ಪುತ್ತೂರು ಬಂಟರ ಭವನದಲ್ಲಿ ವಿಶ್ವ ಬಂಟರ ಸಮ್ಮೇಳನದ ಆಮಂತ್ರಣ ಪತ್ರ ಬಿಡುಗಡೆ

0

ಬಂಟ ನಿಗಮ ಸ್ಥಾಪನೆಗೆ ಪೂರ್ಣ ಸಹಕಾರ- ಅಶೋಕ್ ಕುಮಾರ್ ರೈ


ಪುತ್ತೂರು: ಅ. 28 ಮತ್ತು 29 ರಂದು ಉಡುಪಿ ಅಜ್ಜರಕಾಡು ಮೈದಾನದಲ್ಲಿ ನಡೆಯಲಿರುವ ವಿಶ್ವ ಬಂಟರ ಸಮ್ಮೇಳನದ ಆಮಂತ್ರಣ ಪತ್ರ ಬಿಡುಗಡೆ ಮತ್ತು ಸಮಾಲೋಚನಾ ಸಭೆಯು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಅ. 21 ರಂದು ಪುತ್ತೂರು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಿತು.


ಶಾಸಕ ಅಶೋಕ್‌ಕುಮಾರ್ ರೈಯವರು ವಿಶ್ವಬಂಟರ ಸಮ್ಮೇಳನದ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಿ, ಮಾತನಾಡಿ ವಿಶ್ವ ಬಂಟರ ಸಮ್ಮೇಳನ ಅರ್ಥಪೂರ್ಣವಾಗಿ ನಡೆಯಲಿ ಎಂದು ಶುಭಹಾರೈಸಿದರು. ಶಶಿಕುಮಾರ್ ರೈ ಬಾಲ್ಯೊಟ್ಟುರವರ ನೇತೃತ್ವದಲ್ಲಿ ನಾವೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಕಾರ‍್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಹೇಳಿದ ಅವರು, ರಾಜ್ಯ ಸರಕಾರ ಬಂಟ ನಿಗಮ ಸ್ಥಾಪನೆ ಮಾಡಿ, ಸಮಾಜದ ಅಭಿವೃದ್ಧಿಗೆ ಪೂರ್ಣ ಸಹಕಾರವನ್ನು ನೀಡುವ ಕಾರ‍್ಯದಲ್ಲಿ ರಾಜ್ಯ ಸರಕಾರದ ಪ್ರತಿನಿಧಿಯಾಗಿ ನಾನು ಸಹ ಪೂರ್ಣ ಬೆಂಬಲವನ್ನು ನೀಡುವುದಾಗಿ ಹೇಳಿದರು.


ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ- ಹರೀಶ್ ಶೆಟ್ಟಿ:
ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿರವರು ಮಾತನಾಡಿ ಪುತ್ತೂರಿನವರು ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನದಲ್ಲಿ ಭಾಗವಹಿಸುವಂತೆ ವಿನಂತಿಸಿದರು.

ಮಾದರಿಯಾಗಲಿ- ಹೇಮನಾಥ ಶೆಟ್ಟಿ:
ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ವಿಶ್ವ ಬಂಟರ ಸಮ್ಮೇಳನವು ವಿಶ್ವಕ್ಕೆ ಮಾದರಿಯಾಗಲಿ ಎಂದು ಹಾರೈಸಿ, ಕಾರ‍್ಯಕ್ರಮ ಬಂಟ ಸಮಾಜದ ಐಕ್ಯತೆಯ ಸಂಕೇತವಾಗಿದೆ ಎಂದರು.


ಗೌರವವನ್ನು ಪಡೆದುಕೊಂಡಿದ್ದಾರೆ- ಶಶಿಕುಮಾರ್ ರೈ:
ತಾಲೂಕು ಬಂಟರ ಸಂಘದ ಆಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಸ್ವಾಗತಿಸಿ, ಮಾತನಾಡಿ ಐಕಳ ಹರೀಶ್ ಶೆಟ್ಟಿರವರು ಬಂಟ ಸಮಾಜದ ಅಭಿವೃದ್ಧಿಗೆ ಈಗಾಗಲೇ 30 ಕೋಟಿ ರೂ, ನೆರವು ನೀಡಿ, ಸಮಾಜದ ಗೌರವವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿ, ಪುತ್ತೂರಿನಿಂದ ವಿಶ್ವ ಬಂಟರ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂಟ ಬಾಂಧವರು ಭಾಗವಹಿಸುವಂತೆ ವಿನಂತಿಸಿದರು.


ವಿಶ್ವ ಬಂಟರ ಸಮ್ಮೇಳನದ ಸಾಂಸ್ಕೃತಿಕ ಕಾರ‍್ಯದರ್ಶಿ ಚಂದ್ರಹಾಸ್ ಶೆಟ್ಟಿ ರಂಗೋಲಿ, ಉಪಾಧ್ಯಕ್ಷ ವಿಶ್ವನಾಥ ಶೆಟ್ಟಿ ಕರ್ನಿರೆರವರುಗಳು ಸಂದರ್ಭೋಚಿತವಾಗಿ ಮಾತನಾಡಿದರು,
ವೇದಿಕೆಯಲ್ಲಿ ಮಾಜಿ ಶಾಸಕರುಗಳಾದ ಶಕುಂತಳಾ ಟಿ.ಶೆಟ್ಟಿ, ಮಲ್ಲಿಕಾ ಪ್ರಸಾದ್, ಉದ್ಯಮಿ ಚಿಕ್ಕಪ್ಪ ನಾಕ್ ಅರಿಯಡ್ಕ, ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ತಾಲೂಕು ಬಂಟರ ಸಂಘದ ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ, ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್ ಶೆಟ್ಟಿ ಉಪಸ್ಥಿತರಿದ್ದರು.


ಶಶಿಕುಮಾರ್ ರೈ ಬಾಲ್ಯೊಟ್ಟು, ರಮೇಶ್ ರೈ ಡಿಂಬ್ರಿ, ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ ಮತ್ತು ಎ.ಕೆ.ಜಯರಾಮ ರೈರವರುಗಳು ಅತಿಥಿಗಳನ್ನು ಗೌರವಿಸಿದರು.
ಮಲ್ಲಿಕಾ ಜೆ.ರೈ ಪ್ರಾರ್ಥನೆಗೈದರು. ತಾಲೂಕು ಬಂಟರ ಸಂಘದ ಪ್ರಧಾನ ಕಾರ‍್ಯದರ್ಶಿ ರಮೇಶ್ ರೈ ಡಿಂಬ್ರಿ ವಂದಿಸಿ, ನಿರ್ದೇಶಕ ರಾಕೇಶ್ ರೈ ಕೆಡೆಂಜಿ ಕಾರ‍್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ತಾಲೂಕು ಬಂಟರ ಸಂಘದ ಪದಾಧಿಕಾರಿಗಳು, ನಿರ್ದೇಶಕರುಗಳು, ಮಾತೃ ಸಂಘ, ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಬಂಟರ ಸಂಘದ ಪದಾಧಿಕಾರಿಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here