ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎನ್.ಸುಧಾಕರ್ ಶೆಟ್ಟಿಯವರಿಗೆ ನುಡಿನಮನ

0

ಧೈರ್ಯದ ಕಾರ್ಯಕ್ಕೆ ಸುಧಾಕರ್ ಶೆಟ್ಟಿಯವರನ್ನು ಮೆಚ್ಚಲೇ ಬೇಕು-ಕೇಶವಪ್ರಸಾದ್ ಮುಳಿಯ
ಪುತ್ತೂರು:ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಸುಧಾಕರ ಶೆಟ್ಟಿ ಅವರಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ನುಡಿನಮನ ಕಾರ್ಯಕ್ರಮ ಸೆ.15ರಂದು ದೇವಳದ ನಟರಾಜ ವೇದಿಕೆಯಲ್ಲಿ ನಡೆಯಿತು. ಆರಂಭದಲ್ಲಿ ಸುಧಾಕರ್ ಶೆಟ್ಟಿಯವರ ಭಾವಚಿತ್ರದ ಎದುರು ದೀಪ ಪ್ರಜ್ವಲಿಸಿ ಪುಷ್ಪಾರ್ಚನೆ ಮಾಡಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಧೈರ್ಯದ ಕಾರ್ಯಕ್ಕೆ ಸುಧಾಕರ್ ಶೆಟ್ಟಿಯವರನ್ನು ಮೆಚ್ಚಲೇ ಬೇಕು:
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ದೇವಳದ ಯಾವುದೇ ಅಭಿವೃದ್ಧಿ ಕಾರ್ಯ ನಡೆಸಲು ಇಲಾಖೆಯಿಂದ ಅಪ್ರೂವಲ್ ಪಡೆಯುವುದೇ ಬಹಳ ಕಷ್ಟದ ಕೆಲಸ.ಆದರೆ ಸುಧಾಕರ್ ಶೆಟ್ಟಿಯವರು ಅಭಿವೃದ್ಧಿ ಕಾರ್ಯದ ಪ್ರಸ್ತಾವನೆ ಕಳುಹಿಸಿ ಅದರ ಅಪ್ರೂವಲ್ ಬರಲು ಕಾಯದೆ ತಮ್ಮ ಕೆಲಸ ಮುಂದುವರಿಸುತ್ತಿದ್ದರು.ಇಂತಹ ಅವರ ಧೈರ್ಯದ ಕೆಲಸ ಮೆಚ್ಚಲೇ ಬೇಕು. ಅವರ ಅವಧಿಯ ಬಳಿಕ ದೇವಸ್ಥಾನಕ್ಕೆ ಬಂದಾಗಲೆಲ್ಲ ಒಂದಷ್ಟು ವಿಚಾರ ನಮ್ಮಲ್ಲಿ ಹೇಳಿಕೊಳ್ಳುತ್ತಿದ್ದರು.ಇವತ್ತು ಅವರ ಹಾರೈಕೆಯಂತೆ ಅನ್ನಛತ್ರದ ಕೆಲಸ ಭರದಿಂದ ನಡೆಯುತ್ತಿದೆ.ಅವರಿಗೆ ದೇವರು ಚಿರಶಾಂತಿ ಕರುಣಿಸಲಿ ಎಂದರು.
ಡಿಸಿಪ್ಲಿನ್ ಉಳಿಸಿಕೊಂಡವರು:
ಉಪನ್ಯಾಸಕ ಡಾ.ರಾಜೇಶ್ ಬೆಜ್ಜಂಗಳ ಅವರು ಮಾತನಾಡಿ ವ್ಯಕ್ತಿಯು ಜನರ ಮನದಲ್ಲಿ ಉಳಿಯುವುದು ಕೊನೆಗೆ ಮಾತಿನ ಮೂಲಕ ಮಾತ್ರ.ಸುಧಾಕರ್ ಶೆಟ್ಟಿಯವರ ಗುಣ ಆದರ್ಶ ಪ್ರಾಯರು.ಯಾಕೆಂದರೆ ಡಿಸಿಪ್ಲಿನ್ ಮಾಡುವುದು ಸುಲಭ.ಅದನ್ನು ಉಳಿಸಿಕೊಳ್ಳುವುದು ಕಷ್ಟ.ಆದರೆ ಸುಧಾಕರ್ ಶೆಟ್ಟಿಯವರು ಅದನ್ನು ಉಳಿಸಿಕೊಂಡಿದ್ದಾರೆ.ಹಲವು ಯೋಚನೆಗಳು ಇದ್ದರೂ ಎಲ್ಲವನ್ನು ಸಾಧಿಸಲು ಕಷ್ಟ.ಆದರೆ ಸಾಧ್ಯವಾದಷ್ಟನ್ನು ಮಾಡಿದ ಅವರ ಪ್ರಯತ್ನ ಶ್ಲಾಘನೀಯ ಎಂದರು.

ಸಣ್ಣ ವಿಚಾರಕ್ಕೂ ಪ್ರಾಧಾನ್ಯತೆ ಕೊಟ್ಟವರು:
ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರು ಮಾತನಾಡಿ ರಾಜಗೋಪುರ, ಸ್ವರ್ಣಮಯ ಧ್ವಜಸ್ತಂಭದ ದೊಡ್ಡ ದೊಡ್ಡ ಅಭಿವೃದ್ಧಿ ಕಾರ್ಯಕ್ಕೆ ಪ್ರಾಧಾನ್ಯತೆ ನೀಡಿದ್ದ ಸುಧಾಕರ್ ಶೆಟ್ಟಿಯವರು ಸಣ್ಣ ಸಣ್ಣ ವಿಚಾರಕ್ಕೂ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದಾರೆ.ದೇವಳದ ಒಳಗೆ ಕಾರ್ತಿಕ ಪೂಜೆಗೆ ಧಳಿ ಹಾಕುವ ಸಂಪ್ರದಾಯ ಪುನರಾರಂಭಿಸಿದ್ದರು.ಭಕ್ತರಿಗೆ ಸೇವಾ ಸಂಕಲ್ಪ ಆರಂಭಿಸುವ ಮೂಲಕ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.ಅವರು ರಾಜಕೀಯ ವ್ಯಕ್ತಿಗಿಂತ ಅವರು ಧಾರ್ಮಿಕ ವ್ಯಕ್ತಿಯಾಗಿ ಕಂಡುಕೊಂಡರು ಎಂದರು.

ದೇವಸ್ಥಾನದ ಫಂಡ್ ತೆಗೆಯದೆ ರಾಜಗೋಪುರ ನಿರ್ಮಿಸಿದ್ದಾರೆ:
ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಜಾನು ನಾಯ್ಕ ಅವರು ಮಾತನಾಡಿ ಸುಧಾಕರ್ ಶೆಟ್ಟಿಯವರ ದೈವ ಭಕ್ತಿ ಅಪಾರ.ಅವರು ಎಲ್ಲರೊಂದಿಗಿನ ಹೊಂದಾಣಿಕೆ, ಸಿಬ್ಬಂದಿಗಳೊಂದಿಗಿನ ಸರಳತೆ ಎಲ್ಲರಿಗೂ ಹಿಡಿಸಿದೆ.ನನಗೆ ಎಸ್.ಐ ಆಗಬೇಕೆಂಬ ಮನಸ್ಸಿತ್ತು.ರಾಜಕೀಯ ಜೀವನದ ಜೊತೆಗೆ ಕೊನೆ ಕಾಲದಲ್ಲಾದರೂ ರಾಜಕೀಯ ಬಿಟ್ಟು ದೇವರ ಸೇವೆ ಮಾಡಲು ಅವಕಾಶ ಸಿಕ್ಕಿದೆ.ರಾಜಕೀಯದಲ್ಲಾದರೆ ತೃಪ್ತಿ ಸಿಗುತ್ತಿರಲಿಲ್ಲ ಎಂದು ಹೇಳುತ್ತಿದ್ದರು. ಅವರು ಮಾಡಿದ ಯೋಚನೆಯನ್ನು ಯೋಜನೆಯ ಮೂಲಕ ಸಾಧಿಸಿದ್ದಾರೆ. ಅದೇ ರೀತಿ ದೇವಸ್ಥಾನದ ಫಂಡ್ ತೆಗೆಯದೆ ರಾಜಗೋಪುರ ನಿರ್ಮಿಸುವ ಮೂಲಕ ಅವರು ಎಲ್ಲರಿಗೂ ಪ್ರೀತಿಯವರಾಗಿದ್ದಾರೆ ಎಂದರು.

ದೇವಸ್ಥಾನದ ಸೇವೆಗೆ ಅವಕಾಶ ಸಿಕ್ಕಿರುವುದು ನೆಮ್ಮದಿ:
ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ್ ಗೌಡ ಅವರು ಮಾತನಾಡಿ ಸಬ್ ಇನ್‌ಸ್ಪೆಕ್ಟರ್ ಮತ್ತು ಎಮ್‌ಎಲ್‌ಎ ಆಗಬೇಕೆಂದು ಆಸೆ ಇತ್ತು ಎಂದು ಅವರು ಹೇಳಿಕೊಂಡಿದ್ದರು. ಕೊನೆಗೆ ದೇವಸ್ಥಾನದ ಸೇವೆಗೆ ಅವಕಾಶ ಸಿಕ್ಕಿರುವುದು ನೆಮ್ಮದಿ ಎಂದು ಹೇಳಿದ್ದರು.ಅವರ ಆದರ್ಶ ನಮಗೆ ಮಾರ್ಗದರ್ಶನವಾಗಿದೆ ಎಂದರು.ಸುದರ್ಶನ್ ಮುರ ಅವರು ಮಾತನಾಡಿ ವಿವಿಧ ಕ್ಷೇತ್ರದಲ್ಲಿ ಮಿಂಚಿದ್ದ ಅವರು ದೇವರ ಸೇವೆ ಮಾಡಿ ನೆಮ್ಮದಿ ಕಂಡರು ಎಂದರು.ಹಿರಿಯರಾದ ಕಿಟ್ಟಣ್ಣ ಗೌಡ ಅವರು ಮಾತನಾಡಿ ಸುಮಾರು 60 ವರ್ಷದಿಂದ ನಾವು ಮಿತ್ರರು.ಅವರು ಅಧ್ಯಕ್ಷರಾದ ಬಳಿಕ ದೇವಸ್ಥಾನದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ.ಅವರಿಗೆ ಯೋಗ, ಯೋಗ್ಯತೆ ಇದ್ದದ್ದರಿಂದ ಅವರು ಉತ್ತಮ ಕಾರ್ಯ ಮಾಡಲು ಸಾಧ್ಯವಾಗಿದೆ ಎಂದರು.ಪಿ.ಜಿ ಚಂದ್ರಶೇಖರ್ ರಾವ್ ಅವರು ಮಾತನಾಡಿ ಶಾಶ್ವತವಾಗಿ ನೆನಪಿಡುವ ಕೆಲಸವನ್ನು ಸುಧಾಕರ್ ಶೆಟ್ಟಿಯವರು ಮಾಡಿದ್ದಾರೆ ಎಂದರು.ಗಿರೀಶ್ ಕುಮಾರ್ ಅವರು ಮಾತನಾಡಿ ಸುದಣ್ಣ ಅವರನ್ನು ಒಂದು ಶಕ್ತಿಯಾಗಿ ನಾವು ನೋಡುತ್ತಿದ್ದೇವೆ ಎಂದರು. ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ರವೀಂದ್ರನಾಥ ರೈ ಬಳ್ಳಮಜಲು, ಡಾ.ಸುಧಾ ಎಸ್ ರಾವ್, ವೀಣಾ ಬಿ.ಕೆ, ಬಿ.ಐತ್ತಪ್ಪ ನಾಯ್ಕ್, ರಾಮಚಂದ್ರ ಕಾಮತ್, ಮಾಜಿ ಸದಸ್ಯರಾದ ಸಂಜೀವ ನಾಯಕ್ ಕಲ್ಲೇಗ, ರೋಹಿಣಿ ರಾಘವ ಆಚಾರ್ಯ, ನಯನಾ ರೈ ಸಹಿತ ಹಲವಾರು ಮಂದಿ ಭಕ್ತರು ಉಪಸ್ಥಿತರಿದ್ದರು.

15 ದಿನದ ಒಳಗಡೆ ಮಾಸ್ಟರ್ ಪ್ಲಾನ್ ಕರಡು ಪ್ರತಿ ಬಿಡುಗಡೆ
ಮುಂದಿನ ದಿನ ದೇವಳದ ಅಭಿವೃದ್ಧಿಯ ದೃಷ್ಟಿಕೋನದಿಂದ ನಾವು ಮಾಡಿರುವ ಮಾಸ್ಟರ್ ಪ್ಲಾನ್ ಸಿದ್ದಗೊಂಡಿದೆ.ಶಾಸಕರ ಸಲಹೆಯು ಮಾಸ್ಟರ್ ಪ್ಲಾನ್‌ನಲ್ಲಿ ಅಳವಡಿಕೆಯಾಗಿದೆ. 15 ದಿನದ ಒಳಗಡೆ ಮಾಸ್ಟರ್ ಪ್ಲಾನ್ ಕರಡು ಪ್ರತಿ ಬಿಡುಗಡೆ ಮಾಡಲಾಗುವುದು.ಮುಂದಿನ ಸಮಿತಿಯವರಿಗೆ ಅಭಿವೃದ್ಧಿ ಕಾರ್ಯಗಳಿಗೆ ಇದು ಸುಲಭವಾಗಲಿದೆ.ಅದೇ ರೀತಿ ಏಕಾದಶ ರುದ್ರ ಕೋಟಿ ಜಪಯಜ್ಞ ಸುಮಾರು 1 ಕೋಟಿಗೂ ಮಿಕ್ಕಿ ಆಗುವ ಸಾಧ್ಯತೆ ಇದೆ.ಸೆ.24ಕ್ಕೆ ಅದನ್ನು ಯಾವ ರೀತಿ ಮಾಡುವುದು ಎಂದು ತಿಳಿಸಲಾಗುವುದು. ಒಟ್ಟಿನಲ್ಲಿ ಬದಲಾವಣೆ ಬಂದಿರುವುದು ಸಂತೋಷದ ವಿಚಾರ
ಕೇಶವಪ್ರಸಾದ್ ಮುಳಿಯ,
ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು

LEAVE A REPLY

Please enter your comment!
Please enter your name here