ಬೆಂಗಳೂರು ಕಂಬಳದ ಸುದ್ದಿ ವಿಶೇಷಾಂಕ ಕ್ಕೆ, ಕಂಬಳ ನೇರಪ್ರಸಾರಕ್ಕೆ ವ್ಯಾಪಕ ಮೆಚ್ಚುಗೆ

0

ಪುತ್ತೂರಿನವರೇ – ಪರವೂರಿನಲ್ಲಿರುವ, ಬೆಂಗಳೂರಿನಲ್ಲಿರುವವರ ಸಂಪರ್ಕ ನೀಡಿರಿ

ಊರಿನೊಂದಿಗೆ ಸೇತು ಆಗಲು, ಸಂಬಂಧ ಬೆಳೆಯಲು ಸಹಕಾರಿಯಾಗಿರಿ

ಬೆಂಗಳೂರಿನಲ್ಲಿರುವ ದ.ಕ. ಜಿಲ್ಲೆಯವರ ವರದಿಗಾಗಿ, ಸುದ್ದಿಗಳಿಗಾಗಿ ಬೆಂಗಳೂರಿನಲ್ಲಿ ಮುಂದಕ್ಕೆ ಅದೇ ರೀತಿಯ ವಿಶೇಷ ಸಂಚಿಕೆ ಹೊರತರಬೇಕೆಂದಿದ್ದೇವೆ ಹಾಗೂ ಕಾರ್ಯಕ್ರಮಗಳ ನೇರಪ್ರಸಾರ ಮಾಡಬೇಕೆಂದಿದ್ದೇವೆ. ಇದೇ ನ.25, 26ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಬೆಂಗಳೂರು ಕಂಬಳ ಅದ್ಭುತ ಯಶಸ್ಸು ಪಡೆದಿದೆ. ರಾತ್ರಿ ಹಗಲು 2 ದಿವಸ ದ.ಕ. ಜಿಲ್ಲೆಯ ಕಂಬಳದ ಸಾಂಸ್ಕೃತಿಕ ವೈಭವವನ್ನು ಜನರು ಸವಿದಿದ್ದಾರೆ. ಸಾಮಾನ್ಯ ಜನರಲ್ಲದೇ ರಾಜಕೀಯ, ಬಿಸಿನೆಸ್, ಸಿನೆಮಾ ರಂಗದ ಪ್ರಮುಖರು ತಾ ಮುಂದು, ನಾ ಮುಂದು ಎಂದು ಭಾಗವಹಿಸಿದ್ದಾರೆ. 10 ಲಕ್ಷಕ್ಕೂ ಮಿಕ್ಕಿ ಜನರು ಕಂಬಳ ನೇರವಾಗಿ ವೀಕ್ಷಿಸಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆಯಲ್ಲಿ, ಪ್ರಕಾಶ್ ಶೆಟ್ಟಿಯವರ ಗೌರವಾಧ್ಯಕ್ಷತೆಯ ಕಂಬಳ ಸಮಿತಿಯ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮ ಬೆಂಗಳೂರಿನಲ್ಲಿ ಇಷ್ಟರವರೆಗೆ ನಡೆದ ಎಲ್ಲಾ ಕಾರ್ಯಕ್ರಮಗಳನ್ನು ಮೀರಿ ಯಶಸ್ವಿಯಾಗಿದೆ ಎಂಬ ಅಭಿಪ್ರಾಯ ಜನರಲ್ಲಿದೆ.
ಈ ಬೆಂಗಳೂರು ಕಂಬಳದ ಚಿಂತನೆಯ ಪ್ರಾರಂಭದಿಂದಲೂ ಸುದ್ದಿ ಪತ್ರಿಕೆ ಮತ್ತು ಸುದ್ದಿ ಚಾನೆಲ್ ಆ ಬಗ್ಗೆ ವರದಿ ಮಾಡುತ್ತಾ, ಸಂದರ್ಶನ ನಡೆಸುತ್ತಾ ಬಂದಿದೆ. ಬೆಂಗಳೂರಿನ ಕರೆ ನಿರ್ಮಾಣ, ಉಪ್ಪಿನಂಗಡಿಯಿಂದ ಬೆಂಗಳೂರಿಗೆ ಕಂಬಳದ ಕೋಣಗಳ ಪ್ರಯಾಣದಿಂದ ಹಿಡಿದು 2 ದಿವಸ ಬೆಂಗಳೂರಿನಲ್ಲಿ ನಡೆದ ಕಂಬಳದ ಎಲ್ಲಾ ಚಟುವಟಿಕೆಗಳನ್ನು ಅಲ್ಲಿಯ ಇತರ ಕಾರ್ಯಕ್ರಮಗಳನ್ನು ವಿಶೇಷತೆಗಳನ್ನು ಸುದ್ದಿ ವರದಿ ಮತ್ತು ನೇರಪ್ರಸಾರ ಮಾಡಿದೆ. 217ಕ್ಕೂ ಮಿಕ್ಕಿ ಸ್ಟೋರಿಗಳನ್ನು ಬಿಡುಗಡೆ ಮಾಡಿದೆ. 50 ಲಕ್ಷಕ್ಕೂ ಮಿಕ್ಕಿ ಜನರು ‘ಸುದ್ದಿ’ ಚಾನೆಲ್‌ನ ಪ್ರಸಾರವನ್ನು ವೀಕ್ಷಿಸಿದ್ದಾರೆ. ಅದರೊಂದಿಗೆ ಕಂಬಳದ ವಿಶೇಷಾಂಕವನ್ನು ಪತ್ರಿಕೆಯಲ್ಲಿ ಮಾತ್ರವಲ್ಲ, ಕಂಬಳದ ಬಗ್ಗೆ ವಿಶೇಷ ಮಾಹಿತಿ ನೀಡುವ ಸಂಗ್ರಹ ಯೋಗ್ಯವಾದ ವಿಶೇಷ ಸಂಚಿಕೆಯನ್ನು ಆರ್ಟ್ ಪೇಪರ್‌ನಲ್ಲಿ ಹೊರತಂದಿದ್ದೇವೆ. ಅದನ್ನು ಕಂಬಳದ ವೇದಿಕೆಯಲ್ಲಿ ಬಿಡುಗಡೆ ಮಾಡಿದ್ದೇವೆ. ಕಂಬಳದ ಆಸಕ್ತರು ಅದರ ಮಾಹಿತಿಗಾಗಿ ಸಂಚಿಕೆಯನ್ನು ಕೇಳಿ ಕೇಳಿ ಪಡೆದುಕೊಂಡಿದ್ದಾರೆ. ಒಟ್ಟಿನಲ್ಲಿ ‘ಸುದ್ದಿ ಪತ್ರಿಕೆ’ ಮತ್ತು ‘ಸುದ್ದಿ ಚಾನೆಲ್’ ಬೆಂಗಳೂರು ಕಂಬಳದಲ್ಲಿ ತನ್ನದೇ ಆದ ಚಾಪು ಮೂಡಿಸಿದೆ, ಜನ ಮೆಚ್ಚುಗೆ ಗಳಿಸಿದೆ.

ಈ ಮೇಲಿನ ವಿಷಯಗಳ ಹಿನ್ನಲೆಯಲ್ಲಿ ನಾವು ಬೆಂಗಳೂರಿನಲ್ಲಿ ಪತ್ರಿಕೆಗೆ ಮತ್ತು ಚಾನೆಲ್‌ಗೆ ತಂಡವನ್ನು ಕಟ್ಟಿಕೊಳ್ಳಲಿದ್ದೇವೆ. ಬೆಂಗಳೂರಿನಲ್ಲಿರುವ ದ.ಕ.ಜಿಲ್ಲೆಯವರಿಗೆ ಸುದ್ದಿಯಾಗಲಿದ್ದೇವೆ. ಅವರ ಸುದ್ದಿಗಳಿಗೆ ನಮ್ಮ ಪತ್ರಿಕೆ ಮತ್ತು ನಮ್ಮ ಚಾನೆಲ್ ವೇದಿಕೆಯಾಗಲಿದೆ. ಆ ಸುದ್ದಿಗಳನ್ನು ಸುಳ್ಯ, ಪುತ್ತೂರು, ಬೆಳ್ತಂಗಡಿ ಪತ್ರಿಕೆಗಳಲ್ಲಿ, ಚಾನೆಲ್‌ಗಳಲ್ಲಿ ಮಾತ್ರವಲ್ಲ, ಬಂಟ್ವಾಳ, ಮಂಗಳೂರು ಚಾನೆಲ್‌ಗಳಲ್ಲಿ ಬಿತ್ತರಿಸಿ ಊರಿನವರಿಗೂ, ಬೆಂಗಳೂರಿನಲ್ಲಿರುವ ನಮ್ಮವರಿಗೂ ಸಂಪರ್ಕ ಸೇತುವೆಯಾಗಲಿದ್ದೇವೆ.

ಪುತ್ತೂರಿನವರು (ದ.ಕ. ಜಿಲ್ಲೆಯವರು) ಬೆಂಗಳೂರಿನಲ್ಲಿರುವ ಮಾತ್ರವಲ್ಲ ಪರವೂರಿನಲ್ಲಿರುವ ಪುತ್ತೂರಿನವರ ಸಂಪರ್ಕ, ಮಾಹಿತಿಯನ್ನು ಸುದ್ದಿಗೆ ನೀಡಿ ಅವರೊಂದಿಗೆ ನಮ್ಮ ಸಂಪರ್ಕ ಸೇತು ಹಾಗೂ ಸೇವೆಯ ಸೇತು ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಮತ್ತು ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕಾಗಿ ವಿನಂತಿಸುತ್ತಿದ್ದೇವೆ.
ಡಾ. ಯು.ಪಿ. ಶಿವಾನಂದ, ಸುದ್ದಿ ಬಳಗ
-ಮೊ: 8050294051, 8105046539

LEAVE A REPLY

Please enter your comment!
Please enter your name here