪ್ರಾಕೃತಿಕ ವಿಕೋಪ ಉಂಟಾಗುತ್ತಿದೆ. ನನ್ನ ಜೀವಿತದ ಅವಧಿಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಇಷ್ಟೊಂದು ಬಿಸಿಲು ಕಂಡಿಲ್ಲ. ಇದು ಅಪಾಯದ ಮುನ್ಸೂಚನೆ.

-ಕಡಮಜಲು ಸುಭಾಷ್ ರೈ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕರು


ಕರಾವಳಿ ಭಾಗದಲ್ಲಿ 48 ಗಂಟೆಗಳಲ್ಲಿ ಮಳೆ
ಬೆಂಗಳೂರು:ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮಂಡ್ಯ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ.ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು ಒಮ್ಮೊಮ್ಮೆ ಭಾರೀ ಮಳೆ ಹಾಗೂ ಕೆಲವು ಬಾರಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ,ಗರಿಷ್ಠ ಉಷ್ಣಾಂಶ 30 ಡಿಗ್ರಿ, ಕನಿಷ್ಟ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


121 ವರ್ಷಗಳಲ್ಲೇ ಅತಿ ಹೆಚ್ಚಿನ ಶುಷ್ಕ ಹವೆ
ಭಾರತದಲ್ಲಿ 121 ವರ್ಷಗಳಲ್ಲಿ ಕಳೆದ ಆಗಸ್ಟ್ ತಿಂಗಳು ಅತ್ಯಂತ ಹೆಚ್ಚು ಒಣ (ಶುಷ್ಕ-ತೀರಾ ಕಡಿಮೆ ಮಳೆಯೊಂದಿಗೆ ಒಣ ಹವೆ ಇರುವುದು) ಹಾಗೂ ಬಿಸಿ ಹವೆಯನ್ನು ಹೊಂದಿತ್ತು ಎಂದು ಹವಾಮಾನ ಇಲಾಖೆ ಹೇಳಿದೆ. ಆಗಸ್ಟ್ ತಿಂಗಳಲ್ಲಿ ಕಳೆದ ಏಳು ವರ್ಷದಿಂದ ಸತತವಾಗಿ ತಾಪಮಾನ ಏರಿಕೆ ಕಂಡಿತ್ತು.ಆದರೆ ಈ ವರ್ಷದ ಆಗಸ್ಟ್ ತಿಂಗಳು 121 ವರ್ಷಗಳಲ್ಲಿಯೇ ಅತ್ಯಂತ ಹೆಚ್ಚು ತಾಪಮಾನ ಹೊಂದಿತ್ತು ಎಂದು ಹವಾಮಾನ ಇಲಾಖೆ ಹೇಳಿದೆ.ಸಾಮಾನ್ಯಕ್ಕಿಂತ ಆಗಸ್ಟ್ನಲ್ಲಿ ಕಂಡು ಬಂದಿರುವ ಭಾರೀ ಒಣ ಹವೆ,ತಾಪಮಾನ, ಅನಿಶ್ಚಿತ ಮಳೆ ನಿಶ್ಚಿತವಾಗಿಯೂ ಜಾಗತಿಕ ತಾಪಮಾನ ಬದಲಾವಣೆಯ ಮುನ್ಸೂಚನೆ ಎಂದು ಅನೇಕ ಹವಾಮಾನ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ತಾಪಮಾನ 35.4 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ.ಆಗಸ್ಟ್ನಲ್ಲಿ ತೀವ್ರ ಮಳೆ ಕೊರತೆ ಕಂಡು ಬಂದಿದೆ.ಆದರೆ, ಸೆಪ್ಟೆಂಬರ್‌ನಲ್ಲಿ ಸಾಮಾನ್ಯ ಮುಂಗಾರು ನಿರೀಕ್ಷೆ ಮಾಡಬಹುದು ಎಂದು ಹವಾಮಾನ ಇಲಾಖೆ ಹೇಳಿದೆಯಾದರೂ, ತಾಪಮಾನ ಸಾಮಾನ್ಯಕ್ಕಿಂತಲೂ ಹೆಚ್ಚು ಇರಲಿದೆ ಎಂದೂ ಹೇಳಿದೆ.
ಸೆಪ್ಟೆಂಬರ್‌ನಲ್ಲಿ ದೇಶದ ಈಶಾನ್ಯ ಹಾಗೂ ಹಿಮಾಲಯ ತಪ್ಪಲು ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ ಸುರಿಯಬಹುದು, ಉಳಿದ ಭಾಗಗಳಲ್ಲಿ ಸಾಮಾನ್ಯ, ಕೆಲವು ಕಡೆ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

LEAVE A REPLY

Please enter your comment!
Please enter your name here