ಮಾರ್ನೆಮಿಗೆ ಜೀವ ತುಂಬುತ್ತಿರುವ ಬಡ ಕಲಾವಿದರು – 15 ವರ್ಷಗಳ ಸಂಭ್ರಮದಲ್ಲಿ ಕುಂಬ್ರದ ಶಂಕರ ತಂಡದವರ ಕರಡಿ ವೇಷ

0

ಶಂಕರ ಮತ್ತು ತಂಡದವರ ಕರಡಿ ವೇಷ

@ ಸಿಶೇ ಕಜೆಮಾರ್
ಪುತ್ತೂರು: ತುಳುನಾಡಿನಲ್ಲಿ ಮಾರ್ನೆಮಿ ಅಂದರೆ ನವರಾತ್ರಿ ಆರಂಭವಾಯಿತು ಎಂದರೆ ಸಾಕು ಊರು ಊರು ಗ್ರಾಮ ಗ್ರಾಮಗಳಲ್ಲಿ ವೇಷಗಳದ್ದೇ ಒಡ್ಡೋಲಗ. ಒಂದು ಕಡೆಯಲ್ಲಿ ಹುಲಿ ವೇಷ, ಇನ್ನೊಂದು ಕಡೆಯಲ್ಲಿ ಕರಡಿ ವೇಷ ಮತ್ತೊಂದು ಕಡೆಯಲ್ಲಿ ಸಿಂಹ ಹೀಗೆ ಬಗೆಬಗೆಯ ವೇಷಗಳು ಮನೆಮನೆಗೆ ತೆರಳಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತವೆ. ದೂರದಿಂದ ಕೇಳುವ ತಾಸೆಯ ಶಬ್ದ, ಬ್ಯಾಂಡ್ ವಾಲಗದ ಅಬ್ಬರವೇ ತುಳುನಾಡಿನಲ್ಲಿ ಮಾರ್ನೆಮಿ ಆರಂಭವಾಯಿತು ಎಂಬುದನ್ನು ಹೇಳುತ್ತವೆ. ಗ್ರಾಮೀಣ ಪ್ರದೇಶದ ವೇಷಗಳಿಗೆ ತನ್ನದೇ ಆದ ವಿಶೇಷತೆ ಇದೆ. ಅಲ್ಲಿ ಜನರನ್ನು ರಂಜಿಸುವುದೇ ಗುರಿಯಾಗಿರದೇ ಭಕ್ತಿಯು ಎದ್ದು ಕಾಣುತ್ತದೆ. ಒಂದರ್ಥದಲ್ಲಿ ಮಾರ್ನೆಮಿಯ ವೇಷಗಳು ಹಬ್ಬದ ಕಳೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದರೆ ತಪ್ಪಾಗಲಾರದು. ಇಂತಹ ವೇಷಗಳಲ್ಲಿ ಒಳಮೊಗ್ರು ಗ್ರಾಮದ ಕುಂಬ್ರದ ಶಂಕರ ಮತ್ತು ತಂಡದವರು ಕಳೆದ 15 ವರ್ಷಗಳಿಂದ ಕರಡಿ ವೇಷ ಹಾಕಿಕೊಂಡು ಜನರನ್ನು ರಂಜಿಸುವ ಮೂಲಕ ಮಾರ್ನೆಮಿಗೆ ಜೀವ ತುಂಬುದ ಕೆಲಸವನ್ನು ಮಾಡುತ್ತಿದ್ದಾರೆ.

ಬಡ ಕಲಾವಿದರ ತಂಡ
ಶಂಕರ ಮತ್ತು ತಂಡದವರ ಕರಡಿ ವೇಷದಲ್ಲಿ ಒಟ್ಟು 7 ಮಂದಿ ಇದ್ದಾರೆ. ಇವರೆಲ್ಲರೂ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುವವರು ಆಗಿದ್ದಾರೆ. ಇಲ್ಲಿ ಶಂಕರ ಮುಖ್ಯ ಕರಡಿ ವೇಷಧಾರಿಯಾಗಿದ್ದರೆ ಒಬ್ಬ ಜೋಕರ್, ಮೂವರು ತಾಸೆ ಬಡಿಯುವವರು ಹಾಗೂ ಇಬ್ಬರು ಜೊತೆಗಾರರು ಇರುತ್ತಾರೆ. ಇವರು ಆರಂಭದಲ್ಲಿ ಸಿಂಹ ವೇಷ ಹಾಕಿದ್ದು ಬಳಿಕ ಕಳೆದ 15 ವರ್ಷಗಳಿಂದ ಕರಡಿ ವೇಷವನ್ನು ಹಾಕಿಕೊಂಡು ಬಂದಿದ್ದಾರೆ.

ದೈವ ದೇವರ ಹೆಸರಲ್ಲಿ ವೇಷ ಹಾಕುತ್ತಾರೆ
ನಾವು ಕೇವಲ ಮನರಂಜನೆಗಾಗಿ ವೇಷ ಹಾಕುತ್ತಿಲ್ಲ ಎನ್ನುವ ತಂಡದ ರಾಮಣ್ಣನವರು, ವೇಷ ಹಾಕುವ ಮೊದಲು ಹಿರಿಯರ ಕಾಲು ಹಿಡಿದು ಗ್ರಾಮದ ದೈವ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು ವೇಷ ಹಾಕುತ್ತೇವೆ. ವೇಷ ಕಳಚಲು ಹತ್ತಿರದ ದೇವಸ್ಥಾನಕ್ಕೆ ತೆರಳಿ ಅಲ್ಲಿ ಹರಕೆ ಒಪ್ಪಿಸಿ ವೇಷ ಕಳಚುತ್ತೇವೆ ಎನ್ನುತ್ತಾರೆ. ನಮ್ಮದು ಏನಿದ್ದರೂ ಸಾಂಪ್ರದಾಯಿಕ ಕರಡಿ ಕುಣಿತವಾಗಿದ್ದು ಇಲ್ಲಿ ಒಂದು ಕರಡಿ ಇದ್ದರೆ ಅದರೊಂದಿಗೆ ಒಬ್ಬ ಜೋಕರ್ ಕೂಡ ಇರುತ್ತಾನೆ. ಇವರಿಬ್ಬರ ಕುಣಿತ ನಡೆಯುತ್ತದೆ ಎನ್ನುತ್ತಾರೆ.

ಸಾಂಪ್ರದಾಯಿಕ ಕರಡಿ ವೇಷ
ಇಂದಿನ ಆಧುನಿಕತೆಯ ಕಾಲದಲ್ಲಿ ವೇಷಗಳಿಗೂ ಆಧುನಿಕತೆಯ ಟಚ್ ಬಂದಿದ್ದರೂ ಶಂಕರ ಮತ್ತು ತಂಡದವರ ಕರಡಿ ಕುಣಿತ ಪಕ್ಕಾ ಸಾಂಪ್ರದಾಯಿಕ ಕರಡಿ ಕುಣಿತವಾಗಿದೆ. ಗೋಣಿ ಚೀಲದ ಹಗ್ಗದಿಂದ ಮಾಡಿದ ಕರಡಿಯ ಅಂಗಿ ಹಾಗೂ ಮುಖವಾಡವನ್ನು ಬಳಸಿಕೊಳ್ಳಲಾಗಿದೆ. ಜೋಕರ್‌ಗೆ ಹ್ಯಾಟ್ ಹಾಗೂ ಜೋಕರ್ ಅಂಗಿ ಮತ್ತು ಮರದಿಂದ ತಯಾರಿಸಿದ ಬಂದೂಕವನ್ನು ಬಳಸಿಕೊಳ್ಳಲಾಗಿದೆ. ಯಾವುದೇ ಆಧುನಿಕತೆಯ ಸ್ಪರ್ಶವಿಲ್ಲದೆ ಅದೇ ಹಳೆಯ ಶೈಲಿಯಲ್ಲಿ ಇಂದಿಗೂ ಕರಡಿ ಕುಣಿತವನ್ನು ನಡೆಸಿಕೊಂಡು ಬಂದಿದ್ದಾರೆ. ಇವರ ಈ ಸಾಹಸಕ್ಕೆ ಒಂದು ಹ್ಯಾಟ್ಸ್‌ಅಫ್ ಹೇಳಲೇಬೇಕಾಗಿದೆ.

‘ ತುಂಬಾ ಕಷ್ಟವಾಗುತ್ತದೆ ಆದರೂ ಕಳೆದ 15 ವರ್ಷಗಳಿಂದ ಮಾರ್ನೆಮಿಯ ಸಮಯದಲ್ಲಿ ವೇಷ ಹಾಕಿಕೊಂಡು ಬಂದಿದ್ದೇವೆ. ಗ್ರಾಮದ ಜನರು ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ. ಹತ್ತಿರದ ದೇವಸ್ಥಾನಕ್ಕೆ ತೆರಳಿ ಅಲ್ಲಿ ಹರಕೆ ಒಪ್ಪಿಸಿ ವೇಷ ಕಳಚುತ್ತೇವೆ.’
ರಾಮಣ್ಣ ಕುಂಬ್ರ,
ಕರಡಿ ವೇಷದ ತಂಡದ ಸದಸ್ಯ

LEAVE A REPLY

Please enter your comment!
Please enter your name here