ಪಾಲ್ತಾಡಿಯ ಕುಂಜಾಡಿಯಲ್ಲಿ ದೇಸಿ ಹಾಗೂ ಮಿಶ್ರ ತಳಿ ಹೆಣ್ಣು ಕರು ಮತ್ತು ಕಡಸುಗಳ ಪ್ರದರ್ಶನ ,ಬರಡು ರಾಸು ಚಿಕಿತ್ಸಾ ಶಿಬಿರ

0

ಸಹಕಾರಿ ರತ್ನ ಸೀತಾರಾಮ ರೈ ಅವರಿಗೆ ಸನ್ಮಾನ ,  ಸುಚರಿತ ಶೆಟ್ಟಿ ,ಎಸ್.ಬಿ.ಜಯರಾಮ ರೈ ಅವರಿಗೆ ಗೌರವಾರ್ಪಣೆ 
ದ.ಕ.ಹಾಲು ಒಕ್ಕೂಟಕ್ಕೆ 1.5 ಲಕ್ಷ ಲೀಟರ್‌ ಹಾಲಿನ ಕೊರತೆ ಇದೆ- ದ.ಕ.ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ

ಸವಣೂರು : ದ.ಕ.ಹಾಲು ಒಕ್ಕೂಟಕ್ಕೆ ಪ್ರತೀ ದಿನ 1.5 ಲಕ್ಷ ಲೀಟರ್‌ ಹಾಲಿನ ಕೊರತೆ ಇದೆ.ಈ ನಿಟ್ಟಿನಲ್ಲಿ ಎಲ್ಲರೂ ಹೈನುಗಾರಿಕೆಯತ್ತ ಗಮನಹರಿಸಬೇಕು ಹಾಗೂ ಹೆಚ್ಚು ಹಾಲು ಉತ್ಪಾದಿಸುವ ಮೂಲಕ ಒಕ್ಕೂಟದ ಹಾಲಿನ ಕೊರತೆಯನ್ನು ನೀಗಿಸಲು ಎಲ್ಲರೂ ಕೈಜೋಡಿಸಬೇಕು ಎಂದು ದ.ಕ.ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಹೇಳಿದರು.


ಅವರು ಡಿ.5ರಂದು ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಕುಂಜಾಡಿ ಗಣೇಶ್‌ ಶೆಟ್ಟಿ ಅವರ ಮನೆಯ ವಠಾರದಲ್ಲಿ ದ.ಕ.ಜಿ.ಪಂ., ಪಶು ಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ,ಹಾಲು ಉತ್ಪಾದಕರ ಸಹಕಾರಿ ಸಂಘ ಮುಕ್ಕೂರು ,ಹಾಲು ಉತ್ಪಾದಕರ ಸಹಕಾರಿ ಸಂಘ ಬಂಬುಲ ಇದರ ಸಂಯುಕ್ತ ಆಶ್ರಯದಲ್ಲಿ ದ.ಕ.ಜಿ.ಪಂ.ವಿಸ್ತರಣಾ ಘಟಕಗಳ ಬಲಪಡಿಸುವಿಕೆ 2023-24ನೇ ಸಾಲಿನ ಅನುದಾನದಲ್ಲಿ ದೇಸಿ ಹಾಗೂ ಮಿಶ್ರ ತಳಿ ಹೆಣ್ಣು ಕರು ಮತ್ತು ಕಡಸುಗಳ ಪ್ರದರ್ಶನ ,ಬರಡು ರಾಸು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಪುತ್ತೂರಿನ ಕೊಡುಗೆ ಅಪಾರ
ಸಹಕಾರಿ ಕ್ಷೇತ್ರ ,ಸಾಂಸ್ಕೃತಿಕ ಕ್ಷೇತ್ರ ಸೇರಿದಂತೆ ಪುತ್ತೂರಿನ ಕೊಡುಗೆ ಅಪಾರ,ಸಾಂವಿಧಾನಿಕವಾಗಿ ಈಗ ಸುಳ್ಯ ,ಕಡಬ ,ಪುತ್ತೂರು ತಾಲೂಕು ಬೇರೆಯಾಗಿರಬಹುದು.ಒಟ್ಟು ಭೌಗೋಳಿಕವಾಗಿ ಒಂದೇ ಆಗಿರುವ ಪುತ್ತೂರಿನಲ್ಲಿ ಕೃಷಿ ಪ್ರಧಾನವಾದ ಪ್ರದೇಶ.ಇಲ್ಲಿ ಪಾರಂಪರಿಕವಾಗಿ ಹೈನುಗಾರಿಕೆ ನಡೆದುಕೊಂಡು ಬಂದಿದೆ.ಆದರೂ ಹೆಚ್ಚು ಹಾಲು ಉತ್ಪಾದಿಸುವ ನಿಟ್ಟಿನಲ್ಲಿ ದೇಸಿ ತಳಿಗಳ ಜತೆಗೆ ಮಿಶ್ರತಳಿಗಳನ್ನು ಬೆಳೆಸಿಕೊಂಡು ಜಿಲ್ಲೆಯಲ್ಲಿನ ಹಾಲಿನ ಕೊರತೆಯನ್ನು ನೀಗಿಸಲು ಶ್ರಮಿಸಬೇಕು ಎಂದರು.ಹಾಲು ಉತ್ಪಾದಕರ ಪ್ರೋತ್ಸಾಹಕ್ಕಾಗಿ  ದ.ಕ.ಹಾಲು ಒಕ್ಕೂಟ ಹಾಗೂ ಪಶು ಸಂಗೋಪನೆ ಇಲಾಖೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.

ದ.ಕ.ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ಮಾತನಾಡಿ , ಸವಣೂರು ಸೀತಾರಾಮ ರೈ ಅವರು ಒಕ್ಕೂಟದ ಅಧ್ಯಕ್ಷರಾಗಿದ್ದಾಗ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರು.ಹಾಗೂ ಪುತ್ತೂರಿನಲ್ಲಿ ಒಕ್ಕೂಟದ ವತಿಯಿಂದ ಕಾರ್ಖಾನೆ ಆರಂಭಿಸುವ ಕಾರ್ಯಕ್ಕೆ ಯೋಜನೆ ರೂಪಿಸಿದ್ದರು.ಇದೀಗ ಅದರ ಕೆಲಸ ಕಾರ್ಯಗಳು ಆರಂಭವಾಗಿದೆ ಎಂದರು.

ಸಹಕಾರಿ ರತ್ನ ಸೀತಾರಾಮ ರೈ ಅವರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ  ದ.ಕ..ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ ಮಾಜಿ ಅಧ್ಯಕ್ಷ , ಆದರ್ಶ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರೂ ಆಗಿರುವ ಸಹಕಾರಿ ರತ್ನ
ಕೆ.ಸೀತಾರಾಮ ರೈ ಸವಣೂರು ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸೀತಾರಾಮ ರೈ ಅವರು ,ನನ್ನ ನೆಚ್ಚಿನ ಕ್ಷೇತ್ರವಾಗಿರುವ ಸಹಕಾರರಂಗದಲ್ಲಿ ಪ್ರಾಮಾಣಿಕವಾಗಿ ಸೇವೆ ಮಾಡಿದ ತೃಪ್ತಿಯಿದೆ.ದ.ಕ.ಹಾಲು ಒಕ್ಕೂಟದ ಅಧ್ಯಕ್ಷನಾಗಿಯೂ ಹಲವಾರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಬೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಕಂಡಿದ್ದೇನೆ.ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ.ಜಿಲ್ಲೆಯ ಅಮೂಲಾಗ್ರ ಬದಲಾವಣೆಗೆ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮಾತನಾಡಿ ,ದ.ಕ.ಹಾಲು ಒಕ್ಕೂಟದಿಂದ ಹೈನುಗಾರಿಕೆಗೆ ವಿಶೇಷ ಪ್ರೋತ್ಸಾಹ ನೀಡುತ್ತಿದೆ. ಹೈನುಗಾರಿಕೆಗೆ ಯುವಕರನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಯತ್ನವಾಗಬೇಕು.ಹೈನುಗಾರಿಕೆಯಲ್ಲಿ ನಾವು ಸ್ವತಃ ಅನುಭವ ಪಡೆದುಕೊಂಡು ಮುಂದುವರಿದಾಗ ಯಶಸ್ಸು ದೊರಕುತ್ತದೆ.ನಾನೂ ಕೂಡ ದಿನವೊಂದಕ್ಕೆ 310 ಲೀಟರ್‌ ಹಾಲು ಉತ್ಪಾದಿಸಿ ಸಂಘಕ್ಕೆ ಹಾಕುತ್ತಿದ್ದೆ.ನಾನು ಮತ್ತು ಪತ್ನಿ ಇಬ್ಬರೇ ಹಾಲು ಕರೆಯುತ್ತಿದ್ದೆವು.ಸ್ವತಃ ತೊಡಗಿಸಿಕೊಂಡಾಗ ಯಶಸ್ಸು ಸಾಧ್ಯ.ಹಲವರು ಸಮಯವಿಲ್ಲ ಎನ್ನುತ್ತಿದ್ದಾರೆ. ಆದರೆ ಹೈನುಗಾರಿಕೆಯಲ್ಲಿ ತೊಡಗಿಕೊಂಡಾಗ ನಿಜವಾಗಿಯೂ ಸಮಯವಿರುತ್ತದೆ.ಯುವಜನತೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಾಗ ಇತರ ಕೆಟ್ಟ ವಿಚಾರಗಳತ್ತ ಗಮನಹರಿಸಲು ಸಮಯವಿರದ ಕಾರಣ ಉತ್ತಮ ನಾಗರಿಕನಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ಉತ್ತಮ ದರ್ಜೆಯ ಗರ್ಭಧಾರಣೆ ಅಗತ್ಯ
ಒಕ್ಕೂಟದ ವತಿಯಿಂದ ನೀಡಲಾಗುವ ಕೃತಕ ಗರ್ಭಧಾರಣೆಯಲ್ಲಿ ಉತ್ತಮ ತಳಿಯ ಕರುಗಳಾಗುವುದು ಕಡಿಮೆ.ಇದೇ ಕರುಗಳು ದೊಡ್ಡದಾದಾಗ ಹಾಲಿನ ಇಳುವರಿ ಕಡಿಮೆಯಾಗುತ್ತದೆ.ಈ ನಿಟ್ಟಿನಲ್ಲಿ ದ.ಕ.ಹಾಲು ಒಕ್ಕೂಟ ವಿಶೇಷವಾಗಿ ಗಮನಹರಿಸಿ ಉತ್ತಮ ದರ್ಜೆಯ ಗರ್ಭಧಾರಣೆಯ ವೀರ್ಯ ಸರಬರಾಜು ಮಾಡಬೇಕು.ಇದರಿಂದ ಉತ್ತಮ ದರ್ಜೆಯ ಕರುಗಳಾಗಿ ಮುಂದಿನ ದಿನಗಳಲ್ಲಿ ದ.ಕ.ಹಾಲು ಒಕ್ಕೂಟಕ್ಕೆ ಹೆಚ್ಚುವರಿ ಹಾಲು ಪೂರೈಕೆವಾಗಬಹುದು ಎಂದರು.

17 ಕರುಗಳನ್ನು ಹಾಕಿದ ದನವಿದೆ
ಈಗ ಹೆಚ್ಚಿನವರು 2-4 ಕರು ಹಾಕಿದ ದನಗಳನ್ನು ಮಾರಾಟ ಮಾಡುವುದು ಕಂಡು ಬರುತ್ತಿದೆ.ಆದರೆ ಇದು ಸರಿಯಲ್ಲ.ನನ್ನ ಮನೆಯಲ್ಲಿ 17 ಕರು ಹಾಕಿದ ದನವಿದೆ.ಉತ್ತಮ ಹಾಲು ನೀಡಿದೆ.ಹೈನುಗಾರಿಕೆ ಮಾಡುವಾಗ ನಾವು ಹಲವರಿಂದ ಮಾಹಿತಿ ಪಡೆದುಕೊಳ್ಳಬೇಕು.ಪಶುವೈದ್ಯಾಧಿಕಾರಿಗಳ ನಿಕಟ ಸಂಪರ್ಕವಿರಿಸಿಕೊಂಡು ಹೆಚ್ಚು ಜ್ಞಾನ ಸಂಪಾದಿಸಿಕೊಂಡು ಮುನ್ನಡೆಯಬೇಕು ಎಂದರು.

ಅತಿಥಿಗಳಾಗಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್‌ ,ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವೆಂಕಟರಮಣ ಕೆ.ಎಸ್.‌, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಶುಭಹಾರೈಸಿದರು.

ವೇದಿಕೆಯಲ್ಲಿ ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜಯಪ್ರಕಾಶ್‌ ಎನ್.ಆರ್.‌,ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಮಮತಾ ದೇವಸ್ಯ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಗಣೇಶ್‌ ಶೆಟ್ಟಿ ಕುಂಜಾಡಿ ,ದ.ಕ.ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸತೀಶ್‌ ರಾವ್‌ , ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಕುಂಜಾಡಿ ಗಣೇಶ್‌ ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗೋಪೂಜೆಯೊಂದಿಗೆ ಆರಂಭ
ಕಾರ್ಯಕ್ರಮವು ಗೋಪೂಜೆಯೊಂದಿಗೆ ಆರಂಭಗೊಂಡಿತು.ಅತಿಥಿ ಗಣ್ಯರು ಗೋಪೂಜೆ ನೆರವೇರಿಸಿದರು.ಕರು ಪ್ರದರ್ಶನವನ್ನು ದ.ಕ.ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ಅವರು ಉದ್ಘಾಟಿಸಿದರು.ಹೆಣ್ಣು ಕರು ಮತ್ತು ಕಡಸುಗಳ ಪ್ರದರ್ಶನದಲ್ಲಿ ಹೆಚ್.ಎಫ್‌ ವಿಭಾಗದಲ್ಲಿ ಸುಮಲತಾ ನೀರ್ಕಜೆ ಪ್ರಥಮ ,ಸೋಮಪ್ಪ ಗೌಡ ಬಂಬಿಲ ದ್ವಿತೀಯ ,ಕೇಶವ ಗೌಡ ,ಜರ್ಸಿ ವಿಭಾಗದಲ್ಲಿ ಫೆರ್ನಾಂಡಿಸ್‌ ಡಿಸೋಜ ಪ್ರಥಮ ,ಲೋಕೇಶ್‌ ದ್ವಿತೀಯ ,ಕುಸುಮಾವತಿ ತೃತೀಯ ,ದೇಶಿ ತಳಿ ವಿಭಾಗದಲ್ಲಿ ಹರಿಕಲಾ ರೈ ಕುಂಜಾಡಿ ಪ್ರಥಮ,ರವೀಂದ್ರ ಪೂಜಾರಿ ಬಂಬಿಲ ದ್ವಿತೀಯ ,ಗಣೇಶ್‌ ಬಂಬಿಲ ಅವರ ದನ ತೃತೀಯ ಬಹುಮಾನ ಪಡೆದುಕೊಂಡಿತು.ಭಾಗವಹಿಸಿದ ಎಲ್ಲಾ ಜಾನುವಾರುಗಳಿಗೆ ಪ್ರೋತ್ಸಾಹಕ ಬಹುಮಾನವಾಗಿ ಪಶು ಆಹಾರದ ಕಿಟ್‌ ನೀಡಲಾಯಿತು. ಕಾರ್ಯಕ್ರಮದಲ್ಲಿ ದ.ಕ.ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ,ದ.ಕ.ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ಅವರಿಗೆ ಗೌರವಾರ್ಪಣೆ ಮಾಡಲಾಯಿತು.

ಗುತ್ತಿಗಾರು ಪಶುವೈದ್ಯ ಕೇಂದ್ರದ ಪಶುವೈದ್ಯಾಧಿಕಾರಿ ಡಾ.ವೆಂಕಟಾಚಲಪತಿ ,ಒಕ್ಕೂಟದ ವಿಸ್ತರಣಾಧಿಕಾರಿ ನಾಗೇಶ್‌ ಕೆ.,  ಜಾನುವಾರು ಅಭಿವೃದ್ದಿ ಅಧಿಕಾರಿ ಪುಷ್ಪರಾಜ ಶೆಟ್ಟಿ ,ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ.ಚರಣ್‌ ,ಪಶು ಸಂಜೀವಿಯ ವೈದ್ಯಾಧಿಕಾರಿ ಡಾ.ನಾಗರಾಜ ಕಲ್ಲೂರಾಯ,ಮುಕ್ಕೂರು ಹಾ.ಉ.ಸ.ಸಂ.ದ ಕಾರ್ಯದರ್ಶಿ ಸರಿತಾ ಕುಂಡಡ್ಕ,ಬಂಬಿಲ ಹಾ.ಉ.ಸ.ಸಂ.ದ ಕಾರ್ಯದರ್ಶಿ ಕೋಮಲ ,ಹಾಲು ಪರೀಕ್ಷಕಿ ವಿಮಲಾ,ಪಶುವೈದ್ಯಕೀಯ ಪರೀಕ್ಷಕ ರೋಹಿತ್‌,ಹರೀಶ್‌,ಪವಿತ್ರಾ,ಯಶೋಧಾ,ಬಂಬಿಲ ಹಾ.ಉ.ಸಂ.ದ ಉಪಾಧ್ಯಕ್ಷ ಹೊನ್ನಪ್ಪ ಗೌಡ ,ನಿರ್ದೇಶಕರಾದ ಅನ್ನಪೂರ್ಣ ಪ್ರಸಾದ್‌ ರೈ,ಗಣೇಶ್‌ ನಾಯ್ಕ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಸವಣೂರು ಪ್ರೌಢಶಾಲಾ ವಿದ್ಯಾರ್ಥಿನಿ ದೀಪ್ತಿ ಪ್ರಾರ್ಥಿಸಿದರು.ಬೆಳ್ಳಾರೆ ಪಶುವೈದ್ಯಕೇಂದ್ರದ ಮುಖ್ಯ ಪಶುವೈದ್ಯಾಧಿಕಾರಿ ಡಾ.ಸೂರ್ಯನಾರಾಯಣ ಭಟ್‌ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.ಕಳಂಜ ಪಶುವೈದ್ಯ ಕೇಂದ್ರದ ಪಶುವೈದ್ಯಾಧಿಕಾರಿ ಡಾ.ಮೇಘಶ್ರೀ ವಂದಿಸಿದರು.ಬಂಬಿಲ ಹಾ.ಉ.ಸ.ಸಂ.ದ ನಿರ್ದೇಶಕಿ ಇಂದಿರಾ ಬಿ.ಕೆ. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here