ಕ್ಲೈಮಾಕ್ಸ್ ಹಂತದಲ್ಲಿ ಬಡಗನ್ನೂರು ಗ್ರಾ.ಪಂ. ಮಾಜಿ ಸದಸ್ಯ ಗುರುಪ್ರಸಾದ್ ರೈ ಮನೆಯ ದರೋಡೆ ಪ್ರಕರಣ

0

ಮುಂದುವರಿದ ಪೊಲೀಸ್ ಕಾರ್ಯಾಚರಣೆ: ಕ್ಲೂ ನೀಡಿದ ಆಲ್ಟೋ ಕಾರು-ಕೇರಳದಲ್ಲಿ ಜಾಲಾಡುತ್ತಿರುವ ತನಿಖಾ ತಂಡ


ಪುತ್ತೂರು: ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಪಡುವನ್ನೂರು ಗ್ರಾಮದ ಗುರುಪ್ರಸಾದ್ ರೈ ಅವರ ಕುದ್ಕಾಡಿಯ ಮನೆಯಲ್ಲಿ ಸೆ.6ರಂದು ತಡರಾತ್ರಿ ನಡೆದಿರುವ ದರೋಡೆ ಪ್ರಕರಣದ ತನಿಖೆ ಕ್ಲೈಮಾಕ್ಸ್ ಹಂತ ತಲುಪಿದೆ. ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್., ಈ ಹಿಂದೆ ಪುತ್ತೂರು ಗ್ರಾಮಾಂತರ ಠಾಣಾ ಎಸ್.ಐ.ಯಾಗಿದ್ದ ಪುತ್ತೂರು ಸಂಚಾರ ಠಾಣಾ ಎಸ್.ಐ. ಉದಯರವಿ, ಉಪ್ಪಿನಂಗಡಿ ಪೊಲೀಸ್ ಠಾಣಾ ಎಸ್‌ಐ ರುಕ್ಮ ನಾಯ್ಕ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ಮುಂದುವರಿಸಿದೆ. ಇವರೊಂದಿಗೆ ದಕ್ಷ ಪೊಲೀಸ್ ಸಿಬ್ಬಂದಿಗಳಾದ ಹರಿಶ್ಚಂದ್ರ, ವಿನಾಯಕ, ಶರಣ ಪಾಟೀಲ್, ಉದಯ ರೈ ಮಂದಾರ, ಪ್ರಶಾಂತ್ ರೈ, ಪ್ರವೀಣ್ ಬೆಳ್ತಂಗಡಿ ಮತ್ತಿತರರು ಕೈ ಜೋಡಿಸಿದ್ದಾರೆ. ಕೇರಳದಲ್ಲಿ ದರೋಡೆಕೋರರಿಗಾಗಿ ಜಾಲಾಡಿ ಹಿಂತಿರುಗಿದ್ದ ತನಿಖಾ ತಂಡ ಮತ್ತೆ ಕೇರಳಕ್ಕೆ ತೆರಳಿದೆ. ಶಂಕಿತರಿಗೆ ಬಲೆ ಬೀಸಿರುವ ಪೊಲೀಸ್ ಅಧಿಕಾರಿಗಳು ಘಟನೆ ನಡೆದ ದಿನದಂದು ಆಲ್ಟೋ ಕಾರೊಂದು ಸಂಶಯಾಸ್ಪದವಾಗಿ ಬಡಗನ್ನೂರು ಪರಿಸರದಲ್ಲಿ ತಿರುಗಾಡುತ್ತಿದ್ದುದನ್ನು ಪತ್ತೆ ಹಚ್ಚಿದ್ದಾರೆ.

ಸಿ.ಸಿ. ಕೆಮರಾದಲ್ಲಿ ಈ ಕಾರು ಸೆರೆಯಾಗಿದೆಯಾದರೂ ನಂಬರ್ ಪ್ಲೇಟ್ ಅಸ್ಪಷ್ಟವಾಗಿ ಇರುವುದರಿಂದ ಕಾರನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಹಗಲು ಹೊತ್ತಿನಲ್ಲಿ ಸಂಚರಿಸಿರುವ ವಾಹನಗಳ ಕುರಿತು ಪೊಲೀಸರ ತಂಡ ಸಿ.ಸಿ. ಕೆಮರಾ ಮೂಲಕ ಪತ್ತೆ ಹಚ್ಚುವ ಕಾರ್ಯ ನಡೆಸುತ್ತಿದೆ. ಪುತ್ತೂರು ಪಟ್ಟಣ ಪ್ರದೇಶದಲ್ಲಿಯೂ ಸಿ.ಸಿ. ಕೆಮರಾ ಚೆಕ್ ಮಾಡಲಾಗುತ್ತಿದೆ. ದರೋಡೆ ನಡೆದ ಮನೆಗೆ ಭೇಟಿ ನೀಡಿದ್ದ ಪಶ್ಚಿಮ ವಲಯ ಐಜಿಪಿ ಡಾ. ಚಂದ್ರಗುಪ್ತ, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮತ್ತು ಪುತ್ತೂರು ಡಿವೈಎಸ್‌ಪಿ ಡಾ.ಗಾನಾ ಪಿ. ಕುಮಾರ್ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ತನಿಖೆ ತೀವ್ರಗೊಳಿಸುವಂತೆ ಅವರು ತನಿಖಾ ತಂಡಕ್ಕೆ ನಿರ್ದೇಶನ ನೀಡಿದ್ದಾರೆ.

ಘಟನೆಯ ಸತ್ಯಾಸತ್ಯತೆಯನ್ನು ಪತ್ತೆ ಹಚ್ಚಿ ಪ್ರಕರಣವನ್ನು ಭೇದಿಸಲೇಬೇಕು ಎಂದು ಪಣತೊಟ್ಟಿರುವ ತನಿಖಾ ತಂಡ ಇನ್ನು ನಾಲ್ಕೈದು ದಿನಗಳ ಒಳಗೆ ಅಂತಿಮ ಷರಾ ಬರೆಯಲು ನಿರ್ಧರಿಸಿದೆ. ಈ ಮಧ್ಯೆ ಗುರುಪ್ರಸಾದ್ ರೈಯವರ ಜತೆ ಅತ್ಯಾಪ್ತರಾಗಿ ಗುರುತಿಸಿಕೊಂಡವರ ಮೇಲೂ ತನಿಖಾ ತಂಡ ನಿಗಾ ಇಟ್ಟಿದೆ. ಘಟನೆ ನಡೆಯುವ ದಿನದಂದು ಗುರುಪ್ರಸಾದ್ ಆಪ್ತರು ಎಲ್ಲೆಲ್ಲಾ ಇದ್ದರು ಎಂದು ತನಿಖಾ ತಂಡ ಮಾಹಿತಿ ಸಂಗ್ರಹಿಸಿದೆ. ರಾತ್ರಿ ದರೋಡೆ ನಡೆಯುವ ಸಮಯಕ್ಕೆ ಮೊದಲು ಗುರುಪ್ರಸಾದ್ ರೈಯವರು ಆ ದಿನ ಎಲ್ಲೆಲ್ಲಾ ಹೋಗಿದ್ದರು ಎಂಬುದನ್ನೂ ಪೊಲೀಸರ ತನಿಖಾ ತಂಡ ಪತ್ತೆ ಹಚ್ಚಿದೆ. ನಿಗೂಢವಾಗಿಯೇ ಮುಂದುವರಿದಿರುವ ಈ ಪ್ರಕರಣ ಮಹತ್ವದ ತಿರುವು ಪಡೆದುಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿದೆ.


ಟಿಪ್‌ಟಾಪ್ ಆಗಿದ್ದ ಗುರುವಿಗೆ ಸ್ಕೆಚ್:
ಸಾಮಾನ್ಯವಾಗಿ ತನ್ನ ಮನೆಯಲ್ಲಿ ಒಬ್ಬರೇ ಇರುತ್ತಿದ್ದ ಗುರುಪ್ರಸಾದ್ ರೈಯವರ ಮನೆಗೆ ಅವರ ಅಮ್ಮ ಬಂದ ಕೆಲ ದಿನಗಳ ಬಳಿಕ ದರೋಡೆ ಕೃತ್ಯ ನಡೆದಿದೆ. ಗುರುಪ್ರಸಾದ್ ರೈಯವರ ಅಮ್ಮನ ಬಳಿ ಚಿನ್ನಾಭರಣ ಇದೆ ಎಂದು ಗೊತ್ತಿದ್ದವರೇ ಬಂದು ದರೋಡೆ ಮಾಡಿದರೇ ಅಥವಾ ದರೋಡೆಕೋರರ ತಂಡಕ್ಕೆ ಮಾಹಿತಿ ನೀಡಿ ಕೃತ್ಯಕ್ಕೆ ಕಾರಣವಾದರೇ ಎನ್ನುವ ಸಂಶಯದೊಂದಿಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಕಳ್ಳತನ ನಡೆದಿರುವ ಕುದ್ಕಾಡಿಯ ಮನೆ ಕುದ್ಕಾಡಿ ಗುರುಪ್ರಸಾದ್ ರೈಯವರ ಅಜ್ಜಿ ಶೀಲಾವತಿ ರೈಯವರದಾಗಿದ್ದು ಸುಮಾರು ಎರಡು ತಿಂಗಳ ಹಿಂದೆ ಅವರು ಮೃತಪಟ್ಟಿದ್ದರು. ಗುರುಪ್ರಸಾದ್ ರೈಯವರ ಸಹೋದರ ಕೇರಳದ ನಾರಂಪಾಡಿಯಲ್ಲಿದ್ದು ಗುರುಪ್ರಸಾದ್ ರೈಯವರ ತಾಯಿ ಕಸ್ತೂರಿಯವರು ನಾರಂಪಾಡಿಗೆ ಮತ್ತು ಇಲ್ಲಿಗೆ ಹೋಗಿ ಬರುತ್ತಿದ್ದರು. ಆ.26ರಂದು ಇಲ್ಲಿಂದ ನಾರಂಪಾಡಿಗೆ ತೆರಳಿದ್ದ ಕಸ್ತೂರಿಯವರು ಘಟನೆ ನಡೆದ ವಾರದ ಹಿಂದೆಯಷ್ಟೇ ಕುದ್ಕಾಡಿ ಮನೆಗೆ ಬಂದಿದ್ದರು. ಇತ್ತೀಚೆಗೆ ಕುಟುಂಬದ ಪೈಕಿ ಕಾರ್ಯಕ್ರಮವೊಂದಿದ್ದು ಅದಕ್ಕೆಂದು ಬಂದಿದ್ದ ಅವರು ತನ್ನೊಂದಿಗೆ ಚಿನ್ನಾಭರಣವನ್ನೂ ತಂದಿದ್ದರು. ಅದು ಗೊತ್ತಿದ್ದವರೇ ದರೋಡೆಗೆ ಸ್ಕೆಚ್ ಹಾಕಿದರೇ ಎಂಬುದನ್ನು ಪೊಲೀಸರ ತಂಡ ಮಾಹಿತಿ ಸಂಗ್ರಹಿಸುತ್ತಿದೆ. ದರೋಡೆ ನಡೆಸಿದ ತಂಡದವರು ಗುರುಪ್ರಸಾದ್ ಮತ್ತು ಅವರ ತಾಯಿ ಕಸ್ತೂರಿಯವರಿಗೆ ಕುಡಿಯಲು ನೀರು ನೀಡಿ, ಕಾಲು ಹಿಡಿದು ತೆರಳಿರುವುದರಿಂದ ಅವರ ಋಣ ಇದ್ದವರೇ ಈ ಕೃತ್ಯ ಎಸಗಿರಬಹುದು ಅಥವಾ ತನಿಖೆಯ ಹಾದಿ ತಪ್ಪಿಸುವ ಉದ್ದೇಶದಿಂದಲೂ ಈ ರೀತಿ ಮಾಡಿರಬಹುದು ಎಂಬ ಸಂಶಯ ಪೊಲೀಸರದ್ದಾಗಿದೆ. ಕುಖ್ಯಾತ ದರೋಡೆಕೋರರ ತಂಡವೇ ಕೃತ್ಯ ಎಸಗಿರುವ ಬಲವಾದ ಸಂಶಯ ಹೊಂದಿರುವ ಪೊಲೀಸರು ಆದಷ್ಟು ಶೀಘ್ರ ಆರೋಪಿಗಳನ್ನು ಪತ್ತೆ ಮಾಡುವ ವಿಶ್ವಾಸ ಹೊಂದಿದ್ದಾರೆ. ದರೋಡೆ ಕೃತ್ಯ ನಡೆಯುವ ಕೆಲವೇ ದಿನಗಳ ಮೊದಲು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗುರುಪ್ರಸಾದ್ ರೈ ಅವರು ಟಿಪ್‌ಟಾಪ್ ಆಗಿ ಕಾಣಿಸಿಕೊಂಡಿದ್ದರು. ಅವರೊಂದಿಗೆ ಕೆಲವರು ಆತ್ಮೀಯವಾಗಿ ಮಾತನಾಡಿದ್ದರು. ಈ ಹಿಂದೆ ಜನಪ್ರತಿನಿಧಿಯಾಗಿದ್ದು ತನ್ನ ಊರಿನಲ್ಲಿ ಪರೋಪಕಾರಿಯಾಗಿ ಗುರುತಿಸಿಕೊಂಡಿರುವ ಮತ್ತು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿರುವ ಗುರುಪ್ರಸಾದ್ ರೈಯವರಲ್ಲಿ ಬಹಳಷ್ಟು ನಗದು, ಚಿನ್ನಾಭರಣ ಇದೆ ಎಂದು ಗುಮಾನಿ ಹೊಂದಿದವರು ಅಂದೇ ಗುರುಪ್ರಸಾದ್ ರೈಯವರಿಗೆ ಸ್ಕೆಚ್ ಹಾಕಿ ಅವರ ಮನೆಯನ್ನು ದರೋಡೆಗೆ ಆಯ್ಕೆ ಮಾಡಿಕೊಂಡರೇ ಎಂಬ ಸಂಶಯ ಪೊಲೀಸರಲ್ಲಿದೆ. ಈ ಕುರಿತು ಪೊಲೀಸರ ತನಿಖಾ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ.


ಪರಿಚಿತರ ಕೈ ಚಳಕವೇ?
ಸೆ.6ರಂದು ತಡರಾತ್ರಿ ಸುಮಾರು 2 ಗಂಟೆ ವೇಳೆಗೆ ಗುರುಪ್ರಸಾದ್ ರೈಯವರ ಮನೆಯ ಹಿಂಬಾಗಿಲಿನ ಚಿಲಕ ಮುರಿದು ಒಳನುಗ್ಗಿದ್ದ ಸುಮಾರು 5 ಮಂದಿ ಇದ್ದ ದರೋಡೆಕೋರರ ತಂಡ ದರೋಡೆ ಕೃತ್ಯ ಎಸಗಿತ್ತು. ಗುರುಪ್ರಸಾದ್ ರೈ ಮತ್ತು ಅವರ ತಾಯಿ ಕಸ್ತೂರಿ ರೈಯವರನ್ನು ಹಗ್ಗ, ಬಟ್ಟೆಯಿಂದ ಕಟ್ಟಿ ಬಾಯಿಯನ್ನು ಬಿಗಿದು ಕತ್ತಿನ ಭಾಗಕ್ಕೆ ಮಾರಕಾಸ್ತ್ರಗಳನ್ನು ಇಟ್ಟು ಬೆದರಿಸಿ ದರೋಡೆ ಮಾಡಲಾಗಿತ್ತು. ಮನೆಯ ಕಪಾಟನ್ನು ಒಡೆಯಲು ಮಾಡಿದ ಪ್ರಯತ್ನ ವಿಫಲವಾದಾಗ ಗುರುಪ್ರಸಾದ್ ರೈಯವರ ತಾಯಿ ಕಸ್ತೂರಿ ರೈ ಅವರನ್ನು ಬೆದರಿಸಿ ಅವರ ಕೈಯಿಂದಲೇ ಬೀಗದ ಕೀ ಪಡೆದುಕೊಂಡು ಕಪಾಟಿನಲ್ಲಿದ್ದ ಚಿನ್ನಾಭರಣವನ್ನು ದೋಚಿ ತಂಡ ಪರಾರಿಯಾಗಿತ್ತು. ಮನೆಯಲ್ಲಿದ್ದ ರೂ.2.40 ಲಕ್ಷ ಮೌಲ್ಯದ ಚಿನ್ನದ ಆಭರಣ ಮತ್ತು ರೂ.30 ಸಾವಿರ ನಗದು ದರೋಡೆ ಮಾಡಲಾಗಿತ್ತು. ಈ ವಿಚಾರವನ್ನು ಬೇರೆಯವರಿಗೆ ತಿಳಿಸಿದಲ್ಲಿ ಮುಂದಕ್ಕೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ತಂಡ ತೆರಳಿತ್ತು ಎಂದು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಕೇಸು ದಾಖಲಿಸಿದ ಬಳಿಕ ಪ್ರತ್ಯೇಕ ತನಿಖಾ ತಂಡ ರಚಿಸಲಾಗಿತ್ತು. ಬಗೆದಷ್ಟು ಆಳಕ್ಕೆ ಇಳಿಯುವಂತಾಗಿರುವ ಈ ದರೋಡೆ ಪ್ರಕರಣ ಪೊಲೀಸರ ನಿದ್ದೆಗೆಡಿಸಿದೆ. ಇದು ಗುರುಪ್ರಸಾದ್ ರೈ ಅವರ ಪರಿಚಿತರ ಕೃತ್ಯವೇ ಆಗಿರಬಹುದು ಎಂದು ತನಿಖಾ ತಂಡ ಮೇಲ್ನೋಟಕ್ಕೆ ಕಂಡುಕೊಂಡಿದೆಯಾದರೂ ಅದು ಖಚಿತವಾಗಿಲ್ಲ. ಘಟನೆ ನಡೆಯುವ ಕೆಲವೇ ದಿನಗಳ ಹಿಂದೆ ತನ್ನ ಊರಾದ ಕೇರಳಕ್ಕೆ ತೆರಳಿರುವ ಕೆಲಸದಾಳುವಿನ ಮೇಲೆ ಸಂಶಯ ಇದೆಯಾದರೂ ಆತನಿಂದ ಯಾವುದೇ ಮಾಹಿತಿ ದೊರೆತಿಲ್ಲ. ಗುರುಪ್ರಸಾದ್ ರೈಯವರ ಮನೆಯಲ್ಲಿ ನಡೆದ ದರೋಡೆ ಕೃತ್ಯದ ಮಾದರಿಯಲ್ಲಿ ಈ ಹಿಂದೆ ಇತರ ಕಡೆಗಳಲ್ಲಿ ನಡೆದಿರುವ ದರೋಡೆ, ಕಳವು ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಹಿನ್ನೆಲೆ, ಚಹರೆಯನ್ನು ಕೆದಕುತ್ತಿರುವ ತನಿಖಾ ತಂಡ ಈ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ವಹಿಸಿದೆ.

LEAVE A REPLY

Please enter your comment!
Please enter your name here