ಪಾರದರ್ಶಕವಾಗಿ ಮಾಹಿತಿ ಸಂಗ್ರಹಿಸಿ ವರದಿ ನೀಡಲು ಸಹಾಯಕ ಆಯುಕ್ತರ ಸೂಚನೆ
ಪುತ್ತೂರು: ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಂದ ನೇಮಕೊಂಡಿರುವ ಸೆಕ್ಟರ್ ಅಧಿಕಾರಿಗಳು ಮತ್ತು ಪೊಲೀಸ್ ಸೆಕ್ಟರ್ ಅಧಿಕಾರಿಗಳು ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮತದಾರರಿಗೆ ಬೆದರಿಕೆ ಹಾಗೂ ಒತ್ತಡ ಹಾಕಿ ಮತ ಹಾಕಿಸುವವರ ಕುರಿತು ಪಾರದರ್ಶಕವಾಗಿ ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ಸಹಾಯಕ ಆಯುಕ್ತ ಗಿರೀಶ್ ನಂದನ್ ಸೂಚನೆ ನೀಡಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನ.24ರಂದು ತಾಲೂಕು ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಸಭಾಂಗಣದಲ್ಲಿ ನಡೆದ ಸೆಕ್ಟರ್ ಅಧಿಕಾರಿ, ಪೊಲೀಸ್ ಸೆಕ್ಟರ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಮುಂಬರುವ ಲೋಕಸಭಾ ಚುನಾವಣೆಯ ಪೂರ್ವ ಸಿದ್ದತೆಯ ಅಂಗವಾಗಿ ಸೆಕ್ಟರ್ ಅಧಿಕಾರಿ ಹಾಗೂ ಪೊಲೀಸ್ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ. ಅಧಿಕಾರಿಗಳು ಹಾಗೂ ಪೊಲೀಸರು ಮೊದಲ ಹಂತವಾಗಿ 9-10 ಮತಗಟ್ಟೆಗಳ ವ್ಯಾಪ್ತಿಗೆ ಭೇಟಿ ನೀಡಿ ಮತದಾರರೊಂದಿಗೆ ವಿಚಾರಿಸಿ, ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಬೇಕು. ಕಳೆದ ಚುನಾವಣೆಯ ಸಂದರ್ಭದಲ್ಲಿ ಮತದಾರರನ್ನು ಬೆದರಿಸಿ, ಒತ್ತಡ ಹೇರಿ ಮತ ಹಾಕಿಸಿದರುವು ಅಥವಾ ಮುಂದೆ ಇಂತಹ ಘಟನೆಗಳು ನಡೆಯುವ ಸಂಭಾವ್ಯತೆಳಿದ್ದರೆ ಅವುಗಳ ಬಗ್ಗೆ ಪರಿಶೀಲಿಸಿ ವರದಿ ನೀಡಬೇಕು. ಇದರಲ್ಲಿ ಪೊಲೀಸ್ ಇಲಾಖೆ ಪಾತ್ರ ಬಹುಮುಖ್ಯವಾಗಿದೆ. ಪೊಲೀಸರ ಸಹಕಾರ ಅತೀ ಆವಶ್ಯಕ. ಚುನಾವಣೆ ಸುಸೂತ್ರವಾಗಿ ನಡೆಸಲು ಈ ವರದಿ ಮುಖ್ಯವಾಗಿದೆ. ಈ ವರದಿ ಆಧರಿಸಿ ಕ್ರಿಟಿಕಲ್, ನಾನ್ ಕ್ರಿಟಿಕಲ್ ಮತಗಟ್ಟೆಗಳನ್ನಾಗಿ ವಿಂಗಡಿಸಲಾಗುತ್ತದೆ. ಅಲ್ಲದೆ ಚುನಾವಣೆಯ ಸಂದರ್ಭಲ್ಲಿ ಹೆಚ್ಚುವರಿ ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಗುತ್ತಿದ್ದು ನಿಮ್ಮ ವರದಿಯು ಪಾರದರ್ಶಕವಾಗಿರಬೇಕು. ಎರಡು ದಿನಗಳಲ್ಲಿ ಮಾಹಿತಿ ಸಂಗ್ರಹಿಸಿ ನ.27ರಂದು ವರದಿ ನೀಡುವಂತೆ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳಿಂದ ನೇಮಕಗೊಂಡಿರುವ ಸೆಕ್ಟರ್ ಅಧಿಕಾರಿಗಳು ಹಾಗೂ ಪೊಲೀಸ್ ಸೆಕ್ಟರ್ ಅಧಿಕಾರಿಗಳ ಪೈಕಿ ಹಲವು ಮಂದಿ ಸಭೆಗೆ ಗೈರಾಗಿದ್ದರು. ಮುಖಾ ಮುಖಿ ಮಾತನಾಡಲು ಸಭೆ ನಡೆಸಲಾಗುತ್ತಿದೆ. ಸಭೆಗೆ ಗೈರಾಗಿರುವವರನ್ನು ಕರೆಸುವಂತೆ ಸೂಚಿಸಿದ ಸಹಾಯಕ ಆಯಕ್ತರು ಗೈರಾಗಿರುವವರ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರೀಷ್ಠಾಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಿದರು.
ರಜೆಯಿಲ್ಲ:
ನ.25 ಹಾಗೂ 26ರಂದು ಎರಡು ದಿನಗಳಲ್ಲಿ ರಜೆಯಿರುವ ಬಗ್ಗೆ ಸಭೆಯಲ್ಲಿ ಅಧಿಕಾರಿಯೊಬ್ಬರು ತಿಳಿಸಿದರು. ಚುನಾವಣಾ ಕರ್ತವ್ಯ ಹೀಗಾಗಿ ರಜೆಯಿಲ್ಲ. ಸೆಕ್ಟರ್ ಅಧಿಕಾರಿಗಳು ಹಾಗೂ ಪೊಲೀಸರು ಮಾಹಿತಿ ಸಂಗ್ರಹಿಸಬೇಕು. ನನಗೂ ರಜೆಯಿಲ್ಲ ಎಂದು ಸಹಾಯಕ ಆಯುಕ್ತ ಗಿರೀಶ್ ನಂದನ್ ತಿಳಿಸಿದರು.
ತಾಲೂಕು ಕಚೇರಿಯಿಂದ ಸ್ಪಂದನೆಯಿಲ್ಲ:
ಚುನಾವಣಾ ಸಂದರ್ಭದಲ್ಲಿ ನಡೆದ ಕೆಲವು ಪ್ರಕರಣಗಳಿಗೆ ಸಂಬಂಧಿಸಿ ಪ್ರಕರಣ ದಾಖಲಾಗಿದ್ದರೂ ಅವುಗಳ ಬಗ್ಗೆ ತಾಲೂಕು ಕಚೇರಿಯಲ್ಲಿ ಮಾಹಿತಿ ಕೇಳಿದರೆ ಅಲ್ಲಿಂದ ನಮಗೆ ಯಾವುದೇ ಸ್ಪಂದನೆ, ಸಹಕಾರ ಕೊಡುತ್ತಿಲ್ಲ. ಕಳೆದ ಚುನಾವಣೆಯ ಸಂದರ್ಭದಲ್ಲಿ ಇಂತಹ ಘಟನೆಗಳು ನಮಗೆ ಎದುರಾಗಿದೆ. ನಾವು ತಾಲೂಕು ಕಚೇರಿಯಲ್ಲಿ ಮಾಹಿತಿ ಕೇಳಿದರೆ ನೀವು ಜಿಲ್ಲಾಧಿಕಾರಿಗಳ ಕಚೇರಿಯಿಂದ ಪಡೆಯುವಂತೆ ತಿಳಿಸುತ್ತಾರೆ. ಪ್ರಕರಣ ದಾಖಲಾಗಿದ್ದರೂ ಮಹಜರಿಗೆ ಪೂರಕವಾಗಿ ಸಹಕಾರ ನೀಡುತ್ತಿಲ್ಲ ಎಂದು ನಗರ ಠಾಣಾ ಎಸ್.ಐ ಆಂಜನೇಯ ರೆಡ್ಡಿ ತಿಳಿಸಿದರು. ಇದರ ಬಗ್ಗೆ ನಮಗೆ ಮಾಹಿತಿ ಬಂದಿಲ್ಲ. ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಉಸ್ತುವಾರಿಯಾಗಿರುತ್ತಾರೆ. ಅವರಿಂದಲೇ ಮಾಹಿತಿ ಪಡೆದುಕೊಳ್ಳುವಂತೆ ಸಹಾಯಕ ಆಯುಕ್ತರು ತಿಳಿಸಿದರು.
ತಹಶೀಲ್ದಾರ್ ಜೆ. ಶಿವಶಂಕರ್, ಪೌರಾಯುಕ್ತ ಮಧು ಎಸ್. ಮನೋಹರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪುತ್ತೂರು ನಗರ ಠಾಣಾ ನಿರೀಕ್ಷಕ ಸುನಿಲ್ ಕುಮಾರ್, ಉಪ್ಪಿನಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್, ವಿವಿಧ ಸೆಕ್ಟರ್ ಅಧಿಕಾರಿಗಳು ಹಾಗೂ ಪೊಲೀಸ್ ಸೆಕ್ಟರ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.