@ ಸಿಶೇ ಕಜೆಮಾರ್
ಪುತ್ತೂರು: ಹೆಚ್ಚಾಗಿ ನಾಯಿಗಳು ಮನೆಯ ಮೂಲೆಯೊಂದರಲ್ಲಿ ಬೆಚ್ಚಗಿನ ಜಾಗ ಹುಡುಕಿ ಮರಿ ಹಾಕುವುದನ್ನು ನಾವೆಲ್ಲ ನೋಡಿದ್ದೇವೆ. ಆದರೆ ಇಲ್ಲೊಂದು ನಾಯಿ ಬರೋಬ್ಬರಿ ಮೂರು ಮಹಡಿಗಳನ್ನು ಹತ್ತಿಕೊಂಡು ಹೋಗಿ ಅಲ್ಲಿ 5 ಮರಿಗಳಿಗೆ ಜನ್ಮ ನೀಡಿದ ಪ್ರಸಂಗ ನಡೆದಿದೆ. ಕುಂಬ್ರ ನ್ಯೂ ಫ್ಯಾಮಿಲಿ ಕಾಂಪ್ಲೆಕ್ಸ್‌ನಲ್ಲಿ ಈ ಪ್ರಸಂಗ ನಡೆದಿದ್ದು ಎಲ್ಲಿಂದಲೋ ಬಂದ ಬೀದಿ ನಾಯಿಯೊಂದು ಇಲ್ಲಿನ ಜನರು ಹಾಕಿದ್ದ ತಿಂಡಿ ತಿನಿಸುಗಳನ್ನು ತಿಂದು ಇದೇ ಕಾಂಪ್ಲೆಕ್ಸ್‌ನ ಮೂರನೇ ಮಹಡಿಯನ್ನೇರಿ ಕಟ್ಟಡದ ಟೆರೇಸ್‌ನ ಮೇಲೆ ರಾಶಿ ಹಾಕಿದ್ದ ಮರಳಿನ ಮಧ್ಯೆ ಮರಿ ಹಾಕಿದೆ.
ಪ್ರತಿ ದಿನ ಹತ್ತಿ ಇಳಿಯುತ್ತೆ…
ಈ ನಾಯಿ ತನ್ನ ಕಂದಮ್ಮಗಳ ಜೋಪಾನಕ್ಕಾಗಿ ಈ ರೀತಿ ಮಾಡಿರಲೂಬಹುದು ಆದರೆ ಪ್ರತಿದಿನ ಬರೋಬ್ಬರಿ 50 ಕ್ಕೂ ಅಧಿಕ ಮೆಟ್ಟಿಲುಗಳನ್ನು ಹತ್ತಿ ಇಳಿಯುತ್ತದೆ. ಹಗಲು ಹೊತ್ತಲ್ಲಿ ಅಂಗಡಿ, ಹೊಟೇಲ್‌ನ ಪಕ್ಕದಲ್ಲಿ ಮಲಗಿಕೊಂಡಿರುವ ಈ ನಾಯಿ ಮರಿಗಳಿಗೆ ಹಾಲುಣಿಸಲು ಮೆಟ್ಟಿಲುಗಳನ್ನು ಹತ್ತಿ ಹೋಗಿ ಮರಿಗಳಿಗೆ ಹಾಲುಣಿಸಿ ಮತ್ತೆ ಬಂದು ಮಲಗಿಕೊಂಡಿರುತ್ತದೆ.
ಮರಿಗಳು ಸುರಕ್ಷಿತ
ಮಹಡಿಯ ಮೇಲಿನ ಟೆರೇಸ್‌ನಲ್ಲಿ ಮರಿ ಹಾಕಿದ್ದರಿಂದ ಮರಿಗಳು ಸುರಕ್ಷಿತವಾಗಿವೆ. ಟೆರೇಸ್‌ನ ಮೇಲೆ ಶೀಟಿನ ಮಾಡು ಇರುವುದರಿಂದ ಮಳೆ, ಗಾಳಿಯ ಭಯವಿಲ್ಲ ಇದಲ್ಲದೆ ಮರಿಗಳು ಕೆಳಕ್ಕೆ ಬೀಳಬಹುದು ಎಂಬ ಚಿಂತೆ ಇಲ್ಲ ಅಲ್ಲದೆ ಇತರ ಪ್ರಾಣಿಗಳು ಮರಿಗಳಿಗೆ ತೊಂದರೆ ಮಾಡಬಹುದು ಎಂಬ ಭಯವೂ ಇಲ್ಲ. ಈ ಎಲ್ಲವನ್ನು ಅರಿತುಕೊಂಡೇ ಈ ನಾಯಿ ಇಲ್ಲಿ ಮರಿ ಹಾಕಿಬಹುದೇ ಒಟ್ಟಿನಲ್ಲಿ ತಾಯಿ ಪ್ರೀತಿಯೊಂದು ಇಲ್ಲಿ ಎದ್ದು ಕಾಣುತ್ತಿದೆ. ಇದೇ ಬಿಲ್ಡಿಂಗ್‌ಗೆ ಬಂದ ಬೆಕ್ಕೊಂದು ಕೂಡ 2 ಮರಿಗಳಿಗೆ ಜನ್ಮ ನೀಡಿದೆ. ಹಿರಿಯರು ಹೇಳುವ ಪ್ರಕಾರ ಒಂದು ಕಟ್ಟಡಕ್ಕೆ ನಾಯಿ, ಬೆಕ್ಕು ಬಂದು ಮರಿ ಹಾಕಿದರೆ ಅದು ಶುಭ ಸೂಚನೆಯಂತೆ, ಇದರಿಂದ ಒಳಿತಾಗುವ ಲಕ್ಷಣ ಇದೆ ಎಂದು ಹೇಳುತ್ತಾರೆ ಅದೇನೇ ಇರಲಿ ಪ್ರಾಣಿಯೊಂದರ ತಾಯಿ ಪ್ರೀತಿ ಇಲ್ಲಿ ಅನಾವರಣಗೊಂಡಿರುವುದು ಮಾತ್ರ ಸುಳ್ಳಲ್ಲ.
ಅತ್ಯಂತ ಪ್ರಾಮಾಣಿಕ ಶ್ವಾನ
ಈ ನಾಯಿಯು ಎಲ್ಲಿಂದ ಬಂತು ಎನ್ನುವುದು ಯಾರಿಗೂ ಗೊತ್ತಿಲ್ಲ ಆದರೆ ಕಾಂಪ್ಲೆಕ್ಸ್‌ಗೆ ಬಂದ ಪ್ರಾರಂಭದಲ್ಲಿ ಅಲ್ಲಿ ಇಲ್ಲಿ ಸುತ್ತಾಡುತ್ತಾ ಇದ್ದ ನಾಯಿಗೆ ಇಲ್ಲಿನ ಕೆಲವು ಮಂದಿ ತಿಂಡಿ, ತಿನಿಸುಗಳನ್ನು ಹಾಕಲು ಆರಂಭಿಸಿದ್ದರು. ಇವರಲ್ಲಿ ಮುಖ್ಯವಾಗಿ ಇಲ್ಲಿನ ರೋಯಲ್ ಸೂಪರ್ ಬಝಾರ್‌ನ ರಮೇಶ್ ಆಳ್ವ ಕಲ್ಲಡ್ಕರವರು ಮೂಕ ಪ್ರಾಣಿ ನಾಯಿಗೆ ಅನ್ನ, ಆಹಾರ, ನೀರು ಕೊಡುವ ಮೂಲಕ ಮಾನವೀಯತೆ ತೋರಿಸುತ್ತಿದ್ದಾರೆ. ಇವರ ಅಂಗಡಿ ಪಕ್ಕದಲ್ಲೇ ಯಾರಿಗೂ ಯಾವುದೇ ತೊಂದರೆ ಕೊಡದೇ ಅದರಷ್ಟಕ್ಕೆ ಮಲಗಿಕೊಂಡಿರುವ ಈ ನಾಯಿಯು ಅತ್ಯಂತ ಪ್ರಾಮಾಣಿಕ ಶ್ವಾನ ಎಂದೇ ಗುರುತಿಸಲ್ಪಟ್ಟಿದೆ. ತಾಯಿ ಪ್ರೀತಿಗೆ ಕೊನೆ ಇಲ್ಲ ಎಂಬಂತೆ ತನ್ನ ಮರಿಗಳ ರಕ್ಷಣೆಯ ವಿಷಯದಲ್ಲಿ ಈ ಬುದ್ದಿವಂತ ಶ್ವಾನ ಮಾಡುತ್ತಿರುವ ಶ್ರಮಕ್ಕೆ ಹ್ಯಾಟ್ಸ್‌ಅಫ್ ಹೇಳಲೇಬೇಕಾಗಿದೆ.
‘ ಬೀದಿ ನಾಯಿಯೊಂದು ಬಂದು ನಮ್ಮ ಕಾಂಪ್ಲೆಕ್ಸ್‌ನ ಮೂರನೇ ಮಹಡಿ ಮೇಲೆ ಯಾರಿಗೂ ತೊಂದರೆಯಾಗದ ಜಾಗದಲ್ಲಿ ೫ ಮರಿಗಳಿಗೆ ಜನ್ಮ ನೀಡಿದೆ. ನಾವು ಈ ನಾಯಿಗೆ ಪ್ರತಿದಿನ ಅನ್ನ, ಆಹಾರ ನೀಡುತ್ತಿದ್ದೇವೆ. ತಾಯಿ ಪ್ರೀತಿ ಅನ್ನೋದೆ ಹಾಗೇ ಅದಕ್ಕೆ ಕೊನೆ ಎಂಬುದೇ ಇಲ್ಲ…’
ರಮೇಶ್ ಆಳ್ವ ಕಲ್ಲಡ್ಕ, ಮಾಲಕರು ರೋಯಲ್ ಸೂಪರ್ ಬಝಾರ್ ಕುಂಬ್ರ