ಬಿಜೆಪಿಯವರು ಮುಸ್ಲಿಂ ಮಕ್ಕಳ ವಿದ್ಯಾಭ್ಯಾಸವನ್ನು ತಡೆಯಲು ಸ್ಕಾಲರ್ಶಿಪ್ ರದ್ದು ಮಾಡಿದ್ದರು: ಸಚಿವ ಝಮೀರ್ ಆಹ್ಮದ್
ಪುತ್ತೂರು: ಅಲ್ಪಸಂಖ್ಯಾತ ಮಕ್ಕಳು ವಿದ್ಯೆ ಕಲಿಯಬಾರದು, ಅವರು ವಿದ್ಯೆಯಿಂದ ವಂಚಿತರಾಗಬೇಕು ಎಂಬ ಏಕೈಕ ಉದ್ದೇಶದಿಂದ ಕಳೆದ ಅವಧಿಯ ಬಿಜೆಪಿ ಸರಕಾರ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ನೀಡುತ್ತಿದ್ದ ಸ್ಕಾಲರ್ ಶಿಪ್ ರದ್ದು ಮಾಡಿದ್ದರು. ಆ ಮೂಲಕ ವಿದ್ಯೆಯ ಹೆಸರಿನಲ್ಲೂ ಕೋಮುವಾದ ಮಾಡಿದ್ದರು ಎಂದು ರಾಜ್ಯ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವರಾದ ಝಮೀರ್ ಅಹ್ಮದ್ ಹೇಳಿದರು.
ಅವರು ಇಡ್ಕಿದು ಗ್ರಾಮದ ಮಿತ್ತೂರು ದಾರುಲ್ ಇರ್ಷಾದ್ ಸಂಸ್ಥೆಯಲ್ಲಿ ಪ್ರಧಾನಮಂತ್ರಿ ಜನವಿಕಾಸ ಯೋಜನೆಯಡಿ ನಿರ್ಮಿಸಲಾದ ಪ್ರೌಢ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಇಲ್ಲಿ ನಿರ್ಮಾಣವಾದ ಶಾಲೆ ಕೇಂದ್ರ ಸರಕಾರದ ಅನುದಾನದಿಂದ ಮಾತ್ರ ನಿರ್ಮಾಣವಾಗಿದ್ದಲ್ಲ, ಇದರಲ್ಲಿ ರಾಜ್ಯ ಸರಕಾರದ ಅನುದಾನವೂ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಜನ ನೆಮ್ಮದಿಯಿಂದ ಇದ್ದಾರೆ. ಬಿಜೆಪಿಯ ಕೋಮುವಾದಕ್ಕೆ ನಾವು ಬ್ರೇಕ್ ಹಾಕಿದ್ದೇವೆ ಎಂದು ಹೇಳಿದರು. ನಾವು ನಮ್ಮ ಮಕ್ಕಳಿಗೆ ಮದ್ರಸದಲ್ಲಿ ಸೌಹಾರ್ದತೆಯ ಪಾಠವನ್ನು ಮಾಡುತ್ತೇವೆಯೇ ಹೊರತು ಕೋಮುವಾದವನ್ನು ಕಲಿಸುತ್ತಿಲ್ಲ, ಇಸ್ಲಾಂ ಧರ್ಮದಲ್ಲಿ ಕೋಮುವಾದ, ಜಾತಿ ಪದ್ದತಿಗೆ ಅವಕಾಶವೇ ಇಲ್ಲ. ನಮ್ಮದೇನಿದ್ದರೂ ದೇಶಪ್ರೇಮದ ಶಿಕ್ಷಣವಾಗಿದೆ, ದೇಶಪ್ರೇಮದ ಸಿದ್ದಾಂತವಾಗಿದೆ. ನಮ್ಮ ಸೌಹಾರ್ದತೆಯ ಸಿದ್ದಾಂತವನ್ನು ನಾವು ಮುಂದೆಯೋ ಮುಂದುವರೆಸುತ್ತೇನೆ ಎಂದು ಹೇಳಿದರು. ಸಿದ್ದರಾಮಯ್ಯ ಅವರ ಸರಕಾರದಲ್ಲಿ ಎಲ್ಲರನ್ನೂ ಒಂದೇ ಸಮಾನಾಗಿ ಕಾಣಲಾಗುತ್ತಿದೆ. ಯಾವ ಧರ್ಮದವರಿಗೂ ಅನ್ಯಾಯ ಮಾಡುತ್ತಿಲ್ಲ, ಯಾವ ಜಾತಿಯವರನ್ನು ಕಡೆಗಣಿಸುತ್ತಿಲ್ಲ, ಜನ ಮೆಚ್ಚಿದ ಸರಕಾರವನ್ನು ಕಾಂಗ್ರೆಸ್ ನೀಡುತ್ತಿದೆ ಎಂದು ಹೇಳಿದರು.
ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ
ನಾವು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ವಿದ್ಯೆ ಇಲ್ಲದೇ ಇದ್ದರೆ ಮುಂದೆ ಏನೂ ಮಾಡಲು ಸಾಧ್ಯವಿಲ್ಲ. ಶಿಕ್ಷಣಕ್ಕಾಗಿ ನಾವು ಒಗ್ಗೂಡಬೇಕು, ಯಾವುದೇ ಒಂದು ಮಗು ಶಿಕ್ಷಣದಿಂದ ವಂಚಿತರಾಗಬಾರದು. ಆ ರೀತಿ ಆಗದಂತೆ ಎಚ್ಚರಿಕೆಯಿಂದ ಇರಬೇಕಾದದ್ದು ಪೋಷಕರ ಜವಾಬ್ದಾರಿಯಾಗಿದೆ ಎಂದು ಸಚಿವರು ಹೇಳಿದರು. ಮಿತ್ತೂರು ದಾರುಲ್ ಇರ್ಷಾದ್ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿರುವುದು ಅಭಿನಂದನೀಯವಾಗಿದೆ. ಈ ಸಂಸ್ಥೆಗೆ ಸರಕಾರದಿಂದ ದೊರೆಯುವ ಎಲ್ಲಾ ಸಹಾಯ ಧನವನ್ನು ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಪುತ್ತೂರು ಶಾಸಕ ಅಶೋಕ್ ರೈ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕರ್ನಾಟಕ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್, ಮಾಜಿ ಸಚಿವ ಬಿ ರಮಾನಾಥ ರೈ, ಮಾಜಿ ಜಿ.ಪಂ ಸದಸ್ಯ ಎಂ ಎಸ್ ಮಹಮ್ಮದ್ , ಪುತ್ತೂರು ಸಹಾಯಕ ಕಮಿಷನರ್ ಗಿರೀಶ್ ನಂದನ್, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ.ರಾಜಾರಾಂ ಕೆ ಬಿ. ಜಿಪಂ ಸಿಇಒ ಆನಂದ, ಟಿಎಂ ಶಹೀದ್ ಸುಳ್ಯ, ವಕ್ಫ್ ಬೋರ್ಡು ಮಾಜಿ ಅಧ್ಯಕ್ಷ ಶಾಫಿ ಮುಸ್ಲಿಯಾರ್ ಸಅದಿ, ಮಾಣಿ ಉಸ್ತಾದ್ ಸಹಿತ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.