ಸಂಘದ ಕರಡು ತಿದ್ದುಪಡಿಗೆ ವರ್ಚುವಲ್ ಸಭೆಯಲ್ಲಿ ಭಾಗವಹಿಸಲು ನಿರ್ಣಯ
ಪುತ್ತೂರು: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಇದರ ಪುತ್ತೂರು ಶಾಖೆಯ ಕಾರ್ಯಕಾರಿ ಸಮಿತಿಯ ಸಭೆ ಸೆ.22 ರಂದು ಮಿನಿ ವಿಧಾನಸೌಧದ ಬಳಿಯ ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯರವರ ಅಧ್ಯಕ್ಷತೆಯಲ್ಲಿ ಜರಗಿತು.
ಸರಕಾರಿ ನೌಕರರ ಸಂಘದ ಬೈಲಾದ ಉಪವಿಧಿಗಳು-2022ರ ಕೆಲವು ಉಪವಿಧಿಗಳಿಗೆ ತಿದ್ದುಪಡಿ ತರುವ ಅಧೀನ ಶಾಖೆಗಳು ಕ್ರಮವಹಿಸಿ ರಾಜ್ಯ ಸಂಘಕ್ಕೆ ವರದಿ ಸಲ್ಲಿಸುವ ಬಗ್ಗೆ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿರವರ ಆದೇಶದಂತೆ ಆಯಾ ತಾಲೂಕುಗಳಲ್ಲಿ ಸರಕಾರಿ ನೌಕರರ ಸಂಘ ಕಾರ್ಯಕಾರಿ ಸಮಿತಿಯ ತುರ್ತು ಸಭೆಯನ್ನು ಕರೆಯಲಾಗಿತ್ತು. ಪುತ್ತೂರು ತಾಲೂಕಿನ ಸರಕಾರಿ ನೌಕರರ ಸಂಘವು ನಿರ್ಣಯವನ್ನು ದಾಖಲಿಸುವ ನಿಟ್ಟಿನಲ್ಲಿ ಸಭೆಯನ್ನು ಕರೆಯಲಾಗಿತ್ತು.
ವರ್ಚುವಲ್ ವಿಧಾನದ ಮೂಲಕ ಸಭೆ:
ಸರಕಾರಿ ನೌಕರರ ಸಂಘದ ಬೈಲಾದ ಉಪವಿಧಿಗಳು-2022ರ ಕೆಲವು ಉಪವಿಧಿಗಳಿಗೆ ತಿದ್ದುಪಡಿ ತರುವ ಕರಡು ಪ್ರಸ್ತಾವನೆಗೆ ಅಕ್ಟೋಬರ್ ಒಂದರಂದು ಬೆಳಿಗ್ಗೆ ಕೊಪ್ಪಳ ಹಿರೇ ಸಿಂದೋಗಿ ರಸ್ತೆಯ ಗೋಶಾಲೆ ಹತ್ತಿರದ ಮಹಾವೀರ ಸಮುದಾಯ ಭವನದಲ್ಲಿ ‘ವಿಶೇಷ ಮಹಾಸಭೆ’ಯ ವರ್ಚುವಲ್(ವಾಸ್ತವ) ಸಭೆಯನ್ನು ಕರೆಯಲಾಗಿದ್ದು, ಆಯಾ ತಾಲೂಕಿನ ಸರಕಾರಿ ನೌಕರರ ಸಂಘದ ಸದಸ್ಯರು ಸಭೆಯಲ್ಲಿ ಭಾಗವಹಿಸಿ ಉಪವಿಧಿಗಳ ತಿದ್ದುಪಡಿ ಕರಡು ಪ್ರತಿಗಳ ಬಗ್ಗೆ ಚರ್ಚಿಸಿ ಸಭಾ ನಡಾವಳಿಯನ್ನು ಅನುಮೋದನೆಗೊಳಿಸಬೇಕಾಗಿ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿರವರು ಆಯಾ ತಾಲೂಕಿನ ಅಧ್ಯಕ್ಷರಿಗೆ ತಿಳಿಸಿರುತ್ತಾರೆ.
ತಾಲೂಕು ಸಭೆಯಲ್ಲಿ ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ್ ಬಿ, ಕೋಶಾಧಿಕಾರಿ ಕೃಷ್ಣ ಬಿ, ಉಪಾಧ್ಯಕ್ಷ ರಾಮಚಂದ್ರ, ಜೊತೆ ಕಾರ್ಯದರ್ಶಿ ಹರಿಕೃಷ್ಣ ಬೈಲಾಡಿ, ಕ್ರೀಡಾ ಜೊತೆ ಕಾರ್ಯದರ್ಶಿ ಮಹಮದ್ ಅಶ್ರಫ್, ಸದಸ್ಯರಾದ ಗಿರಿಧರ್ ಗೌಡ, ಜ್ಯುಲಿಯಾನ ಮೊರಾಸ್, ಸ್ಮಿತಾಶ್ರೀ ದಿನೇಶ್, ವಿಜಯಕುಮಾರ್ ರವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಬ್ರಹಾಂ ಎಸ್.ಎ ಸ್ವಾಗತಿಸಿ, ವಂದಿಸಿದರು.