ಬೆಟ್ಟಂಪಾಡಿ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

0

ಭಾಷೆಯು ಭಾವವನ್ನು ವ್ಯಕ್ತಪಡಿಸುವ ಪರಿಣಾಮಕಾರಿ ಮಾಧ್ಯಮ- ಪ್ರೊ. ಮಂಜುಳಾದೇವಿ

ಬೆಟ್ಟಂಪಾಡಿ: ಭಾಷೆಯು ಭಾವವನ್ನು ವ್ಯಕ್ತಪಡಿಸುವ ಪರಿಣಾಮಕಾರಿ ಮಾಧ್ಯಮ. ಕನ್ನಡವು ಹಳೆಗನ್ನಡದಿಂದ ಹೊಸಗನ್ನಡಕ್ಕೆ ಹಲವಾರು ಹಂತಗಳಲ್ಲಿ ರೂಪಾಂತರಗೊಂಡು ತನ್ನದೇ ಆದ ವೈಶಿಷ್ಟ್ಯತೆ ಮತ್ತು ಶ್ರೀಮಂತಿಕೆಯನ್ನು ಹೊಂದಿದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮಂಜುಳಾದೇವಿ ಹೇಳಿದರು.

ಗಣ್ಯರು, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಕನ್ನಡ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನಮನ ಸಲ್ಲಿಸಿದರು. ವಿದ್ಯಾರ್ಥಿ ಸಮೂಹದಿಂದ ಪ್ರಖ್ಯಾತ ಸಾಹಿತಿಗಳು ಬರೆದ ಐದು ಕನ್ನಡ ಪ್ರೇಮವನ್ನು ಸಾರುವ ಗೀತೆಗಳನ್ನು ಹಾಡಲಾಯಿತು. ವಿದ್ಯಾರ್ಥಿನಿ ಪೌರ್ಣಮಿ ಇವರು ‘ಕರ್ನಾಟಕದ ಇತಿಹಾಸ ಮತ್ತು ರಾಜ್ಯ ರಚನೆ’ ವಿಷಯದ ಕುರಿತು ಕಿರು ಮಾಹಿತಿ ನೀಡಿದರು.
ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕ ಡಾ. ಕಾಂತೇಶ್ ಎಸ್ ಮಾತನಾಡಿ ರಾಷ್ಟ್ರಪ್ರೇಮದ ಜೊತೆಗೆ ಭಾಷೆ ಪ್ರೇಮವೂ ಇರಬೇಕು. ಇದರ ಸಂರಕ್ಷಣೆ ನಮ್ಮ ಕರ್ತವ್ಯ ಮತ್ತು ಇದು ಕೇವಲ ಮಾತಿನಲ್ಲಿರದೆ ಕ್ರಿಯೆಯಲ್ಲಿ ಅಭಿವ್ಯಕ್ತವಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಗ್ರಂಥಪಾಲಕ ರಾಮ ಕೆ ಮಾತನಾಡಿ ಎಲ್ಲಾ ಭಾಷೆಗಳನ್ನು ಕಲಿಯುವುದರ ಜೊತೆಗೆ ಕನ್ನಡವನ್ನು ಬೆಳೆಸಿ ಹಾಗೂ ಮಾನವೀಯ ಮೌಲ್ಯಗಳ ಜೊತೆಗೆ ಮಾನವೀಯತೆಯನ್ನು ಮೈಗೂಡಿಸಿಕೊಳ್ಳುವಂತೆ ಹೇಳಿದರು.


ಕಾರ್ಯಕ್ರಮದಲ್ಲಿ ಉಪನ್ಯಾಸಕ ವೃಂದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕಾಲೇಜಿನ ಸಾಂಸ್ಕೃತಿಕ ಸಂಘದ ಸಂಚಾಲಕ ತಿಮ್ಮಯ್ಯ ಎಲ್.ಎಮ್ ಸ್ವಾಗತಿಸಿ,ವಿದ್ಯಾರ್ಥಿನಿ ಪಲ್ಲವಿ ಬಿ ರೈ ವಂದಿಸಿ, ಸಾಂಸ್ಕೃತಿಕ ಸಂಘದ ವಿದ್ಯಾರ್ಥಿ ಸಂಚಾಲಕಿ ನಯನಾ ಬಿ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here