ಬಹುಮಾನ ಬಂದಿದೆ ಎಂದು ನಂಬಿಸಿ ವಂಚನೆ: 5.34 ಲಕ್ಷ ರೂ.ಕಳೆದುಕೊಂಡ ಮಹಿಳೆ..!

0

ವಂಚಕರ ಜಾಲ ಹೇಗಿದೆ:
ಪ್ರತಿಷ್ಠಿತ ಕಂಪನಿಯ ಆನ್‌ಲೈನ್ ಶಾಪಿಂಗ್‌ನಲ್ಲಿ ವಸ್ತುಗಳನ್ನು ಖರೀದಿಸಿದ್ದರೆ ಅದರ ಜಾಡು ಹಿಡಿದುಕೊಂಡು ವಂಚಕರ ತಂಡವೊಂದು ನಿಮ್ಮ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್ ನಲ್ಲಿ ಪ್ರತಿಷ್ಠಿತ ಕಂಪನಿಯ ಆನ್‌ಲೈನ್ ಶಾಪಿಂಗ್‌ನ 6ನೇ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿರುವ ನೋಂದಾಯಿತ ಗ್ರಾಹಕರಿಗೆ ರ‍್ಯಾಂಡಮ್ ಲಕ್ಕಿ ಡ್ರಾ ಸ್ಪರ್ಧೆಯ ಬಹುಮಾನ ಗೆಲ್ಲಿ ಎಂಬ ಸ್ಕ್ರ‍್ಯಾಚ್ ಕಾರ್ಡ್‌ನ ಲೆಟರ್ ಕಳುಹಿಸುತ್ತದೆ. ಅದರಲ್ಲಿ ಆ ಕಂಪನಿಯ ಹೆಸರುಳ್ಳ ಸ್ಕ್ರ‍್ಯಾಚ್ ಆ್ಯಂಡ್ ವಿನ್-2023 ಎಂಬ ಕೂಪನ್ ಸಹ ಇಟ್ಟಿರುತ್ತಾರೆ. ಅದನ್ನು ನಂಬಿ ನೀವು ಕೂಪನ್ ಕಾರ್ಡ್ ಅನ್ನು ಸ್ಕ್ರ‍್ಯಾಚ್ ಮಾಡಿದಾಗ ಬಹುಮಾನಿತ ವಸ್ತುವಿನ ಎಸ್‌ಎಸ್‌ಎಂ ಕೋಡ್‌ನೊಂದಿಗೆ ಅತ್ಯಾರ್ಷಕ ಬಹುಮಾನವು ನಿಮ್ಮದಾಗಿರುತ್ತದೆ. ಆಗ ನೀವು ಇನ್ನಿಲ್ಲದ ಭಾಗ್ಯ ನಮ್ಮದಾಯಿತು ಎಂದು ಇನ್ನಷ್ಟು ಖುಷಿಪಟ್ಟು ಪತ್ರದಲ್ಲಿ ಸೂಚಿಸಿದ ಸಹಾಯವಾಣಿ ಸಂಖ್ಯೆಗೆ ತಕ್ಷಣ ಸಂಪರ್ಕಿಸುತ್ತೀರಿ. ಆಗ ನಯವಂಚಕರಿಗೆ ಇಷ್ಟೇ ಸಾಕು ನಿಮ್ಮನ್ನು ಮೋಸಗೊಳಿಸಲು. ನಿಮ್ಮಿಂದ ಹಣ ಕಿತ್ತುಕೊಳ್ಳಲು.

ಅನಾಮಧೇಯರು ನಿಮಗೆ ಕಳುಹಿಸಿದ ಲೆಟರ್ ನೋಡಿದ ತಕ್ಷಣ ನಿಮಗೆ ಅದು ವಂಚನೆ ಮಾಡುವ ತಂಡದಿಂದ ಬಂದಿದ್ದು ಎಂಬ ಸಂಶಯವೇ ಬರುವುದಿಲ್ಲ. ಆ ರೀತಿ ಅವರು ಸಹ ಕಂಪನಿಯವರು ಕಳುಹಿಸುವ ಲೆಟರ್ ಪ್ರಕಾರವೇ ಹಲವು ಕರಾರು ಮತ್ತು ಷರತ್ತುಗಳುಳ್ಳ ಪತ್ರ ಕಳುಹಿಸಿರುತ್ತಾರೆ. ಸ್ಕ್ರ‍್ಯಾಚ್ ಕಾರ್ಡ್‌ನಲ್ಲಿ ಅತ್ಯಾಕರ್ಷಕ ಬಹುಮಾನಗಳ ಆಮಿಷವೊಡ್ಡಿರುತ್ತಾರೆ. ಬಹುಮಾನ ಪಡೆಯಲು ಇಂತಹುದೇ ಸಂಖ್ಯೆಗೆ ಕರೆ ಮಾಡಿ ಹಾಗೂ ಸೂಚಿಸಿದ ವಾಟ್ಸಫ್ ಸಂಖ್ಯೆಗೆ ನಿಮ್ಮ ದಾಖಲೆಗಳನ್ನು ಕಳುಹಿಸಿ ಎಂದು ನಮೂದಿಸಿರುತ್ತಾರೆ. ಹೀಗೆ ನಿಮ್ಮಿಂದ ಮಾತಿನ ಮೋಡಿಯಲ್ಲಿ ಲಕ್ಷಾಂತರ ಹಣ ವಂಚನೆ ಮಾಡುತ್ತಾರೆ. ಇದರಿಂದ ನಾಗಕರಿರು ಎಚ್ಚರಿಕೆಯಿಂದಿರಿ.

ಪುತ್ತೂರು: ನಿಮಗೆ ಲಕ್ಕಿ ಡ್ರಾ ಬಂದಿದೆ. ಅದನ್ನು ಪಡೆಯಲು ಹೀಗೆ ಮಾಡಿ ಎಂಬ ಸಂದೇಶ ಬರುವುದು. ಅಂಚೆ ಮೂಲಕ ಬರುವ ಪತ್ರದಲ್ಲಿ ಸ್ಕ್ರ‍್ಯಾಚ್ ಕಾರ್ಡ್ ಮೂಲಕ ಬಹುಮಾನ ಬಂದಿದೆ. ಇದನ್ನು ಪಡೆಯಲು ಖಾತೆಗೆ ಹಣ ತುಂಬುವ ಸಂದೇಶ ಬರುವುದು ಸಹಜ. ಇಲ್ಲಿ ಸ್ವಲ್ಪ ಯಾಮಾರಿದರೂ ನಿಮ್ಮ ಖಾತೆಯಿಂದ ಹಣ ಖಾಲಿಯಾಗುವುದು ಗ್ಯಾರಂಟಿ. ಇಂತಹದ್ದೇ ಒಂದು ಘಟನೆಯಿಂದ ಪುತ್ತೂರಿನ ಕೊಡಿಪ್ಪಾಡಿ ಗ್ರಾ.ಪಂ.ವ್ಯಾಪ್ತಿಯ ಬಟ್ರುಪ್ಪಾಡಿಯ ಮಹಿಳೆಯೊಬ್ಬರು ವಂಚನೆಗೊಳಗಾಗಿದ್ದು, ಅವರು ವಂಚಕರ ಜಾಲಕ್ಕೆ ಸಿಲುಕಿ ಬರೊಬ್ಬರಿ 5.34 ಲಕ್ಷ ರೂ.ಕಳೆದುಕೊಂಡಿದ್ದಾರೆ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪುತ್ತೂರಿನ ಕೊಡಿಪ್ಪಾಡಿ ಗ್ರಾಮದ ಬಟ್ರುಪ್ಪಾಡಿ ನಿವಾಸಿ ಬ್ಯೂಟಿಷಿಯನ್ ಮಹಿಳೆಗೆ ಜೂ.3ರಂದು ಅಂಚೆ ಮೂಲಕ ಕವರ್ ಬಂದಿದ್ದು ಅದನ್ನು ತೆರೆದು ನೋಡಿದಾಗ ಒಂದು ಕೂಪನ್ ಮತ್ತು ಒಂದು ಫಾರ್ಮ್ ಇತ್ತು. ಅದರಲ್ಲಿ ಕೂಪನ್ ಸ್ಕ್ರ‍್ಯಾಚ್ ಮಾಡುವಂತೆ ಸೂಚಿಸಲಾಗಿತ್ತು. ಸ್ಕ್ರ‍್ಯಾಚ್ ಮಾಡಿದಾಗ ಅದರಲ್ಲಿ ಪ್ರಥಮ ಬಹುಮಾನ ಬಂದಿದೆ ಎಂದು ನಮೂದು ಮಾಡಲಾಗಿದ್ದು ಮತ್ತು ಕೂಪನ್ ಬದಿಯಲ್ಲಿ ಎರಡು ಮೊಬೈಲ್ ಸಂಖ್ಯೆಗಳನ್ನು ಬರೆದಿದ್ದು ಅದರಲ್ಲಿದ್ದ ನಂಬರ್‌ಗೆ ಕರೆ ಮಾಡಿದಾಗ ನಿಮಗೆ ಪ್ರಥಮ ಬಹುಮಾನ ರೂ.11,00,000 ಬಂದಿದೆ. ಸದ್ರಿ ಬಹುಮಾನದ ಹಣ ಸಿಗಬೇಕಾದರೆ, ರೂ.11ಸಾವಿರ ತೆರಿಗೆ ಕಟ್ಟಬೇಕು ಎಂದು ತಿಳಿಸಿದಂತೆ ಮಹಿಳೆ ಅವರ ಬ್ಯಾಂಕ್ ಖಾತೆಗೆ ರೂ.11 ಸಾವಿರವನ್ನು ಮೊಬೈಲ್ ಮೂಲಕ ವರ್ಗಾವಣೆ ಮಾಡಿದ್ದರು.

ಮರುದಿನ ಅದೇ ಮೊಬೈಲ್ ನಂಬರ್‌ನಿಂದ ಮಹಿಳೆಗೆ ಫೋನ್ ಕರೆ ಮಾಡಿ ಪುನಃ ರೂ 48,000ವನ್ನು ಅದೇ ಖಾತೆಗೆ ವರ್ಗಾವಣೆ ಮಾಡುವಂತೆ ತಿಳಿಸಿದಂತೆ ಮಹಿಳೆ ರೂ 48,000ವನ್ನು ಮೊಬೈಲ್ ಮೂಲಕ ವರ್ಗಾವಣೆ ಮಾಡಿದ್ದಾರೆ. ಆ ಸಮಯ ಬಹುಮಾನದ ಹಣ ಬೇಗನೆ ನಿಮಗೆ ಸಿಗುತ್ತದೆ ಎಂದು ಹೇಳಿರುತ್ತಾರೆ. ಇದಾದ ಎರಡು ದಿನಗಳ ಬಳಿಕ ಅದೇ ಮೊಬೈಲ್ ನಂಬರ್‌ನಿಂದ ಮಹಿಳೆಗೆ ಮತ್ತೊಮ್ಮೆ ಕರೆ ಮಾಡಿ ರೂ 52,000 ಜಿಎಸ್‌ಟಿ ಮತ್ತು ಸಿಜಿಎಸ್‌ಟಿ ಹಣವೆಂದು ರೂ 51,000 ಹಣವನ್ನು ನೀಡುವಂತೆ ತಿಳಿಸಿದ್ದರು. ಮಹಿಳೆ ಮತ್ತೆ ಅವರು ನೀಡಿದ ಖಾತೆಗೆ ಮೊಬೈಲ್‌ನಲ್ಲಿಯೇ ಈ ಹಣ ಪಾವತಿಸಿದ್ದರು.

ಎರಡು ದಿನ ಕಳೆದು ಮಹಿಳೆ ಹಾಗೂ ಮಹಿಳೆಯ ತಾಯಿಯ ಮೊಬೈಲ್‌ನಿಂದ ರೂ.1,52,000ವನ್ನು ಅದೇ ಖಾತೆಗೆ ವರ್ಗಾವಣೆ ಮಾಡಿರುತ್ತಾರೆ. ಅತ್ತ ಕಡೆಯಿಂದ ಮತ್ತೆ ಕರೆ ಮಾಡಿ ನಿಮ್ಮ ಖಾತೆ ವಿದ್ಯಾರ್ಥಿ ಖಾತೆಯಾಗಿದ್ದು ಇದಕ್ಕೆ ಹಣ ಕಳುಹಿಸಬೇಕಾದಲ್ಲಿ ಖಾತೆಯಲ್ಲಿ ರೂ.4,00,000 ಇರಬೇಕೆಂದು ತಿಳಿಸಿದರು. ಅವರು ಅರ್ಧ ಹಣವನ್ನು ಕಂಪೆನಿಯ ವತಿಯಿಂದ ಡೆಪಾಸಿಟ್ ಮಾಡುತ್ತೇವೆ. ಉಳಿದ ರೂ.2,20,000ವನ್ನು ಪಾವತಿಸುವಂತೆ ತಿಳಿಸಿದ್ದಾರೆ. ಹಣ ಕಳುಹಿಸಲು ನಿರಾಕರಿಸಿದಾಗ ಈ ಹಣ ಮಾತ್ರ ಕಟ್ಟಿದರೆ ಸಾಕು ಎಲ್ಲಾ ಷರತ್ತುಗಳು ಪೂರ್ತಿಯಾಗುತ್ತದೆ ಎಂದು ನಂಬಿದಿಸಿದ ಪ್ರಕಾರ ಮಹಿಳೆ ಮತ್ತೆ ರೂ.1,99,000ವನ್ನು ಅವರ ಖಾತೆಗೆ ವರ್ಗಾವಣೆ ಮಾಡಿದ್ದಾರೆ.

ಉಳಿದ ಹಣ ರೂ 21,000 ವನ್ನೂ ಬಳಿಕ ವರ್ಗಾವಣೆ ಮಾಡಿದ್ದಾರೆ. ಹಣ ವರ್ಗಾವಣೆ ಮಾಡಿದ ಕೂಡಲೇ ಅವರು ಮೂವತ್ತು ನಿಮಿಷದಲ್ಲಿ ಬಹುಮಾನದ ಹಣ ಖಾತೆಗೆ ಜಮೆ ಆಗುತ್ತದೆ ಎಂದು ತಿಳಿಸಿದ್ದರು. ಆ ಬಳಿಕ ಪದೇ ಪದೇ ಕರೆ ಮಾಡಿದರೂ ಬೇರೆ ಬೇರೆ ಕಾರಣ ನೀಡಿ ವಂಚಿಸಿದ್ದಾರೆ. ಮಹಿಳೆ ಆರೋಪಿಗಳ ಬೇರೆ ಬೇರೆ ಬ್ಯಾಂಕ್ ಖಾತೆಗೆ ಒಟ್ಟು ರೂ 5,34,000 ಹಣವನ್ನು ಫೋನ್ ಪೇ ಮೂಲಕ ಪಾವತಿಸಿದ್ದಾರೆ. ಈ ಕುರಿತು ಮಹಿಳೆ ಪುತ್ತೂರು ನಗರ ಪೊಲೀಸ್ ಠಾಣೆಗೆ ಸೆ.26ರಂದು ದೂರು ನೀಡಿದ್ದಾರೆ. ಪೊಲೀಸರು 420 ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here