ವಿವೇಕಾನಂದ ಕ.ಮಾ. ಶಾಲಾ ಸಹಯೋಗದಲ್ಲಿ ಜಿಲ್ಲಾಮಟ್ಟದ ʼವಿಜ್ಞಾನ ಮಾದರಿ ತಯಾರಿ ಹಾಗೂ ಪ್ರದರ್ಶನʼ ಕಾರ್ಯಕ್ರಮ

0

ಆಸಕ್ತಿ, ಕುತೂಹಲಗಳೇ ವಿಜ್ಞಾನದ ಹೊಸ ಆವಿಷ್ಕಾರಗಳಿಗೆ ಮೂಲ- ಶ್ರೀಮತಿ ರಾಜಲಕ್ಷ್ಮೀ

ಪುತ್ತೂರು: ಶಾಲಾ ಮಟ್ಟದಲ್ಲಿಯೇ ವಿದ್ಯಾರ್ಥಿಗಳಿಗೆ ವಿಜ್ಞಾನಕ್ಕೆ ಸಂಬಂಧಿಸಿದಂತೆ ನಾಟಕಗಳು, ಮಾದರಿ ತಯಾರಿ, ಸೆಮಿನಾರ್ ಇತ್ಯಾದಿಗಳಲ್ಲಿ ಸ್ಪರ್ಧೆಗಳು ಅಥವಾ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ಅವರಿಗೆ ಹೊಸ ಸಂಶೋಧನೆಗಳನ್ನು ನಡೆಸಲು ಪ್ರೇರಣೆ, ಸ್ಪೂರ್ತಿ ದೊರೆಯುತ್ತದೆ. ವಿದ್ಯಾರ್ಥಿಗಳಲ್ಲಿ ಆಸಕ್ತಿಯಿದ್ದು ಹೊಸ ವಿಷಯಗಳನ್ನು ತಿಳಿಯುವ ಕುತೂಹಲವಿದ್ದಾಗ ವಿಜ್ಞಾನದ ಬೆಳವಣಿಗೆಯಾಗಿ ನೂತನ ಆವಿಷ್ಕಾರಗಳಿಗೆ ಕಾರಣವಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು(ಅಭಿವೃದ್ಧಿ) ರಾಜಲಕ್ಷ್ಮೀಯವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಹಯೋಗದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಜಿಲ್ಲಾಮಟ್ಟದ ವಿಜ್ಞಾನ ಮಾದರಿ ತಯಾರಿ ಹಾಗೂ ಪ್ರದರ್ಶನದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಜಿಲ್ಲಾ ವಿಜ್ಞಾನ ವಸ್ತು ಪ್ರದರ್ಶನದ ನೋಡಲ್ ಅಧಿಕಾರಿಗಳು ಹಾಗೂ ಉಪನ್ಯಾಸಕರೂ ಆಗಿರುವ ಶ್ರೀನಿವಾಸ ಅಡಿಗರವರು ಸ್ಪರ್ಧಾರ್ಥಿಗಳಾಗಿ ಆಗಮಿಸಿದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸ್ಪರ್ಧಾ ನಿಯಮಗಳನ್ನು ತಿಳಿಸುತ್ತಾ ಶುಭ ಹಾರೈಸಿದರು.
ಶಾಲಾ ಆಡಳಿತ ಮಂಡಳಿಯ ಸದಸ್ಯ ರಘುನಾಥ ಬಿ ಯವರು ಪ್ರತಿ ವಿದ್ಯಾರ್ಥಿಯಲ್ಲಿಯೂ ’ಅಬ್ದುಲ್ ಕಲಾಂ’ರಂತಹ ವಿಜ್ಞಾನಿಗಳಾಗುವ ಸಾಮರ್ಥ್ಯ ಅಡಗಿದೆ. ಅದನ್ನು ಬೆಳಕಿಗೆ ತರಲು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು, ಸಂಬಂಧಿಸಿದ ಸ್ಪರ್ಧೆಗಳಲ್ಲಿ ಹುರುಪಿನಿಂದ ಭಾಗವಹಿಸುವುದು ಅತ್ಯಗತ್ಯ ಎಂದು ಹೇಳಿದರು.
ವೇದಿಕೆಯಲ್ಲಿ ಕಾರ್ಯಕ್ರಮ ಸಂಯೋಜಕಿ ಅಮೃತಕಲಾ, ಕ್ಷೇತ್ರ ಸಮನ್ವಯಾಧಿಕಾರಿ ನವೀನ್ ವೇಗಸ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಾಹಾಂ ಜಾನ್ಸನ್ ಹಾಗೂ ಶಾಲಾ ಪ್ರೌಢವಿಭಾಗದ ಮುಖ್ಯಗುರು ಆಶಾಬೆಳ್ಳಾರೆ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಮಂಗಳದುರ್ಗಾ ಪ್ರಾರ್ಥಿಸಿ, ಸಹಶಿಕ್ಷಕಿ ಪೂರ್ಣಿಮಾ ಸ್ವಾಗತಿಸಿ, ಶ್ವೇತಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಅಮೃತಕಲಾ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here