ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 28 ಸ್ಥಾನದಲ್ಲೂ ಎನ್‌ಡಿಎ ಗೆಲುವು

0

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ

*ಬಿಜೆಪಿ ನನಗೆ ಎಲ್ಲವನ್ನೂ ನೀಡಿದೆ-ನಾನು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ

*ಯಾರೇ ಸ್ಪರ್ಧೆ ಮಾಡಿದರೂ ದ.ಕದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ

*ರಾಜ್ಯ ಕಾಂಗ್ರೆಸ್ ಸರಕಾರದ ಬಾಳ್ವಿಕೆ ಕಡಿಮೆ

*ಕಸ್ತೂರಿರಂಗನ್ ವರದಿ ಜಾರಿಗೆ ವಿರೋಧ

ಕಾಣಿಯೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಎನ್.ಡಿ.ಎ. 25 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದೀಗ ಜೆಡಿಎಸ್ ಕೂಡ ಎನ್.ಡಿ.ಎ. ಜೊತೆಯಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 28ರಲ್ಲಿ 28 ಸ್ಥಾನಗಳನ್ನೂ ಎನ್.ಡಿ.ಎ.ಗೆದ್ದುಕೊಳ್ಳುವ ಮೂಲಕ ವಿಧಾನ ಸಭಾ ಚುನಾವಣೆಯಲ್ಲಿ ಕಳೆದುಕೊಂಡದ್ದನ್ನು ಬಡ್ಡಿ ಸಮೇತ ಪಡೆದುಕೊಳ್ಳಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವರೂ ಆಗಿರುವ ಸಂಸದ ಡಿ.ವಿ. ಸದಾನಂದ ಗೌಡ ಹೇಳಿದರು.


ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಡಿ.ವಿ.ಎಸ್ ಕರ್ನಾಟಕದ ವಿಧಾನ ಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಹಿನ್ನಡೆಯಾಗಿತ್ತು. ಆದರೆ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅಸಾಧ್ಯ. ಲೋಕಸಭಾ ಚುನಾವಣೆ ರಾಷ್ಟ್ರೀಯ ವಿಚಾರದಲ್ಲಿ ನಡೆಯುವ ಚುನಾವಣೆ. ನರೇಂದ್ರ ಮೋದಿ ನೇತೃತ್ವದ ಒಂಬತ್ತುವರೆ ವರ್ಷದ ಆಡಳಿತ ಅತ್ಯಂತ ಯಶಸ್ವಿಯಾಗಿದೆ. ಅವರಿಂದ ಅಭಿವೃದ್ಧಿಗೆ ಅರ್ಥ ಬಂದಿದೆ ಎಂದು ಹೇಳಿದರು.
ಬಿಜೆಪಿ ನನಗೆ ಎಲ್ಲವನ್ನೂ ನೀಡಿದೆ; ಬಿಜೆಪಿ ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಎಂಎಲ್‌ಎ, ಎಂಪಿ, ಎಂಎಲ್ಸಿ, ಮುಖ್ಯಮಂತ್ರಿ, ಕೇಂದ್ರ ಸಚಿವ ಸ್ಥಾನ, ರಾಜ್ಯ, ರಾಷ್ಟ್ರೀಯ ಹುದ್ದೆಗಳನ್ನು ನೀಡಿದೆ. ಇನ್ನು ಇರುವುದು ನಾನು ಏನಾದರೂ ಪಕ್ಷಕ್ಕೆ ನೀಡುವುದು ಆದ್ದರಿಂದ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯ ಕಾಂಗ್ರೆಸ್ ಸರಕಾರದ ಬಾಳ್ವಿಕೆ ಕಡಿಮೆ: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲೇ ಆಂತರಿಕ ಕಚ್ಚಾಟ ಆರಂಭಗೊಂಡಿದೆ. ಪಕ್ಷದ ಶಾಸಕರು, ಸಚಿವರೇ ಅಸಮಾಧಾನ ಹೊರಹಾಕುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರಕಾರ ಮನೆಯೊಂದು ನೂರು ಬಾಗಿಲಿನಂತೆ ಇದೆ ಎಂದ ಅವರು ರಾಜ್ಯದ ಜನರೇ ರಾಜ್ಯದ ಕಾಂಗ್ರೆಸ್ ಸರಕಾರ ಹೆಚ್ಚು ಸಮಯ ಬಾಳ್ವಿಕೆ ಬರುವುದಿಲ್ಲ ಎನ್ನುತ್ತಿದ್ದಾರೆ ಎಂದರಲ್ಲದೆ, ಕಾಂಗ್ರೆಸ್ ಈ ಹಿಂದಿನಿಂದಲೂ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಲೇ ಬಂದಿದೆ ಎಂದರು.
ಬಿಜೆಪಿಗೆ ಹಿನ್ನಡೆಯಿಲ್ಲ: ಲೋಕಸಭಾ ಚುನಾವಣೆಗೆ ದ.ಕ. ಕ್ಷೇತ್ರದಲ್ಲಿ ಅರುಣ್ ಕುಮಾರ್ ಪುತ್ತಿಲ ಬಂಡಾಯ ಸ್ಪರ್ಧೆ ಮಾಡುವ ಸಾಧ್ಯತೆ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸದಾನಂದ ಗೌಡರು, ನಾನು ಯಾವುದೇ ವ್ಯಕ್ತಿಯ ಬಗ್ಗೆ ಮಾತನಾಡುವುದಿಲ್ಲ. ಆದರೆ ಲೋಕಸಭಾ ಚುನಾವಣೆಯಲ್ಲಿ ಯಾರೇ ಸ್ಪರ್ಧೆ ಮಾಡಿದರೂ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದರು.
ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ: ಕಸ್ತೂರಿ ರಂಗನ್ ವರದಿಯನ್ನು ಈ ಭಾಗದಲ್ಲಿ ಅನುಷ್ಠಾನ ಮಾಡುವುದನ್ನು ನಾನು ಈ ಹಿಂದಿನಿಂದಲೂ ವಿರೋಧಿಸಿದ್ದೇನೆ. ಸ್ಯಾಟಲೈಟ್ ಮೂಲಕ ಸಮೀಕ್ಷೆ ನಡೆಸಿದ್ದರಿಂದ ಈ ಭಾಗದ ಅಡಿಕೆ, ರಬ್ಬರ್ ಕೃಷಿ ಪ್ರದೇಶವನ್ನೂ ಅರಣ್ಯ ಎಂದು ಕಸ್ತೂರಿ ರಂಗನ್ ವರದಿಗೆ ಸೇರಿಸಲಾಗಿದೆ. ಈ ಹಿಂದೆ ಕಸ್ತೂರಿ ರಂಗನ್ ವರದಿ ಅನುಷ್ಠಾನ ಮಾಡದಂತೆ ಪ್ರಧಾನಿಗಳಿಗೂ ಒತ್ತಡ ಹಾಕಿದ್ದೇವು ಇದಕ್ಕೆ ಬದಲಿ ವ್ಯವಸ್ಥೆ ನೋಡುವ ಅಗತ್ಯ ಇದೆ ಎಂದು ಡಿ.ವಿ. ಹೇಳಿದರು.
ಸೇವೆ ಸಮರ್ಪಣೆ: ಡಿ.ವಿ.ಸದಾನಂದ ಗೌಡ ಅವರು ಬುಧವಾರ ಸಂಜೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದರು. ಕ್ಷೇತ್ರದಲ್ಲಿ ಸರ್ಪಸಂಸ್ಕಾರ, ಆಶ್ಲೇಷ ಬಲಿ, ಮಹಾಭಿಷೇಕ ಸೇವೆ ನೆರವೇರಿಸಿದರು. ಪತ್ನಿ ಡಾಟಿ ಸದಾನಂದ ಗೌಡ, ಪುತ್ರ ಕಾರ್ತಿಕ್, ಅವರ ಪತ್ನಿ ಹಾಗೂ ಮನೆಯವರು ಜೊತೆಗಿದ್ದರು. ದೇವಳದ ವತಿಯಿಂದ ಡಿ.ವಿ.ಸದಾನಂದ ಗೌಡ ಅವರನ್ನು ಗೌರವಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಸದಸ್ಯರಾದ ಪ್ರಸನ್ನ ದರ್ಬೆ, ವನಜಾ ಭಟ್, ಶೋಭಾ ಗಿರಿಧರ್, ಶ್ರೀಕುಮಾರ್ ಬಿಲದ್ವಾರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here