ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಪ್ರತಿಭಾ ತರಂಗಿಣಿ 2023-24ಕ್ಕೆ ಚಾಲನೆ

0

ಐಎಎಸ್, ಐಪಿಎಸ್ ವಿದಾರ್ಥಿಗಳ ಗುರಿಯಾಗಬೇಕು : ಅಶೋಕ್ ಕುಮಾರ್ ರೈ


ಪುತ್ತೂರು: ವಿದ್ಯಾರ್ಥಿಗಳು ಐಎಎಸ್, ಐಪಿಎಸ್‌ನಂತಹ ಕ್ಷೇತ್ರಗಳನ್ನೂ ತಮ್ಮ ಅವಕಾಶಗಳೆಂದು ಪರಿಗಣಿಸಬೇಕು. ಸರಿಯಾದ ಪೂರ್ವ ಸಿದ್ಧತೆಯೊಂದಿಗೆ ಯೋಜನಾಬದ್ಧವಾಗಿ ಅಧ್ಯಯನ ನಡೆಸಿದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆಲುವು ಸಾಧಿಸಬಹುದು. ಆದರೆ ಅಂತಹ ಆತ್ಮವಿಶ್ವಾಸವನ್ನು ಮೊಟ್ಟಮೊದಲಿಗೆ ಬೆಳೆಸಿಕೊಳ್ಳಬೇಕು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಹತ್ತನೆಯ ವರ್ಷಾಚರಣೆ ದಶಾಂಬಿಕೋತ್ಸವದ ಅಂಗವಾಗಿ ಆಯೋಜಿಸಲಾದ ಪ್ರತಿಭಾ ತರಂಗಿಣಿ 2023-24 ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರತಿಭೋತ್ಸವದಲ್ಲಿ ಬುಧವಾರ ಮಾತನಾಡಿದರು.
ಹಿಂದಿನ ಕಾಲದಲ್ಲಿ ಮೆಡಿಕಲ್, ಇಂಜಿನಿಯರಿಂಗ್ ಕ್ಷೇತ್ರ ಆರ್ಥಿಕವಾಗಿ ಸ್ಥಿತಿವಂತರ ಮಕ್ಕಳಿಗೆ ಮಾತ್ರ ಎಂಬ ಭಾವನೆಯಿತ್ತು. ಆದರೆ ಈಗ ಕಾಲ ಬದಲಾಗಿದೆ. ಪ್ರತಿಯೊಬ್ಬನಿಗೂ ಡಾಕ್ಟರ್, ಇಂಜಿನಿಯರ್ ಆಗುವ ಅವಕಾಶಗಳಿವೆ. ಆದಾಗ್ಯೂ ಭಾರತದಲ್ಲಿ ಸರಾಸರಿ ಹತ್ತು ಸಾವಿರ ಮಂದಿಗೆ ಒಬ್ಬ ಡಾಕ್ಟರ್ ಇರುವಂತಹ ಪರಿಸ್ಥಿತಿಯಿದೆ. ಅಮೇರಿಕಾದಂತಹ ರಾಷ್ಟ್ರದಲ್ಲಿ ಎರಡು ಸಾವಿರ ಮಂದಿಗೆ ಒಬ್ಬ ವೈದ್ಯರಿದ್ದಾರೆ. ಹಾಗಾಗಿ ಮತ್ತಷ್ಟು ಮೆಡಿಕಲ್ ಕಾಲೇಜುಗಳ ಅವಶ್ಯಕತೆ ಇದೆ ಎಂದರಲ್ಲದೆ ಉನ್ನತ ಸ್ಥಾನಕ್ಕೆ ಹೋದಾಗ ಹೆತ್ತವರನ್ನು ಮಕ್ಕಳು ಮರೆಯುವುದು ಸಂಸ್ಕಾರವಲ್ಲ ಎಂದು ನುಡಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಣಿಪಾಲದ ಡಾ.ಟಿ.ಎಂ.ಎ ಪೈ ಕಾಲೇಜ್ ಆಫ್ ಎಜುಕೇಶನ್‌ನ ಸಂಯೋಜಕ ಡಾ.ಮಹಾಬಲೇಶ್ವರ ರಾವ್ ಮಾತನಾಡಿ ಮಕ್ಕಳಿಗೆ ಆದರ್ಶಗಳನ್ನು ಕೇವಲ ಬಾಯಿಮಾತಿನಲ್ಲಿ ಹೇಳುವುದರಿಂದ ಯಾವ ಪ್ರಯೋಜನವೂ ಆಗಲಾರದು. ಹೆತ್ತವರು ಸ್ವತಃ ಆಚರಿಸಿ ತೋರಿಸಿದಾಗ ಮಾತ್ರ ಅದು ಮಕ್ಕಳ ಮನಸ್ಸಿಗೆ ಇಳಿಯುವುದಕ್ಕೆ ಸಾಧ್ಯ. ಹೆತ್ತವರ ಮೌಲ್ಯಗಳು ಕೃತಿಯಲ್ಲಿ ಕಾಣಿಸಿಕೊಂಡಾಗ ಮಕ್ಕಳಲ್ಲಿ ತನ್ನಿಂದ ತಾನೇ ಮೌಲ್ಯಗಳು ಬೆಳೆಯುತ್ತವೆ ಎಂದರು.


ಮಕ್ಕಳ ಜತೆ ಮಾತನಾಡುವುದು ಅತ್ಯಂತ ಮುಖ್ಯ. ಇಂದು ಸಂಕಟವನ್ನು ಹೇಳಿಕೊಳ್ಳಲಾಗದೆ ಯುವ ಸಮೂಹ ಆತ್ಮಹತ್ಯೆ ಮಾಡಿಕೊಳ್ಳುತ್ತಿದೆ. ಹೆಚ್ಚು ಆತ್ಮಹತ್ಯೆಗಳು ನಡೆಯುವ ಸಮಾಜ ಅತ್ಯಂತ ರೋಗಗ್ರಸ್ತ ಸಮಾಜ ಎನಿಸಿಕೊಳ್ಳುತ್ತದೆ. ಆದ್ದರಿಂದ ಮಕ್ಕಳು ಸೋತಾಗ ಅವರ ಬಳಿ ತೆರಳಿ ಧೈರ್ಯ ತುಂಬುವ ಕಾರ್ಯ ಆಗಬೇಕಿದೆ. ನಾವಿಂದು ಸುಖ ಕೇಂದ್ರಿತ ಸಮಾಜದಲ್ಲಿದ್ದೇವೆ. ಹಾಗಾಗಿಯೇ ಮೌಲ್ಯಗಳ ಕೊರತೆಗಳು ಎಲ್ಲೆಡೆ ಕಾಣಿಸುತ್ತಿವೆ. ಇಂತಹ ಸಂದರ್ಭದಲ್ಲಿ ಹೆತ್ತವರು ತಮ್ಮನ್ನು ತಾವು ಮಾದರಿಯಾಗಿ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಶಿಕ್ಷಣದ ಉದ್ದೇಶ ದೇಶ ಕಟ್ಟುವಿಕೆಯೇ ಆಗಿರಬೇಕು. ದೇಶಕ್ಕಾಗಿ ಪ್ರಾಣವನ್ನಾದರೂ ಅರ್ಪಿಸುವುದಕ್ಕೆ ಸಿದ್ಧರಾಗುವ ರೀತಿಯಲ್ಲಿ ನಮ್ಮ ಮಕ್ಕಳು ಬೆಳೆದುಬರಬೇಕು. ದೇಶಪ್ರೇಮ ತುಂಬುವುದು ವಿದ್ಯಾಸಂಸ್ಥೆಗಳ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.


ಈ ಸಂದರ್ಭದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಅಂತರಾಷ್ಟ್ರೀಯ ಜಾಂಬೂರಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ಹತ್ತನೆಯ ತರಗತಿ ವಿದ್ಯಾರ್ಥಿ ಶ್ರೀಕೃಷ್ಣ ನಟ್ಟೋಜ, ಸ್ಕೌಟ್ ಅಂಡ್ ಗೈಡ್ಸ್ ನಲ್ಲಿ ರಾಜ್ಯಪಾಲರಿಂದ ರಾಜ್ಯಪುರಸ್ಕಾರ ಗಳಿಸಿದ ಹತ್ತನೆಯ ತರಗತಿಯ ವಿದ್ಯಾರ್ಥಿಗಳಾದ ತನ್ವಿ ವಿ, ಅನ್ಸಿಕಾ ಎನ್ ಶೆಟ್ಟಿ, ಯಶಸ್ವಿ ಸುರುಳಿ, ಭಾರ್ಗವಿ ಬೋರ್ಕರ್ ಕೆ, ಭವಿಷ್ ಪಿ ಗೌಡ, ಭವಿತ್ ಪಿ ಗೌಡ ಹಾಗೂ ಆತ್ರೇಯ ಭಟ್ ಎ.ಜಿ ಅಂತೆಯೇ ಕ್ಯಾಂಪ್ಕೋ ಸಂಸ್ಥೆ ಆಯೋಜಿಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾಗಿ ಇಪ್ಪತ್ತೈದು ಸಾವಿರ ಮೊತ್ತವನ್ನು ಬಹುಮಾನವಾಗಿ ಪಡೆದ ಒಂಬತ್ತನೆಯ ತರಗತಿಯ ಅನಘಾ ವಿ.ಪಿ ಹಾಗೂ ಎಂಟನೆಯ ತರಗತಿಯ ವೈಷ್ಣವಿ ಎಂ.ಆರ್, ಜಿಲ್ಲಾಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಭಾಗವಹಿಸಿದ ಹತ್ತನೆಯ ತರಗತಿ ವಿದ್ಯಾರ್ಥಿ ಅವನೀಶ ಕೃಷ್ಣ, ವಲಯ ಮಟ್ಟದ ಚೆಸ್‌ನಲ್ಲಿ ಸಾಧನೆಗೈದ ಏಳನೆಯ ತರಗತಿ ವಿದ್ಯಾರ್ಥಿ ಸಾತ್ವಿಕ್ ಜಿ, ತಾಲೂಕು ದಸರಾ ಸ್ಪರ್ಧೆಯಲ್ಲಿ ವಿಝೇತರಾದ ಏಳನೆಯ ತರಗತಿ ವಿದ್ಯಾರ್ಥಿನಿ ಒಂಬತ್ತನೆಯ ತರಗತಿ ವಿದ್ಯಾರ್ಥಿನಿ ನಿಯತಿ ಭಟ್, ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಜೂನಿಯರ್ ಅಥ್ಲೆಟ್ ಸ್ಪರ್ಧೆಯಲ್ಲಿ ಸಾಧನೆಗೈದ ಏಳನೆಯ ತರಗತಿ ವಿದ್ಯಾರ್ಥಿನಿ ದೃಶಾನ ಅವರನ್ನು ಅಭಿನಂದಿಸಲಾಯಿತು.


ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್.ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ಡಾ.ಎಚ್.ಮಾಧವ ಭಟ್, ಡಾ.ಎಂ.ಎಸ್.ಶೆಣೈ, ಬಾಲಕೃಷ್ಣ ಬೋರ್ಕರ್, ಪ್ರಸನ್ನ ಭಟ್, ದಶಾಂಬಿಕೋತ್ಸವ ಸಮಿತಿಯ ಅಧ್ಯಕ್ಷ, ನ್ಯಾಯವಾದಿ ಮಹೇಶ್ ಕಜೆ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸೀಮಾ ನಾಗರಾಜ್, ವಿದ್ಯಾರ್ಥಿ ನಾಯಕ ಜಸ್ವಿತ್, ವಿದ್ಯಾರ್ಥಿ ನಾಯಕಿ ಅರುಂಧತಿ ಎಲ್ ಆಚಾರ್ಯ ಉಪಸ್ಥಿತರಿದ್ದರು.


ವಿದ್ಯಾರ್ಥಿಗಳಾದ ಆತ್ರೇಯ ಭಟ್, ಯಶಸ್ ಬಿ.ಜೆ, ಸನ್ಮಯ್ ಎನ್ ಹಾಗೂ ಮಯೂರ್ ಎಸ್ ಮಯ್ಯ ಪ್ರಾರ್ಥಿಸಿದರು. ಪ್ರಾಚಾರ್ಯೆ ಮಾಲತಿ ಡಿ ಸ್ವಾಗತಿಸಿದರು. ಉಪಪ್ರಾಚಾರ್ಯೆ ಸುಜನಿ ಬೋರ್ಕರ್ ವಂದಿಸಿದರು. ಶಿಕ್ಷಕಿಯರಾದ ಸುಷ್ಮಾ ಮಿಥುನ್ ಹಾಗೂ ಗೌರಿ ಬಿ.ವಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here