ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಕಂಪ್ಯೂಟರ್ ಸಾಕ್ಷರತೆಯ ವಿನೂತನ ಯೋಜನೆ – ‘ಕ್ಲಾಸ್ ಆನ್ ವ್ಹೀಲ್ಸ್’ ಡಿಜಿಟಲ್ ಬಸ್ ಉದ್ಘಾಟನೆ

0

ವಾಟ್ಸಾಪ್ ಗ್ರೂಪೊಂದು ಕಂಪ್ಯೂಟರ್ ಸಾಕ್ಷರತೆಗೆ ಹೊರಟದ್ದು ಒಳ್ಳೆಯ ಬೆಳವಣಿಗೆ-ಎಸಿ ಗಿರೀಶ್ ನಂದನ್

ಪುತ್ತೂರು: ಮಂಗಳೂರಿನ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ನ ದಶಮಾನೋತ್ಸವದ ಸವಿ ನೆನಪಿಗಾಗಿ ರಾಜ್ಯದಲ್ಲೇ ವಿನೂತನ ಯೋಜನೆಯಾದ ಕ್ಲಾಸ್ ಆನ್ ವ್ಹೀಲ್ಸ್ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಜಾರಿಗೆ ತಂದ ಕಂಪ್ಯೂಟರ್ ಸಾಕ್ಷರತೆಯ ಡಿಜಿಟಲ್ ಬಸ್‌ನ ಉದ್ಘಾಟನಾ ಸಮಾರಂಭ ಕುಂಜೂರುಪಂಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್ ರಿಬ್ಬನ್ ಕಟ್ ಮಾಡಿ ಉದ್ಘಾಟಿಸಿ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿ ವಾಟ್ಸಾಪ್ ಗ್ರೂಪೊಂದು ಆಕ್ಟೀವ್ ಆಗಿ ಕಂಪ್ಯೂಟರ್ ಸಾಕ್ಷರತೆ ಮಾಡುವಲ್ಲಿ ಪ್ರಯತ್ನ ಪಟ್ಟದ್ದು ಒಳ್ಳೆಯ ಬೆಳವಣಿಗೆ. ನಾನು ಕೂಡ ಸರಕಾರಿ ಶಾಲೆಯಲ್ಲಿಯೇ ಓದಿದವನು. ಅದರ ಮಿಡಿತ ನನಗೆ ಚೆನ್ನಾಗಿ ಗೊತ್ತಿದೆ. ಇದರ ಪ್ರಯೋಜನವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಿ ಎಂದು ಹೇಳಿದ ಅವರು ಈ ಯೋಜನೆಯ ನಿರ್ವಹಣೆಗೆ ಕೊಡುಗೆ ನೀಡಿದ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು.

ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‌ರವರು ಮಾತನಾಡಿ ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳು ಚೆನ್ನಾಗಿ ಓದಬೇಕೆಂಬ ಹಂಬಲ ಇರುತ್ತದೆ. ಕಂಪ್ಯೂಟರ್ ಸಾಕ್ಷರತೆಯಲ್ಲಿ ಕೆಲವು ಶಾಲೆಗೆ ಅವಕಾಶ ದೊರೆಯಲಿಲ್ಲ. ಇದೀಗ ಹನೀಫ್ ಪುತ್ತೂರುರವರು ಕಂಪ್ಯೂಟರ್ ಸಾಕ್ಷರತೆಗಾಗಿ ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು. ಸರಕಾರಿ ಶಾಲೆಗೆ ಸಾಕಷ್ಟು ಸೌಲಭ್ಯಗಳನ್ನು ಸರಕಾರ ನೀಡುತ್ತಿದೆ. ಅಡಿಪಾಯ ಕೊಟ್ಟಾಗ ಮಕ್ಕಳು ಬೆಳೆಯಲು ಸಾಧ್ಯ. ಪ್ರಾಥಮಿಕ ಹಂತದಲ್ಲಿಯೇ ಕಂಪ್ಯೂಟರ್ ಕಲಿತರೆ ಮುಂದಿನ ವಿದ್ಯಾಭ್ಯಾಸಕ್ಕೆ ಉಪಯೋಗವಾಗುತ್ತದೆ. ನಮ್ಮ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಿ. ಕಂಪ್ಯೂಟರ್ ಕಲಿತು ಸಮಾಜಕ್ಕೆ ಮಾದರಿಯಾಗಿ ಎಂದರು.

ಪುತ್ತೂರು ಸಂತ ಫಿಲೋಮಿನಾ ಪಿಯು ಕಾಲೇಜಿನ ಪ್ರಾಂಶುಪಾಲ ಅಶೋಕ್ ರಾಯನ್ ಕ್ರಾಸ್ತಾರವರು ಮಾತನಾಡಿ ಇಂದಿನ ಯುಗದಲ್ಲಿ ಕಂಪ್ಯೂಟರ್ ಜ್ಞಾನ ಬಹಳ ಮುಖ್ಯ. ಈ ಡಿಜಿಟಲ್ ಬಸ್ ನೋಡುವಾಗಲೇ ಸಂತೋಷವಾಗುತ್ತಿದೆ. ಇದರ ಹಿಂದಿರುವ ಯೋಚನೆ, ಯೋಜನೆ ವಿಶಿಷ್ಟವಾಗಿದೆ. ಇದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ. ಪ್ರಸ್ತುತ ದಿನದಲ್ಲಿ ಇದು ಪ್ರಮುಖವಾದ ಹೆಜ್ಜೆಯಾಗಿದೆ ಇದೊಂದು ಅದ್ಭುತವಾದ ಸಾಧನೆಯಾಗಿದೆ ಎಂದರು. ಇವರಿಗೆ ದೇವರ ಆಶೀರ್ವಾದ, ಸಹಕಾರ, ಪ್ರೋತ್ಸಾಹ ಸಿಗಲಿ. ಸರಕಾರಿ ಶಾಲಾ ಮಕ್ಕಳಿಗೆ ಇದರಿಂದ ಒಳ್ಳೆಯ ಫಲ ಸಿಗಲಿ ಎಂದರು.
ಪುತ್ತೂರು ಸುದ್ದಿ ಸಮೂಹ ಸಂಸ್ಥೆಗಳ ವ್ಯವಸ್ಥಾಪನಾ ನಿರ್ದೇಶಕರಾದ ಡಾ. ಯು.ಪಿ.ಶಿವಾನಂದರು ಮಾತನಾಡಿ ಹನೀಫ್ ರವರು ಸರಕಾರಿ ಶಾಲೆಯಲ್ಲಿ ಕಲಿತ ಕಾರಣ ಡಿಜಿಟಲ್ ಕಲ್ಪನೆ ಅವರಿಗೆ ಬಂದಿದೆ. ಸಣ್ಣ ವಯಸ್ಸಿನಲ್ಲಿಯೇ ಸಾಕ್ಷರತೆ ಮುಖ್ಯ. ಗ್ರಾಮೀಣ ಭಾಗದಲ್ಲಿ ಕಂಪ್ಯೂಟರ್ ಶಿಕ್ಷಣ ಕೊರತೆಯಿರುವ ಶಾಲೆಗೆ ಸಾಕ್ಷರತೆ ಸೌಲಭ್ಯ ಒದಗಿಸುತ್ತಿದ್ದಾರೆ. ಡಿಜಿಟಲ್ ಬಸ್‌ನ ಕಲ್ಪನೆ ವಿಶೇಷವಾಗಿದೆ ಎಂದು ಹೇಳಿ ಅಭಿನಂದನೆ ಸಲ್ಲಿಸಿ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನ ಸಮಾಜಮುಖಿ ಕಾರ್ಯಗಳನ್ನು ಉಲ್ಲೇಖಿಸಿದರು. ಹನೀಫ್ ರವರು ಸುದ್ದಿ ವೆಬ್‌ಸೈಟ್, ಇ-ಪೇಪರ್‌ಗಳ ಟೆಕ್ನಿಕಲ್ ಸಲಹೆಗಾರರಾಗಿದ್ದು ಎಲೆಮರೆಯ ಕಾಯಿಯಂತೆ ಇದ್ದಾರೆ. ಇಂದು ಮಕ್ಕಳ ಉತ್ತಮ ಭವಿಷ್ಯಕ್ಕೆ ನಾಂದಿ ಹಾಡಿದ್ದಾರೆ ಎಂದರು.

ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಮಹಮ್ಮದ್ ಎಂ.ಎಸ್ ಮಾತನಾಡಿ ಎಂ.ಚಾರಿಟೇಬಲ್ ಟ್ರಸ್ಟ್‌ನವರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದಾರೆ. ಟ್ರಸ್ಟ್‌ನಿಂದ ಆಸ್ಪತ್ರೆಯಲ್ಲಿರುವರಿಗೆ ಸಹಾಯ ಹಸ್ತ ಚಾಚುವ ಮೂಲಕ ಉತ್ತಮ ಕಾರ್ಯ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ವಿದ್ಯಾವಂತರಾದರೆ ಸಾಕಾಗುವುದಿಲ್ಲ. ಕಂಪ್ಯೂಟರ್ ಶಿಕ್ಷಣ ಕೂಡ ಪಡೆಯಬೇಕು. ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಅವರನ್ನು ಸಮಾಜದ ಆಸ್ತಿಯನ್ನಾಗಿ ಮಾಡಬೇಕು ಎಂದರು. ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ವಿಶ್ವೇಶ್ವರ ಭಟ್‌ರವರು ಮಾತನಾಡಿ, ಕುಂಜೂರು ಪಂಜ ಶಾಲೆಯ ಅಭಿವೃದ್ಧಿಗೆ ಫೇಸ್‌ಬುಕ್ ಮೂಲಕ ರೂ.15 ಲಕ್ಷ ಬಂದಿದೆ. ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಕೂಡ ಇದರಲ್ಲಿ ಪಾತ್ರ ವಹಿಸಿದೆ. ಇದರಲ್ಲಿ ಕೃಷಿಕರ ಬೆವರಿನ ಹಣ ಕೂಡ ಬಂದಿದೆ. ಕುಂಜೂರುಪಂಜ ಶಾಲೆ ಮೊದಲು ಅನುದಾನಿತ ಶಾಲೆಯಾಗಿದ್ದು ಇಂದು ಸರಕಾರಿ ಶಾಲೆಯಾಗಿ ಪರಿವರ್ತನೆ ಆಗಿದೆ. ಈ ಶಾಲೆಗೆ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ನ ಬಲ ಕೂಡ ಬಂದಿದೆ ಎಂದು ಹೇಳಿ ನೂತನ ಯೋಜನೆಗೆ ಶುಭ ಹಾರೈಸಿದರು. ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಮಾತನಾಡಿ ಹನೀ‌ಫ್ ಅವರು ತನ್ನ ಹುಟ್ಟೂರಿಗೆ ಉತ್ತಮ ಕೊಡುಗೆ ನೀಡಿದ್ದಾರೆ. ಇದು ಎಲ್ಲರಿಗೂ ಪ್ರೇರಣೆಯಾಗಲಿ ಎಂದರು.
ಎಂ.ಫ್ರೆಂಡ್ಸ್ ನ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ ಪ್ರಾಸ್ತಾವಿಕವಾಗಿ ಮಾತನಾಡಿ 2013ರಲ್ಲಿ ಮಾಡಿದ ಎಂ.ಫ್ರೆಂಡ್ಸ್ ವಾಟ್ಸಾಪ್ ಗ್ರೂಪ್ ಬಳಿಕ ಚಾರಿಟೇಬಲ್ ಟ್ರಸ್ಟ್ ಆಗಿ ಪರಿವರ್ತನೆಯಾಯಿತು. ಇದರ ದಶಮಾನೋತ್ಸವ ಸಂಭ್ರಮದ ಪ್ರಯುಕ್ತ ಕುಂಜೂರುಪಂಜ ಶಾಲೆಯಲ್ಲಿ ಕಂಪ್ಯೂಟರ್ ಸಾಕ್ಷರತೆಯ ಡಿಜಿಟಲ್ ಬಸ್‌ನ್ನು ಉದ್ಘಾಟಿಸಿದ್ದೇವೆ. ಇದರ ಕನಸನ್ನು ಕಂಡವರು ಹನೀ‌ಫ್ ರವರು. ಸಾಮಾಜಿಕ ಕಳಕಳಿಯಿಂದ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಈ ಯೋಜನೆ ಆರಂಭಿಸಿದ್ದಾರೆ ಎಂದರು. ಡಿಜಿಟಲ್ ಬಸ್ ಯೋಜನೆಗೆ ರೂ.60ಲಕ್ಷ ವೆಚ್ಚ ತಗುಲಿದ್ದು ಹನೀಫ್ ರವರು ರೂ.50 ಲಕ್ಷ ನೀಡಿದ್ದಾರೆ. ಉಳಿದ ರೂ.10ಲಕ್ಷ ಮೊತ್ತವನ್ನುಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಭರಿಸಿದೆ. ಪುತ್ತೂರಿನ ಶಿಕ್ಷಣಾಧಿಕಾರಿ ಲೋಕೇಶ್‌ರವರು ಪೂರ್ಣ ಸಹಕಾರ ನೀಡಿದ್ದಾರೆ. ತಾಲೂಕಿನ 10 ಶಾಲೆಗಳನ್ನು ಕಂಪ್ಯೂಟರ್ ಸಾಕ್ಷರತೆಗಾಗಿ ನೀಡಿದ್ದಾರೆ. ಒಂದು ದಿನದಲ್ಲಿ ಮೂರು ಶಾಲೆಗೆ ಬಸ್ ಸಂಚರಿಸಲಿದ್ದು ವರ್ಷದಲ್ಲಿ 5೦೦೦ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತದೆ. ಡಿಜಿಟಲ್ ಬಸ್‌ಗೆ ತಿಂಗಳಿಗೆ 1ಲಕ್ಷರೂ. ವೆಚ್ಚ ನಿರ್ವಹಣೆಗೆ ಬೇಕಾಗಿದೆ. ಹಲವಾರು ದಾನಿಗಳು ನಿರ್ವಹಣಾ ವೆಚ್ಚಕ್ಕೆ ಕೈಜೋಡಿಸಿದ್ದಾರೆ. ಬಸ್ ಪಾರ್ಕಿಂಗ್‌ಗೆ ಫಿಲೋಮಿನಾ ಶಿಕ್ಷಣ ಸಂಸ್ಥೆ ಸೌಲಭ್ಯ ಒದಗಿಸಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಮಹಮ್ಮದ್ ಹನೀಫ್ ಜಿ. ಮಾತನಾಡಿ ಕುಂಜೂರುಪಂಜ ಶಾಲೆಯಲ್ಲಿ ಇಂದು ಹಬ್ಬದ ವಾತಾವರಣ ಆಗಿದೆ. ಹನೀಫ್ ರವರ ಯೋಜನೆಗೆ ಮುಂದೆ ನಿರ್ವಹಣೆ ಹೇಗೆ ಎನ್ನುವ ಯೋಚನೆ ಮಾಡಿದ್ದೆವು ಆಗ ಹನೀಫ್ ರವರು ನೀಡಿದ ಸಲಹೆಯಂತೆ ಇದನ್ನು ಮುಂದುವರಿಸುತಿದ್ದೇವೆ ಎಂದು ಹೇಳಿ ಈ ಯೋಜನೆಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಸನ್ಮಾನ: ಕ್ಲಾಸ್ ಆನ್ ವ್ಹೀಲ್ಸ್ ಕಂಪ್ಯೂಟರ್ ಸಾಕ್ಷರತೆಯ ಡಿಜಿಟಲ್ ಬಸ್‌ನ ರೂವಾರಿ ಯುಎಇ ಮಹಮ್ಮದ್ ಬಿನ್ ರಾಶಿದ್ ಸ್ಪೇಸ್ ಸೆಂಟರ್ ಲ್ಯಾಬ್‌ನ ಕ್ಲೌಡ್ ಮತ್ತು ಇನ್ ಫ್ರಾಸ್ಟ್ರಕ್ಚರ್ ಮೆನೇಜರ್ ಜನಾಬ್ ಮಹಮ್ಮದ್ ಹನೀಫ್ ಅವರ ಪರವಾಗಿ ಅವರ ತಂದೆ ಅಬ್ಬಾಸ್ ಹಾಜಿ ಬಳ್ಳೇರಿರವರನ್ನು ಶಾಲು, ಸ್ಮರಣಿಕೆ, ಫಲಪುಷ್ಪ, ಹೂಗುಚ್ಚ ನೀಡಿ ಸನ್ಮಾನಿಸಲಾಯಿತು.


ಅಭಿನಂದನೆ: ಡಿಜಿಟಲ್ ಬಸ್ ಸುಂದರವಾಗಿ ಮೂಡಿಬರಲು ಶ್ರಮಿಸಿದ, ಇದರ ಹಿಂದೆ ಕೆಲಸ ನಿರ್ವಹಿಸಿದ. ಬೈಕಂಪಾಡಿಯ ರೋಡ್ರಿಕ್ಸ್ ಇಂಡಸ್ಟ್ರೀಸ್ ಮಾಲಕ ನವೀನ್, ಉಸ್ತುವಾರಿ ವಹಿಸಿದ್ದ ಅಬೂಬಕ್ಕರ್ ಪುತ್ತು, ಡಿಸೈನಿಂಗ್ ಮಾಡಿದ ಜ್ಞಾನೇಶ್‌ರವರನ್ನು ಅಭಿನಂದಿಸಲಾಯಿತು. ಡಿಜಿಟಲ್ ಬಸ್‌ನ ಡಾಕ್ಯುಮೆಂಟರಿ ನಿರ್ಮಿಸಿದ ಝೂಮ್ ಟಿವಿ ತಂಡ, ಹಾಗೂ ಸುದ್ದಿ ಮಾಧ್ಯಮ ತಂಡವನ್ನು ಅಭಿನಂದಿಸಲಾಯಿತು. ಡಿಜಿಟಲ್ ಬಸ್‌ನಲ್ಲಿ ಕಂಪ್ಯೂಟರ್ ಶಿಕ್ಷಕಿಯರಾಗಿ ಕರ್ತವ್ಯ ನಿರ್ವಹಿಸಲಿರುವ ಶಿಕ್ಷಕಿಯರಾದ ವೀಕ್ಷಾ, ಚೈತ್ರಾರವರನ್ನು ಅಭಿನಂದಿಸಲಾಯಿತು.
ಅಬ್ಬಾಸ್ ಹಾಜಿ ಬಳ್ಳೇರಿ, ನಿವೃತ್ತ ಸೈನಿಕ ಚಂದಪ್ಪ ಮೂಲ್ಯ, ಫಾರೂಕ್ ಜುಬೈನ್, ಬೈಕಂಪಾಡಿಯ ರೋಡ್ರಿಕ್ಸ್ ಇಂಡಸ್ಟ್ರೀಸ್ ಮಾಲಕ ನವೀನ್, ಶ್ರೀರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಹಮ್ಮದ್ ಮುಸ್ತಫಾ ಕಾರ್ಯಕ್ರಮ ನಿರೂಪಿಸಿ ಶಾಕಿರ್ ಹಾಜಿ ವಂದಿಸಿದರು.

ಡಿಜಿಟಲ್ ಬಸ್ ಕನಸಿನ ರೂವಾರಿ ಹನೀಫ್ ಪುತ್ತೂರು ಬೆನ್ನೆಲುಬಾಗಿ ನಿಂತ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್
ಯುಎಇಯ ಅಬುಧಾಬಿಯಲ್ಲಿನ ಸಂಸ್ಥೆಯೊಂದು ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ ಆರ್ಯಾಪು ಗ್ರಾಮದ ಬಲ್ಲೇರಿ ಅಬ್ಬಾಸ್ ಹಾಜಿ ಅವರ ಪುತ್ರ ಯುಎಇಯಲ್ಲಿ ಉದ್ಯೋಗಿಯಾಗಿರುವ ಮಹಮ್ಮದ್ ಹನೀಫ್ ಅವರು ವಿಜೇತರಾಗಿದ್ದರು. ಹನೀಫ್ ಅವರು ತನ್ನೂರಿನ ಗ್ರಾಮೀಣ ಪ್ರದೇಶದಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಕಂಪ್ಯೂಟರ್ ಬಸ್ ಪ್ರಾರಂಭಿಸುವ ಇರಾದೆ ವ್ಯಕ್ತಪಡಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಒಂದು ಮೊಬೈಲ್ ಬಸ್‌ನ್ನು ಅತ್ಯಾಧುನಿಕ ಟೆಕ್ನಾಲಜಿಯಲ್ಲಿ ನಿರ್ಮಿಸಿ ಶಾಲೆಗಳಿಗೆ ತೆರಳಿ ಕಂಪ್ಯೂಟರ್ ಬೋಧಿಸುವ ಕನಸನ್ನು ಬಿಚ್ಚಿಟ್ಟರು. ಈ ಯೋಜನೆಯನ್ನು ಮೆಚ್ಚಿ ಲಕ್ಷಾಂತರ ಜನರು ಆನ್‌ಲೈನ್ ವೋಟ್ ಮಾಡುವ ಮೂಲಕ ಅವರನ್ನು ವಿಜೇತರನ್ನಾಗಿಸಿದ್ದರು. ಸ್ಪರ್ಧೆಯಲ್ಲಿ ದೊರೆತ ರೂ.50ಲಕ್ಷ ಬಹುಮಾನದ ಮೊತ್ತವನ್ನುಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ಗೆ ಹಸ್ತಾಂತರಿಸಿ ಬಸ್ ಕನಸನ್ನು ಸಾಕ್ಷಾತ್ಕರಿಸಿದರು. ಬಸ್‌ಗೆ ಒಟ್ಟು 60 ಲಕ್ಷ ರೂ. ಖರ್ಚು ಆಗಿದ್ದು, ಹೆಚ್ಚುವರಿ ರೂ.10 ಲಕ್ಷ ಮೊತ್ತವನ್ನು ಎಂ.ಫ್ರೆಂಡ್ಸ್ ಟ್ರಸ್ಟ್ ಭರಿಸಿದೆ. ಅರವಿಂದ್ ಮೋಟಾರ್ಸ್‌ನ ಟಾಟಾ ಕಂಪೆನಿಯ ಹೀರಾ ಮಾಡೆಲಿನ ಈ ಬಸ್‌ನ್ನು ಕಂಪ್ಯೂಟರ್ ಕ್ಲಾಸ್ ರೂಮ್ ಆಗಿ ಪರಿವರ್ತಿಸಲಾಯಿತು. ಮಹಮ್ಮದ್ ಹನೀಫ್ ಅವರು ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ಸುದ್ದಿ ವೆಬ್‌ಸೈಟ್ ಹಾಗೂ ಸುದ್ದಿ ಇ-ಪೇಪರ್‌ಗಳ ತಾಂತ್ರಿಕ ಸಲಹೆಗಾರರಾಗಿದ್ದಾರೆ.

LEAVE A REPLY

Please enter your comment!
Please enter your name here