ಕೆಯ್ಯೂರು: ಬಾಲ್ಯವಿವಾಹ ಮುಕ್ತ ಕರ್ನಾಟಕ ಅಭಿಯಾನದ ಅಂಗವಾಗಿ ಸರಕಾರಿ ಪದವಿಪೂರ್ವ ಕಾಲೇಜು ಕೆಯ್ಯೂರು ಇಲ್ಲಿ ಅರಿವು ಮಾಹಿತಿ ಕಾರ್ಯಕ್ರಮ ನಡೆಯಿತು. ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ಕಾರ್ಯಾಧ್ಯಕ್ಷ ಎ.ಕೆ.ಜಯರಾಮ ರೈ ದೀಪಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ.ಶಿವರಾಮ ಕಾರಂತ ಪ್ರಥಮದರ್ಜೆ ಕಾಲೇಜು ಬೆಳ್ಳಾರೆ ಇಲ್ಲಿನ ಸಮಾಜಶಾಸ್ತ್ರ ಉಪನ್ಯಾಸಕ ಡಾ.ಸಂದೀಪ್ ಕುಮಾರ್ ಬಿ.ಕೆ. ಅವರು ಬಾಲ್ಯವಿವಾಹ ಪದ್ಧತಿ, ಅದರಿಂದ ಉಂಟಾಗುವ ಮನೋದೈಹಿಕ ಹಾಗೂ ಸಾಮಾಜಿಕ ಪರಿಣಾಮಗಳು, ಬಾಲ್ಯವಿವಾಹ ತಡೆಗಟ್ಟುವಲ್ಲಿ ಸರಕಾರದ ಹಲವು ಕಾಯ್ದೆಗಳು ಮತ್ತು ಜನರ ಪಾತ್ರದ ಬಗ್ಗೆ ವಿಸ್ತೃತ ಮಾಹಿತಿ ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಇಸ್ಮಾಯಿಲ್ ಪಿ. ಸಭಾಧ್ಯಕ್ಷತೆ ವಹಿಸಿದ್ದರು. ಸಮಾಜಶಾಸ್ತ್ರ ಸಂಶೋಧಕ ಡಾ.ಸಂದೀಪ್ ಕುಮಾರ್ ಬಿ.ಕೆ. ಹಾಗೂ ಶ್ರೀದೇವಿ ಸಂದೀಪ್ ಅವರನ್ನು ಈ ಸಂದರ್ಭದಲ್ಲಿ ಕಾಲೇಜಿನ ವತಿಯಿಂದ ಸತ್ಕರಿಸಲಾಯಿತು. ವಿದ್ಯಾರ್ಥಿನಿಯರಾದ ಕೆ. ಕೃತಿಕಾ, ಅನ್ನತ್ ಬೀಬಿ, ದೀಪ್ತಿ ಪ್ರಾರ್ಥಿಸಿದರು. ಸಮಾಜಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಸುನಂದಾ ಎಸ್. ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಆನಂದ ಎನ್. ಅತಿಥಿಗಳನ್ನು ಪರಿಚಯಿಸಿದರು. ಇತಿಹಾಸ ಉಪನ್ಯಾಸಕಿ ಉಮಾಶಂಕರಿ ಎಸ್.ಕೆ. ವಂದಿಸಿದರು. ಇಂಗ್ಲಿಷ್ ಉಪನ್ಯಾಸಕ ಬಾಲಕೃಷ್ಣ ಬೇರಿಕೆ ಕಾರ್ಯಕ್ರಮ ನಿರೂಪಿಸಿದರು.