ಕುರ್ಚಿ ಅಲುಗಾಡುವ ಭಯದಿಂದ ಮುಖ್ಯಮಂತ್ರಿಗಳು ಹೊರಬರುತ್ತಿಲ್ಲ- ಸಂಜೀವ ಮಠಂದೂರು
ಕಾಂಗ್ರೆಸ್ ರದ್ದು ಮಾಡುವ ಕೆಲಸ ಮಾತ್ರ ಮಾಡುತ್ತಿದೆ – ಸಾಜ ರಾಧಾಕೃಷ್ಣ ಆಳ್ವ
ಪುತ್ತೂರು: ಬಿಜೆಪಿ ಅಧಿಕಾರ ಇದ್ದರೂ, ಇಲ್ಲದಿದ್ದರು ಪ್ರಜಾಪ್ರಭಾರ, ರೈತ ಪರವಾಗಿ ಇರುತ್ತದೆ. ಹಿಂದುತ್ವದ ವಿಚಾರ, ದೇಶದ ವಿಚಾರ ಬಂದಾಗ ಯಾವುದೇ ಕಾಂಪ್ರಮೈಸ್ ಇಲ್ಲ. ಆದರೆ ಬರವನ್ನು ಹೇಗೆ ನಿರ್ವಾಹಣೆ ಮಾಡುವುದು ಎಂಬ ಸಾಮಾನ್ಯ ಜ್ಞಾನವೂ ಇಲ್ಲದ ಕಾಂಗ್ರೆಸ್ ಮುಗ್ಧ ಮತದಾರರನ್ನು ವಂಚಿಸಿದ್ದಾರೆ. ಈ ಕುರಿತು ಮತದಾರರನ್ನು ಜಾಗೃತಿಗೊಳಿಸುವ ಹೋರಾಟ ಕರಾವಳಿಯಿಂದ ಪ್ರಾರಂಭವಾಗಿದೆ ಎಂದು ಬಿಜೆಪಿ ರೈತ ಮೋರ್ಚಾದ ರಾಜ್ಯ ಕಾರ್ಯದರ್ಶಿ ಡಾ.ನವೀನ್ ಅವರು ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದರು.
ರಾಜ್ಯ ಸರಕಾರದ ರೈತ ವಿರೋಧಿ, ಜನವಿರೋಧಿ ನೀತಿ ಮಾಡುತ್ತಿದೆ. ಹಿಂದೆ ಬಿಜೆಪಿ ಸರಕಾರ ಜಾರಿಗೆ ತಂದ ಹಲವಾರು ರೈತಪರ ಯೋಜನೆಗಳನ್ನು ರದ್ದು ಮಾಡುವ ಮೂಲಕ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿ ಪುತ್ತೂರು ತಾಲೂಕು ಆಡಳಿತ ಮಂಗಲ್ ಪಾಂಡೆ ಚೌಕಿಯ ಬಳಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. 2014 ರಲ್ಲಿ ಕಾಂಗ್ರೆಸ್ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ರೂ. 23 ಸಾವಿರ ಕೋಟಿ ನೀಡಿತ್ತು. ಆದರೆ ನಮ್ಮ ಬಿಜೆಪಿ ಸರಕಾರ ಬಜೆಟ್‌ನಲ್ಲಿ ರೂ. 1 ಕೋಟಿ ನೀಡುವ ಮೂಲಕ ರೈತರ ಕಲ್ಯಾಣ ಕಾರ್ಯಕ್ರಮ ಹಾಕಿಕೊಂಡಿದೆ. ಇವತ್ತು ರಾಜ್ಯ ಕಾಂಗ್ರೆಸ್ ಸರಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ. ರಾಜ್ಯದಲ್ಲಿ ಬರವಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಅಧಿಕಾರಿಗಳ ಮೀಟಿಂಗ್ ಕರೆದು ವಾರ್ನಿಂಗ್ ಮಾಡುವುದು, ದೌರ್ಜನ್ಯ ಮಾಡುವುದು ಮತ್ತು ಆದೇಶ ನೀಡುವುದು ಮಾಡುವುದನ್ನು ಬಿಟ್ಟು ತಾಕತ್ತಿದ್ದರೆ ಜಿಲ್ಲಾವಾರು ಮಂತ್ರಿಗಳನ್ನು ವಿನಿಯೋಗಿಸಿ ಬರ ಪರಿಹಾರದ ಅಧ್ಯಯನ ಮಾಡಿಸಿ. ಆದರೆ ಮುಖ್ಯಮಂತ್ರಿಗಳಿಗ ಬರವನ್ನು ಹೇಗೆ ನಿರ್ವಾಹಣೆ ಮಾಡುವುದು ಎಂಬ ಸಾಮಾನ್ಯ ಜ್ಞಾನವೂ ಇಲ್ಲ ಎಂದು ಸಾಮಾನ್ಯ ಮತದಾರರು ಆಡಿಕೊಳ್ಳುತ್ತಿದ್ದರೆ. ರಾಜ್ಯದಲ್ಲಿ ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಸಿದ್ದರಾಮಯ್ಯ ಅವರೇ ಹೇಳಿಕೊಂಡಿದ್ದಾರೆ. ಆದರೂ ಅವರಿಗೆ ಸರಿಯಾದ ಪರಿಹಾರ ನೀಡಲು ಇನ್ನೂ ಆಗಿಲ್ಲ. ನಮ್ಮ ಸರಕಾರವಿದ್ದಾಗ ಪುತ್ತೂರಿನಿಂದ ಜಮ್ಮು ಕಾಶ್ಮಿರಕ್ಕೂ ಮಾರಾಟ ಮಾಡುವ ಅವಕಾಶವನ್ನು ನಮ್ಮ ಸರಕಾರ ಮಾಡಿಕೊಟ್ಟಿತ್ತು. ಆದರೆ ಕಾಂಗ್ರೆಸ್ ಸರಕಾರ ಎಪಿಎಂಸಿ ಕಾಯ್ದೆಯನ್ನು ತೆಗೆದು ಹಾಕಿ ಬಿಜೆಪಿಯ ಮೇಲೆ ದ್ವೇಷ ಸಾಧಿಸುವ ನಿಟ್ಟಿನಲ್ಲಿ ರೈತರ ಮೇಲೆ ಅನ್ಯಾಯ ಮಾಡುತ್ತಿದೆ. ಕಾಂಗ್ರೆಸ್ ಸರಕಾರ ರೈತರು ತಾವು ಮಾರಾಟ ಮಾಡುವ ಭೂಮಿಯ ಹಕ್ಕನ್ನು ಕಿತ್ತುಕೊಂಡು ಅವರಿಗೆ ಅನ್ಯಾಯ ಮಾಡುವ ಕೆಲಸ ಮಾಡಿದೆ. ಹೀಗೆ ಬಿಜೆಪಿ ಸರಕಾರ ತಂದ ಎಲ್ಲಾ ಯೋಜನೆಗಳನ್ನು ರದ್ದು ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದೆ. ನಮ್ಮ ಸರಕಾರವಿದ್ದಾಗ 1.5 ಕೋಟಿ ರೈತ ಮಹಿಳಾ ಕಾರ್ಮಿಕರಿಗೆ ತಿಂಗಳಿಗೆ ರೂ 500 ಕೊಡುವ ಯೋಜನೆಯನ್ನು ಜಾರಿಗೆ ತಂದಾಗ ಅದನ್ನು ಕಾಂಗ್ರೆಸ್ ಸರಕಾರ ತಡೆ ಮಾಡಿದೆ. ಹೀಗೆ ಕಾಂಗ್ರೆಸ್ ಸರಕಾರದ ಅನೈತಿಕತೆ, ಭ್ರಷ್ಟಾಚಾರ ಪಟ್ಟಿ ಮಾಡಿದರೆ ಹಲವು ಇದೆ. ಕಾಂಗ್ರೆಸ್ ಸರಕಾರ ಬಂದು 107 ದಿನ ಮಾತ್ರ ಆಗಿದೆ. ಅವರ ಯೋಗ್ಯತೆ ಜನರಿಗೆ ತಿಳಿಯುತ್ತಿದೆ. ಅನೇಕ ರೈತರ ಅನ್ಯಾಯದ ಯೋಜನೆ ತಂದಿದ್ದಾರೆ. ಮುಗ್ದ ಮತದಾರರನ್ನು ವಂಚಿಸುವ ಕೆಲಸ ಮಾಡುತ್ತಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಮತದಾರರು ಜಾಗೃತ ಮತದಾರರಿದ್ದಾರೆ. ಕರ್ನಾಟಕದಲ್ಲಿ ಈ ಕುರಿತು ಜಾಗೃತಿ ಮಾಡುವ ಕೆಲಸ ಕರಾವಳಿಯಿಂದ ಪ್ರಾರಂಭ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದರು.
ಕುರ್ಚಿ ಅಲುಗಾಡುವ ಭಯದಿಂದ ಮುಖ್ಯಮಂತ್ರಿಗಳು ಹೊರಬರುತ್ತಿಲ್ಲ:
ಮಾಜಿ ಶಾಸಕ ಸಂಜೀವ ಮಂಠಂದೂರು ಅವರು ಮಾತನಾಡಿ ಕರ್ನಾಟಕದ 4 ಕೋಟಿ ರೈತರ ಪರವಾಗಿ ಬಿಜೆಪಿ ಧ್ವನಿ ಎತ್ತಿ ಪುತ್ತೂರು ನಗರದಲ್ಲಿ ಮತ್ತೊಮ್ಮೆ ರೈತರ ಪರವಾಗಿ ಬಿಜೆಪಿ ಇದೆ ಎಂದು ತೋರಿಸಿಕೊಡುವ ಕೆಲಸ ಆಗಿದೆ. ಇವತ್ತು ಕರ್ನಾಟಕದಲ್ಲಿ ಕಿವುಡು, ಕುರುಡ, ಮೂಗ, ಕುಂಟ ಸರಕಾರವಿದೆ. 190 ತಾಲೂಕಿನಲ್ಲಿ ಬರವಿದ್ದು, 170 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬರ ಪೀಡಿತ ಪ್ರದೇಶಗಳ ಅಧ್ಯಯನವನ್ನು ಮಾಡಬೇಕಾದ ಸಿದ್ದರಾಮಯ್ಯ ಕುರ್ಚಿ ಬಿಟ್ಟು ವಿಧಾನ ಸೌಧ ದಿಂದ ಹೊರ ಬರುತ್ತಿಲ್ಲ. ಯಾಕೆಂದರೆ ಕುರ್ಚಿಯ ಒಂದು ಕಾಲು ಡಿ.ಕೆ.ಶಿವಕುಮಾರ್, ಇನ್ನೊಂದು ಕಾಲು ಬಿ.ಕೆ.ಹರಿಪ್ರಸಾದ್, ಮೊತ್ತೊಂದನ್ನು ಪರಮೇಶ್ವರ್, ಮತ್ತೊಂದನ್ನು ಮುನಿಯಪ್ಪರವರು ಹಿಡಿದುಕೊಂಡಿದ್ದಾರೆ. ಹಾಗಾಗಿ ನಾಲ್ಕು ಕಾಲುಗಳು ಯಾವಾಗ ಅಲುಗಾಡುತ್ತದೋ ಎಂಬ ಭಯದಿಂದ ಮುಖ್ಯ ಮಂತ್ರಿಗಳು ಕುರ್ಚಿ ಬಿಟ್ಟು ಏಳುತ್ತಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದಾಗಲೆಲ್ಲಾ ರೈತರು ಆತ್ಮಹತ್ಯೆ ಆಗುತ್ತಿವೆ. ಕಾಂಗ್ರೆಸ್ ಅಂದರೆ ಬರ, ಬಿಜೆಪಿ ಅಂದರೆ ಸಮೃದ್ಧಿ ಎಂಬುದು ದೃಢವಾಗಿದೆ. ಬಿಜೆಪಿ ಯಡಿಯೂರಪ್ಪ ಸರಕಾರದಲ್ಲಿ ಈ ರಾಜ್ಯ ರೈತಪರ, ಸಮೃದ್ಧಿ, ನೆಮ್ಮದಿ ಕಂಡಿತ್ತು. ರೈತರ ಹಿತ ಕಾಪಾಡಲು ಅನೇಕ ಯೋಜನೆಗಳನ್ನು ತರಲಾಯಿತು. ಆದರೆ ಆ ಯೋಜನೆಗಳನ್ನೆಲ್ಲ ಕಾಂಗ್ರೆಸ್ ಸರಕಾರ ರದ್ದು ಮಾಡುವ ಮೂಲಕ ಕಾಂಗ್ರೆಸ್ ರೈತ ವಿರೋಧಿ ನೀತಿ ಅನುಸರಿಸಿದೆ ಎಂದ ಅವರು ಕಾಂಗ್ರೆಸ್ ನೀತಿಯನ್ನು ವಿರೋಧಿಸಿ ಹಳ್ಳಿ ಹಳ್ಳಿಯಲ್ಲಿ ಪ್ರತಿಭಟನೆ ನಡೆಯಲಿದೆ ಎಂದರು.
ಗ್ಯಾರೆಂಟಿ ಕಾಂಗ್ರೆಸ್‌ಗೆ ಮಾತ್ರ:
ಕಾಂಗ್ರೆಸ್‌ನ ಭಾಗ್ಯಗಳು, ಗ್ಯಾರೆಂಟಿಗಳು ಕಾಂಗ್ರೆಸ್‌ಗೆ ಮಾತ್ರ. ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ರೈತ ವಿದ್ಯಾನಿಧಿ ಯೋಜನೆ, ಭೂ ಸಿರಿ ಯೋಜನೆ, ಶ್ರಮ ಶಕ್ತಿ ಯೋಜನೆ, ರೈತ ಸಂಪದ ಯೋಜನೆ, ಎಪಿಎಂಸಿ ಕಾನೂನು, ಕೃಷಿ ಭೂಮಿ ಮಾರಾಟ ಕಾನೂನು, ಜಿಲ್ಲೆಗೊಂದು ಗೋ ಶಾಲೆ ಯೋಜನೆ, ಕ್ಷೀರ ಸಮೃದ್ಧಿ, ಸಹಕಾರ ಬ್ಯಾಂಕ್ ಎಲ್ಲಾ ಯೋಜನೆಗಳನ್ನು ಕಾಂಗ್ರೆಸ್ ರದ್ದು ಮಾಡುವ ಮೂಲಕ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಹೇಳಿದಂತೆ ಹಾಲಿಗೆ ಲೀಟರ್‌ಗೆ ರೂ. 5 ರಿಂದ 7 ಸಹಾಯಧನ್ನು ಕಳೆದ ನಾಲ್ಕು ತಿಂಗಳಿನಿಂದ ರೈತರ ಖಾತೆಗೆ ಇನ್ನೂ ಜಮೆ ಮಾಡಿಲ್ಲ. ಶೂನ್ಯ ಬಡ್ಡಿ ಧರದಲ್ಲಿ ರೂ. 5ಲಕ್ಷ ಸಾಲವನ್ನು ಸಹಕಾರಿ ಸಂಘಗಳಿಗೆ ನೀಡುವ ಭರವಸೆ ಈಡೇರಿಲ್ಲ ಎಂದು ಹೇಳಿದ ಸಂಜೀವ ಮಠಂದೂರು ಕಾಂಗ್ರೆಸ್ ಗ್ಯಾರೆಂಟಿ ಕಾಂಗ್ರೆಸ್‌ಗೆ ಮಾತ್ರ ಎಂದರು.
ಕಾಂಗ್ರೆಸ್ ರದ್ದು ಮಾಡುವ ಕೆಲಸ ಮಾತ್ರ ಮಾಡುತ್ತಿದೆ:
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯ ಕಾಂಗ್ರೆಸ್ ಅಧಿಕಾರಕ್ಕೆ ಬಂದು 107 ದಿವಸ ಆಗಿದೆ. ಸಾಧನೆ ಹೇಳಿ ಡಂಗೂರ ಸಾಗಿಸುವ ಕಾಂಗ್ರೆಸ್ ಯೋಜನೆಗಳನ್ನು ಮನೆಯಿಂದ ಕೊಟ್ಟಂತೆ ಮಾತನಾಡುತ್ತಾರೆ. ಕೇಂದ್ರ ಸರಕಾರದ ಎಲ್ಲಾ ಯೋಜನೆ ಪಡೆದು, ರಾಜ್ಯ ಸರಕಾರದ ಗ್ಯಾರೆಂಟಿ ಕೊಟ್ಟು ಖಜಾನೆ ಕಾಲಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸರಕಾರ ಇರುವಾಗ ಜಾರಿಯಲ್ಲಿದ್ದ ರೈತರಿಗೆ ಪೂರಕ ಕಾರ್ಯಕ್ರಮ ರದ್ದು ಮಾಡಿದೆ. ಒಟ್ಟಿನಲ್ಲಿ ಕಾಂಗ್ರೆಸ್ ರದ್ದು ಮಾಡುವ ಕೆಲಸ ಮಾತ್ರ ಮಾಡುತ್ತಿದೆ ಎಂದರು. ಪ್ರತಿಭಟನೆಯಲ್ಲಿ ರಾಜ್ಯ ಸರಕಾರಕ್ಕೆ ಧಿಕ್ಕಾರ ಘೋಷಣೆ ಕೂಗಲಾಯಿತು. ಉಷಾ ಮುಳಿಯ ಪ್ರಾರ್ಥಿಸಿದರು. ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪುನೀತ್ ಮಾಡತ್ತಾರು ಅವರು ಸಹಾಯಕ ಕಮೀಷನರ್ ಅವರಿಗೆ ನೀಡುವ ಮನವಿ ಪತ್ರವನ್ನು ಸಭೆಗೆ ತಿಳಿಸಿದರು. ಬಿಜೆಪಿ ರೈತ ಮೋರ್ಚಾದ ಮಂಡಲದ ಅಧ್ಯಕ್ಷ ಸುರೇಶ್ ಕಣ್ಣರಾಯ ಸ್ವಾಗತಿಸಿದರು. ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಜಿಲ್ಲಾ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಹಿರಿಯರಾದ ಎಸ್.ಅಪ್ಪಯ್ಯ ಮಣಿಯಾಣಿ, ಜಿ.ಪಂ ಮಾಜಿ ಅಧ್ಯಕ್ಷ ಅಶಾ ತಿಮ್ಮಪ್ಪ ಗೌಡ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಜಿಲ್ಲಾ ಹಿಂದುಳಿದ ಮೋರ್ಚಾ ಅಧ್ಯಕ್ಷ ಆರ್ ಸಿ ನಾರಾಯಣ, ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಭಟ್ ಕೆದಿಲ, ರೈತ ಮೋರ್ಚಾದ ವಸಂತ್, ಮಹೇಶ್ ಮೇನಾಲ ಪ್ರತಿಭಟನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರತಿಭಟನೆಯ ಬಳಿಕ ಸಹಾಯಕ ಕಮೀಷನರ್‌ಗೆ ಮನವಿ ಸಲ್ಲಿಸಲಾಯಿತು.
ನೆಲ್ಲಿಕಟ್ಟೆಯಿಂದ ಪಾದಾಯಾತ್ರೆ:
ಬೆಳಿಗ್ಗೆ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿಯಿಂದ ಪ್ರತಿಭಟನಾ ಮೆರವಣಿಗೆಯು ತಾಲೂಕು ಆಡಳಿತ ಸೌಧದ ಬಳಿಯ ಮಂಗಲ್‌ಪಾಂಡೆ ಚೌಕಿಯ ಬಳಿ ಸೇರಿ ಅಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭ ಪದ್ಮಶ್ರೀ ಸೋಲಾರ್ ಸಿಸ್ಟಮ್ಸ್‌ನ ಮಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಜಯಶ್ರೀ ಎಸ್ ಶೆಟ್ಟಿ, ಯುವರಾಜ್ ಪೆರಿಯತ್ತೋಡಿ, ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಜಿ.ಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪುಡಾ ಮಾಜಿ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್, ಸುರೇಶ್ ಆಳ್ವ, ಮುಕುಂದ ಬಜತ್ತೂರು, ಉಮೇಶ್ ಶೆಣೈ, ಮಂಡಲದ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ನನ್ಯ ಅಚ್ಚುತ ಮೂಡೆತ್ತಾಯ, ನವೀನ್ ಪಡ್ನೂರು, ವಿಶ್ವೇಶ್ವರ ಭಟ್ ಬಂಗಾರಡ್ಕ, ಜಯರಾಮ ಪೂಜಾರಿ, ಸುನಿಲ್ ದಡ್ಡು, ಸಹಿತ ಹಲವಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಭ್ರಷ್ಟಾಚಾರದಿಂದ ವಿದ್ಯುತ್ ಖರೀದಿ
ಕಾಂಗ್ರೆಸ್ ಸರಕಾರ ಕರ್ನಾಟಕವನ್ನು ಕತ್ತಲೆಯಲ್ಲಿಟ್ಟಿದೆ. ಆಗಸ್ಟ್ ತಿಂಗಳಲ್ಲಿ ಕರ್ನಾಟಕದಲ್ಲಿ ಇತಿಹಾಸದಲ್ಲೇ 14,954 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಬಂದಿತ್ತು. ವಿದ್ಯುತ್ ಅಭಾವವನ್ನು ನಿಭಾಯಿಸಲು ಕಾಂಗ್ರೆಸ್ ವಿದ್ಯುತ್ ಖರೀದಿಯೊಂದಿಗೆ ಭ್ರಷ್ಟಾಚಾರವನ್ನು ಆರಂಭಿಸಿತು. ಈ ಸರಕಾರ ಮೊದಲೇ ಯೋಚನೆ ಮಾಡಿದಂತೆ ಖಾಸಗಿಯವರಿಂದ ರೂ. 4 ರಿಂದ 5 ರಂತೆ ಸಿಗುವ ವಿದ್ಯುತ್ ಅನ್ನು ರೂ. 8 ರಿಂದ 9 ಖರೀದಿ ಮಾಡಿ ಭ್ರಷ್ಟಾಚಾರ ಮಾಡುತ್ತಿದೆ. ಕರ್ನಾಟಕದ ಜನರನ್ನು ಶೋಷಣೆ ಮಾಡುತ್ತಿದೆ. ರೈತರ ಕೃಷಿ ಸಾಲಗಳ ಬಗ್ಗೆ ಮಾಡಿದ ಘೋಷಣೆ ಇನ್ನೂ ಜಾರಿಯಾಗಿಲ್ಲ. ಕರ್ನಾಟಕ ಜನರನ್ನು ಕತ್ತಲೆಯಲ್ಲಿ ಹಾಕಿದ ಕಾಂಗ್ರೆಸ್‌ಗೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.