ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಶ್ರೀ ಶಾರದಾ ಪೂಜೆ ಹಾಗೂ ಆಯುಧ ಪೂಜೆ

0

ಶಾರದೆಯ ಅನುಗ್ರಹವಿದ್ದಲ್ಲಿ ಮಹತ್ತರ ಸಾಧನೆ ಸಾಧ್ಯ : ಸುಬ್ರಹ್ಮಣ್ಯ ನಟ್ಟೋಜ


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಶುಕ್ರವಾರ ಶ್ರೀ ಶಾರದಾ ಪೂಜೆ, ಅಕ್ಷರಾಭ್ಯಾಸ ಹಾಗೂ ಆಯುಧಪೂಜೆ ಪ್ರಯುಕ್ತ ವಾಹನ ಪೂಜೆ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ನಡೆಯಿತು. ವೇ.ಮೂ.ದೇವರಥ ಭಟ್ಟರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ಸಂಯೋಜನೆಗೊಂಡಿತು.


ಈ ಸಂದರ್ಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಸ್ವಾತಂತ್ರ್ಯಾನಂತರ ಮೊದಲ ಬಾರಿಗೆ ಶ್ರೀ ಶಾರದಾದೇವಿಯ ಮೂಲ ಆವಾಸಸ್ಥಾನವಾದ ಕಾಶ್ಮೀರದಲ್ಲಿ ನವರಾತ್ರಿ ಉತ್ಸವ ಆಯೋಜನೆಗೊಂಡಿದೆ. ಶಾರದಾಮಾತೆಯನ್ನು ನಿರಂತರವಾಗಿ ಆರಾಧಿಸಿಕೊಂಡು ಬರುತ್ತಿರುವ ಕಾಶ್ಮೀರಿ ಪಂಡಿತರು ತಮ್ಮ ಮೇಲಿನ ಹೇಯ ದೌರ್ಜನ್ಯದ ಹೊರತಾಗಿಯೂ ಶೈಕ್ಷಣಿಕ ಸಾಧನೆ ಮೆರೆಯುತ್ತಿದ್ದಾರೆ. ಮನೆ ಮಠಗಳನ್ನು ಕಳೆದುಕೊಂಡು ಡೇರೆಗಳಲ್ಲಿ ವಾಸಿಸುತ್ತಿದ್ದರೂ ಜೆಇಇ, ನೀಟ್‌ನಂತಹ ಪರೀಕ್ಷೆಗಳಲ್ಲಿ ಅತ್ಯುನ್ನತ ಸಾಧನೆ ಮೆರೆಯುತ್ತಿದ್ದಾರೆ. ಶಾರದಾದೇವಿಯ ಅನುಗ್ರಹ ನಮ್ಮ ಸಾಧನೆಗೆ ಮೂಲವಾಗುತ್ತದೆ ಎಂದರು.


ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಶ್ರೀಕೃಷ್ಣ ನಟ್ಟೋಜ, ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ ಕೆ, ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ, ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಎಂ, ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ, ಕ್ಯಾಂಪಸ್ ನಿರ್ದೇಶಕ ರಾಜೇಂದ್ರ ಪ್ರಸಾದ್, ಕ್ಯಾಂಪಸ್ ನಿರ್ವಾಹಕ ರವಿಚಂದ್ರ, ಬೋಧಕ ಬೋಧಕೇತರ ವೃಂದ, ವಿದ್ಯಾರ್ಥಿಗಳು ಹಾಗೂ ಹೆತ್ತವರು ಹಾಜರಿದ್ದರು. ವಿದ್ಯಾರ್ಥಿ ಸಂಘದ ನಾಯಕರುಗಳಿಂದ ಶಾರದಾದೇವಿಗೆ ವಿಶೇಷ ಆರತಿ ನಡೆಯಿತು. ಇದಕ್ಕೂ ಮೊದಲಿಗೆ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಶ್ರೀ ಶಾರದಾಪೂಜೆ ಆಯೋಜನೆಗೊಂಡಿತು.
ಶ್ರೀ ಶಾರದಾ ಪೂಜೆಯ ತರುವಾಯ ಅಂಬಿಕಾ ಪರಿವಾರಕ್ಕೆ ಸೇರಿದ ಹಲವಾರು ವಾಹನಗಳಿಗೆ ಆಯುಧಪೂಜೆ ಪ್ರಯುಕ್ತ ವಾಹನಪೂಜೆ ನೆರವೇರಿತು.

LEAVE A REPLY

Please enter your comment!
Please enter your name here