ನ.30ಕ್ಕೆ ದ.ಕ.ಜಿಲ್ಲಾ ಎಸ್‌ಸಿಡಿಸಿಸಿ ಬ್ಯಾಂಕ್ ನಿಂದ ಜಿಲ್ಲಾ ಮಟ್ಟದ ಕ್ರೀಡಾಕೂಟ

0

ಪುತ್ತೂರಿನ ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರೀಡಾಕೂಟ
ಜಿಲ್ಲೆಯ ಸಹಕಾರ ಸಂಘಗಳು, ನವೋದಯ ಸ್ವಸಹಾಯ ಸಂಘಗಳ ಸದಸ್ಯರು ಭಾಗಿ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಸಹಭಾಗಿತ್ವದಲ್ಲಿ ದ.ಕ. ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳು ಹಾಗೂ ನವೋದಯ ಸ್ವಸಹಾಯ ಸಂಘಗಳ ಸದಸ್ಯರುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ ನ.30 ರಂದು ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


2019ರಲ್ಲಿ ಕೇಂದ್ರ ಸಹಕಾರಿ ಬ್ಯಾಂಕ್‌ನ ಶತಮಾನೋತ್ಸವ ಅಂಗವಾಗಿ ಕ್ರೀಡಾಕೂಟವನ್ನು ಬಹಳ ಅದ್ದೂರಿಯಾಗಿ ಮಾಡಿದ್ದೆವು. ಅದೇ ರೀತಿ ಡಿ.30ರಂದು ನಡೆಯುವ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸಹಕಾರಿಗಳು ಸೇರಿಕೊಂಡು ಸುಮಾರು 15ಸಾವಿರ ಮಂದಿ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ದಕ್ಷಿಣ ಕನ್ನಡ ಕೇಂದ್ರ ಸಹಕಾರಿ ಬ್ಯಾಂಕ್‌ನ ಸಿಬ್ಬಂದಿ ವರ್ಗದವರು, ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿತ ಮತ್ತು ಸಿಬ್ಬಂದಿ ವರ್ಗದವರು, ನವೋದಯ ವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಸದಸ್ಯರು ಮತ್ತು ಕ್ರೆಡಿಟ್ ಕೋ ಓಪರೇಟಿವ್ ಸಹಿತ ಇನ್ನಿತರ ಸಂಘ ಸಂಸ್ಥೆಗಳಿಂದ ಅಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರ ಕ್ರೀಡಾ ಕೂಟ ನಡೆಯಲಿದೆ. ಜ.7ಕ್ಕೆ ಉಡುಪಿ ಜಿಲ್ಲೆಯ ಕ್ರೀಡಾಕೂಟ ಉಡುಪಿಯಲ್ಲಿ ನಡೆಯಲಿದೆ ಎಂದರು.


ಬೆಳಿಗ್ಗೆ ಉದ್ಘಾಟನೆ:
ನ.30ರ ಬೆಳಿಗ್ಗೆ 9 ಗಂಟೆಗೆ ಕ್ರೀಡಾಕೂಟವನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ಉದ್ಘಾಟಿಸಲಿದ್ದಾರೆ. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಲಿದ್ದಾರೆ. ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಕ್ರೀಡಾ ಜ್ಯೋತಿ ಪ್ರಜ್ವಲನೆ ಮಾಡಲಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮೆನೆಜಿಂಗ್ ಟ್ರಸ್ಟಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು ಭಾಗವಹಿಸಲಿದ್ದಾರೆ ಎಂದು ಶಶಿಕುಮಾರ್ ರೈ ಬಿ ಅವರು ಹೇಳಿದರು.


ಸಂಜೆ ಸಮಾರೋಪ:
ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಪ್ರಶಸ್ತಿ ವಿತರಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಕರಾವಳಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭೆ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್, ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಶಶಿಕುಮಾರ್ ರೈ ಬಾಳ್ಯೊಟ್ಟು ಅವರು ತಿಳಿಸಿದರು.


ಮಹಿಳೆಯರಿಗೆ ಪುರುಷರಿಗೆ ಪ್ರತ್ಯೇಕ ಸ್ಪರ್ಧೆ:
ಕ್ರೀಡಾಕೂಟ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ನಡೆಯಲಿದ್ದು, ಪ್ರತಿ ತಾಲೂಕಿನ ಮೂರು ತಂಡಗಳಿಗೆ ಸ್ಪರ್ಧೆಗೆ ಅವಕಾಶ ನೀಡಲಾಗವುದು. ಕೃಷಿಪತ್ತಿನ ಸಹಕಾರಿ ಸಂಘ, ಎಸ್‌ಸಿಡಿಸಿಸಿ ಬ್ಯಾಂಕ್, ನವೋದಯ ಸದಸ್ಯರ, ಕ್ರೆಡಿಟ್ ಸಹಿತ ಇನ್ನಿತರ ಸಂಸ್ಥೆಗಳ ತಲಾರ ಮೂರು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದೆ. ಹಗ್ಗಜಗ್ಗಾಟ, 100 ಮೀ. ಓಟ ಹಾಗೂ ಗುಂಡು ಎಸೆತ ಪಂದ್ಯಾಟಗಳು ನಡೆಯಲಿವೆ. ಜಿಲ್ಲೆಯ ವಿವಿಧ ತಾಲೂಕಿನಿಂದ ಕ್ರೀಡಾಳುಗಳು ಪಾಲ್ಗೊಳ್ಳಲಿದ್ದು, ಪ್ರತೀ ತಾಲೂಕಿನಿಂದ ಹಗ್ಗಜಗ್ಗಾಟಕ್ಕೆ ಮೂರು ತಂಡಗಳನ್ನು ನಿಗದಿಪಡಿಸಲಾಗಿದೆ. 100 ಮೀ. ಹಾಗೂ ಗುಂಡೆಸೆತ ಸ್ಪರ್ಧೆಯಲ್ಲಿ ಭಾಗವಹಿಸುವಿಕೆಯಲ್ಲಿ ಮಿತಿ ಇಲ್ಲ ಎಂದ ಶಶಿಕುಮಾರ್ ರೈ ಬಾಳ್ಯೊಟ್ಟು ಅವರು ಆಗಮಿಸುವ ಸ್ಪರ್ಧಾಳುಗಳಿಗೆ, ಸಾರ್ವಜನಿಕರಿಗೆ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಮಾಡಲಾಗಿದೆ. ಒಟ್ಟಾರೆಯಾಗಿ ಈ ಕ್ರೀಡಾಕೂಟ ಒಂದು ಜಾತ್ರೆ ಮಾದರಿಯಲ್ಲಿ ನಡೆಯಲಿದೆ ಎಂದು ತಿಳಿಸಿದರು.


ರಾಜೇಂದ್ರ ಕುಮಾರ್ ಅವರ ಸಹಕಾರದಿಂದ ಸಹಕಾರಿ ಸಂಘಗಳ ಏಳ್ಗೆ:
ಅಧ್ಯಕ್ಷರಾಗಿರುವ ರಾಜೇಂದ್ರ ಕುಮಾರ್ ಅವರು ಎಸ್‌ಸಿಡಿಸಿಸಿ ಬ್ಯಾಂಕ್ ಅನ್ನು ಬೆಳೆಸುವ ಉದ್ದೇಶವಿಟ್ಟುಕೊಂಡಿದ್ದರೆ ಇವತ್ತು ಸಂಸ್ಥೆ ಅಂತರಾಷ್ಟ್ರೀಯಮಟ್ಟದಲ್ಲಿ ಗುರುತಿಸಬಹುದಿತ್ತು. ಆದರೆ ಅವರು ಎಲ್ಲಾ 270 ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳಿಗೆ ಉಭಯ ಜಿಲ್ಲೆಯಲ್ಲಿ ಯಾವುದೇ ಒಂದು ಕಟ್ಟಡ, ಸ್ವಂತ ನಿವೇಶನ ಇಲ್ಲದಾಗ ರಾಜೇಂದ್ರ ಕುಮಾರ್ ಅವರ ಸಹಕಾರದಿಂದ ಎಲ್ಲಾ ಕೃಷಿ ಪತ್ತಿನ ಸಹಕಾರಿ ಸಂಘಗಳು ತಮ್ಮದೇ ಅದ ಸ್ವಂತ ಜಾಗವನ್ನು ಹೊಂದಿ ಎಲ್ಲಾ ರಾಷ್ಟ್ರೀಯ ಬ್ಯಾಂಕ್‌ಗಳಿಗೆ ಪೈಪೋಟಿ ನೀಡುವ ಸಂಸ್ಥೆಗಳಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ಶಶಿಕುಮಾರ್ ರೈ ಬಾಳ್ಯೊಟ್ಟು ಹೇಳಿದರು.


ಶಿಸ್ತುಬದ್ದ ಪಥ ಸಂಚಲನಕ್ಕೆ ಪ್ರಶಸ್ತಿ:
ಕ್ರೀಡಾಕೂಟದ ಮೈದಾನದಲ್ಲಿ ಪಥ ಸಂಚಲನ ನಡೆಯಲಿದೆ. ಈ ಪಥ ಸಂಚಲನದಲ್ಲಿ ಕ್ರೀಡಾಪಟುಗಳ ಸಮವಸ್ತ್ರ, ಅವರ ಪ್ರತಿಭೆ ಮತ್ತು ಶಿಸ್ತುಬದ್ಧ ತಂಡಕ್ಕೆ ಪ್ರಥಮ, ದ್ವಿತೀಯ ಪ್ರಶಸ್ತಿ ನೀಡಲಾಗುವುದು. ಭಾಗವಹಿಸಿದ 5 ತಂಡಗಳಿಗೆ ಪ್ರೋತ್ಸಾಹ ಬಹುಮಾನ ನೀಡಲಾಗುವುದು ಎಂದು ಶಶಿಕುಮಾರ್ ರೈ ಬಾಳ್ಯೊಟ್ಟು ಹೇಳಿದರು.


ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರವಿರಲಿ:
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಬಿ.ಜಯರಾಮ ರೈ ಅವರು ಮಾತನಾಡಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಮ್.ಎನ್.ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ನಡೆಯುವ ಈ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲು ಎಲ್ಲರ ಸಹಕಾರ ಬೇಕೆಂದು ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಬಿ.ಜಯರಾಮ ರೈ, ಬ್ಯಾಂಕ್‌ನ ಮಾರಾಟ ವಿಭಾಗದ ಅಧಿಕಾರಿ ಆದರ್ಶ್, ಬ್ಯಾಂಕ್ ವ್ಯವಸ್ಥಾಪಕ ಹರೀಶ್ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here