ಕೊಂಬಾರು: ನ್ಯಾಯಾಲಯದ ಆದೇಶದಂತೆ ನಿರ್ಮಾಣವಾಗುತ್ತಿರುವ ಮೆಟ್ಟುತ್ತಾರು ಸೇತುವೆ-ಭರದಿಂದ ನಡೆಯುತ್ತಿರುವ ಕಾಮಗಾರಿ, ಬಹುತೇಕ ಪೂರ್ಣ

0

ಕಡಬ: ಕೊಂಬಾರು ಗ್ರಾಮದ ಮೆಟ್ಟುತ್ತಾರು ಎಂಬಲ್ಲಿ ನ್ಯಾಯಾಲಯದ ಆದೇಶದಂತೆ ಸೇತುವೆಯೊಂದು ನಿರ್ಮಾಣವಾಗುತ್ತಿದೆ. ಸುಮಾರು ಒಂದು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿ ಶೇ 80 ರಷ್ಟು ಮುಗಿದಿದೆ.

ದ.ಕ ಜಿಲ್ಲೆಯ ಕೊಂಬಾರು ಘಾಟಿ ತಪ್ಪಲಿನಲ್ಲಿ ಅರಣ್ಯ ಪ್ರದೇಶದಿಂದ ಆವೃತವಾಗಿರುವ ಗ್ರಾಮವಾಗಿದೆ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾಣುತ್ತಿದ್ದರೂ ಮೆಟ್ಟುತ್ತಾರು ಪ್ರದೇಶ ಮಾತ್ರ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿತ್ತು. ಇದಕ್ಕೆ ಮೂಲ ಕಾರಣ ಇಲ್ಲಿನ ಬೈಲೋಳಿ ಹೊಳೆಗೆ ಮೆಟ್ಟುತ್ತಾರು ಎಂಬಲ್ಲಿ ಸೇತುವೆ ನಿರ್ಮಾಣವಾಗದೇ ಇರುವುದು.

ಇದಕ್ಕಾಗಿಯೇ ಮೆಟ್ಟುತ್ತಾರು ಹೆಸರು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನಲ್ಲಿ ಪ್ರತಿಧ್ವನಿಸಿತ್ತು. ನ್ಯಾಯಾಲಯದ ಆದೇಶದಂತೆ, ನ್ಯಾಯಯುತ ಬೇಡಿಕೆಗೆ ಸರಕಾರ ತಲೆಬಾಗಿ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿತ್ತು. ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಸ್ಥಳೀಯರಾದ ಭುವನೇಶ್ವರ ಗೌಡ ಅಮ್ಚೂರು ಅವರು ಹೈಕೋರ್ಟ್ ನ್ಯಾಯವಾದಿ ಪ್ರವೀಣ್ ಕುಮಾರ್ ಕಟ್ಟೆ ಮುಖಾಂತರ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ ಪರಿಣಾಮ ಅನುದಾನ ಬಿಡುಗಡೆಯಾಗಿ ಸೇತುವೆ ನಿರ್ಮಾಣ ನಡೆಯುತ್ತಿದೆ. ಗುಂಡ್ಯ- ಕೈಕಂಬ- ಸುಬ್ರಮಣ್ಯ ರಾಜ್ಯ ಹೆದ್ದಾರಿಯಲ್ಲಿ ಬರುವ ಮಣಿಭಾಂಡದಿಂದ ಒಂದು ಕಿಲೋಮೀಟರ್ ನಷ್ಟು ಅಮ್ಚೂರು-ಪೆರುಂದೋಡಿ ಕಡೆ ಪ್ರಯಾಣಿಸಿದರೆ ಸಿಗುವ ಸ್ಥಳ ಮೆಟ್ಟುತ್ತಾರು. ಇಲ್ಲಿನ ದುರ್ಗಮ ರಸ್ತೆಯ ಮಧ್ಯೆ ಬೈಲೋಳಿಯಿಂದ ಮಣಿಭಾಂಡ ಕಡೆ ಹರಿಯುವ ಹೊಳೆಗೆ ಮೆಟ್ಟುತ್ತಾರುವಿನಲ್ಲಿ ಸೇತುವೆ ನಿರ್ಮಾಣವಾಗುತ್ತಿದೆ. 17.2.2023ರಂದು ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆಗೆ ಸರಕಾರಕ್ಕೆ ಆದೇಶ ಮಾಡಿದ್ದು, 20-2-2023ರಂದು ಈ ಬಗ್ಗೆ ಆನ್ ಲೈನ್ ಟೆಂಡರ್ ಕರೆಯಲಾಗಿತ್ತು. ಅದರಂತೆ ಸರಕಾರದ 50-54 ರ ಅಡಿಯಲ್ಲಿ ಅನುದಾನ ಮಂಜೂರಾಗಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಅನುಷ್ಟಾನ ಇಲಾಖೆ ಅಡಿಯಲ್ಲಿ ಕಾಮಗಾರಿ ನಿರ್ವಹಣೆಯಾಗುತ್ತಿದೆ. ಆಲಿಕುಂಞ ಎಂಬವರು ಗುತ್ತಿಗೆ ಪಡೆದು ಆರು ತಿಂಗಳ ಹಿಂದೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು ಕಾಮಗಾರಿ ಭರದಿಂದ ಸಾಗುತ್ತಿದೆ.

ಹೈಕೋರ್ಟ್ ಗೆ ಮೂರು ಬಾರಿ ರಿಟ್:
ಮೆಟ್ಟುತ್ತಾರು ಸೇತುವೆ ನಿರ್ಮಾಣದ ನಾಗರಿಕರ ಹಲವು ವರ್ಷಗಳ ಬೇಡಿಕೆ ಈಡೇರದೇ ಇದ್ದ ಹಿನ್ನೆಲೆಯಲ್ಲಿ ಭುವನೇಶ್ವರ ಗೌಡ ಅವರು 2015, 2017 ಮತ್ತು 2022ರಲ್ಲಿ ಹೈ ಕೋರ್ಟ್ ಗೆ ಮೂರು ರಿಟ್ ಅರ್ಜಿಗಳನ್ನು ಸಲ್ಲಿಸಿದ್ದರು. ಮೊದಲ ರಿಟ್ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರು ಮನವಿ ಕುರಿತು ತಿಂಗಳೊಳಗೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸೂಚಿಸಿತ್ತು. ಆದರೆ ಸರಕಾರದ ಕಡೆಯಿಂದ ಯಾವುದೇ ಸ್ಪಂದನೆ ದೊರೆಯದೇ ಇದ್ದುದರಿಂದ ಭುವನೇಶ್ವರ ಗೌಡ ಅವರು ಸುಪ್ರೀಂ ಕೋರ್ಟ್ ಮೊರೆಹೋಗಿದ್ದರಾದರೂ, ಸರಕಾರಕ್ಕೆ ಸ್ಪಷ್ಟ ನಿರ್ದೇಶನಕ್ಕೆ ಆದೇಶ ಮಾಡುವಂತೆ ಕೋರಿ ಹೈಕೋರ್ಟ್ನಲ್ಲಿ ಮತ್ತೊಂದು ರಿಟ್ ಅರ್ಜಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸಲಹೆ ನೀಡಿದ್ದರಿಂದ 2017ರಲ್ಲಿ ಭುವನೇಶ್ವರ ಗೌಡರು ಹೈಕೋರ್ಟ್ಗೆ ಎರಡನೇ ರಿಟ್ ಸಲ್ಲಿಸಿದ್ದರು. ಈ ಸಂದರ್ಭ, ಕಾಮಗಾರಿಗೆ 40 ಲಕ್ಷ ರೂ. ಅನುದಾನ ಮಂಜೂರಾಗಿದ್ದು ಚುನಾವಣಾ ನೀತಿ ಸಂಹಿತೆ ಮುಗಿದ ಕೂಡಲೇ ಕಾಮಗಾರಿ ಪ್ರಾರಂಭಿಸುವುದಾಗಿ ಸರಕಾರ ಹೈಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿತ್ತು. ಆದರೆ ನಾಲ್ಕು ವರ್ಷಗಳೇ ಕಳೆದರೂ ಕಾಮಗಾರಿ ಆರಂಭಗೊಳ್ಳದೇ ಇದ್ದುದರಿಂದ 2022ರಲ್ಲಿ ಮತ್ತೊಂದು ರಿಟ್ ಸಲ್ಲಿಕೆಯಾಗಿತ್ತು. ಈ ಸಂದರ್ಭ, ಕಾಮಗಾರಿಗೆ ಸರಕಾರ 1 ಕೋಟಿ ರೂ.ಮಂಜೂರು ಮಾಡಿತ್ತು.

LEAVE A REPLY

Please enter your comment!
Please enter your name here