ವಿಶ್ವ ಮಧುಮೇಹ ದಿನದ ಪ್ರಯುಕ್ತ ಡಾ.ನಝೀರ್ ಡಯಾಬೆಟ್ಸ್ ಸೆಂಟರಿನಲ್ಲಿ ಉಚಿತ ತಪಾಸಣಾ ಶಿಬಿರ

0

ಪುತ್ತೂರು: ನ.14 ಆಚರಿಸಲಾಗುವ ವಿಶ್ವ ಮಧುಮೇಹ ದಿನದ ಪ್ರಯುಕ್ತ ಕಲ್ಲಾರೆ ಕೃಷ್ಣಾ ಆರ್ಕೇಡ್ ನಲ್ಲಿ ಕಾರ್ಯಾಚರಿಸುತ್ತಿರುವ ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರ್ ಹಾಗೂ ರೋಟರಿ ಕ್ಲಬ್ ಪುತ್ತೂರು, ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇವುಗಳ ಸಹಭಾಗಿತ್ವದಲ್ಲಿ ಡಾ.ನಝೀರ್ ಡಯಾಬೆಟ್ಸ್ ಸೆಂಟರಿನಲ್ಲಿ ಥೈರಾಯ್ಡ್, ಬ್ಲಡ್ ಶುಗರ್, HBA1C,ಕೊಲೆಸ್ಟ್ರಾಲ್, ಹಿಮೋಗ್ಲೋಬಿನ್ ಉಚಿತ ತಪಾಸಣಾ ಶಿಬಿರದ ಜೊತೆಗೆ ಡಯಾಬೆಟ್ಸ್ ಬಗ್ಗೆ know your risk, know your response’ ಈ ಕುರಿತು ಮಾಹಿತಿ ಮತ್ತು ತಪಾಸಣಾ ಶಿಬಿರವು ಜರಗಿತು.


ಅತಿಥಿಯಾಗಿ ಭಾಗವಹಿಸಿದ ರೋಟರಿ ಕ್ಲಬ್ ಪುತ್ತೂರು ಜೊತೆ ಕಾರ್ಯದರ್ಶಿ ದಾಮೋದರ್ ರವರು ಮಾತನಾಡಿ, ಆಧುನಿಕ ಬದುಕಿನ ಜಂಜಾಟದಲ್ಲಿ ಮನುಷ್ಯ ತನ್ನ ಆರೋಗ್ಯದ ಕಡೆಗೆ ಗಮನ ನೀಡದೆ ವಿವಿಧ ರೋಗಗಳನ್ನು ತಂದೊಡ್ಡುತ್ತಾನೆ. ಈ ನಿಟ್ಟಿನಲ್ಲಿ ಮನುಷ್ಯ ತನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ವಹಿಸುವುದು ಅತೀ ಮುಖ್ಯವಾಗಿದೆ. ಡಾ.ನಝೀರ್ ಅಹಮದ್ ರವರು ಆರೋಗ್ಯದ ಬಗ್ಗೆ ವಿವಿಧ ಶಿಬಿರಗಳನ್ನು ಹಮ್ಮಿಕೊಂಡು ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವುದು ಶ್ಲಾಘನೀಯ. ಆದ್ದರಿಂದ ಜನರು ಇಂತಹ ಶಿಬಿರಗಳಿಗೆ ಭಾಗವಹಿಸಿ ಆರೋಗ್ಯವಂತರಾಗಿ ಎಂದರು.


ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರಿನ ಡಾ.ನಝೀರ್ ಅಹಮದ್ ರವರು ಮಾತನಾಡಿ, ಇಂಟರ್ನ್ಯಾಷನಲ್‌ ಡಯಾಬಿಟೀಸ್ ಫೆಡರೇಶನ್ ಸಂಸ್ಥೆಯು ಪ್ರತಿ ವರ್ಷ ನವೆಂಬರ್ ತಿಂಗಳನ್ನು ವಿಶ್ವ ಮಧುಮೇಹ ಜಾಗೃತಿ ತಿಂಗಳನ್ನಾಗಿ ಆಚರಿಸುತ್ತಿದೆ. ಮಧುಮೇಹವು ವಂಶಪಾರಂಪರೆಯಿಂದಾಗಿ ಬರಬಹುದು, ಆಹಾರ ವ್ಯತ್ಯಯದಿಂದ ಬರಬಹುದು ಅಥವಾ ಬರದೇ ಇರಬಹುದು. ಕೆಲವರಿಗೆ ತನಗೆ ಮಧುಮೇಹ ಇದೆ ಅನ್ನುವುದು ಗೊತ್ತೇ ಇರೋದಿಲ್ಲ. ಮಧುಮೇಹ ತಡೆಯಲು ವ್ಯಕ್ತಿಯ ಎತ್ತರ ಹಾಗೂ ವಯಸ್ಸಿಗೆ ತಕ್ಕಂತೆ ತೂಕ ಹೊಂದಿರಬೇಕಾಗುತ್ತದೆ. ತರಕಾರಿಗಳ ಅಧಿಕ ಸೇವನೆ, ವೇಳೆ ವೇಳೆಗೆ ಕ್ರಮಬದ್ಧ ಆಹಾರದ ಸೇವನೆ, ಆರೋಗ್ಯಕರ ಕೊಬ್ಬು ಇರುವ ಆಹಾರದ ಸೇವನೆ, ರಿಫೈನ್ಡ್ ಎಣ್ಣೆ ಬಳಕೆ ಬದಲು ತೆಂಗಿನ ಎಣ್ಣೆ, ತುಪ್ಪ ಬಳಸುವಂತಹುದು, ಮೊಟ್ಟೆ, ಮೀನು, ಕೋಳಿ ಮಾಂಸ ಸೇವಿಸುವುದು, ದಿನನಿತ್ಯ ಮೂರು ಲೀಟರ್ ನೀರನ್ನು ಕುಡಿಯುವುದು, ರಾತ್ರಿ ಆಹಾರವನ್ನು ಏಳು ಗಂಟೆಯ ಮೊದಲೇ ಸೇವಿಸುವುದು, ದಿನನಿತ್ಯ ಅರ್ಧ ಗಂಟೆ ವ್ಯಾಯಾಮ ಮಾಡುವುದು ಮುಂತಾದುವುಗಳಿಂದ ನಾವು ನಮ್ಮ ಆರೋಗ್ಯವನ್ನು ಉತ್ತಮ ಆರೋಗ್ಯದೆಡೆಗೆ ಕೊಂಡೊಯ್ಯಲು ಸಹಕಾರಿ ಎನಿಸುತ್ತದೆ ಎಂದರು.


ರೋಟರಿ ಕ್ಲಬ್ ಪುತ್ತೂರು ಮಾಜಿ ಅಧ್ಯಕ್ಷ ರಫೀಕ್ ಎಂ.ಜಿ ಉಪಸ್ಥಿತರಿದ್ದರು. ಮೆರ್ಕ್ ಕಂಪೆನಿಯ ಕುಮಾರ್, ಮೈಕ್ರೋಲ್ಯಾಬಿನ ನಿರಂಜನ್, ಎಸ್.ಆರ್.ಎಲ್ ಲ್ಯಾಬಿನ ಚಂದ್ರಕಲಾ, ಎಮಿಕ್ಯೂರ್ ನ ತೌಸಿಫ್, ಧನ್ವಂತರಿ ಲ್ಯಾಬ್ ಮತ್ತು ಕ್ಲಿನಿಕ್ ಸಿಬ್ಬಂದಿ, ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರ್ ಸಿಬ್ಬಂದಿ ಸಹಕರಿಸಿದರು.

ಭಾಗವಹಿಸಿದ ಫಲಾನುಭವಿಗಳು..
*ಥೈರಾಯ್ಡ್ ಪರೀಕ್ಷೆ-40 ಮಂದಿ
*ಕೊಲೆಸ್ಟರಾಲ್‌ ಪರೀಕ್ಷೆ-50 ಮಂದಿ
*HBA1C ಪರೀಕ್ಷೆ-25 ಮಂದಿ
*ಶುಗರ್ ಪರೀಕ್ಷೆ-50 ಮಂದಿ
*ಹಿಮೋಗ್ಲೋಬಿನ್ ಪರೀಕ್ಷೆ-50 ಮಂದಿ

LEAVE A REPLY

Please enter your comment!
Please enter your name here